ಭಾನುವಾರ, ಸೆಪ್ಟೆಂಬರ್ 26, 2021
23 °C

ಮಕ್ಕಳನ್ನು ಗ್ಯಾಜೆಟ್‌ಗಳಿಂದ ದೂರವಿಡಿವಿಶ್ವ ಆರೋಗ್ಯ ಸಂಸ್ಥೆಯ ಕ್ರಮ ಸಕಾಲಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಸಕ್ತ ಸನ್ನಿವೇಶದಲ್ಲಿ, ತಂತ್ರಜ್ಞಾನ ಆಧಾರಿತ ಸಾಧನಗಳು ಮಕ್ಕಳನ್ನು ಆವರಿಸಿರುವ ಪರಿಗೆ ವಿಶ್ವ ಆರೋಗ್ಯ ಸಂಸ್ಥೆಯೇ (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿರುವುದು ಪಾಲಕರ ಪಾಲಿಗೆ ಒಂದು ಎಚ್ಚರಿಕೆಯ ಗಂಟೆ. ಇತ್ತೀಚಿನ ವರ್ಷಗಳಲ್ಲಿ ಹೊರ ಜಗತ್ತನ್ನೇ ಮರೆತು ಸ್ಮಾರ್ಟ್‌ ಫೋನ್‌ಗಳಲ್ಲಿ, ವಿಡಿಯೊ ಗೇಮ್‌ಗಳಲ್ಲಿ ಹಾಗೂ ಟಿ.ವಿ. ವೀಕ್ಷಣೆಯಲ್ಲಿ ಕಂದಮ್ಮಗಳೂ ಸೇರಿದಂತೆ ಮಕ್ಕಳೆಲ್ಲ ಮುಳುಗಿ ಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿದ್ಯಮಾನ. ಎಳವೆಯಲ್ಲೇ ತಂತ್ರಜ್ಞಾನ ಸಾಧನಗಳ ಅತಿಯಾದ ಬಳಕೆಯಿಂದ ಆಗಬಹುದಾದ ಪರಿಣಾಮಗಳ ಕುರಿತು ಈ ಹಿಂದೆ ಹಲವಾರು ಸಾಮಾಜಿಕ ಹಾಗೂ ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಮೊಬೈಲ್‌ನಲ್ಲಿ ಬಂದು ಕುಳಿತಿರುವ ಬಗೆಬಗೆಯ ಆ್ಯಪ್‌ಗಳು ಮಕ್ಕಳ ಬಾಲ್ಯವನ್ನೇ ನುಂಗುತ್ತಿರುವ ಅಪಾಯಕಾರಿ ಬೆಳವಣಿಗೆ ಕುರಿತಂತೆ ಈ ಅಧ್ಯಯನಗಳು ಎಚ್ಚರಿಕೆಯನ್ನು ನೀಡುತ್ತಲೇ ಬಂದಿವೆ. ಬಾಲ್ಯದ ಪಾಲಿಗೆ ಕಂಟಕವಾಗಿರುವ ತಂತ್ರಜ್ಞಾನದ ಅತಿಬಳಕೆಯಿಂದ ಡಬ್ಲ್ಯುಎಚ್‌ಒ ಎಷ್ಟೊಂದು ದಿಗಿಲುಗೊಂಡಿದೆ ಎಂದರೆ, ಅದರಿಂದ ಮಕ್ಕಳನ್ನು ದೂರ ಇಡಲು ಮಾರ್ಗಸೂಚಿಯನ್ನೇ ಪ್ರಕಟಿಸಿದೆ. ಎರಡು ವರ್ಷದೊಳಗಿನ ಪುಟಾಣಿಗಳಿಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಪರದೆಯನ್ನು ನೋಡಲು ಅವಕಾಶವನ್ನೇ ಕೊಡಬಾರದು ಹಾಗೂ 2ರಿಂದ 4 ವರ್ಷದೊಳಗಿನ ಮಕ್ಕಳು ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಹೊತ್ತು ಎಲೆಕ್ಟ್ರಾನಿಕ್‌ ಸಾಧನಗಳ ಜತೆ ಕಳೆಯದಂತೆ ನೋಡಿಕೊಳ್ಳಬೇಕು ಎನ್ನುತ್ತದೆ ಮಾರ್ಗಸೂಚಿ. ನಿತ್ಯ ಬದಲಾಗುತ್ತಿರುವ ಸಂವಹನ ಮತ್ತು ಮನರಂಜನಾ ತಂತ್ರಜ್ಞಾನ, ಜನರ ಬದುಕನ್ನು ಹೆಚ್ಚೆಚ್ಚು ಆವರಿಸುತ್ತಿರುವ ಈ ಸಂದರ್ಭದಲ್ಲಿ ಡಬ್ಲ್ಯುಎಚ್‌ಒ ಹೊರಡಿಸಿರುವ ಮಾರ್ಗಸೂಚಿ ಅತ್ಯಂತ ಸಕಾಲಿಕ ಹಾಗೂ ಸೂಕ್ತವಾಗಿದೆ.

ತಮ್ಮ ಮಕ್ಕಳೊಡನೆ ಕಾಲ ಕಳೆಯಲು ಇಂದಿನ ಧಾವಂತದ ಬದುಕು ಪೋಷಕರಿಗೆ ಅವಕಾಶವನ್ನೇ ಕೊಡುತ್ತಿಲ್ಲ. ವೃತ್ತಿ–ವ್ಯವಹಾರ ಒತ್ತಡಗಳ ಸುಳಿಯಲ್ಲಿ ಜನ ಸಿಲುಕಿದ್ದಾರೆ. ‘ನಾವು ಮಾಡುವುದೆಲ್ಲ ಮಕ್ಕಳಿಗಲ್ಲವೇ’ ಎಂದು ಕೇಳುವವರು, ಅವರ ಸಹಜ ವಿಕಾಸಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕು. ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಪ್ಪ–ಅಮ್ಮಂದಿರೇ ತಮ್ಮ ಮೊಬೈಲ್‌ಗಳನ್ನು ಅವರ ಕೈಗೆ ಕೊಡುವುದು ಮಾಮೂಲಿಯಾಗಿದೆ. ಕೆಲವರಂತೂ ತಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನದಲ್ಲಿ ಪಳಗುತ್ತಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಹೊರಗಿನ ಗಾಳಿ–ಬಿಸಿಲಿಗೆ ತೆರೆದುಕೊಳ್ಳದೆ ಮನೆಯೊಳಗಿನ ಕೋಣೆಗಳಲ್ಲಿ ಮೊಬೈಲ್‌ಗಳಲ್ಲಿಯೇ ಮೈಮರೆಯುವ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿದೆ. ಎಲೆಕ್ಟ್ರಾನಿಕ್‌ ಪರದೆಗಳನ್ನು ಬಹಳ ಹೊತ್ತು ನೋಡುವುದರಿಂದ ಮಕ್ಕಳ ಭಾವನಾತ್ಮಕ ಬೆಳವಣಿಗೆ ಕುಂಠಿತವಾಗುತ್ತದೆ. ಸಮಾಜದಿಂದ ಸಹಜವಾಗಿ ದಕ್ಕಬಹುದಾದ ಕೌಶಲಗಳು ದೂರವಾಗುತ್ತವೆ. ಇದರಿಂದ ಮಕ್ಕಳು ಸಮಾಜದಿಂದಲೇ ಪ್ರತ್ಯೇಕಗೊಂಡಂತಾಗಿ ಒಂಟಿತನದ ಭಾವ ಕಾಡುತ್ತದೆ. ಈ ಕಾರಣಕ್ಕಾಗಿಯೇ, ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಹಾಗೂ ಅವರು ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು  ಡಬ್ಲ್ಯುಎಚ್‌ಒ ಸಲಹೆ ನೀಡಿದೆ. ಮಕ್ಕಳು ಸಾಮಾಜಿಕ ಕೌಶಲಗಳನ್ನು ರೂಢಿಸಿಕೊಳ್ಳಲು, ಸಂಘಜೀವಿಗಳಾಗಿ ಬೆಳೆಯಲು ಕುಟುಂಬದ ಸದಸ್ಯರು ಹಾಗೂ ಹೊರಗಿನವರ ಜತೆ ಹೆಚ್ಚು ಹೆಚ್ಚಾಗಿ ಬೆರೆಯುವುದು ಅಗತ್ಯ. ಐದು ವರ್ಷದೊಳಗಿನ ಮಕ್ಕಳು ಪ್ರತಿದಿನ ಕನಿಷ್ಠ ಮೂರು ಗಂಟೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರಬೇಕು ಎನ್ನುವುದೂ ಡಬ್ಲ್ಯುಎಚ್‌ಒ ಸಲಹೆ. ಜಗತ್ತಿನ ಇಂಚಿಂಚನ್ನೂ ಬಿಡದಂತೆ ಆವರಿಸಿರುವ ತಂತ್ರಜ್ಞಾನದ ಅಬ್ಬರ ಹಾಗೂ ವಿಭಕ್ತ ಕುಟುಂಬಗಳ ಈ ಕಾಲಘಟ್ಟದಲ್ಲಿ ಮಕ್ಕಳನ್ನು ಗ್ಯಾಜೆಟ್‌ಗಳಿಂದ ದೂರ ಇಡುವುದು ಕಷ್ಟ ಎನ್ನುವುದೇನೋ ನಿಜ. ಆದರೆ, ಮಕ್ಕಳ ಭವಿಷ್ಯದ ಪ್ರಶ್ನೆ ದೊಡ್ಡದಾಗಿ ಕಾಡತೊಡಗಿದಾಗ ಆ ಕಷ್ಟವನ್ನು ದೂರಮಾಡುವ ದಾರಿಯೂ ಗೋಚರಿಸೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು