ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಶ್ಚಿಮ ಬಂಗಾಳ: ಕೋವಿಡ್ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ

Last Updated 5 ಮೇ 2020, 2:34 IST
ಅಕ್ಷರ ಗಾತ್ರ

ನಿರ್ದಿಷ್ಟ ಚಿಕಿತ್ಸಾ ವಿಧಾನ ಹಾಗೂ ನಿರ್ದಿಷ್ಟ ಲಸಿಕೆ ಇಲ್ಲದ ಕೋವಿಡ್‌–19, ಮನುಕುಲ ಈಚಿನ ದಶಕಗಳಲ್ಲಿ ಕಂಡಿರುವ ಎಲ್ಲ ಕಾಯಿಲೆಗಳ ಪೈಕಿ ಒಬ್ಬರಿಂದ ಒಬ್ಬರಿಗೆ ಅತ್ಯಂತ ವೇಗವಾಗಿ ಹರಡುತ್ತಿರುವ ಸಾಂಕ್ರಾಮಿಕ. ಈ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ನೋಡಿಕೊಳ್ಳಲು ಇರುವ ಅತ್ಯಂತ ಪ್ರಬಲ ಮಾರ್ಗ ಅಂತರ ಕಾಯ್ದುಕೊಳ್ಳುವಿಕೆ. ಹಾಗೆಯೇ, ಈ ರೋಗಕ್ಕೆ ಕಾರಣವಾಗುವ ಕೊರೊನಾ ವೈರಾಣು ಜನಸಮುದಾಯದಲ್ಲಿ ಯಾರಲ್ಲಿ ಇದೆ ಎಂಬುನ್ನು ಪತ್ತೆ ಮಾಡುವ ಕೆಲಸವನ್ನು ವ್ಯಾಪಕವಾಗಿ ನಡೆಸುವುದು ಕೂಡ ಇದರ ನಿಯಂತ್ರಣಕ್ಕೆ ಇರುವ ಒಂದು ಮಾರ್ಗ. ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಜನರನ್ನು ವ್ಯಾ‍ಪಕವಾಗಿ ಪರೀಕ್ಷೆಗೆ ಒಳಪಡಿಸುವುದು ಈ ಸಾಂಕ್ರಾಮಿಕ ವಿರುದ್ಧದ ಹೋರಾಟದ ಎರಡು ಅತ್ಯಂತ ಪ್ರಬಲ ಅಸ್ತ್ರಗಳಾಗಿರುವ ಕಾರಣ, ಜನರ ಆರೋಗ್ಯದ ಬಗ್ಗೆ ಕಾಳಜಿ ಇರುವವರ ಗಮನವು ಪಶ್ಚಿಮ ಬಂಗಾಳ ರಾಜ್ಯದಲ್ಲಿನ ವಿದ್ಯಮಾನಗಳತ್ತ ಸಹಜವಾಗಿಯೇ ಹೊರಳುತ್ತದೆ.

ಆ ರಾಜ್ಯದಲ್ಲಿ ಪರೀಕ್ಷೆಯ ಪ್ರಮಾಣ ಅತ್ಯಂತ ಕಡಿಮೆ ಇದೆ. ಮೇ 3ರ ವೇಳೆಗೆ ಅಲ್ಲಿ ಒಟ್ಟು 22,915 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸರ್ಕಾರಿ ಅಂಕಿ–ಅಂಶಗಳು ಹೇಳುತ್ತವೆ. ಇದೇ ದಿನದ ಹೊತ್ತಿಗೆ ಕರ್ನಾಟಕವು 74,898 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಪಶ್ಚಿಮ ಬಂಗಾಳದ ಸರಿಸುಮಾರು ಮೂರನೆಯ ಒಂದರಷ್ಟು ಜನಸಂಖ್ಯೆಯನ್ನು ಹೊಂದಿರುವ ಕೇರಳ ರಾಜ್ಯವು ಮೇ 3ರ ಹೊತ್ತಿಗೆ 32,217 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಕೋವಿಡ್–19 ಕಾಯಿಲೆಯನ್ನು ಇದುವರೆಗೆ ಸಮರ್ಥವಾಗಿ ಎದುರಿಸಿದ ರಾಜ್ಯಗಳಲ್ಲಿ ಕೇರಳವೂ ಒಂದು. ಕರ್ನಾಟಕ ಕೂಡ ಈ ವಿಚಾರದಲ್ಲಿ ಗಣನೀಯ ಸಾಧನೆ ತೋರಿದೆ. ಈ ಎರಡು ರಾಜ್ಯಗಳಲ್ಲಿ ಜನರನ್ನು ಪರೀಕ್ಷೆಗೆ ಒಳಪಡಿಸಿದ ಪ್ರಮಾಣ ಹೆಚ್ಚಿಗೆ ಇರುವುದು ಇದಕ್ಕೆ ಒಂದು ಕಾರಣ.

ರಾಷ್ಟ್ರಮಟ್ಟದಲ್ಲಿ ಪ್ರತಿ 10 ಲಕ್ಷ ಜನರಿಗೆ ಸರಾಸರಿ 721 ಜನರನ್ನು ಕೋವಿಡ್–19 ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಪರೀಕ್ಷೆಯ ಸರಾಸರಿ ಪ್ರಮಾಣವು ಪ್ರತೀ 10 ಲಕ್ಷ ಜನರಿಗೆ 212.6 ಮಾತ್ರ.

ಕೊರೊನಾ ವೈರಾಣುವಿಗೆ ಗುರಿಯಾದ ಹಲವರು ರೋಗದ ಯಾವ ಲಕ್ಷಣವನ್ನೂ ತೋರಿಸದ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. ಇದು ಈ ವೈರಾಣು ಹಾಗೂ ಇದು ಉಂಟುಮಾಡುವ ರೋಗದ ಒಂದು ಕರಾಳ ಮುಖ. ತಮ್ಮಲ್ಲಿ ರೋಗದ ಯಾವ ಲಕ್ಷಣಗಳೂ ಇಲ್ಲದಿದ್ದರೂ ಸಮಾಜದಲ್ಲಿ ಹಲವರಿಗೆ ಸೋಂಕು ಹರಡುತ್ತಾರೆ. ಇಂಥದ್ದನ್ನು ನಿಯಂತ್ರಿಸಲು ಸಾಧ್ಯವಾಗದೆ ಇದ್ದರೆ, ಸೋಂಕು ಹರಡುವಿಕೆಯು ಸಮುದಾಯದ ನಡುವೆ ವ್ಯಾಪಕವಾಗಬಹುದು.

ಈ ರೀತಿ ಆಗುವುದನ್ನು ತಡೆಯಲು ಇರುವ ಬಹುದೊಡ್ಡ ಮಾರ್ಗ, ಪರೀಕ್ಷೆಯ ಪ್ರಮಾಣವನ್ನು ಸಾಧ್ಯವಾದಷ್ಟು ಹೆಚ್ಚಿಸುವುದು, ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರನ್ನು ಪ್ರತ್ಯೇಕವಾಸಕ್ಕೆ ಒಳಪಡಿಸುವುದು. ಆದರೆ, ಪಶ್ಚಿಮ ಬಂಗಾಳ ಸರ್ಕಾರವು ನಡೆಸುತ್ತಿರುವ ಪರೀಕ್ಷೆಯ ಪ್ರಮಾಣವನ್ನು ಗಮನಿಸಿದರೆ, ಅಲ್ಲಿ ಕೊರೊನಾ ಸೋಂಕು ಪತ್ತೆ ಮಾಡುವ ಕೆಲಸ ಅಗತ್ಯ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದು ಸ್ಪಷ್ಟ. ಪತ್ತೆಯ ಕೆಲಸ ಸರಿಯಾಗಿ ಆಗದಿದ್ದರೆ ಜನರ ಅಮೂಲ್ಯ ಜೀವ ಅಪಾಯಕ್ಕೆ ಗುರಿಯಾಗಬಹುದು ಎಂಬ ಎಚ್ಚರ ಆಳುವವರಲ್ಲಿ ಇರಬೇಕು. ಈಗ ಕೇಂದ್ರ ಗೃಹ ಸಚಿವಾಲಯವು ಲಾಕ್‌ಡೌನ್‌ ಅವಧಿಯನ್ನು ಎರಡು ವಾರದ ಅವಧಿಗೆ ವಿಸ್ತರಿಸಿದೆ. ಈ ಅವಧಿಯಲ್ಲಿ ಜನಸಂಚಾರಕ್ಕೆ, ವ್ಯಾಪಾರ ವಹಿವಾಟಿಗೆ ತುಸು ಹೆಚ್ಚು ಅವಕಾಶ ನೀಡಲಾಗಿದ್ದರೂ ಒಂದಿಷ್ಟು ನಿರ್ಬಂಧಗಳಂತೂ ಮುಂದುವರಿದಿವೆ. ಈ ಅವಧಿಯನ್ನು ಪಶ್ಚಿಮ ಬಂಗಾಳ ಸರ್ಕಾರವು ಸರಿಯಾಗಿ ಬಳಸಿಕೊಳ್ಳಬೇಕು. ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು.

‘ಕಡಿಮೆ ಪ್ರಮಾಣದಲ್ಲಿ ಪರೀಕ್ಷೆ ನಡೆಸಿಯೂ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್–19 ಪ್ರಕರಣಗಳು ವರದಿಯಾದ ರಾಜ್ಯ’ ಎಂಬ ಆರೋಪಕ್ಕೆ ಪಶ್ಚಿಮ ಬಂಗಾಳ ಈಗಾಗಲೇ ಗುರಿಯಾಗಿದೆ. ಇದು, ಸಾಂಕ್ರಾಮಿಕವು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಅಪಾಯದ ಸಾಧ್ಯತೆಯನ್ನೂ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT