ಭಾರತದ ಕಾನೂನು ಆಯೋಗ, ಮರಣ ದಂಡನೆಯನ್ನು ರದ್ದುಪಡಿಸಬೇಕೆಂದು ಶಿಫಾರಸು ಮಾಡುವ ಮೂಲಕ ಐತಿಹಾಸಿಕ ಹೆಜ್ಜೆಯೊಂದನ್ನಿಟ್ಟಿದೆ. ಭಯೋತ್ಪಾದಕ ಚಟುವಟಿಕೆಗಳು ಮತ್ತು ರಾಷ್ಟ್ರದ ವಿರುದ್ಧ ಸಮರ ಸಾರುವಂಥ ಸ್ವರೂಪದ ಅಪರಾಧಗಳನ್ನು ಹೊರತುಪಡಿಸಿದ ಎಲ್ಲಾ ಬಗೆಯ ಅಪರಾಧಗಳನ್ನೂ ಮರಣ ದಂಡನೆಯ ವ್ಯಾಪ್ತಿಯಿಂದ ಹೊರಗಿಡುವ ಸಲಹೆಯನ್ನು ಆಯೋಗ ಮುಂದಿಟ್ಟಿದೆ.

ಮರಣ ದಂಡನೆಯನ್ನು ‘ಅಪರೂಪದಲ್ಲಿ ಅಪರೂಪ’ ಎಂಬಂಥ ಪ್ರಕರಣಗಳಲ್ಲಿ ಮಾತ್ರ ನೀಡಬೇಕೆಂಬ ಆಶಯವೊಂದನ್ನು ಬಲವಾಗಿ ಪ್ರತಿಪಾದಿಸಲಾಗುತ್ತದೆ. ಆದರೆ ಕಾನೂನು ಆಯೋಗ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡ ಅಂಶಗಳು ಮುಂದಿಡುತ್ತಿರುವ ವಾಸ್ತವ ಬಹಳ ಭಿನ್ನ. ‘ಅಪರೂಪದಲ್ಲಿ ಅಪರೂಪ’ದ ಪ್ರಕರಣ ಯಾವುದು ಎಂಬುದನ್ನು ನಿರ್ಧರಿಸುವುದಕ್ಕೆ ಸ್ಪಷ್ಟ ಮಾನದಂಡಗಳೇನೂ ಇಲ್ಲ. ನ್ಯಾಯಾಧೀಶರ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ಈ ನಿರ್ಧಾರಕ್ಕೆ ಬರಲಾಗುತ್ತದೆ ಎಂಬುದನ್ನು ಕಾನೂನು ಆಯೋಗದ ವರದಿ ಹೇಳುತ್ತಿದೆ.

ಭಾರತೀಯ ದಂಡ ಸಂಹಿತೆ ಹನ್ನೊಂದು ಸೆಕ್ಷನ್ಗಳು ಮತ್ತು 22 ಇತರ ಕಾನೂನುಗಳು ಮರಣ ದಂಡನೆಯನ್ನು ಒಂದು ಶಿಕ್ಷೆಯಾಗಿ ಪರಿಗಣಿಸುತ್ತವೆ. ಪರಿಣಾಮವಾಗಿ ವಿಚಾರಣಾ ನ್ಯಾಯಾಲಯಗಳು ಈ ಅಪರೂಪದ ಶಿಕ್ಷೆಯನ್ನು ಬಹಳ ಸುಲಭದಲ್ಲಿ ವಿಧಿಸುತ್ತಿರುವ ವಿಚಾರವನ್ನೂ ಕಾನೂನು ಆಯೋಗ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ. 2000ದಿಂದ 2015ರ ಅವಧಿಯಲ್ಲಿ ವಿಚಾರಣಾ ನ್ಯಾಯಾಲಯಗಳು ಮರಣ ದಂಡನೆಯ ತೀರ್ಪು ನೀಡಿದ ಪ್ರಕರಣಗಳಲ್ಲಿ ಶೇಕಡ 95.7ರಷ್ಟರಲ್ಲಿ ತಪ್ಪಾಗಿದೆ ಎಂಬುದನ್ನು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ.

ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಮರಣ ದಂಡನೆಯ ತೀರ್ಪುಗಳಲ್ಲಿ ಶೇಕಡ 23.2ರಷ್ಟು ಪ್ರಕರಣಗಳಲ್ಲಿ ತಪ್ಪಾಗಿದೆ ಎಂಬುದನ್ನು ಸ್ವತಃ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಮರಣ ದಂಡನೆ ವಿಧಿಸುವ ಪ್ರಮಾಣ ಕೂಡಾ ರಾಜ್ಯದಿಂದ ರಾಜ್ಯಕ್ಕೆ ಭಿನ್ನ. 2004ರಿಂದ 2012ರವರೆಗಿನ ತೀರ್ಪುಗಳನ್ನು ಪರಿಗಣಿಸಿದರೆ ಕೇರಳ ರಾಜ್ಯದಲ್ಲಿ ಮರಣ ದಂಡನೆ ವಿಧಿಸುವ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚು. ದೆಹಲಿಯಲ್ಲಿ ಇದು ರಾಷ್ಟ್ರೀಯ ಸರಾಸರಿಗಿಂತ ಆರು ಪಟ್ಟು ಹೆಚ್ಚು.

ನ್ಯಾಯಾಲಯಗಳು ಯಾವ ಸಾಮಾಜಿಕ ಹಿನ್ನೆಲೆಯ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿವೆ ಎಂಬ ಅಂಕಿ–ಅಂಶವೂ ಗಾಬರಿ ಹುಟ್ಟಿಸುತ್ತದೆ. ಈ ಅಪರಾಧಿಗಳಲ್ಲಿ ಶೇಕಡ 75ರಷ್ಟು ಮಂದಿ ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು. ವಿಶ್ವ ವ್ಯಾಪಿಯಾಗಿ ಮರಣ ದಂಡನೆ ಶಿಕ್ಷೆಯನ್ನು ಇನ್ನೂ ಉಳಿಸಿಕೊಂಡಿರುವ ದೇಶಗಳು ಕೇವಲ 39. 140 ದೇಶಗಳು ಮರಣ ದಂಡನೆಗೆ ನಿಷೇಧ ಹೇರಿವೆ. ಮರಣ ದಂಡನೆ ಎಂಬುದು ಅಪರಾಧಗಳಿಗೆ ತಡೆಯಾಗಿ ಪರಿಣಮಿಸಬಹುದು ಎಂಬುದು ಕೇವಲ ಭ್ರಮೆ ಎಂಬುದನ್ನು ಕಾನೂನು ಆಯೋಗದ ವಿಸ್ತೃತ ಸಂಶೋಧನೆಯೂ ಸೇರಿದಂತೆ ಅನೇಕ ಸಂಶೋಧನೆಗಳು ಈಗಾಗಲೇ ಸ್ಪಷ್ಟಪಡಿಸಿವೆ.

ಅಪರಾಧವನ್ನು ತಡೆಯುವುದಕ್ಕೆ ತೀವ್ರ ತರಹದ ಶಿಕ್ಷೆಗಳಿದ್ದರೆ ಸಾಕಾಗುವುದಿಲ್ಲ. ಅದಕ್ಕೆ ಬಹುಮುಖ್ಯವಾಗಿ ಬೇಕಿರುವುದು ತಪ್ಪು ಮಾಡಿದರೆ ಶಿಕ್ಷೆ ಖಚಿತ ಎಂಬ ವಾತಾವರಣ. ಭಾರತದಲ್ಲಿ ಅಪರಾಧಗಳನ್ನು ತೀವ್ರ ತರಹದ ಶಿಕ್ಷೆಗಳಿಂದ ತಡೆಯಬಹುದು ಎಂಬ ಮನೋಭಾವದೊಂದಿಗೆ ಬಹಳಷ್ಟು ಅಪರಾಧಗಳಿಗೆ ಮರಣ ದಂಡನೆಯನ್ನು ಶಿಕ್ಷೆಯಾಗಿ ನಿಗದಿ ಪಡಿಸಲಾಗಿದೆ. ಇದರ ಪರಿಣಾಮವೇನೆಂಬುದನ್ನು ಸ್ವಾತಂತ್ರ್ಯೋತ್ತರ ಭಾರತದ ಅಪರಾಧ ಚರಿತ್ರೆಯೇ ಹೇಳುತ್ತಿದೆ. ಮರಣ ದಂಡನೆ ನಿಷೇಧದ ವ್ಯಾಪ್ತಿಯಿಂದ ಭಯೋತ್ಪಾದನಾ ಚಟುವಟಿಕೆಗಳನ್ನು ಹೊರಗಿಟ್ಟಿರುವುದು ಸ್ವಲ್ಪ ವಿಚಿತ್ರವಾಗಿದೆ.

ಬ್ರಿಟನ್ನಲ್ಲಿ ಐರಿಷ್ ಭಯೋತ್ಪಾದನೆ ಉತ್ತುಂಗದಲ್ಲಿದ್ದ ಕಾಲಘಟ್ಟದಲ್ಲಿಯೇ ಮರಣ ದಂಡನೆಯನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂಬುದಿಲ್ಲಿ ಉಲ್ಲೇಖಾರ್ಹ. ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿ ಭಾರತದಿಂದ ಹೊರಗೆ ತಲೆಮರೆಸಿಕೊಂಡಿರುವ ಅನೇಕ ಅಪರಾಧಿಗಳನ್ನು ಗಡಿಪಾರು ಮಾಡಿಸುವುದಕ್ಕೆ ದೊಡ್ಡ ತೊಂದರೆಯಾಗಿ ಪರಿಣಮಿಸಿರುವುದೇ ಮರಣ ದಂಡನೆಯನ್ನು ಭಾರತ ಇನ್ನೂ ಉಳಿಸಿಕೊಂಡಿರುವುದು. ಈಗಾಗಲೇ ಮರಣ ದಂಡನೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ಯಾವ ದೇಶವೂ ಅಪರಾಧಿಗಳನ್ನು ಭಾರತಕ್ಕೆ ಗಡಿಪಾರು ಮಾಡುವುದಕ್ಕೆ ಒಪ್ಪುವುದಿಲ್ಲ.

ಕಾನೂನು ಆಯೋಗದ ಸಲಹೆಯನ್ನು ಕಾರ್ಯರೂಪಕ್ಕೆ ತರಬೇಕಾದ ಹೊಣೆ ಸರ್ಕಾರದ ಮೇಲಿದೆ. ಕಾನೂನು ಆಯೋಗ ಮರಣ ದಂಡನೆ ಬೇಡ ಎಂಬ ಸಲಹೆಯನ್ನು ನೀಡಿದೆಯೇ ಹೊರತು ಈ ಸಲಹೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ನಿರ್ದಿಷ್ಟ ಮಾರ್ಗವನ್ನೇನೂ ಸೂಚಿಸಿಲ್ಲ. ಕಾನೂನು ಆಯೋಗದ ಐತಿಹಾಸಿಕ ಹೆಜ್ಜೆ ಸಂಪೂರ್ಣಗೊಳ್ಳಬೇಕಾದರೆ ಅದರ ಸಲಹೆಯನ್ನು ಸರ್ಕಾರ ಕಾರ್ಯರೂಪಕ್ಕೆ ತರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.