ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ಮೋದಿ ಚಾಲೀಸ ಈ ಬಾರಿ ನಡೆಯಲ್ಲ: ಜೈರಾಮ್‌ ರಮೇಶ್‌

ಕಾಂಗ್ರೆಸ್ಸಿನ ತಾರಾ ಪ್ರಚಾರಕ ಜೈರಾಮ್‌ ರಮೇಶ್‌
Published 5 ಮೇ 2023, 19:04 IST
Last Updated 5 ಮೇ 2023, 19:04 IST
ಅಕ್ಷರ ಗಾತ್ರ

ರಾಜೇಶ್‌ ರೈ ಚಟ್ಲ

ಬೆಂಗಳೂರು: ‘ಈ ಬಾರಿ ಚುನಾವಣೆಯಲ್ಲಿ ನಮ್ಮದು (ಕಾಂಗ್ರೆಸ್‌) ‘ವೋಕಲ್‌ ಫಾರ್‌ ಲೋಕಲ್‌’. ಅವರದ್ದು (ಬಿಜೆಪಿ) ಬರೀ ಮೋದಿ ಪ್ರಚಾರ. ಮೋದಿ ಚಾಲೀಸ ಅಥವಾ ಜಪವೊ ಗೊತ್ತಿಲ್ಲ. ಆ ನಾಟಕ ನಡೆಯುವುದಿಲ್ಲ. ಜನ ಮನಸ್ಸು ಮಾಡಿ ಆಗಿದೆ. ನಮಗೆ ಸ್ಪಷ್ಟ ಬಹುಮತ ಖಚಿತ’ ಎನ್ನುತ್ತಾರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ಸಿನ ತಾರಾ ಪ್ರಚಾರಕ ಜೈರಾಮ್‌ ರಮೇಶ್‌.

‘ಪ್ರಜಾವಾಣಿ’ಗೆ ಅವರು ನೀಡಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಈ ಚುನಾವಣೆಯನ್ನು ನೀವು ಯಾವ ರೀತಿ ನೋಡುತ್ತೀರಿ?

ಇದು ವಿಧಾನಸಭೆ ಚುನಾವಣೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯ ಮುಖ್ಯವೇ ಹೊರತು ರಾಷ್ಟ್ರೀಯ ವಿಚಾರವಲ್ಲ. ಹೀಗಾಗಿ, ನಾವು ಮೊದಲ ಬಾರಿಗೆ ವೋಕಲ್‌ ಫಾರ್‌ ಲೋಕಲ್‌ ಪರಿಕಲ್ಪನೆಯಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಆದರೆ, ಅವರಲ್ಲಿ (ಬಿಜೆಪಿ) ಸ್ಥಳೀಯ ನಿರೂಪಣೆ ಇಲ್ಲ. ಬರೀ ಮೋದಿ. ಅಮಿತ್‌ ಶಾ ಬರುತ್ತಾರೆ ಮೋದಿ ಬಗ್ಗೆ ಹೇಳ್ತಾರೆ. ನಡ್ಡಾ ಬರುತ್ತಾರೆ ಮೋದಿ ಬಗ್ಗೆ ಮಾತನಾಡ್ತಾರೆ. ಮೋದಿ ಆಶೀರ್ವಾದ ಇಲ್ಲದಿದ್ದರೆ ನಿಮಗೆ ಅಭಿವೃದ್ಧಿ ಹೇಗೆ ಆಗುತ್ತದೆ ಎನ್ನುತ್ತಾರೆ. ಇದು ಮೋದಿ ಚಾಲೀಸ ಅಥವಾ ಮೋದಿ ಸಹಸ್ರ ನಾಮವೊ ಗೊತ್ತಿಲ್ಲ.

ಹಾಗಾದರೆ, ‘ಮೋದಿ’ ನಾಮಬಲ ಬಿಜೆಪಿಗೆ ಅನುಕೂಲ ಆಗುವುದಿಲ್ಲವೇ?

ಅವರೊಬ್ಬ ‘ಕಲಾಕರ’. ಏನೇನೊ ಮಾಡುತ್ತಾರೆ. ಅದು ಮತಗಳಾಗಿ ಪರಿವರ್ತನೆಯಾಗುತ್ತೊ, ಇಲ್ಲವೊ ಗೊತ್ತಿಲ್ಲ. ಆದರೆ, ಈ ಬಾರಿ ಅವರ ಮಾತಿನಲ್ಲಿ, ಮುಖದಲ್ಲಿ ಹತಾಶೆ ಕಾಣುತ್ತಿದೆ. ಅವರೊಂದು ಶೈಲಿಯಾದರೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಮತ ಧ್ರುವೀಕರಣ ಮಾಡುತ್ತಾರೆ. ಆದರೆ, ಇಲ್ಲಿ ಅದು ನಡೆಯುವುದಿಲ್ಲ.

ಮತದಾರರ ಮನಸ್ಸು ಗೆಲ್ಲುವಲ್ಲಿ ಕಾಂಗ್ರೆಸ್ ಸಫಲವಾಗಿದೆಯೇ?

ನಮ್ಮ ‘ಭಾರತ್‌ ಜೋಡೊ’ ಯಾತ್ರೆ ಪಕ್ಷ ಸಂಘಟನೆಗೆ ಸಂಜೀವಿನಿಯಾಗಿದೆ. 23 ದಿನಗಳ ಆ ಯಾತ್ರೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಎಲ್ಲ ನಾಯಕರ ಒಗ್ಗಟ್ಟಿಗೆ ಬಲ ತುಂಬಿದೆ. ಗ್ಯಾರಂಟಿ ಘೋಷಣೆಗಳು, ರಾಜ್ಯ ಸರ್ಕಾರದ ಮೇಲಿನ ಶೇ 40 ಕಮಿಷನ್‌ ಆರೋಪ ಜನರ ಮನಸ್ಸು ತಟ್ಟಿದೆ. ಇದರಿಂದ ಮಾನಸಿಕವಾಗಿ ನಮಗೆ ಲಾಭ ಆಗಿದೆ. 

ಪಕ್ಷದ ಮುಂದಿರುವ ದೊಡ್ಡ ಸವಾಲು ಏನು?

 ಮೊದಲ ಬಾರಿ ನಮ್ಮ ಪ್ರಚಾರ ರಚನಾತ್ಮಕವಾಗಿ, ವ್ಯವಸ್ಥಿತವಾಗಿ ನಡೆದಿದೆ. ಇನ್ನಿರುವ 3–4 ದಿನಗಳೂ ತುಂಬ ನಿರ್ಣಾಯಕ. ಆದರೆ, ಏನೇ ಪ್ರಚಾರ ಮಾಡಿದರೂ ಮತದಾನದ ದಿನ (ಮೇ 10) ಬೂತ್‌ ನಿರ್ವಹಣೆ ಎಲ್ಲದಕ್ಕಿಂತಲೂ ಮುಖ್ಯ. ಅದೇ ದೊಡ್ಡ ಸವಾಲು.

ಟಿಕೆಟ್‌ ಹಂಚಿಕೆಯಲ್ಲಿನ ಜಾಣ್ಮೆ ನಿಮಗೆ ಅನುಕೂಲವಾಗಿದೆ ಎಂದು ಅನಿಸಿದೆಯೇ?

ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ನಮ್ಮಲ್ಲಿ ಈ ಬಾರಿ 10–12 ಕ್ಷೇತ್ರಗಳಲ್ಲಷ್ಟೆ ಬಂಡಾಯವಿದೆ. ನಮಗಿಂತಲೂ ಬಿಜೆಪಿಯಲ್ಲಿ ಭಿನ್ನಮತದ ವೈರಸ್‌ ಜಾಸ್ತಿಯಿದೆ. ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿಯಂಥ ಹಿರಿಯ ನಾಯಕರಷ್ಟೇ ಅಲ್ಲದೆ, ಸ್ಥಳೀಯಮಟ್ಟದಲ್ಲಿಯೂ ಅನೇಕರು ಕಾಂಗ್ರೆಸ್‌ಗೆ ಬಂದಿರುವುದರಿಂದ 25ರಿಂದ 30 ಸೀಟುಗಳಲ್ಲಿ ನಮಗೆ ಲಾಭ ಆಗಲಿದೆ.

ಡಬಲ್ ಎಂಜಿನ್‌ ಸರ್ಕಾರದಿಂದ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಅಲ್ಲವೇ?

ಕರ್ನಾಟಕದಲ್ಲಿ ಎಲ್ಲಿದೆ ಡಬಲ್ ಎಂಜಿನ್? ಇಲ್ಲಿ ಡಬಲ್‌ ಅಲ್ಲ, ಟ್ರಬಲ್‌ ಎಂಜಿನ್‌ ಸರ್ಕಾರ. ಕರ್ನಾಟಕ ರಾಜ್ಯದ ಶೇ 94 ಆದಾಯವು ಸ್ವಯಂ ಸಂಪಾದನೆ ಮತ್ತು ಕೇಂದ್ರದಲ್ಲಿನ ರಾಜ್ಯದ ಪಾಲಿನ ತೆರಿಗೆಗಳಿಂದ ಕೂಡಿದೆ. ಇದು ‘ಮೋದಿ ಆಶೀರ್ವಾದ’ವಲ್ಲ. ಹಳಿ ತಪ್ಪಿರುವ ಕರ್ನಾಟಕದ ಎಂಜಿನ್‌ನನ್ನು ಸರಿದಾರಿಗೆ ಮರಳಿಸಲು ಮೇ 10ರ ಚುನಾವಣೆ ಸಾಕ್ಷಿಯಾಗಲಿದೆ.

ಜೈರಾಮ್ ರಮೇಶ್‌
ಜೈರಾಮ್ ರಮೇಶ್‌

ಬಿಜೆಪಿಗೆ ಬಜರಂಗಬಲಿಯನ್ನು ನಿಮ್ಮ ಪಕ್ಷವೇ ಅಸ್ತ್ರವಾಗಿ ಕೊಟ್ಟಿದೆಯಲ್ಲ?

ಬಜರಂಗಬಲಿ ಬೇರೆ ಬಜರಂಗದಳ ಬೇರೆ. ಬಜರಂಗದಳವೆಂದರೆ ಹಿಂಸೆ ದ್ವೇಷ ಕೋಮುವಾದಿ ಆತಂಕ. ನಾವು ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ಅವರು ತಿರುಚಿದ್ದಾರೆ. ಮತ ಯಂತ್ರದ ಬಟನ್‌ ಒತ್ತುವಾಗ ಜೈ ಬಜರಂಗಬಲಿ ಎಂದು ಹೇಳುವಂತೆ ಮೋದಿ ಕರೆ ನೀಡಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ನೀಡಿದ್ದೇವೆ. ಈ ಹಿಂದೆ ಗೋವಾ ಬಿಜೆಪಿ ಸರ್ಕಾರ ಶ್ರೀರಾಮ ಸೇನೆಯನ್ನು ನಿಷೇಧಿಸಿತ್ತು. ಆಗಲೂ ಪ್ರಧಾನಿಯಾಗಿದ್ದ ಮೋದಿ ಅವರು ಮೌನವಹಿಸಿದ್ದರಲ್ಲ? ಈಗ ಬಜರಂಗಬಲಿ ವಿಷಯ ಎತ್ತಿದ್ದಾರೆ. ಹಾಗೆಂದು ಮೋದಿ ಅವರನ್ನು ಅಂಡರ್‌ ಎಸ್ಟಿಮೇಟ್‌ ಮಾಡಬಾರದು. ನಾವೂ ಕೌಂಟರ್‌ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT