ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ಚುನಾವಣೆ, ಮೂರ್ಖತನದ ಪ್ರಸ್ತಾವ’

Last Updated 8 ಸೆಪ್ಟೆಂಬರ್ 2018, 20:07 IST
ಅಕ್ಷರ ಗಾತ್ರ

ಮಾನವ ಹಕ್ಕುಗಳ ಪರ, ಭ್ರಷ್ಟಾಚಾರದ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡವಳಿಕೆ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಾತಾವರಣದ ಬಗ್ಗೆ ಮಾತನಾಡಿದ್ದಾರೆ.

*ಒಂದು ದೇಶ, ಒಂದು ಚುನಾವಣೆ ಎಂಬ ಪ್ರಸ್ತಾವ ಅನುಷ್ಠಾನ ಯೋಗ್ಯವೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಕಳೆದುಕೊಂಡ ಸರ್ಕಾರ ಆ ಕ್ಷಣವೇ ಪತನವಾಗಲಿದೆ. ಹೀಗಾದಲ್ಲಿ, ಅವಧಿ ಪೂರ್ಣಗೊಳಿಸಲು 1 ಅಥವಾ 2 ವರ್ಷ ಇದ್ದರೂ ಅಂತಹ ರಾಜ್ಯದಲ್ಲಿ ಚುನಾವಣೆ ನಡೆಯಲೇಬೇಕಾಗುತ್ತದೆ. ಮತ್ತೆ ಹೊಸದಾಗಿ ಅಸ್ತಿತ್ವಕ್ಕೆ ಬರುವ ಸರ್ಕಾರಕ್ಕೆ ಐದು ವರ್ಷದ ಪೂರ್ಣಾವಧಿ ಸಿಗುತ್ತದೆ. ಒಂದು ದೇಶ, ಒಂದೇ ಚುನಾವಣೆ ಎಂಬ ಮೂರ್ಖತನದ ಆಲೋಚನೆ ಜಾರಿಯಾದರೆ, ಮಧ್ಯಂತರದಲ್ಲಿ
ಸರ್ಕಾರ ಬಿದ್ದು, ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದಿರುವ ರಾಜ್ಯಗಳಲ್ಲೂ ಲೋಕಸಭೆ ಜತೆಗೆ ಚುನಾವಣೆ ನಡೆಸುವ ಅನಿವಾರ್ಯ ಸೃಷ್ಟಿಯಾಗಲಿದೆ. ಆದರೆ, ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ. ಅಧ್ಯಕ್ಷೀಯ ಮಾದರಿ ಪ್ರಜಾತಂತ್ರ ಇರುವ ಅಮೆರಿಕದಂತಹ ದೇಶದಲ್ಲಿ ಮಾತ್ರ ಹೀಗೆ ಮಾಡಲು ಸಾಧ್ಯ. ಎಂತಹ ಶಿಫಾರಸುಗಳನ್ನು ಬೇಕಾದರೂ ಮಾಡಿಸಿಕೊಳ್ಳಬಹುದಾದ ಕಾನೂನು ಆಯೋಗವೇ ಅವರ ಕೈಯಲ್ಲಿದೆ. ಆದರೆ, ಕೇಂದ್ರದ ಮೂರ್ಖ ಪ್ರಸ್ತಾವವನ್ನು ಆಯೋಗವೇ ತಿರಸ್ಕರಿಸಿದೆ.

* ಅಸ್ಸಾಂನಲ್ಲಿ ನಡೆಸಿದ ಎನ್ಆರ್‌ಸಿ (ರಾಷ್ಟ್ರೀಯ ಪೌರ ನೋಂದಣಿ) ದೇಶವ್ಯಾಪಿ ಜಾರಿಗೊಳಿಸುವುದು ಸಾಧ್ಯವೇ, ಸಾಧುವೇ?
ಭಾರತದ ನಾಗರಿಕ ಎಂದು ಸಾಬೀತುಪಡಿಸಬೇಕಾದರೆ ಕೆಲವು ದಾಖಲೆಗಳನ್ನು ನೀಡಬೇಕು. ಇಲ್ಲಿನ ನೈಜ ಪರಿಸ್ಥಿತಿ ಹೇಗಿದೆ ಎಂದರೆ ಲಕ್ಷಾಂತರ ಜನರಿಗೆ ಪಡಿತರ ಚೀಟಿ, ಪಾಸ್‌ಪೋರ್ಟ್‌, ಶಿಕ್ಷಣ, ಜಾತಿ ಹಾಗೂ ವಿವಾಹ ದೃಢೀಕರಣ ಹೀಗೆ ಯಾವುದೇ ದಾಖಲೆ ಇಲ್ಲ. ಹೀಗಿರುವಾಗ 1971 ಕ್ಕಿಂತ ಹಿಂದಿನಿಂದಲೂ ಇಲ್ಲಿ ನೆಲೆಸಿದ್ದೀರಿ ಎಂಬುದಕ್ಕೆ ದಾಖಲೆ ಕೊಡಿ ಎಂದರೆ ಹೇಗೆ? ಲಾಲ್‌ ಬಾಬು ಹುಸೇನ್‌ ವರ್ಸಸ್‌ ಚುನಾವಣಾ ಆಯೋಗ ಪ್ರಕರಣದಲ್ಲಿ (ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕುರಿತ) ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ‘ಮತದಾರ ಎಂಬುದನ್ನು ಸಾಬೀತುಪಡಿಸಲು ಇಂತಹದೇ ದಾಖಲೆ ನೀಡಬೇಕು ಎಂಬ ಷರತ್ತು ವಿಧಿಸುವುದು ಸರಿಯಲ್ಲ; ಸ್ವಯಂ ಅಫಿಡವಿಟ್‌ ಸಲ್ಲಿಸಿದರೂ ಅದನ್ನು ಒಪ್ಪಬೇಕು’ ಎಂದು ತಾಕೀತು ಮಾಡಿದೆ.

ಇನ್ನು ವಿಶಾಲ ನೆಲೆಯಲ್ಲಿ ಎನ್‌ಆರ್‌ಸಿ ಕಸರತ್ತು ಅರ್ಥಹೀನ. ವಿದೇಶಿ ಪ್ರಜೆಗಳು ಎಂದು ಹೇಳಿಕೊಳ್ಳುವವರ ಹೆಸರುಗಳು ಎನ್ಆರ್‌ಸಿ ಪಟ್ಟಿಯಲ್ಲಿ ಇಲ್ಲ. ಐದು ವರ್ಷಗಳಿಂದ ಅಸ್ಸಾಂನಲ್ಲಿ 2 ಸಾವಿರಕ್ಕೂ ಹೆಚ್ಚು ಜನರನ್ನು 6 ಕಡೆಗಳಲ್ಲಿ ಬಂಧನದಲ್ಲಿಡಲಾಗಿದೆ. ಇದನ್ನು ನಾವು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ಇವರನ್ನು ಬಾಂಗ್ಲಾ ದೇಶಕ್ಕೆ ಕಳುಹಿಸಬೇಕಾದರೆ ಇವರು ವಿದೇಶಿಯರು ಎಂದು ವಿದೇಶೀಯ ನ್ಯಾಯಮಂಡಳಿ (ಫಾರಿನ್ ಟ್ರಿಬ್ಯುನಲ್‌) ಒಪ್ಪಬೇಕು. ಈ ವಿಷಯವೇ ಇನ್ನೂ ಇತ್ಯರ್ಥವಾಗಿಲ್ಲ. ಹಾಗಿರುವಾಗ 40 ಲಕ್ಷ ಬಾಂಗ್ಲಾ ದೇಶಿಯರು ಅಸ್ಸಾಂನಲ್ಲಿದ್ದಾರೆ ಎಂದು ಎನ್ಆರ್‌ಸಿ ಪಟ್ಟಿ ಕೊಟ್ಟಿದೆ. ಈಗ ಅವರನ್ನೆಲ್ಲ ಬಾಂಗ್ಲಾಕ್ಕೆ ಕಳುಹಿಸಲು ಅವಕಾಶವಿಲ್ಲ. ಹಾಗಂತ ಇಷ್ಟು ಬೃಹತ್ ಸಂಖ್ಯೆಯ ಜನರನ್ನು ಬಂಧನದಲ್ಲಿಟ್ಟು ಸಾಕುವುದು ಸಾಧ್ಯವೇ? ಬಾಂಗ್ಲಾದವರು ಎಂದು ಗುರುತಿಸಿದವರಿಗೆ ಮತದಾನದ ಹಕ್ಕು ಹಾಗೂ ಪೌರತ್ವ ನೀಡಬೇಡಿ. ನೇಪಾಳದವರಿಗೆ ನೀಡಿದಂತೆ ಬದುಕುವ ಹಕ್ಕನ್ನು ನೀಡಬೇಕು. ಭಾರತೀಯರಿಗೆ ದೇಶವಾಸಿ ಎಂಬ ದಾಖಲೆ ನೀಡುವುದು ಸರ್ಕಾರದ ಕರ್ತವ್ಯ. ಅದನ್ನು ನೀಡದ ಸರ್ಕಾರಗಳ ವೈಫಲ್ಯಗಳನ್ನು ಜನರ ಮೇಲೆ ಹಾಕಿದರೆ ಹೇಗೆ?

* ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂಬ ಅಭಿಪ್ರಾಯ ಇದೆಯಲ್ಲ?
ಅದು ಭಯಾನಕ ಕಾಯ್ದೆ. ಸಂವಿಧಾನದ 21ನೇ ಕಲಂಗೆ ವಿರುದ್ಧವಾದುದು. ಅದನ್ನು ಮೊದಲು ಕಿತ್ತುಹಾಕಬೇಕು. ಈ ಕಾಯ್ದೆಯಡಿ ಬಂಧಿತನಾದ ವ್ಯಕ್ತಿಯು ಜಾಮೀನು ಪಡೆದು ಹೊರ ಬರಬೇಕಾದರೆ ಆತನೇ ‘ನಾನು ಅಮಾಯಕ, ನಿರಪರಾಧಿ’ ಎಂಬುದನ್ನು ಕೋರ್ಟ್‌ನ ಮುಂದೆ ಸಾಬೀತುಪಡಿಸಬೇಕು. ಕೆಲವು ಸರ್ಕಾರಗಳು ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪುಣೆ ಪೊಲೀಸರು, ಐವರು ಹೋರಾಟಗಾರರನ್ನು ಬಂಧಿಸಿರುವುದೇ ಇದಕ್ಕೆ ಸಾಕ್ಷಿ.

* ಹಾಗಿದ್ದರೆ, ಸನಾತನ ಸಂಸ್ಥೆ ನಿಷೇಧಿಸಬೇಕು ಎಂಬ ಕೂಗು ಕೇಳುತ್ತಿದೆ. ಯುಎಪಿಎ ಸನಾತನ ಸಂಸ್ಥೆಗೂ ಅನ್ವಯವಾಗುವುದಿಲ್ಲವೇ?
ಸನಾತನ ಸಂಸ್ಥೆಯನ್ನ ಕಾನೂನುಬಾಹಿರ ಚಟುವಟಿಕೆಯಡಿ ನಿಷೇಧಿಸಬೇಕು ಅಥವಾ ಅದರ ಸದಸ್ಯರನ್ನು ಬಂಧಿಸಬೇಕು ಎಂದು ನಾವು ಹೇಳುತ್ತಿಲ್ಲ. ಅದೊಂದು ಭಯೋತ್ಪಾದಕ ಸಂಘಟನೆ ಎಂಬುದು ಸ್ಪಷ್ಟ. ಮಹಾರಾ‌ಷ್ಟ್ರ ಸರ್ಕಾರದ ಎಟಿಎಸ್‌ (ಭಯೋತ್ಪಾದನಾ ನಿಗ್ರಹ ದಳ) ಎರಡು ವರ್ಷದ ಹಿಂದೆ, ಸನಾತನ ಸಂಸ್ಥೆಯನ್ನು ನಿಷೇಧಿಸುವಂತೆ ಪ್ರಸ್ತಾವ ಸಲ್ಲಿಸಿತ್ತು. ಜನರನ್ನು ಕೊಲೆಗೈಯುವುದು, ಬಾಂಬ್ ಸ್ಫೋಟದಂತಹ ಏಳೆಂಟು ಪ್ರಕರಣಗಳಲ್ಲಿ ಸನಾತನ ಸಂಸ್ಥೆ ಸದಸ್ಯರು ಭಾಗಿಯಾಗಿದ್ದಾಗಿ ಎಟಿಎಸ್ ಹೇಳಿತ್ತು. ಸಿಮಿ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದಾಗ ಯಾವುದೇ ಸಾಕ್ಷ್ಯ, ಪುರಾವೆ ಇರಲಿಲ್ಲ. ಆದರೆ, ಸನಾತನ ಸಂಸ್ಥೆಯ ಸದಸ್ಯರ ವಿರುದ್ಧ ಪ್ರಬಲ ಸಾಕ್ಷ್ಯಗಳು ಇವೆ.

*ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದೀರಿ. ಭ್ರಷ್ಟಾಚಾರ ನಿರ್ಮೂಲನೆ ಎಂಬ ಪ್ರಧಾನಿ ಮೋದಿ ಘೋಷಣೆ ಜಾರಿಗೆ ಬಂದಿದೆಯೇ?
ಹ್ಹ ಹ್ಹ... ನನ್ನ ಜೀವಮಾನದಲ್ಲಿ ಎಂದೂ ಕಂಡರಿಯದಷ್ಟು ಭ್ರಷ್ಟಾಚಾರ ಮೋದಿ ಆಳ್ವಿಕೆಯಲ್ಲಿ ನಡೆಯುತ್ತಿದೆ. ರಫೇಲ್ ಹಗರಣವೇ ಜೀವಂತ ನಿದರ್ಶನ. ಸರ್ಕಾರದ ಮೂಗಿನ ಕೆಳಗೇ ಲೂಟಿ ಮಾಡಿದ ನೀರವ್ ಮೋದಿ, ಮೆಹುಲ್ ಚೋಕ್ಸಿ ದೇಶ ಬಿಟ್ಟು ಓಡಿದ್ದಾರೆ. ಓಡಿಹೋಗಲು ಅವರಿಗೆ ನೆರವು ನೀಡಿದವರು ಯಾರು?

ಸರ್ಕಾರ ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ, ಲೋಕಪಾಲರನ್ನು ಏಕೆ ನೇಮಕ ಮಾಡಿಲ್ಲ? ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಎಲ್ಲ ಹಲ್ಲುಗಳನ್ನು ಕಿತ್ತುಹಾಕಿ, ನಿರುಪಯುಕ್ತ ಮಾಡಿದ್ದೇಕೆ? ಸಿವಿಸಿ, ಸಿಬಿಐ ಸೇರಿದಂತೆ ಭ್ರಷ್ಟಾಚಾರದ ವಿರುದ್ಧದ ಎಲ್ಲ ಸಂಸ್ಥೆಗಳನ್ನು ನಿರ್ನಾಮ ಮಾಡಿದ್ದೇಕೆ? ಒಮ್ಮೆ ಸರಿಯಾದ ತನಿಖೆಗೆ ಅವಕಾಶಗಳು ತೆರೆದುಕೊಂಡರೆ, ಇವರ ಪ್ರಾಮಾಣಿಕತೆಯ ನಿಜ ಬಣ್ಣ ಬಯಲಿಗೆ ಬರಲಿದೆ.

* ಅಘೋಷಿತ ತುರ್ತು ಪರಿಸ್ಥಿತಿ ಬಂದಿದೆ ಎಂಬ ಮಾತಿದೆಯಲ್ಲ?
ನಿಜಾರ್ಥದಲ್ಲಿ ತುರ್ತು ಪರಿಸ್ಥಿತಿ ಎಂದರೆ ಮಾಧ್ಯಮಗಳನ್ನು ಸೆನ್ಸಾರ್‌ಶಿಪ್‌ಗೆ ಗುರಿಮಾಡುವುದು, ಸರ್ಕಾರ ವಿರೋಧಿಸುವವರನ್ನು ಜೈಲಿಗೆ ತಳ್ಳುವುದು. ಈಗ ಏನಾಗಿದೆ ಹೇಳಿ; ಮಾನವ ಹಕ್ಕು ಕಾರ್ಯಕರ್ತರು, ಮೋದಿ ಸರ್ಕಾರದ ನಡೆಯನ್ನು ಟೀಕಿಸುತ್ತಿರುವವರ ಮೇಲೆ ದೌರ್ಜನ್ಯ, ಗುಂಪುದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಹಲ್ಲೆ ಪ್ರಕರಣಗಳಲ್ಲಿರುವವರು ನೇರ ಅಥವಾ ಪರೋಕ್ಷವಾಗಿ ಬಿಜೆಪಿ ಜತೆ ಗುರುತಿಸಿಕೊಂಡವರೇ ಆಗಿದ್ದಾರೆ.

ಮೋದಿ ವಿರುದ್ಧ ವ್ಯಂಗ್ಯಚಿತ್ರ ಬರೆದವರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರ ವಿರುದ್ಧ ಟ್ರೋಲ್ ಮಾಡುವ, ಹರಿಹಾಯುವ ಪಡೆಯನ್ನೇ ಸೃಷ್ಟಿಸಲಾಗಿದೆ. ಸುಳ್ಳು ಸುದ್ದಿ ಹಬ್ಬಿಸುವ ವ್ಯವಸ್ಥಿತ ತಂಡಗಳೇ ಕಾರ್ಯಾಚರಿಸುತ್ತಿವೆ.

ತುರ್ತು ಪರಿಸ್ಥಿತಿ ಕಾಲದಲ್ಲಿ ನಾಗರಿಕ ಮೌಲ್ಯಗಳು ಮತ್ತು ಒಳ್ಳೆಯತನಗಳ ಮೇಲೆ ಪ್ರಹಾರ ನಡೆದಿರಲಿಲ್ಲ. ಇಂದು ಬೇಕಾಗಿರುವುದು ಆದೇಶವನ್ನು ಪಾಲಿಸುವ ರೊಬೋಟ್‌ಗಳು ಮಾತ್ರ. ಹೀಗಾಗಿಯೇ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ಮುಗಿಸಲಾಗುತ್ತಿದೆ. ವಿಮರ್ಶಾತ್ಮಕ ಆಲೋಚನಾ ಸಂಸ್ಕೃತಿ ಬೇಕಿಲ್ಲ. ಚಿಂತನೆ ಮಾಡುವ ಜನರೂ ಬೇಕಿಲ್ಲ. ಹಾಕಿ ದಾಂಡು ಹಿಡಿದು ಬಡಿಯುವ, ಲಾಠಿಯಿಂದ ಹೊಡೆಯುವ, ಮನೆಗಳನ್ನು ಸುಡುವ ಹಾಗೂ ಗುಂಪು ಹಲ್ಲೆಯನ್ನು ನಡೆಸುವ ವ್ಯಕ್ತಿಗಳನ್ನು ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಇದು ತುರ್ತು ಪರಿಸ್ಥಿತಿಗಿಂತ ಭೀಕರವಾಗಿರುವ ವಿದ್ಯಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT