ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಲೋಕದ ತಲ್ಲಣಗಳತ್ತ ಕಣ್ತೆರೆಯಬೇಕಾದ ಸಮಯ

Last Updated 11 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮನುಷ್ಯನೆಂಬ ಬುದ್ಧಿವಂತ ಪ್ರಾಣಿ ನಿಸರ್ಗದ ಮೇಲೆ ಸತತ ಸಮರವನ್ನೇ ಸಾರಿದ್ದಾನೆಂದು ವನ್ಯತಜ್ಞರು ಆಗಾಗ ಹೇಳುತ್ತಲೇ ಬಂದಿದ್ದಾರೆ. ಮುನ್ನೂರು ಕೋಟಿ ವರ್ಷಗಳ ಭೂಚರಿತ್ರೆಯಲ್ಲಿ ಐದು ಬಾರಿ ಸಮಗ್ರ ಜೀವನಾಶದ ಮಹಾಪ್ರಳಯಗಳಾಗಿದ್ದು, ಇದೀಗ ನಾವು ನಮ್ಮ ಕೃತ್ಯಗಳಿಂದಾಗಿಯೇ ಆರನೇ ಮಹಾ ಜೀವನಾಶದ ಕಡೆ ಸಾಗುತ್ತಿದ್ದೇವೆಂಬ ಎಚ್ಚರಿಕೆ ಆಗಾಗ ಬರುತ್ತಲೇ ಇದೆ.

‘ಮನುಷ್ಯ ಸಾರಿದ ಈ ಸಮರದಲ್ಲಿ ಜಯ ಸಿಕ್ಕಿದ್ದೇ ಆದರೆ ಆತನಿಗೇ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಜೀವವಿಜ್ಞಾನಿ ರೇಚೆಲ್ ಕಾರ್ಸನ್ ಅವರು ಐವತ್ತು ವರ್ಷಗಳ ಹಿಂದೆಯೇ ಹೇಳಿದ್ದಿದೆ. ನಾವು ನಮ್ಮನಮ್ಮ ನಿತ್ಯದ ಜಂಜಡಗಳಲ್ಲಿ ಅದೆಷ್ಟು ಸಿಲುಕಿದ್ದೇವೆ ಎಂದರೆ, ಇಂಥ ವಿಷಯಗಳು ಗಂಭೀರವಾಗಿ ನಮ್ಮನ್ನು ತಟ್ಟುತ್ತಲೇ ಇಲ್ಲ. ಇದೀಗ ಮತ್ತೊಮ್ಮೆ ನಮ್ಮನ್ನೆಲ್ಲ ಎಚ್ಚರಿಸುವಂತೆ ವಿಶ್ವ ವನ್ಯ ನಿಧಿಯ ‘ಜೀವಂತ ಗ್ರಹದ ಸೂಚ್ಯಂಕ 2020’ (ಲಿವಿಂಗ್ ಪ್ಲಾನೆಟ್ ಇಂಡೆಕ್ಸ್) ವರದಿ ಪ್ರಕಟವಾಗಿದೆ.

ಪರಿಸರ ವಿನಾಶದಿಂದಾಗಿ 1970ರಿಂದ ಈಚೆಗೆ ಜೀವಿವೈವಿಧ್ಯದಲ್ಲಿ ಶೇಕಡ 68ರಷ್ಟು ‘ಪ್ರಳಯಾಂತಕ’ ಇಳಿಕೆ ಕಂಡುಬಂದಿದೆ ಎಂದು ಈ ವರದಿ ಹೇಳುತ್ತದೆ. ಹಿಮಾಚ್ಛಾದಿತ ಪ್ರದೇಶಗಳನ್ನು ಬಿಟ್ಟರೆ ಇನ್ನುಳಿದ ಭೂ ಮತ್ತು ಜಲಪರಿಸರದ ಶೇಕಡ 75ರಷ್ಟು ಭಾಗವನ್ನು ಮನುಷ್ಯರು ಬದಲಿಸಿದ್ದರಿಂದ ವನ್ಯ ಮತ್ತು ಜಲಜೀವಿಗಳಿಗೆ ಉಳಿಗಾಲವೇ ಇಲ್ಲದಂತಾಗಿದೆಯೆಂದು ಇದರಲ್ಲಿ ಹೇಳಲಾಗಿದೆ. ಹೇಗೋ ಇಕ್ಕಟ್ಟಿ ನಲ್ಲಿ ಬದುಕುತ್ತಿದ್ದವು ಕೂಡ ಈಗಿನ ವಿಶ್ವವ್ಯಾಪಿ ಹವಾಮಾನ ಬದಲಾವಣೆಯಿಂದಾಗಿ ಅಲ್ಲೂ ತತ್ತರಿಸುವಂತಾಗಿದೆ. ಜಗತ್ತಿನಾದ್ಯಂತ ಸಂಭವಿಸುತ್ತಿರುವ ಭೂಕುಸಿತ, ಹಿಮಕುಸಿತ, ಕಾಳ್ಗಿಚ್ಚು, ಮೇಘಸ್ಫೋಟ, ಅನಾವೃಷ್ಟಿ, ಚಂಡಮಾರುತ, ಅತಿಸೆಕೆಗಳ ಮೆರವಣಿಗೆಯಲ್ಲಿ ಮಾತಿಲ್ಲದ ಜೀವಿಗಳ ಪಾಡೇನು?

ಜೀವಿವೈವಿಧ್ಯ ಕ್ಷೀಣಿಸುತ್ತಿರುವುದು ಜನಸಾಮಾನ್ಯರ ಗಮನಕ್ಕೆ ಬರುತ್ತಿಲ್ಲ ಏಕೆಂದರೆ, ಮನುಷ್ಯರ ಬದುಕಿಗೆ ಬೇಕಾದ ಸಸ್ಯಗಳ, ಜೀವಿಗಳ ಅಭಾವ ಎಂದೂ ಉಂಟಾಗದಂತೆ ನಮ್ಮೆಲ್ಲ ವ್ಯವಸ್ಥೆಗಳೂ ರೂಢಿಬದ್ಧವಾಗಿ ಕೆಲಸ ಮಾಡುತ್ತಿವೆ. ವನ್ಯಜೀವರಕ್ಷಣೆ ಎಂದರೆ ಅರಣ್ಯರಕ್ಷಣೆ ಎಂಬಷ್ಟಕ್ಕೇ ನಮ್ಮ ಗಮನ ಸೀಮಿತವಾಗಿದೆ. ಹರಿಯುವ ನದಿಗಳಲ್ಲಿ ಡೈನಮೈಟ್ ಸ್ಫೋಟಿಸಿ ಮೀನುಗಾರಿಕೆ ಮಾಡುವವರ ಮೇಲೆ ನಮ್ಮ ನಿಗಾ ಇಲ್ಲ; ನದಿಗಳಿಗೆ ಅಣೆಕಟ್ಟೆ ಕಟ್ಟುವಾಗ ಅಲ್ಲಿ ಪ್ರವಾಹದ ವಿರುದ್ಧ ಈಜುತ್ತ ಸಂತಾನವೃದ್ಧಿ ಮಾಡಿಕೊಳ್ಳುವ ಜಲಚರಗಳ ಸ್ಥಿತಿಗತಿಯನ್ನು ವಿಚಾರಿಸಿದ್ದೇ ಇಲ್ಲ. ಕೆರೆಗಳಲ್ಲಿ ಮೀನುಸಾಕಣೆಯ ಗುತ್ತಿಗೆ ಕೊಡುವಾಗ ಅಲ್ಲಿನ ಮೂಲಜೀವಿಗಳ ಬದುಕನ್ನು ಗಮನಿಸಿದ್ದೇ ಇಲ್ಲ. ಅದಕ್ಕೇ ಸಿಹಿನೀರಿನ ಪರಿಸರದಲ್ಲಿ ಜೀವಿವೈವಿಧ್ಯ ನಾಶ ಶೇ 84ರಷ್ಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. \

ಕೃಷಿಕರ್ಮಿಗಳು ಘಾತುಕ ಕೀಟನಾಶಕಗಳನ್ನು ಸಿಂಪಡಿಸಿ, ಎರೆಹುಳು, ಚಿಟ್ಟೆ-ಜೇನ್ನೊಣಗಳನ್ನು ನಾಶ ಮಾಡುತ್ತಿದ್ದರೂ ಅವರಿಗೆ ತಿಳಿವಳಿಕೆ ನೀಡುವತ್ತ ನಾವೆಂದೂ ಗಂಭೀರ ಕ್ರಮವನ್ನು ಕೈಗೊಂಡಿಲ್ಲ. ಚಿಟ್ಟೆಯ ಮೈಮೇಲೆ ಬಿದ್ದ ವಿಷರಸಾಯನಗಳು ಜೀವಸರಪಳಿಯ ಮೂಲಕ ಮೇಲಕ್ಕೇರುತ್ತ ಗೂಬೆ-ಗಿಡುಗಗಳನ್ನೂ ಬಲಿಹಾಕುತ್ತವೆ ಎಂಬುದನ್ನು ನಾವು ಕೃಷಿಕರಿಗೆ ತಿಳಿಸಲಿಲ್ಲ. ಸಮುದ್ರತಳವನ್ನು ಬಾಚುತ್ತ ಸಾಗುವ ಬೃಹತ್‌ ಯಾಂತ್ರಿಕ ದೋಣಿಗಳು ನಮಗೆ ಆಹಾರವಾಗಲಾರದ ಏನೆಲ್ಲ ಜಲಚರಗಳನ್ನು ದಡಕ್ಕೆ ತಂದು ಸಾಯಿಸುತ್ತವೆ ಎಂಬುದರ ಬಗ್ಗೆ ನಾವೆಂದೂ ತಪಾಸಣೆ ಮಾಡಲೇ ಇಲ್ಲ. ಏಕೆಂದರೆ ಇವೆಲ್ಲ ನಮ್ಮ ಸೀಮಿತ ‘ಅರಣ್ಯ ಸಂರಕ್ಷಣಾ’ ವ್ಯವಸ್ಥೆಯ ವ್ಯಾಪ್ತಿಗೆ ಬರುವುದೇ ಇಲ್ಲ.

ಸಕಲ ಜೀವಾತ್ಮಗಳಿಗೂ ಲೇಸನೇ ಬಯಸಬೇಕೆಂಬುದು ಭಾರತೀಯ ಸಂಸ್ಕೃತಿಯ ಬೇರುಮೂಲದಲ್ಲೇ ಇದೆ ನಿಜ. ಆದರೆ ವೃಕ್ಷವೇ ಒಣಗುತ್ತಿರುವಾಗ ಬೇರುಮೂಲದಲ್ಲಿ ಏನಿದ್ದರೆ ಏನು? ಅಭಿವೃದ್ಧಿಯ ಧಾವಂತದಲ್ಲಿ ಸಂಭವಿಸುತ್ತಿರುವ ಈ ‘ಪ್ರಳಯಾಂತಕ’ ಜೀವನಾಶವನ್ನು ತಡೆಯಲು ಈಗಲೂ ಕಾಲ ಮಿಂಚಿಲ್ಲ ಎಂದು ವಿಶ್ವ ವನ್ಯನಿಧಿ ವರದಿಯೇನೊ ಹೇಳುತ್ತಿದೆ. ಮೂರು ದಶಕಗಳಿಂದಲೂ ಅದೇ ಮಾತನ್ನು ಹೇಳಲಾಗುತ್ತಿದೆ. ಕಟ್ಟುನಿಟ್ಟಿನ ಕ್ರಮಗಳು ಮಾತ್ರ ಜಾರಿಗೆ ಬರುತ್ತಿಲ್ಲ. ಜನಜಾಗೃತಿಯ ಕೆಲಸವೇನೊ ಅಷ್ಟಿಷ್ಟು ತಂತಾನೇ ಆಗುತ್ತಿದೆ. ಸಂರಕ್ಷಣೆಗೆ ಗಮನ ಕೊಡಬಲ್ಲ ವನ್ಯಪ್ರೇಮಿಗಳ ಸಂಖ್ಯೆ ಹೆಚ್ಚುತ್ತಿದೆ.

ಊರಹಬ್ಬದ ಹೆಸರಿನಲ್ಲಿ ನಡೆಯುತ್ತಿದ್ದ ವೃಕ್ಷಬಲಿಯಂತಹ ಅನಿಷ್ಟ ಪರಂಪರೆಗಳನ್ನು ಗ್ರಾಮಮಟ್ಟದಲ್ಲೇ ತಡೆಯಲಾಗುತ್ತಿದೆ. ಆದರೆ ಅಷ್ಟು ಸಾಲದು. ಪ್ರತೀ ಪಂಚಾಯಿತಿ ಮಟ್ಟದಲ್ಲೂ ಜೀವಿವೈವಿಧ್ಯ ದಾಖಲಾತಿ ಇರಬೇಕು; ಪ್ರತೀ ನಾಗರಿಕನಿಗೂ ತನ್ನ ಸುತ್ತಲಿನ ಜೀವಲೋಕದ ಅರಿವು ಇರಬೇಕೆಂಬ ಆಶಯಗಳು ಕಾನೂನು ಪುಸ್ತಕಗಳಿಂದ ಜಿಗಿದು ಜನರವರೆಗೆ ಬರಬೇಕು. ಶಾಲೆಗಳ ಪಠ್ಯಕ್ರಮದಲ್ಲಿ ಆಯಾ ಪ್ರಾಂತಗಳ ಜೀವಿಪರಿಚಯ ಕಡ್ಡಾಯ ಇರಬೇಕು. ಪ್ರೇಮಿಗಳ ದಿನದ ವೈಭವವನ್ನು ಮೀರಿಸುವಂತೆ ಜೀವಿವೈವಿಧ್ಯ ಸಂರಕ್ಷಣಾ ದಿನ (ಮೇ 22) ರಾಷ್ಟ್ರವ್ಯಾಪಿಯಾಗಿ ಆಚರಣೆಗೆ ಬರಬೇಕು. ಅಂಥದ್ದೊಂದು ಸಾಮೂಹಿಕ ಜಾಗೃತಿ ಮೂಡದಿದ್ದರೆ ಜೀವಿಲೋಕಕ್ಕಷ್ಟೇ ಅಲ್ಲ, ನಮಗೂ ಉಳಿಗಾಲವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT