ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಕೊಡದ ದೂರುಗಳಿಲ್ಲ ದೌರ್ಜನ್ಯ ಎಲ್ಲಿಯೂ ನಡೆದಿಲ್ಲ: ಕೆ.ಜಿ. ಶಾಂತಾರಾಮ್

Last Updated 26 ಮೇ 2020, 19:30 IST
ಅಕ್ಷರ ಗಾತ್ರ

l ಕೊರೊನಾ ಬಿಕ್ಕಟ್ಟಿನಿಂದ ದಿಕ್ಕೆಟ್ಟ ವಲಸೆ ಕಾರ್ಮಿಕರ ಕಣ್ಣೀರು ಒರೆಸಲು ಇಲಾಖೆ ಮಾಡಿದ್ದೇನು?

ವಲಸೆ ಕಾರ್ಮಿಕರಲ್ಲಿ ಎರಡು ವರ್ಗ. ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರದ್ದು ಒಂದು; ಹೋಟೆಲ್‌, ಮಾಲ್‌, ಆಸ್ಪತ್ರೆ... ಹೀಗೆ ನಾನಾ ವಲಯಗಳಲ್ಲಿ ಇರುವವರದ್ದು ಮತ್ತೊಂದು. ಅವರಲ್ಲಿ ಸ್ಥಳೀಯರೂ ಇದ್ದಾರೆ, ಹೊರಗಿನವರೂ ಇದ್ದಾರೆ. ವಲಸೆ ಕಾರ್ಮಿಕರೇ ಹೆಚ್ಚು. ಆದರೆ, ಕೊರೊನಾ ಭೀತಿಯಿಂದ ಆತಂಕಗೊಂಡ ಈ ವರ್ಗದ ಬೆನ್ನಿಗೆ ಇಲಾಖೆ ನಿಂತಿದೆ. ಸರ್ಕಾರ ಘೋಷಿಸಿದ ಪ್ಯಾಕೇಜ್‌ ಸೇರಿದಂತೆ ಎಲ್ಲ ಸವಲತ್ತುಗಳನ್ನೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

l ಸಂಕಷ್ಟಕ್ಕೆ ಸಾಂತ್ವನ ಹೇಳುವ ಯಾವ ಕೆಲಸ ಮಾಡಿದ್ದೀರಿ?

ಅಸಂಘಟಿತ ವರ್ಗದ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ₹5 ಸಾವಿರದಂತೆ ಪ್ಯಾಕೇಜ್‌ ಘೋಷಿಸಿದೆ. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ 12.94 ಲಕ್ಷ ಕಾರ್ಮಿಕರಿಗೆ ಈ ನೆರವು ಸಿಗಲಿದೆ. ಸದಸ್ಯತ್ವ ನವೀಕರಣ ಮಾಡದವರಿಗೂ ಆಧಾರ್‌ ಆಧಾರದಲ್ಲಿ ನೆರವಿನ ಮೊತ್ತ ವಿತರಣೆಯಾಗಲಿದೆ. ಹೀಗೆ ವಿತರಣೆಯಾಗುವ ಒಟ್ಟು ಮೊತ್ತ ₹641 ಕೋಟಿ. ಕಟ್ಟಡ ನಿರ್ಮಾಣ ಜಾಗಗಳಲ್ಲಿ ವಲಸೆ ಕಾರ್ಮಿಕರು ಸಿಲುಕಿಕೊಂಡಿರುವುದು ಸತ್ಯ. ಸಣ್ಣ ಸಣ್ಣ ಗುತ್ತಿಗೆ ವಹಿಸಿಕೊಂಡು ಕೆಲಸ ಮಾಡುವ ಕಾರ್ಪೆಂಟರ್‌ಗಳು, ಪೇಂಟರ್‌ಗಳೂ ಅವರಲ್ಲಿದ್ದಾರೆ. ಎಲ್ಲರಿಗೂ ಸಿದ್ಧ ಆಹಾರ ಹಂಚಲಾಗಿದೆ.

l ರಾಜ್ಯದಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ವಾಸ್ತವವಾದ ಅಂಕಿ ಅಂಶ ಇದೆಯೇ?

2011ರ ಜನಗಣತಿ ಲೆಕ್ಕಾಚಾರದಂತೆ ಅಂದಾಜು 1.32 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವರೆಲ್ಲರೂ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿಲ್ಲ. ಈ ಮಂಡಳಿಯಿಂದ ಯಾವುದೇ ಸೌಲಭ್ಯ ದೊರೆಯದಿರುವುದೂ ಇದಕ್ಕೆ ಕಾರಣ. ಚಾಲಕರಷ್ಟೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದಿದ್ದಾರೆ. ಅಪಘಾತವಾದರೆ, ಅಂಗವಿಕಲರಾಗಿದ್ದರೆ ಅವರಿಗೆ ಸೌಲಭ್ಯ ಸಿಗುತ್ತದೆ. ಇತ್ತೀಚೆಗೆ ಸಾರಿಗೆ ಇಲಾಖೆಯಿಂದ ಚಾಲಕರ ಮಾಹಿತಿ ಪಡೆದು ಸದಸ್ಯತ್ವ ನೀಡಲಾಗು ತ್ತಿದೆ. ಸರ್ಕಾರ ಘೋಷಿಸಿದ ತಲಾ ₹5 ಸಾವಿರ ಸಹಾಯ ಪಡೆಯಲು 7.75 ಲಕ್ಷ ಚಾಲಕರು, 2.60 ಲಕ್ಷದಷ್ಟಿರುವ ಕ್ಷೌರಿಕರು, 60 ಲಕ್ಷದಷ್ಟಿರುವ ದೋಬಿಗಳು ಅರ್ಹರಾಗಿದ್ದಾರೆ. ಅವರು
ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಬೇಕು.

l ಗಂಟುಮೂಟೆ ಕಟ್ಟಿ ತವರಿಗೆ ಮುಖ ಮಾಡಿರುವ ವಲಸೆ ಕಾರ್ಮಿಕರಿಗೆ ಸಹಾಯಹಸ್ತ ಚಾಚುವುದು ಇಲಾಖೆಯ ಹೊಣೆಯಲ್ಲವೇ?

ಹೊರರಾಜ್ಯಗಳ ಕಾರ್ಮಿಕರು ಶ್ರಮಿಕ ರೈಲುಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ. ಮಾಲೂರು, ಚಿಕ್ಕಬಾಣಾವರ, ಬೆಂಗಳೂರು ರೈಲು ನಿಲ್ದಾಣಗಳ ಮೂಲಕ ತೆರಳುವ ಕಾರ್ಮಿಕರಿಗೆ ಸಿದ್ಧ ಆಹಾರ, ಎರಡು ಲೀಟರ್‌ ನೀರಿನ ಬಾಟಲಿ ನೀಡಲಾಗುತ್ತಿದೆ. 2.25 ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ತವರು ಸೇರಿದ್ದಾರೆ. ಉತ್ತರ ಭಾರತ ಭಾಗದ ಕಾರ್ಮಿಕರಿಗೆ ಅನ್ನ ಇಷ್ಟವಾಗುತ್ತಿರಲಿಲ್ಲ. ಅಂಥವರಿಗೆ ಚಪಾತಿ, ರೋಟಿ ನೀಡಲಾಗಿದೆ. ಈ ಕಾರ್ಯಕ್ಕೆ ಕೆಲವು ದಾನಿಗಳು, ಸಂಘ ಸಂಸ್ಥೆಗಳೂ ನೆರವಾಗಿದ್ದಾರೆ.

l ಟೆಂಟ್‌ಗಳನ್ನು ಆಶ್ರಯಿಸುವ ಕಾರ್ಮಿಕರನ್ನು ಬಿಲ್ಡರ್‌ಗಳು ಗುಲಾಮರಂತೆ ದುಡಿಸಿಕೊಳ್ಳುತ್ತಾರೆ ಎಂಬ ಆರೋಪವಿದೆಯಲ್ಲ?

ಅವುಗಳೇನು ಟೆಂಟ್‌ಗಳಲ್ಲ. ಸ್ಥಳ ನೋಡಿದರೆ ನಿಮಗೇ ಗೊತ್ತಾಗುತ್ತದೆ. ವಿಶಾಲವಾದ ಜಾಗದಲ್ಲಿ 100ರಿಂದ 2,000ದವರೆಗೆ ನಿರ್ಮಾಣ ಹಂತದ ಪ್ಲ್ಯಾಟ್‌ಗಳಿರುವ ಜಾಗದಲ್ಲಿ ವಲಸೆ ಕಾರ್ಮಿಕರಿಗೆ ಬಿಲ್ಡರ್‌ಗಳೇ ವ್ಯವಸ್ಥೆ ಮಾಡುತ್ತಾರೆ. ಬಿಲ್ಡರ್‌ಗಳಿಗೆ ಕಾರ್ಮಿಕರನ್ನು ಪೂರೈಸುವ ದೊಡ್ಡ ಜಾಲ ಇದೆ. ಅವರ ಯೋಗಕ್ಷೇಮವನ್ನೂ ಪೂರೈಕೆದಾರನೇ ನೋಡಿಕೊಳ್ಳುತ್ತಾನೆ. ಇಲ್ಲಿ ಬಿಲ್ಡರ್‌ಗಳ ಪಾತ್ರ ಕಡಿಮೆ. ಕಾರ್ಮಿಕರಿಗಾಗಿ ಶೆಡ್‌ಗಳನ್ನು ನಿರ್ಮಿಸಲಾಗಿರುತ್ತದೆ. ಅಲ್ಲಿಯೂ ಪ್ರತ್ಯೇಕ ಕಿಚನ್‌, ಶೌಚಾಲಯಗಳಿ
ರುತ್ತವೆ. ದೌರ್ಜನ್ಯ ನಡೆಯುತ್ತಿ ರುವ ಬಗ್ಗೆ ಮಾಹಿತಿ ಇಲ್ಲ.

l ನಿಯಮ ಉಲ್ಲಂಘನೆ ಎಲ್ಲಿಯೂ ಆಗುತ್ತಿಲ್ಲವೇ?

ವಲಸೆ ಕಾರ್ಮಿಕರು ಗುತ್ತಿಗೆದಾರರ, ಬಿಲ್ಡರ್‌ಗಳ ಅಧೀನದಲ್ಲಿರುತ್ತಾರೆ ನಿಜ. ಆದರೆ, ಅವರಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ಸಿಗುತ್ತಿದೆ ಎಂಬ ಆರೋಪ ಸರಿಯಲ್ಲ. ಬಿಲ್ಡರ್‌ಗಳು ವೇತನವನ್ನು ತಿಂಗಳಾಂತ್ಯಕ್ಕೆ ಕೊಡುವುದಿಲ್ಲ. ಬದಲಾಗಿ, ವಾರ
ಕ್ಕೊಮ್ಮೆ ನಗದು ರೂಪದಲ್ಲಿ ಕೊಡುತ್ತಾರೆ. ಆ ಮೂಲಕ, ನಿಯಮ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೆಲವು ಮಾಲೀಕರಿಗೆ, ಉದ್ಯೋಗದಾತರಿಗೆ ಎಚ್ಚರಿಕೆ ನೀಡಲಾಗಿದೆ. ವಲಸೆ ಕಾರ್ಮಿಕರಿಗೆ ಆಯ್ಕೆಗಳಿವೆ. ವೇತನ ಹೆಚ್ಚು ಸಿಗುವ ಕಡೆ ಅವರು ಕೆಲಸಕ್ಕೆ ಹೋಗುತ್ತಾರೆ. ಈ ವರ್ಗದ ಕಾರ್ಮಿಕರಿಗೆ ನೆಲೆಸಿದ ಸ್ಥಳದ ಮಾಲೀಕನಿಂದ ತಕರಾರು ಇರಬಹುದು. ಬೇರೆ ಒತ್ತಡ ಇಲ್ಲ.

l ದುಡಿಯುವ ವರ್ಗದ ಅಹವಾಲು ಆಲಿಸಲು ವ್ಯವಸ್ಥೆ ಇದೆಯೇ?

ಕುಂದುಕೊರತೆ ಆಲಿಸಲು ಸಹಾಯವಾಣಿ ಇದೆ. ದೂರುಗಳನ್ನು ಸಂಬಂಧಪಟ್ಟವರಿಗೆ ವರ್ಗಾಯಿಸಲಾಗುತ್ತದೆ. ಸದ್ಯ ಬರುವ ದೂರುಗಳಲ್ಲಿ ಹೆಚ್ಚಿನವು ಆಹಾರ ಪೂರೈಕೆಗೆ ಸಂಬಂಧಿಸಿದ್ದು. ಮರಳಿ ಊರಿಗೆ ಹೋಗುವ ಧಾವಂತದಲ್ಲಿ ಇರುವವರದ್ದು. ವೇತನ ಕಡಿತ, ಉದ್ಯೋಗ ನಷ್ಟದ ಬಗ್ಗೆಯೂ ಹೇಳಿಕೊಳ್ಳುವವರಿದ್ದಾರೆ. ವಲಸೆ ಕಾರ್ಮಿಕರ‍್ಯಾರೂ ವೇತನ ಕೇಳುತ್ತಿಲ್ಲ. ಅವರಿಗೆ ಊರು ಸೇರುವ ಬಯಕೆ.

l ರಾಜ್ಯದಲ್ಲಿಯೇ ಉಳಿದ ಕಾರ್ಮಿಕರ ಪಾಡೇನು? ಅವರ ರಕ್ಷಣೆ ಹೇಗೆ?

ಉಳಿದ ಕಾರ್ಮಿಕರಿಗೆ ಸದ್ಯ ಭಾರೀ ಬೇಡಿಕೆ ಇದೆ. ಅವರೆಲ್ಲರನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ
ಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದೇವೆ. ಅದ ಕ್ಕೆಂದೇ ಅಭಿಯಾನ ಆರಂಭಿಸಿದ್ದೇವೆ. ವಲಸೆ ಕಾರ್ಮಿಕರು ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸದಸ್ಯತ್ವ ಪಡೆಯಲು ಈ ಹಿಂದೆ ಒಟಿಪಿ ವ್ಯವಸ್ಥೆ ಇತ್ತು. ಅನೇಕರಲ್ಲಿ ಮೊಬೈಲ್‌ ಇಲ್ಲದೇ ಇದ್ದುದರಿಂದ ಸಮಸ್ಯೆಯಾಗಿತ್ತು. ಅದನ್ನು ತೆಗೆದು ಹಾಕಿದ್ದೇವೆ. ಸರಳ ವಿಧಾನ ಅಳವಡಿಸಿಕೊಂಡಿದ್ದೇವೆ. ಕೇರಳ, ತಮಿಳುನಾಡಿನಲ್ಲಿ ಬೇರೆ ಬೇರೆ ವರ್ಗದ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿಗಳಿವೆ. ಅದೇ ರೀತಿ, ಅಸಂಘಟಿತ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ರಚಿಸಿದರೆ ಸೌಲಭ್ಯ ತಲುಪಿಸಲು ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT