ಸೋಮವಾರ, ಮಾರ್ಚ್ 27, 2023
22 °C
ಸಿ.ಟಿ.ರವಿ ಸಂದರ್ಶನ

Interview| ಬಿಎಸ್‌ವೈ ಅವರನ್ನು ಜೈಲಿಗೆ ಕಳಿಸಿದ್ದ್ಯಾರು?: ಸಿ.ಟಿ ರವಿ ಪ್ರಶ್ನೆ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಚುನಾವಣೆಯ ಬಿಸಿ ಏರುತ್ತಿದೆ. ವಿವಿಧ ಪಕ್ಷಗಳ ಮುಖಂಡರ ನಡುವೆ ವಾಕ್ಸಮರ ಆರಂಭವಾಗಿದೆ, ಒಂದೇ ಪಕ್ಷದವರು ಕೂಡ ಪರಸ್ಪರರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಡಿದ್ದಾರೆ ಎನ್ನಲಾದ ಮಾತು ವಿವಾದ ಸೃಷ್ಟಿಸಿತ್ತು. ಚುನಾವಣಾ ಕಣದಲ್ಲಿ ಏನು ನಡೆಯುತ್ತಿದೆ, ಬಿಜೆಪಿಯ ಶಕ್ತಿ ಏನು ಎಂಬುದನ್ನು ಸಿ.ಟಿ. ರವಿ ಅವರು ಪ್ರಜಾವಾಣಿಯೊಂದಿಗೆ ಹಂಚಿಕೊಂಡಿದ್ದಾರೆ

ಚುನಾವಣೆ ಕೋಟೆ ಬಾಗಿಲಿಗೆ ಬಂದು ನಿಂತಿರುವ ಈ ಸಂದರ್ಭದಲ್ಲಿ ಬಿಜೆಪಿಯಲ್ಲಿ ನಾಯಕರ ಒಗ್ಗಟ್ಟಿನ ಕೊರತೆ ಕಾಣುತ್ತಿದೆಯಲ್ಲ. 1980–90ರ ದಶಕದಲ್ಲಿ ಪಕ್ಷದ ನಾಯಕರು ಹೆಗಲಿಗೆ ಹೆಗಲು ಕೊಟ್ಟು ಚುನಾವಣೆ ಎದುರಿಸುತ್ತಿದ್ದರು. ಆದರೆ, ಈಗ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎಳೆದಾಡುತ್ತಿದ್ದಾರೆ. ನಿಮ್ಮ ನಾಯಕರ ಮಧ್ಯೆ ಪರಸ್ಪರ ವಿಶ್ವಾಸದ ಕೊರತೆ ಇದೆಯೆ?

ಹಾಗೇನಿಲ್ಲ. ಹಿಂದಿನಿಂದಲೂ ನಮ್ಮದು ಕೇಡರ್ ಆಧರಿಸಿದ ಪಕ್ಷ. ಆಗ ಅಧಿಕಾರ ದೂರದ ಸಂಗತಿಯಾಗಿತ್ತು. ಸಿದ್ಧಾಂತಕ್ಕಾಗಿ ಕೆಲಸ ಮಾಡುವವರು ಮಾತ್ರ ಇದ್ದರು. ಸಿದ್ಧಾಂತದ ಕಾರಣಕ್ಕೆ ನನ್ನ ಅಪ್ಪ ಬೇಡ ಎಂದರೂ ಬಿಜೆಪಿ ಸೇರಿದೆ. ಈಗ ಬಿಜೆಪಿ ವಿಶಾಲ ತಳಹದಿಯ ‘ಮಾಸ್‌ ಪಾರ್ಟಿ’ ಆಗಿದೆ. ‘ಮಾಸ್‌ ಪಾರ್ಟಿ’ ಸ್ವರೂಪ ಬಂದಾಗ ಅಧಿಕಾರ, ಸಾಮರ್ಥ್ಯ, ಜನ ಬೆಂಬಲ ಎಲ್ಲವೂ ಬರುತ್ತದೆ. ಮಾಸ್‌ ಅಂದ್ರೆ ಫ್ಲಡ್‌ (ಪ್ರವಾಹ) ಇದ್ದಂತೆ. ಫ್ಲಡ್‌ ಬಂದಾಗ ನೀರಿನ ಜತೆ ಕೆಸರು, ಕಸ, ಕಡ್ಡಿಗಳೂ ಬರುತ್ತವೆ. ಅಣೆಕಟ್ಟಿನಲ್ಲಿ ಸೇರಿದಾಗ ಕೆಸರು, ಕಸಕಡ್ಡಿ ತಳ ಸೇರಿ ನೀರು ತಿಳಿ ಆಗುತ್ತದೆ. ಅದೊಂದು ಪ್ರಕ್ರಿಯೆ. ನಿಮಗೆ ಈಗ ಮೇಲ್ನೋಟಕ್ಕೆ ಏನು ಕಾಣುತ್ತಿದೆಯೋ, ಕೇಳಿಸುತ್ತಿದೆಯೋ ವಾಸ್ತವ ಆ ರೀತಿ ಇರುವುದಿಲ್ಲ. ಬೂತ್‌ಮಟ್ಟದಿಂದ ಗೆಲುವಿಗಾಗಿ ಕಾರ್ಯತಂತ್ರ, ಚಟುವಟಿಕೆಗಳು ನಡೆಯುತ್ತಿವೆ. ಎಲ್ಲೋ, ಅಲ್ಲೊಂದು– ಇಲ್ಲೊಂದು ಘಟನೆಯನ್ನು ನೋಡಿ ಒಗ್ಗಟ್ಟಿಲ್ಲ ಎಂದು ಹೇಳುವುದು ಸರಿಯಲ್ಲ. ಒಗ್ಗಟಿನ ಕಾರಣಕ್ಕೆ, ನಾಲ್ಕೂ ಕಡೆಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದೆ, ಸಮಾವೇಶಗಳು ನಡೆಯುತ್ತಿವೆ. ಇಂತಹ ಒಡಕಿನ ಮಾತುಗಳು ಉತ್ತರ ಪ್ರದೇಶದ ಚುನಾವಣೆ ವೇಳೆಯಲ್ಲೂ ಕೇಳಿ ಬಂದಿತ್ತು. ಒಬಿಸಿ ವರ್ಗ ಬಿಜೆಪಿ ಕೈಬಿಟ್ಟು ಹೋಗುತ್ತಿದೆ ಎಂದು ವ್ಯಾಖ್ಯಾನಿಸಲಾಗಿತ್ತು. ಫಲಿತಾಂಶ ಏನು ಬಂತು. ಇಲ್ಲೂ ಅದೇ ರೀತಿ ಆಗಲಿದೆ.

ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವ ಸಂಬಂಧ ನೀವು ನೀಡಿರುವ ಹೇಳಿಕೆಯು ಪಕ್ಷದಲ್ಲಿ ಒಗ್ಗಟ್ಟಿನ ಕೊರತೆಯ ಪ್ರತೀಕವಲ್ಲವೇ? ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರೂ ಹೌದು. ಅವರಿಗೂ ಚುನಾವಣೆ ಹೊಣೆಗಾರಿಕೆಯನ್ನು ಪಕ್ಷ ನೀಡಿದೆ. ಈ ಸಂದರ್ಭದಲ್ಲಿ ನಿಮ್ಮ ಹೇಳಿಕೆಯು ಪಕ್ಷಕ್ಕೆ ಹಾನಿ ಉಂಟು ಮಾಡುತ್ತದೆ ಎಂಬ ಮಾತು ಕೇಳಿಬರುತ್ತಿದೆ?

ನನ್ನ ಹೇಳಿಕೆಯಲ್ಲಿ ವಿವಾದಾತ್ಮಕ ಅಂಶಗಳಿಲ್ಲ. ಪಕ್ಷದ ನೀತಿ, ನೇತೃತ್ವ ಮತ್ತು ನಿಯತ್ತಿನ ವಿಷಯಗಳನ್ನು ಇಟ್ಟುಕೊಂಡು ಮಾತನಾಡಿದ್ದೆ. ಈ ಮೂರು ಅಂಶಗಳನ್ನು ಇಟ್ಟುಕೊಂಡು ರಿಪೋರ್ಟ್‌ ಕಾರ್ಡ್‌ ಜನರ ಮುಂದಿಡುತ್ತೇವೆ ಎಂದು ಹೇಳಿದ್ದೆ. ನಮ್ಮ ಪಕ್ಷದ ನೀತಿ ಎಂದರೆ, ಪ್ರಜಾಪ್ರಭುತ್ವಕ್ಕೆ, ದಲಿತರಿಗೆ ಮತ್ತು ಬಡವರಿಗೆ ಬಲ ನೀಡುವುದು. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್,  ನಮ್ಮ ಪಕ್ಷದ ನೇತೃತ್ವ ಎಂದರೆ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ. ನಿಯತ್ತು ಎಂದರೆ, ಡಿಬಿಟಿ ಮೂಲಕ ಫಲಾನುಭವಿಗಳಿಗೆ ಒಂದು ಪೈಸೆ ಸೋರಿಕೆ ಆಗದಂತೆ, ಮಧ್ಯವರ್ತಿ ಹಾವಳಿ ಇಲ್ಲದೇ ವಿವಿಧ ಯೋಜನೆಗಳ ಹಣ ಪಾವತಿ ಮಾಡುವುದು. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದ್ದರೆ, ಜೆಡಿಎಸ್‌– ಕಾಂಗ್ರೆಸ್‌ನಲ್ಲಿ ವಂಶವಾದ ಇದೆ ಎಂಬ ವಿಚಾರ ಮುಂದಿಟ್ಟಿದ್ದೆ. ಆಗ, ಸುದ್ದಿಗಾರರು ನಿಮ್ಮ ಪಕ್ಷದಲ್ಲಿ ವಂಶವಾದ ಇಲ್ಲವೇ ಎಂದು ಪ್ರಶ್ನಿಸಿದರು. ನಮ್ಮ ಪಕ್ಷದಲ್ಲಿ ಏನೇ ತೀರ್ಮಾನ ಆಗುವುದಿದ್ದರೂ ಸಂಸದೀಯ ಮಂಡಳಿಯ ಸಭೆಯಲ್ಲೇ ಆಗುತ್ತದೆ. ಕಿಚನ್‌ ಕ್ಯಾಬಿನ್‌ನಲ್ಲಿ ಆಗುವುದಿಲ್ಲ. ಅದು ಸಿ.ಟಿ.ರವಿ ಇರಲಿ, ವಿಜಯೇಂದ್ರ ಇರಲಿ, ಬೊಮ್ಮಾಯಿ ಇರಲಿ, ಎಲ್ಲರಿಗೂ ಒಂದೇ. ಸಂಸದೀಯ ಮಂಡಳಿಯಲ್ಲೇ ಟಿಕೆಟ್‌ ತೀರ್ಮಾನ ಆಗುತ್ತದೆ. ಜೆಡಿಎಸ್‌ನಲ್ಲಿ ಮಾತ್ರ ಕಿಚನ್ ಕ್ಯಾಬಿನ್‌ನಲ್ಲಿ ಆಗುತ್ತದೆ ಎಂದಿದ್ದೆ. ಇದರಲ್ಲಿ ವಿವಾದದ ಅಂಶ ಏನಿದೆ ಹೇಳಿ? ನಮ್ಮ ಪಕ್ಷದ ವ್ಯವಸ್ಥೆಯನ್ನು ಹೇಳಿದ್ದೆ. ಆದರೆ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ತಪ್ಪಾಗಿ ಬಿಂಬಿಸಲಾಯಿತು. ಆದ್ದರಿಂದ ವಿವಾದ ಆಯಿತು.

ನೀವು ಮತ್ತು ಸಚಿವ ವಿ. ಸೋಮಣ್ಣ ಏಕಕಾಲದಲ್ಲಿ ವಿಜಯೇಂದ್ರ ಅವರ ಮೇಲೆ ಮುಗಿಬಿದ್ದಿದ್ದು ಕಾಕತಾಳೀಯವೇ? ಲಿಂಗಾಯತರಿಗೆ ಪ್ರಾಮುಖ್ಯತೆ ನೀಡಬೇಕಾಗಿಲ್ಲ ಎಂದು ನೀವು ಹೇಳಿದ್ದಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ, ಹಕೀಕತ್‌ ಏನು?

ಸೋಮಣ್ಣ ಏನು ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷ 34 ವರ್ಷಗಳಿಂದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಆಡಳಿತ ಹಿಡಿದಿದೆ. ನಾವು ಜಾತಿ ರಾಜಕಾರಣ ದೂರವಿಟ್ಟು, ಸಿದ್ಧಾಂತ ರಾಜಕಾರಣ ಮಾಡುತ್ತಾ ಬಂದಿದ್ದೇವೆ. ಸಿದ್ಧಾಂತದ ಕಾರಣಕ್ಕಾಗಿಯೇ ಬೂತ್‌ ಹಂತದಿಂದ ಈಗಿನ ಹಂತದವರೆಗೆ ಪಕ್ಷ ನನಗೆ ಅವಕಾಶ ನೀಡಿದೆ. ನಾನು ಮಾತನಾಡಿರುವುದಕ್ಕೆ ರೆಕಾರ್ಡ್‌ ಇದೆ. ಯಾರು ಬೇಕಾದರೂ ಕೇಳಬಹುದು. ಅಪಪ್ರಚಾರಗಳು ಕಾಂಗ್ರೆಸ್‌ನ ‘ಟೂಲ್‌ಕಿಟ್‌’ ರಾಜಕಾರಣದ ಒಂದು ಭಾಗ. ನಾನು ಲಿಂಗಾಯತರ ಕುರಿತು ಮಾತನಾಡಿದೆ ಎಂದು ಹೇಳಲಾದ ಸುದ್ದಿಯೇ ಸುಳ್ಳು. ಅದು ಯಾವ ಪತ್ರಿಕೆಯಲ್ಲೂ ಪ್ರಕಟ ಆಗಿಲ್ಲ. ಟಿ.ವಿಗಳಲ್ಲೂ ಮಾಹಿತಿ ಬಂದಿಲ್ಲ. ಕಾಂಗ್ರೆಸ್‌ನ ಸುಳ್ಳು ಸುದ್ದಿ ಗಿರಣಿಯಿಂದ ಹೊರ ಬಂದಿದ್ದು. ಇದನ್ನು ಹೊರ ವಿರೋಧಿಗಳು ಬಳಸಿಕೊಂಡರೆ, ಒಳ ವಿರೋಧಿಗಳು ಷಡ್ಯಂತ್ರಕ್ಕಾಗಿ ಅಸ್ತ್ರವಾಗಿ ಬಳಸಿಕೊಂಡರು. ರಾಜಕೀಯವಾಗಿ ನನ್ನನ್ನು ಮುಗಿಸಬೇಕು ಎಂಬ ಪಿತೂರಿಯ ಭಾಗವಿದು. ಅಲ್ಲದೇ, ವೀರಶೈವ–ಲಿಂಗಾಯತರನ್ನು ಒಡೆಯಲು ಹೊರಟು ಕೈ ಸುಟ್ಟುಕೊಂಡವರು ಈಗ ಟೂಲ್‌ಕಿಟ್‌ ಮೂಲಕ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ನಾನು ಈ ಸುಳ್ಳು ಸುದ್ದಿಯ ಬಗ್ಗೆ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದೇನೆ. ತನಿಖೆ ಆಗಿ ಸತ್ಯ ಹೊರಬರಲಿದೆ. ನಾನು ಸುಮ್ಮನೆ ಬಿಡುವುದಿಲ್ಲ. ಇದನ್ನು ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ.

ಇವೆಲ್ಲ ಆಟವನ್ನು ನಿಮ್ಮ ಪಕ್ಷದ ದೆಹಲಿಯಲ್ಲಿರುವ ರಾಜ್ಯದ ನಾಯಕರೊಬ್ಬರು ಆಡಿಸುತ್ತಿದ್ದಾರೆ ಎಂಬ ವ್ಯಾಖ್ಯಾನ ನಿಮ್ಮ ಪಕ್ಷದಲ್ಲೇ ಕೇಳಿ ಬರುತ್ತಿದೆಯಲ್ಲ. ನಿಮ್ಮಲ್ಲೇ ಪರಸ್ಪರ ತುಳಿಯುವ ಮೇಲಾಟ ನಡೆಯುತ್ತಿದೆ ಎಂಬ ಮಾತೂ ಕೇಳಿ ಬರುತ್ತಿದೆಯಲ್ಲ?

ಇದೂ ಕೂಡಾ ಕಾಂಗ್ರೆಸ್‌ನ ಟೂಲ್‌ಕಿಟ್‌ ರಾಜಕಾರಣದ ಭಾಗ. 80ರ ದಶಕದಲ್ಲಿ ಅಂದಿನ ಕಾಂಗ್ರೆಸ್‌ನ ಬಂದೀಖಾನೆ ಸಚಿವರೊಬ್ಬರ ಬೆಂಬಲಿಗರು ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರ ಮೇಲೆ ಭೀಕರವಾಗಿ ಹಲ್ಲೆ ಮಾಡಿದರು. ಆಗ ಅವರು ಪುರಸಭೆ ಸದಸ್ಯರಾಗಿದ್ದರು. ಆಗ ಅವರನ್ನು ಜೀವಂತವಾಗಿ ಮುಗಿಸಲು ಹೊರಟ್ಟಿದ್ದೂ ಕಾಂಗ್ರೆಸ್‌ನವರು. ಯಡಿಯೂರಪ್ಪ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಅವರು ಮುಖ್ಯಮಂತ್ರಿ ಆಗಿದ್ದಾಗ ಜೈಲಿಗೆ ಹೋಗುವಂತೆ ಷಡ್ಯಂತ್ರ ಮಾಡಿದ್ದೂ ಕಾಂಗ್ರೆಸ್‌.  ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೇ ಇದ್ದರೆ, ಕೇಸ್‌ ದಾಖಲಾಗುತ್ತಿರಲಿಲ್ಲ. ಜೈಲಿಗೆ ಹೋಗುತ್ತಿರಲಿಲ್ಲ. ಹಾಗಿದ್ದರೆ ಯಡಿಯೂರಪ್ಪ ವಿರೋಧಿಗಳು ಯಾರು? ನಾವಾ? ಕಾಂಗ್ರೆಸ್ಸಾ? ಈಗ ಕಾಂಗ್ರೆಸ್‌ ಅನುಕಂಪದ ನಾಟಕ ಏಕೆ ಆಡುತ್ತಿದೆ?

ಚಿಕ್ಕಮಗಳೂರಿನಲ್ಲಿ ಈ ಬಾರಿ ನಿಮ್ಮ ಗೆಲುವು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆಯಲ್ಲವೇ?

ಮತದಾರನೇ ಸರ್ವಸ್ವ. ಅವರಿಗಾಗಿ ನಾನು ಕೆಲಸ ಮಾಡಿದವನು. ಆದರೆ, ನನ್ನ ಬೆಳವಣಿಗೆ ನೋಡಿ ಸಹಿಸದವರು ಇದ್ದಾರೆ.  ಆದರೆ, ನಾನು ರಾಜೀ ಇಲ್ಲದೇ ರಾಜಕಾರಣ ಮಾಡುತ್ತೇನೆ. ಹೀಗಾಗಿ ಹಿತೈಷಿಗಳೂ ಇದ್ದಾರೆ, ಶತ್ರುಗಳೂ ಇದ್ದಾರೆ.  ನೇರ–ನಿಷ್ಠುರ ಮಾತುಗಳನ್ನು ಆಡುವ ಕಾರಣ ವಿರೋಧಿಗಳೂ ಜಾಸ್ತಿ ಇದ್ದಾರೆ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಎಚ್‌.ಡಿ.ಕುಮಾರಸ್ವಾಮಿ ವಿರೋಧಿಗಳು. ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಸಿದ್ಧಾಂತದ ರಾಜಕಾರಣಕ್ಕಾಗಿ ಸಾವನ್ನೂ ಸ್ವೀಕಾರ ಮಾಡಲು ತಯಾರಿರುತ್ತೇವೆ. ಉಳಿದ ಎಲ್ಲವೂ ನಮಗೆ ಗೌಣ.

ಚುನಾವಣಾ ಪ್ರಚಾರದಲ್ಲಿ ಬಿಜೆಪಿಗಿಂತಾ ಕಾಂಗ್ರೆಸ್‌ ಓಟ ಜೋರಾಗಿ ಕಂಡು ಬರುತ್ತಿದೆ? ಬಿಜೆಪಿ ಎಡವುತ್ತಿದೆಯಾ?

ಕಾಂಗ್ರೆಸ್‌ನವರದು ಗ್ರೌಂಡ್‌ಗಿಂತ ಸೌಂಡ್‌ ಜಾಸ್ತಿ. ನಾವು ಗ್ರೌಂಡ್‌ನಲ್ಲಿದ್ದೇವೇ. ಗೋವಾ, ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ದುರ್ಬಲ ಎಂದೇ ಬಿಂಬಿಸಲಾಗಿತ್ತು. ಉತ್ತರಪ್ರದೇಶ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ಅವರ ಸುದ್ದಿಯೇ ಎಲ್ಲ ಮಾಧ್ಯಮಗಳಲ್ಲಿ ಇರುತ್ತಿತ್ತು. ದೊಡ್ಡ ಹವಾ ಎಬ್ಬಿಸಿದ್ದಾರೆ ಎಂದೇ ಬಿಂಬಿಸಲಾಗಿತ್ತು. ಆದರೆ, ಸ್ಪರ್ಧಿಸಿದ 387 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡು 2 ಸ್ಥಾನಗಳಲ್ಲಿ ಮಾತ್ರ ಗೆದ್ದಿತು. ಮೋದಿ, ಅಮಿತ್ ಶಾ ಅವರ ಆಟ ನಡೆಯುವುದಿಲ್ಲ ಎಂದು 2014, 2018 ಮತ್ತು 2019 ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಹೇಳಿಕೊಂಡು ಬಂದಿದ್ದವು. ಆದರೆ, ಫಲಿತಾಂಶ ನಮ್ಮ ಕಣ್ಣ ಮುಂದೆ ಇದೆಯಲ್ಲ. ಮೋದಿ ಮ್ಯಾಜಿಕ್ ಅಲ್ಲದೇ ಮತ್ತಿನ್ನೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು