ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕುಸ್ತಿಪಟುಗಳ ಹೋರಾಟ: ಸರ್ಕಾರದ ಮೌನವೇಕೆ? ಈಗಲಾದರೂ ಸ್ಪಂದಿಸಿ

Published 2 ಜೂನ್ 2023, 19:51 IST
Last Updated 2 ಜೂನ್ 2023, 19:51 IST
ಅಕ್ಷರ ಗಾತ್ರ

ಜೀವಮಾನದ ಸಾಧನೆ, ವರ್ಚಸ್ಸು ಮತ್ತು ಭವಿಷ್ಯದ ಅವಕಾಶಗಳನ್ನು ಪಣಕ್ಕಿಟ್ಟು ಬೀದಿಗಿಳಿದಿರುವ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಈಗಲಾದರೂ ಸ್ಪಂದಿಸಬೇಕು

ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಪತಾಕೆ ಹಾರಿಸಿರುವ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟದ ಬಗ್ಗೆ ಕೇಂದ್ರ ಸರ್ಕಾರವು ನಿರ್ದಯಿಯಾಗಿರುವುದು ಸೋಜಿಗ ಮೂಡಿಸಿದೆ. ಆಡಳಿತಾರೂಢ ಬಿಜೆಪಿ ಸಂಸದ ಹಾಗೂ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಖ್ಯಾತನಾಮ ಕುಸ್ತಿಪಟುಗಳು ಅವರ ಬಂಧನಕ್ಕೆ ಆಗ್ರಹಿಸಿ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಧರಣಿ, ಹೋರಾಟ ಮಾಡುತ್ತಿದ್ದಾರೆ. ‘ಬೇಟಿ ಬಚಾವೊ, ಬೇಟಿ ಪಢಾವೊ’ ಎಂಬ ಮಂತ್ರ ಜಪಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ಮಹಿಳಾ ಕುಸ್ತಿಪಟುಗಳ ಅಹವಾಲುಗಳಿಗೆ ಮೌನವಾಗಿರುವುದೇಕೆ? ಇದೇ ಕುಸ್ತಿಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಬಂದಾಗ ತಮ್ಮ ನಿವಾಸಕ್ಕೆ ಕರೆಸಿ ಔತಣ ನೀಡಿದ್ದೂ ಇವರೇ ಅಲ್ಲವೇ? ಈ ಕ್ರೀಡಾಪಟುಗಳು ಅದೇ ಪದಕಗಳನ್ನು ಗಂಗಾ ನದಿಗೆ ಎಸೆಯಲು  ಮುಂದಾದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವೇಕೆ? ಈ ಎಲ್ಲ ಸಂಗತಿಗಳಿಗಿಂತಲೂ ಕೇಂದ್ರ ಸರ್ಕಾರಕ್ಕೆ ತಮ್ಮ ಪಕ್ಷದ ಪ್ರಭಾವಿ ಸಂಸದನ ಹಿತಾಸಕ್ತಿ ಮಾತ್ರ ಮುಖ್ಯವಾಯಿತೇ ಎಂಬ ಅನುಮಾನಗಳು ಮೂಡುವುದು ಸಹಜ. ದೆಹಲಿ ಪೊಲೀಸರು ಬ್ರಿಜ್‌ ಭೂಷಣ್ ಮೇಲೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿ ಒಂದು ತಿಂಗಳು ಕಳೆದಿದೆ. ಅದರಲ್ಲಿ ಪೋಕ್ಸೊ ಪ್ರಕರಣ ಕೂಡ ಇದೆ. ಆದರೂ ಆರೋಪಿಯನ್ನು ಬಂಧಿಸಿಲ್ಲ. ದೆಹಲಿಯಲ್ಲಿ ಈಚೆಗೆ ನಡೆದ ನೂತನ ಸಂಸತ್ ಭವನ ಉದ್ಘಾಟನೆಯ ದಿನದ ಘಟನೆಯಂತೂ ದೇಶವೇ ತಲೆತಗ್ಗಿಸುವಂತಹುದು. ಪ್ರಧಾನಿಯವರು ಸಂಸತ್‌ ಭವನವನ್ನು ಉದ್ಘಾಟಿಸಿದ ಹೊತ್ತಿನಲ್ಲಿಯೇ ದೆಹಲಿಯ ರಾಜಬೀದಿಗಳಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಮಂದಿಯನ್ನು ಎಳೆದೊಯ್ದ ರೀತಿ ಅಮಾನವೀಯವಾದುದು. ಮಹಿಳಾ ಮಹಾಪಂಚಾಯತ್‌ ಆಯೋಜಿಸಿ ಸರ್ಕಾರದ ಗಮನ ಸೆಳೆಯಲು ಹೊರಟಿದ್ದ ಧರಣಿನಿರತರ ಹೋರಾಟವನ್ನು ಮಟ್ಟಹಾಕಲು ತೋರಿದ ಸರ್ವಾಧಿಕಾರದ ಧೋರಣೆ ಇದಾಗಿತ್ತು. ಇದೆಲ್ಲದರ ಪರಿಣಾಮವಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಮುಕ್ಕಾಗುತ್ತಿದೆ. ಈ ಘಟನೆಯನ್ನು ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು– ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌) ಖಂಡಿಸಿದೆ. ಡಬ್ಲ್ಯುಎಫ್‌ಐ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನೂ ನೀಡಿದೆ.

ಇದೀಗ ಈ ಹೋರಾಟವು ಕೇವಲ ಕುಸ್ತಿಪಟುಗಳದ್ದಾಗಿ ಉಳಿದಿಲ್ಲ. ಕೆಲವು ಗಣ್ಯರು, ರಾಜಕಾರಣಿಗಳು ಹಾಗೂ ಬೇರೆ ಬೇರೆ ಸಂಘಟನೆಗಳಿಂದ ಕುಸ್ತಿಪಟುಗಳಿಗೆ ಬೆಂಬಲ ಹರಿದುಬರುತ್ತಿದೆ. ಹರಿಯಾಣದ ಖಾಪ್ ಪಂಚಾಯತ್, ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಆದರೆ ಕ್ರೀಡಾವಲಯದಿಂದ ಕೆಲವೇ ದಿಗ್ಗಜರು ಕುಸ್ತಿಪಟುಗಳ ಪರವಾಗಿ ಮಾತನಾಡಿದ್ದಾರೆ. ಈಗ ಇಡೀ ಹೋರಾಟವೇ ರಾಜಕೀಯಕರಣಗೊಂಡಿದ್ದು, ಆರೋಪ, ಪ್ರತ್ಯಾರೋಪಗಳು ಆರಂಭವಾಗಿವೆ. ಇದರಿಂದಾಗಿ ನೈಜ ವಿಷಯ ನಿಧಾನವಾಗಿ ತೆರೆಮರೆಗೆ ಸರಿಯಬಹುದೆಂಬ ಅನುಮಾನ ಮೂಡಿದೆ. ಸಂತ್ರಸ್ತೆಯರಿಗೆ ಬೆದರಿಕೆಯೊಡ್ಡುವ ಅಥವಾ ಸಾಕ್ಷ್ಯ ನಾಶ ಮಾಡುವ ಪ್ರಯತ್ನಗಳು ನಡೆದರೂ ಅಚ್ಚರಿಯಿಲ್ಲ ಎಂಬ ಮಾತುಗಳಿವೆ. ಮೊದಲು ಆರೋಪಿಗಳನ್ನು ಬಂಧಿಸಬೇಕು. ನ್ಯಾಯಯುತ ಮತ್ತು ಪಾರದರ್ಶಕ ತನಿಖೆಗೆ ವ್ಯವಸ್ಥೆ ಮಾಡಬೇಕು. ಸತ್ಯಾಂಶ ಹೊರಬರಬೇಕು. ನಿರ್ಲಕ್ಷ್ಯ ತೋರುವುದರಿಂದ ಮಹಿಳೆಯರ ಸಬಲೀಕರಣ ಅಭಿಯಾನಕ್ಕೆ ಹಿನ್ನಡೆಯಾಗುವ ಅಪಾಯವಿದೆ. ಅದೇನೇ ಇರಲಿ, ಕುಸ್ತಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಡೆದಿದೆ ಎನ್ನಲಾದ ದೌರ್ಜನ್ಯಗಳ ವಿರುದ್ಧ ಕುಸ್ತಿಪಟುಗಳೇ ಧ್ವನಿಯೆತ್ತಿದ್ದಾರೆ. ತಮ್ಮ ಜೀವಮಾನದ ಸಾಧನೆ, ವರ್ಚಸ್ಸು ಮತ್ತು ಭವಿಷ್ಯದ ಅವಕಾಶಗಳನ್ನು ಪಣಕ್ಕಿಟ್ಟು ಅವರು ಬೀದಿಗಿಳಿದ್ದಾರೆ. ಕೇಂದ್ರ ಸರ್ಕಾರವು ಅವರಿಗೆ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಈಗಲಾದರೂ ಸ್ಪಂದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT