ಮಂಗಳವಾರ, ಆಗಸ್ಟ್ 3, 2021
26 °C

‘ರಾಜ್ಯದ ಎಸ್ಕಾಂಗಳ ಮೇಲೆ ಬೀಳಲಿದೆ ಅಧಿಕ ಹೊರೆ’

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

l ಕೇಂದ್ರ ಸರ್ಕಾರ ‘ವಿದ್ಯುತ್‌ ಕಾಯ್ದೆ-2003’ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ರಾಜ್ಯ ಸರ್ಕಾರದ ನಿಲುವೇನು?

ಪ್ರಸ್ತಾವಿತ ತಿದ್ದುಪಡಿಯಲ್ಲಿರುವ ಅಂಶಗಳನ್ನು ನಾವು (ರಾಜ್ಯ ಸರ್ಕಾರ) ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ವಿದ್ಯುತ್ ಕ್ಷೇತ್ರದ ತಜ್ಞರು, ಪರಿಣತರ ಜೊತೆಗೂ ಈ ಬಗ್ಗೆ ಚರ್ಚಿಸಿದ್ದೇವೆ. ಕಾಯ್ದೆಗಳಲ್ಲಿ ಕಾಲಕಾಲಕ್ಕೆ ಕೆಲವು ತಿದ್ದುಪಡಿ ಮಾಡುವುದು ಅನಿವಾರ್ಯವೂ ಹೌದು. ಹೀಗಾಗಿ, ಕೇಂದ್ರದ ನಡೆಯನ್ನು ನಾವೂ ಸ್ವಾಗತಿಸುತ್ತೇವೆ. ಆದರೆ, ರಾಜ್ಯದ ಹಿತದೃಷ್ಟಿಯಿಂದ ಮತ್ತು ಆ ದಿಕ್ಕಿನಲ್ಲಿ ಪರಿಶೀಲಿಸಿ ಎಲ್ಲರ ಸಲಹೆ– ಸೂಚನೆಗಳನ್ನು ಪಡೆದಿದ್ದೇವೆ. ಸರ್ಕಾರದ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಜೂನ್‌ 5ರವರೆಗೆ ಸಮಯಾವಕಾಶವಿದೆ. ನಮ್ಮ ಅಭಿಪ್ರಾಯ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಶೀಘ್ರದಲ್ಲೇ ಕೇಂದ್ರಕ್ಕೆ ಕಳುಹಿಸುತ್ತೇವೆ.

l ತಿದ್ದುಪಡಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ಅಭಿಪ್ರಾಯವೇನು?

ವಿದ್ಯುತ್‌ ಮಾರಾಟ, ಖರೀದಿ, ಪ್ರಸರಣ... ಹೀಗೆ ವಿದ್ಯುತ್‌ಗೆ ಸಂಬಂಧಿಸಿದ ಎಲ್ಲ ವ್ಯಾಜ್ಯಗಳನ್ನು ಬಗೆಹರಿಸಲು ನಮ್ಮಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಇದೆ. ಬಗೆಹರಿಯದ ಅಥವಾ ಆಕ್ಷೇಪಗಳಿರುವ ವ್ಯಾಜ್ಯಗಳನ್ನು ಮೇಲ್ಮನವಿ ಪ್ರಾಧಿಕಾರದಲ್ಲಿ (ಆಪ್ಲೆಟ್‌ ಟ್ರಿಬ್ಯೂನಲ್‌ ಎಲೆಕ್ಟ್ರಿಸಿಟಿ– ಎಪಿಟಿಇಎಲ್‌) ಪ್ರಶ್ನಿಸಲು ಅವಕಾಶವಿದೆ. ಹೊಸ ತಿದ್ದುಪಡಿ ಕಾಯ್ದೆ ಜಾರಿಯಿಂದ ವಿದ್ಯುತ್ ಗುತ್ತಿಗೆ ಜಾರಿ ಪ್ರಾಧಿಕಾರ (ಇಸಿಇಎ) ರಚನೆಯಾಗಲಿದೆ. ಎಲ್ಲ ರಾಜ್ಯಗಳ ಮೂಲ ವ್ಯಾಜ್ಯಗಳನ್ನು ಈ ಪ್ರಾಧಿಕಾರ ಬಗೆಹರಿಸಲಿದೆ. ಆದರೆ, ಸ್ಥಳೀಯ ವ್ಯಾಜ್ಯಗಳು ಸ್ಥಳೀಯವಾಗಿ ಬಗೆಹರಿಯಬೇಕು ಎನ್ನುವುದು ನಮ್ಮ ಬಯಕೆ. ಹೊಸ ಪ್ರಾಧಿಕಾರ ರಚನೆಯಾದರೆ ಪ್ರತಿಯೊಂದಕ್ಕೂ ಇಸಿಇಎಗೆ ಹೋಗಬೇಕಾಗುತ್ತದೆ.

l ಹಾಗಿದ್ದರೆ, ಕೆಇಆರ್‌ಸಿ ಕಥೆ ಏನು?

ವಿದ್ಯುತ್‌ ದರ ನಿಗದಿ, ನಿಯಂತ್ರಣ ಮತ್ತು ವಿದ್ಯುತ್‌ ಶುಲ್ಕಕ್ಕೆ ಸಂಬಂಧಿಸಿ ಬಳಕೆದಾರರ ವಿಷಯಗಳನ್ನು ಕೆಇಆರ್‌ಸಿ ನೋಡಿಕೊಳ್ಳಲಿದೆ. ಆದರೆ, ಈಗ ಕೆಇಆರ್‌ಸಿ ಅಧ್ಯಕ್ಷರು, ಸದಸ್ಯರನ್ನು ನಮ್ಮಲ್ಲಿರುವ ಆಯ್ಕೆ ಸಮಿತಿ ಆಯ್ಕೆ ಮಾಡುತ್ತದೆ. ಅಂದರೆ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಸಿಇಆರ್‌ಸಿ) ಸದಸ್ಯರೊಬ್ಬರು ಸಮಿತಿಯಲ್ಲಿ ಇದ್ದಾರೆ. ಕಾಯ್ದೆ ತಿದ್ದುಪಡಿಯಾದರೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಕೇಂದ್ರಕ್ಕೆ ಹೋಗಲಿದೆ. ಅದನ್ನು ಈಗಿರುವ ಸ್ಥಿತಿಯಲ್ಲೇ ಮುಂದುವರಿಸಬೇಕು. ನೇಮಕ ಮಾಡುವ ಅಧಿಕಾರ ಸ್ಥಳೀಯವಾಗಿ ಇದ್ದರೆ ಅನುಕೂಲ. ಈ ಬಗ್ಗೆಯೂ ಸಲಹೆ ನೀಡುತ್ತೇವೆ.

l ಸಹಾಯಧನವನ್ನು ಗ್ರಾಹಕರ ಖಾತೆಗೆ ‘ನೇರ ನಗದು ವರ್ಗಾವಣೆ’ (ಡಿಬಿಟಿ) ಮಾಡಿದರೆ ಒಳ್ಳೆಯದಲ್ಲವೇ?

ರಾಜ್ಯದಲ್ಲಿ 10 ಎಚ್‌ಪಿ ಪಂಪ್‌ ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ. ಅಂಥವರು 30 ಲಕ್ಷ ರೈತರು ನಮ್ಮಲ್ಲಿದ್ದಾರೆ. ರೈತರ ಈ ಪಂಪ್‌ ಸೆಟ್‌ಗಳಿಗೆ ಬಳಸಿದ ವಿದ್ಯುತ್‌ ಶುಲ್ಕವನ್ನು (ಸಹಾಯಧನ) ಎಸ್ಕಾಂಗಳಿಗೆ (ವಿದ್ಯುತ್‌ ಪೂರೈಕೆ ಕಂಪನಿಗಳು) ರಾಜ್ಯ ಸರ್ಕಾರ ಪಾವತಿಸುತ್ತದೆ. ತಿದ್ದುಪಡಿ ಪ್ರಕಾರ, ರೈತರು ಎಸ್ಕಾಂಗಳಿಗೆ ಪಾವತಿಸಬೇಕು. ಸರ್ಕಾರ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಕು. ಆದರೆ, ರೈತರು ಎಷ್ಟು ವಿದ್ಯುತ್‌ ಬಳಕೆ ಮಾಡುತ್ತಾರೆ ಎಂದು ಲೆಕ್ಕ ತೆಗೆದುಕೊಂಡು ಅದರ ಆಧಾರದಲ್ಲಿ ಸಹಾಯಧನವನ್ನು ರೈತರ ಖಾತೆಗಳಿಗೆ ವರ್ಗಾಯಿಸಬೇಕಾಗುತ್ತದೆ. ಹೀಗೆ, ಲೆಕ್ಕ ತೆಗೆದುಕೊಳ್ಳಬೇಕಾದರೆ ಮೀಟರ್‌ ಅಳವಡಿಸಬೇಕು. ಮೀಟರ್ ಅಳವಡಿಸದೆ ಲೆಕ್ಕ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಪಂಪ್‌ ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ರೈತರು ಒಪ್ಪುತ್ತಾರೆಯೇ ಎನ್ನುವುದು ಪ್ರಶ್ನೆ. ಮೀಟರ್‌ ಅಳವಡಿಸಲು ಹಿಂದೆ ಯತ್ನ ನಡೆದಿತ್ತು. ಆದರೆ ಬಿಡಲಿಲ್ಲ.

ನಾವು ರೈತರಿಗೆ ಕೊಡುತ್ತಿರುವ ಸಹಾಯಧನಕ್ಕಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದರೆ, ಆ ಮೊತ್ತವನ್ನು ರೈತರು ಎಸ್ಕಾಂಗಳಿಗೆ ಕಟ್ಟಲ್ಲ. ಸರ್ಕಾರವೂ ಕಟ್ಟಲ್ಲ. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಸ್ಕಾಂಗಳು, ಇದರಿಂದಾಗಿ ಇನ್ನಷ್ಟು ತೊಂದರೆಗೆ ಸಿಲುಕಬಹುದು. ಅಷ್ಟೇ ಅಲ್ಲ, ಸರ್ಕಾರ ಖಾತೆಗೆ ವರ್ಗಾಯಿಸಿದ ಸಹಾಯಧನವನ್ನು ರೈತರು ಕಟ್ಟದಿದ್ದರೆ ಸಮಸ್ಯೆ ಇನ್ನಷ್ಟು ಕೆಟ್ಟು ಹೋಗಬಹುದು. ಸರ್ಕಾರ ಒಂದು ಪಂಪ್‌ಸೆಟ್‌ಗೆ (10 ಎಚ್‌ಪಿ) ಉಚಿತವಾಗಿ ವಿದ್ಯುತ್‌ ನೀಡುತ್ತಿದೆ. ಆದರೆ, ಕೆಲವರು  5, 6 ಪಂಪ್‌ಸೆಟ್‌ಗಳನ್ನು ಹಾಕಿದ್ದಾರೆ. ಅಷ್ಟೇ ಅಲ್ಲ, ಅನಧಿಕೃತವಾಗಿ ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. ಗಂಗಾ ಕಲ್ಯಾಣ ಯೋಜನೆಯ ಅಂದಾಜು 25 ಸಾವಿರ ಪಂಪ್‌ಸೆಟ್‌ಗಳೂ ಸೇರಿ, ಪ್ರತಿವರ್ಷ 80 ಸಾವಿರದಿಂದ ಲಕ್ಷದಷ್ಟು ಪಂಪ್‌ ಸೆಟ್‌ಗಳು ಹೆಚ್ಚಳವಾಗುತ್ತಿದೆ. ಇದು ನಮ್ಮ ಮುಂದಿರುವ ಸಮಸ್ಯೆ.

l ಕಾಯ್ದೆ ತಿದ್ದುಪಡಿಯಿಂದ ವಿದ್ಯುತ್‌ ಖರೀದಿಗೂ ಅಡ್ಡಿ ಆಗುತ್ತದೆಯೇ?

ಕಾಯ್ದೆ ತಿದ್ದುಪಡಿಯಾದರೆ ಶುಲ್ಕ ಪಾವತಿಯ ಖಾತರಿ ನೀಡದ ಎಸ್ಕಾಂಗಳಿಗೆ ಉತ್ಪಾದನಾ ಕಂಪನಿಗಳಿಂದ ವಿದ್ಯುತ್‌ ಖರೀದಿಸಲು ಅವಕಾಶ ಇಲ್ಲ. ಎಸ್ಕಾಂಗಳು ಯಾವ ಕಂಪನಿಯಿಂದ ವಿದ್ಯುತ್‌ ಖರೀದಿಸುವುವೋ ಆ ಕಂಪನಿಯಲ್ಲಿ ಮೆರಿಟ್‌ ಆರ್ಡರ್ ಡಿಸ್ಪ್ಯಾಚ್‌‌ (ವಿದ್ಯುತ್‌ ಪೂರೈಕೆ ಅರ್ಹತೆ ಪತ್ರ) ಕೊಡಬೇಕು. ಒಮ್ಮೆ ಹೀಗೆ ಒಪ್ಪಂದ ಮಾಡಿಕೊಂಡ ಮೇಲೆ ಬೇರೆ ಯಾವುದಾದರೂ ಕಂಪನಿ ಕಡಿಮೆ ದರದಲ್ಲಿ ವಿದ್ಯುತ್‌ ನೀಡಲು ಮುಂದಾದರೂ ಈ ನಿಯಮದಿಂದಾಗಿ ಎಸ್ಕಾಂಗಳಿಗೆ ಖರೀದಿಸಲು ಅವಕಾಶ ಇಲ್ಲ. ಬಾಕಿ ಉಳಿಸಿಕೊಂಡ ಎಸ್ಕಾಂಗಳು, ಉತ್ಪಾದನಾ ಕಂಪನಿಗಳಿಗೆ ಲೆಟರ್‌ ಆಫ್‌ ಕ್ರೆಡಿಟ್‌ (ಎಲ್‌ಸಿ) ಕೊಡಬೇಕು. ಇದರಿಂದ ಉತ್ಪಾದನಾ ಕಂಪನಿಗಳಿಗೆ ಬ್ಯಾಂಕಿನಿಂದ ಸಾಲ ಸಿಗುತ್ತದೆ. 

l ಶುಲ್ಕ ಪಾವತಿ ಖಾತರಿ ನೀಡಲು ಎಸ್ಕಾಂಗಳಿಗೆ ಏನು ಅಡ್ಡಿ?

ನಮ್ಮ ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಸರ್ಕಾರದಿಂದಲೂ ಸಹಾಯಧನ ಸರಿಯಾಗಿ ಪಾವತಿಯಾಗುವುದಿಲ್ಲ. ಬೀದಿದೀಪಗಳ ವಿದ್ಯುತ್‌ ಶುಲ್ಕ, ಕುಡಿಯುವ ನೀರು ಪೂರೈಕೆಯ ವಿದ್ಯುತ್‌ ದರ ಕೂಡಾ ಬಾಕಿ ಇದೆ. ಕೈಗಾರಿಕೆಗಳೂ ಬಾಕಿ‌ ಉಳಿಸಿಕೊಂಡಿವೆ. ಹೀಗಾಗಿ, ಲೆಟರ್‌ ಆಫ್‌ ಕ್ರೆಡಿಟ್‌ ಕೊಡುವುದು ಕಷ್ಟ. ಸದ್ಯ, ಉತ್ಪಾದಕರ ಜೊತೆ ಎಸ್ಕಾಂಗಳೂ ಹೊಂದಾಣಿಕೆ ಮಾಡಿಕೊಂಡು ವಿದ್ಯುತ್‌ ಖರೀದಿಸುತ್ತವೆ. ಉತ್ಪಾದಕರು ಕೂಡಾ ಎಲ್‌ಸಿ ಬೇಕೆಂದು ಒತ್ತಾಯ ಮಾಡುತ್ತಿಲ್ಲ. ಸರ್ಕಾರದಿಂದ ಇಂದಲ್ಲದಿದ್ದರೆ ನಾಳೆ ಹಣ ಬರುತ್ತದೆ ಎಂಬ ನಂಬಿಕೆ ಅವರಿಗಿದೆ. ಹೆಚ್ಚಿನ ದರದಲ್ಲಿ ವಿದ್ಯುತ್‌ ಖರೀದಿಸುವ ಹೊರೆಯನ್ನು ಎಸ್ಕಾಂಗಳು ಹೊತ್ತುಕೊಳ್ಳಲು ಕಷ್ಟ ಆಗಬಹುದು. ಆಗ ವಿದ್ಯುತ್‌ ಶುಲ್ಕ ಹೆಚ್ಚಿಸಬೇಕಾದ ಅನಿವಾರ್ಯತೆ ಬರುತ್ತದೆ. ಈ ವಿಷಯವನ್ನೂ ಕೇಂದ್ರದ ಗಮನಕ್ಕೆ ತರುತ್ತೇವೆ.

l ಹಾಗಿದ್ದರೆ, ತಿದ್ದುಪಡಿಯಲ್ಲಿರುವ ಬಹುತೇಕ ಅಂಶಗಳಿಗೆ ವಿರೋಧವಿದೆ ಎಂದಾಯಿತು ಅಲ್ಲವೇ?

ವಿರೋಧ ಎಂದಲ್ಲ. ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು, ತಿದ್ದುಪಡಿಗೆ ಮುಂದಾಗಿರುವ ಕೆಲವು ವಿಷಯಗಳಲ್ಲಿ ಬದಲಾವಣೆ ಮಾಡುವುದಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತೇವೆ. ಈ ಪ್ರಕ್ರಿಯೆ ಅಂತಿಮ ಪರಿಶೀಲನಾ ಹಂತದಲ್ಲಿದೆ. ಮುಖ್ಯಮಂತ್ರಿಯವರ ಅನುಮೋದನೆ ಪಡೆದ ಬಳಿಕ ಕೇಂದ್ರಕ್ಕೆ ಕಳುಹಿಸುತ್ತೇವೆ. ನಮ್ಮ ಮತ್ತು ಇತರ ರಾಜ್ಯಗಳ ಅಭಿಪ್ರಾಯಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಕೆಲವು ಬದಲಾವಣೆಗಳನ್ನು ಮಾಡಲೂಬಹುದೆಂಬ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು