ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಸಾಮಾನ್ಯರನ್ನೂ ತಲುಪಬೇಕು: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್

Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ್‌ ದಾಸ್‌ ಅವರು ದೇಶದ ಎಲ್ಲಾ ಸಾಧನೆಗಳಿಗೂ ಸಂವಿಧಾನವೇ ಅಡಿಪಾಯ ಎನ್ನುತ್ತಾರೆ. ಸಂವಿಧಾನ ಓದು ಅಭಿಯಾನದ ಮುಂದಾಳುಗಳಲ್ಲಿ ಅವರೂ ಒಬ್ಬರು. ಅವರ ‘ಸಂವಿಧಾನ ಓದು’ ಕೃತಿಯು ಈ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂವಿಧಾನದ ಬಗ್ಗೆ ಜನರಲ್ಲಿ ಏಕೆ ಜಾಗೃತಿ ಮೂಡಿಸಬೇಕು ಎಂಬುದನ್ನು ಅವರು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡಿದ್ದಾರೆ

ಪ್ರ

ಈ ಸಂದರ್ಭದಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದು ಏಕೆ ಅಗತ್ಯ ಎನಿಸುತ್ತದೆ

ಮೊದಲನೆಯದ್ದು ಸಂವಿಧಾನ ಜಾರಿಯಾದ ಬಳಿಕವೇ ನಿಜವಾದ ಭಾರತ ನಿರ್ಮಾಣ ಆಗಿದ್ದು. ಅದಕ್ಕೆ ಮೊದಲು ಗುಪ್ತರ, ಮೌರ್ಯರ, ಮೊಘಲರ, ಬ್ರಿಟಿಷರ ಭಾರತ ಇತ್ತು. ಸಂವಿಧಾನವು ಇಡೀ ದೇಶವನ್ನು ಒಂದು ರಾಜಕೀಯ ಆಡಳಿತದ ವ್ಯಾಪ್ತಿಗೆ ತಂದಿತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕ್ಷೇತ್ರದ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಕಟ್ಟಿ, ಬೆಳೆಸಲು ಸಾಧ್ಯವಾಯಿತು. ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ದೇಶದ ಎಲ್ಲ ಸಾಧನೆಗಳಿಗೂ ಸಂವಿಧಾನವೇ ಅಡಿಪಾಯ. ಈ ಕಾರಣದಿಂದ ದೇಶದಲ್ಲಿ ಸಂವಿಧಾನದ ಕುರಿತು ನಿರಂತರ ಜಾಗೃತಿ ಮೂಡಿಸುವುದು ಅಗತ್ಯ.

ಪ್ರ

ಸಂವಿಧಾನ ಓದು ಕೃತಿ ರಚಿಸಿದ ಬಳಿಕ ಜನರಿಂದ ಬಂದ ಪ್ರತಿಕ್ರಿಯೆಗಳು ಹೇಗಿದ್ದವು?

2018 ಆಗಸ್ಟ್‌ 25ರಂದು ಸೆಂಟ್ರಲ್‌ ಕಾಲೇಜು ಸೆನೆಟ್‌ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಆಯಿತು. ಅವತ್ತೇ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿತ್ತು. ಸಹಯಾನ, ಸಮುದಾಯ ಕೃತಿ ಪ್ರಕಟಿಸಿದ್ದವು. 2019ರ ಜನವರಿಯಲ್ಲಿ ಅಭಿಯಾನ ಆರಂಭಿಸಿದೆವು. ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಿ, ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಸರ್ಕಾರದಿಂದ ಏನೂ ಸಹಾಯ ಪಡೆದಿಲ್ಲ. ಕಾರ್ಪೊರೇಟ್‌ ವಲಯದಿಂದಲೂ ನೆರವು ಪಡೆದಿಲ್ಲ. ನಮ್ಮ ಜೇಬಿನಿಂದಲೂ ಹಣ ಹಾಕಿಲ್ಲ. ಜನರೇ ಈ ಅಭಿಯಾನದ ವೆಚ್ಚ ಭರಿಸಿದ್ದಾರೆ. ಇದು ಜನರಿಂದ ಸಿಕ್ಕ ಪ್ರತಿಕ್ರಿಯೆ.

ಪ್ರ

ಸಂವಿಧಾನ ಓದು ಅಭಿಯಾನ ದೀರ್ಘ ಕಾಲದಿಂದ ನಡೆಯುತ್ತಿದ್ದು, ಪರಿಣಾಮ ಬೀರುವಲ್ಲಿ ಸಫಲವಾಗಿದೆಯೆ?

ಐದು ವರ್ಷಗಳ ಹಿಂದೆ ಸಂವಿಧಾನ ಕುರಿತು ಮಾತಾಡುವವರು ಕಡಿಮೆ ಇದ್ದರು. ಈಗ ಮನೆ ಮಾತಾಗಿದೆ. ಬೇರೆ ಬೇರೆ ಕ್ಷೇತ್ರದವರು ಸಂವಿಧಾನದ ಕುರಿತು ಚರ್ಚೆಯನ್ನು ಬಯಸುತ್ತಿದ್ದಾರೆ. ದೇಶ ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದೆ. ಪರಿಶಿಷ್ಟ ಯುವಕನೊಬ್ಬ ಮನೆ ಗೃಹ ಪ್ರವೇಶದಲ್ಲಿ ಸಂವಿಧಾನ ಓದು ಕೃತಿ ಹಂಚುತ್ತಿದ್ದಾನೆ. ರಾಜ್ಯದ ಉದ್ದಗಲದಿಂದ ಕೃತಿಯ ಪ್ರತಿಗಳಿಗೆ ಸಾವಿರ, ಸಾವಿರ ಸಂಖ್ಯೆಯಲ್ಲಿ ಬೇಡಿಕೆ ಬರುತ್ತಿದೆ.

ಪ್ರ

ಸಂವಿಧಾನದ ಕುರಿತು ಅರಿವು ಮೂಡಿಸಲು ಇನ್ನೂ ಏನೆಲ್ಲಾ ಪ್ರಯತ್ನಗಳು ಆಗಬೇಕಿದೆ?

ನಾವು ಪುಸ್ತಕ ಬರೆದು ಮಾರಿದರೆ ವಿದ್ಯಾವಂತರಿಗೆ ತಲುಪುತ್ತದೆ. ಹೊರಗಡೆ ಉಳಿದ ಗ್ರಾಮಾಂತರ ಪ್ರದೇಶದ ಜನ, ಅನಕ್ಷರಸ್ಥರು, ಸರ್ಕಾರಿ ನೌಕರರು, ಕೈಗಾರಿಕಾ ಕಾರ್ಮಿಕರು, ಸಾಮಾನ್ಯ ಜನರನ್ನು ತಲುಪಬೇಕು. ಈಗ ನಡೆಯುತ್ತಿರುವ ಅಭಿಯಾನದ ಜತೆ ಬೇರೆ ಬೇರೆ ಪ್ರಕಾರದಲ್ಲಿ ಹೋಗಬೇಕು. ಸಂವಿಧಾನದ ಕುರಿತು ಸಿನಿಮಾ ನಿರ್ಮಾಣ ಆಗಬೇಕು. ಅನಕ್ಷರಸ್ಥರು ರಾಮಾಯಣ, ಮಹಾಭಾರತ ಕಲಿಯಬಲ್ಲರಾದರೆ ಸಂವಿಧಾನವನ್ನೂ ಅರಿಯುತ್ತಾರೆ. ಯಕ್ಷಗಾನ, ತಾಳಮದ್ದಳೆ, ನಾಟಕ, ಸಣ್ಣಾಟ, ದೊಡ್ಡಾಟ, ಗಾಯನ ಸೇರಿದಂತೆ ಎಲ್ಲ ಕಲಾ ಪ್ರಕಾರಗಳನ್ನೂ ಇದಕ್ಕಾಗಿ ಬಳಸಿಕೊಳ್ಳಬೇಕು.

ಪ್ರ

ಈ ಅಭಿಯಾನದ ನಿಜವಾದ ಗುರಿ ಯಾರು?

ವಿದ್ಯಾರ್ಥಿ ಯುವಜನರೇ ನಮ್ಮ ಪ್ರಮುಖ ಗುರಿ. ಅವರು ಭವಿಷ್ಯದ ಭಾರತದ ಶಕ್ತಿ. ಈ ತಲೆಮಾರನ್ನು ಸರಿಪಡಿಸಿದರೆ ಮುಂದೆ ಫಲ ಕೊಡುತ್ತದೆ. ಸಂಪನ್ಮೂಲ ವ್ಯಕ್ತಿಗಳನ್ನು ತಯಾರು ಮಾಡುತ್ತಿದ್ದೇವೆ. 100ರಿಂದ 150 ಮಂದಿಯನ್ನು ಆಯ್ಕೆಮಾಡಿ ತರಬೇತಿ ನೀಡುತ್ತಿದ್ದೇವೆ. ಅವರು ರಾಜ್ಯವ್ಯಾಪಿ ಅಭಿಯಾನ ಮುಂದುವರಿಸುವ ಹೊರೆ ಹೊರಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT