ಸೋಮವಾರ, ಆಗಸ್ಟ್ 8, 2022
21 °C

ಬೆಳಗಾವಿ ಉಪಚುನಾವಣೆ | ಸೇವೆಯೇ ಶ್ರೀರಕ್ಷೆ ಎಂದ ಸತೀಶ ಜಾರಕಿಹೊಳಿ

ಎಂ.ಮಹೇಶ Updated:

ಅಕ್ಷರ ಗಾತ್ರ : | |

ಬೆಲೆ ಏರಿಕೆ ಮತ್ತು ಅನುಕಂಪದ ಅಲೆ ಇವೆರಡರ ನಡುವಿನ ಸ್ಪರ್ಧೆಯ ಕಣದಂತೆ ಬೆಳಗಾವಿ ಉಪಚುನಾವಣೆಯ ಕಣ ಬದಲಾಗಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ತಮ್ಮ ಯೋಜನೆಗಳನ್ನು, ಆತಂಕಗಳನ್ನು ಹಾಗೂ ಯಶಸ್ಸಿನ ನಿರೀಕ್ಷೆಗಳನ್ನು ‘ಪ್ರಜಾವಾಣಿ’ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

*ಅಭ್ಯರ್ಥಿಯಾಗಿ ಹೇಗೆ ಸಮರ್ಥಿಸಿಕೊಳ್ತೀರಿ?

ಸಂಘಟನೆ ಮಾಡುವವರು, ಈ ಭಾಗದಲ್ಲಿ ಪರಿಚಯ ಇರುವವರು ಬೇಕಾಗಿತ್ತು. ಮುಂಚಿನಿಂದಲೂ ಕೆಲಸ ಮಾಡುವವರಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ಶ್ರಮದ ಅಗತ್ಯವಿರುವುದಿಲ್ಲ ಎಂದು ಪಕ್ಷ ನನ್ನನ್ನು ಆಯ್ಕೆ ಮಾಡಿದೆ.

*ಬೆಂಬಲಿಗರ ಪ್ರತಿಕ್ರಿಯೆ ಹೇಗಿದೆ?
ಎರಡು ತಿಂಗಳ ಹಿಂದೆ ನನಗೂ ಮನಸ್ಸಿರಲಿಲ್ಲ. ಪಕ್ಷ ಸಂಘಟನೆಗೆ ಹಾಗೂ ಮುಂದೆ ಒಳಿತಾಗುತ್ತದೆ ಎಂದು ಒಪ್ಪಿದೆ. ಟಿಕೆಟ್ ಘೋಷಣೆ ನಂತರ ಬಹಳ ಬೆಳವಣಿಗೆ ಆದವು. ಎಲ್ಲರೂ ತಾವಾಗಿಯೇ ನಿಮ್ಮ ಪರ ಕಾರ್ಯನಿರ್ವಹಿಸುತ್ತೇವೆ ಎನ್ನುತ್ತಿದ್ದಾರೆ. ಸಂಪೂರ್ಣ ಮನಸ್ಸಿನಿಂದಲೇ ಸ್ಪರ್ಧಿಸಿದ್ದೇನೆ. ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಇದು ಸಂಪೂರ್ಣ ಕಾರ್ಯಕರ್ತರ ಚುನಾವಣೆ.

*ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
25 ವರ್ಷಗಳಿಂದ ಸಮಾಜ ಸೇವಾ ಕ್ಷೇತ್ರದಲ್ಲಿದ್ದೇನೆ. ಶಿಕ್ಷಣ, ಕೈಗಾರಿಕೆ ಸೇರಿದಂತೆ ಎಲ್ಲ ರಂಗದಲ್ಲೂ ಕೆಲಸ ಮಾಡಿದ್ದೇನೆ. ವಿಧಾನ ಪರಿಷತ್‌ ಸದಸ್ಯ, ಮೂರು ಬಾರಿ ಶಾಸಕ ಹಾಗೂ ಮಂತ್ರಿಯಾಗಿ ಜಿಲ್ಲೆಗೆ ಸೇವೆ ಮಾಡಿದ್ದೇನೆ. ಹೆಚ್ಚಿನ ಪ್ರಮಾಣದ ಸೇವೆಗೆ ಅವಕಾಶ ಕೇಳುತ್ತಿದ್ದೇನೆ. ವೈಯಕ್ತಿಕ ವರ್ಚಸ್ಸು ಕೂಡ ನೆರವಾಗಲಿದೆ.  

*ಅನುಕಂಪದ ಅಲೆ ಪರಿಣಾಮ ಬೀರಲಿದೆಯೇ?
ಅನುಕಂಪದ ಅಲೆ ಯಾವ ಪರಿಣಾಮವೂ ಬೀರುವುದಿಲ್ಲ. ನನಗಿಲ್ಲಿ ಎಲ್ಲರೊಂದಿಗೆ ಉತ್ತಮ ಸ್ನೇಹವಿದೆ. ಎಲ್ಲ ಮತದವರೂ ನನ್ನೊಟ್ಟಿಗೆ ಸೌಹಾರ್ದದಿಂದ ಇದ್ದಾರೆ. ಕ್ಷೇತ್ರವು ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ ಆಗಿತ್ತು. ಮತ್ತೆ ವಶಪಡಿಸಿಕೊಳ್ಳಲಿದ್ದೇವೆ.

*ಬೆಲೆ ಏರಿಕೆಯು ಚುನಾವಣೆಯ ಪ್ರಮುಖ ಅಸ್ತ್ರವಾಗಲಿದೆಯೇ?
ತೈಲ, ಅಡುಗೆ ಅನಿಲ ಸಿಲಿಂಡರ್ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನಮಗೆ ಅನುಕೂಲ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ನೀಡುತ್ತಿರುವ ಸುಳ್ಳು ಭರವಸೆಗಳೇ ಪ್ರಮುಖ ಅಸ್ತ್ರಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ್ದ ಜನಪರ ಕಾರ್ಯಕ್ರಮಗಳು ಶ್ರೀರಕ್ಷೆಯಾಗಿವೆ.

*ಸಿ.ಡಿ. ಪ್ರಕರಣ ಪರಿಣಾಮ ಬೀರುತ್ತದೆಯೇ
ಇಲ್ಲ. ಸಿ.ಡಿ. ಪ್ರಕರಣಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ. ಲಖನ್‌ ಬೆಂಬಲ ಅವರ ವೈಯಕ್ತಿಕ ವಿಚಾರ. ಪಕ್ಷ ಗಟ್ಟಿಯಾಗಿದೆ. ಗೋಕಾಕ ಮತ್ತು ಅರಭಾವಿಯಲ್ಲಿ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಬಹಳಷ್ಟಿದ್ದಾರೆ.

*ಗೆದ್ದರೆ ಯೋಜನೆಗಳೇನು?
ಹಳ್ಳಿ, ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳನ್ನು ಸ್ಥಾಪಿಸುವುದು. ನೀರಾವರಿಗೆ ಆದ್ಯತೆ ಕೊಡುವುದು. ಐಟಿ–ಬಿಟಿ ಹಬ್‌ ಮಾಡಿ ಯುವಕರಿಗೆ ನೌಕರಿ ಸಿಗುವಂತೆ ಮಾಡುವ ಕನಸಿದೆ.

ಇದನ್ನೂ ಓದಿ... ಬೆಳಗಾವಿ ಉಪ ಚುನಾವಣೆ | ಮತದಾರರು ಮಗಳ ಕೈ ಬಿಡಲಾರರು: ಮಂಗಲಾ ಅಂಗಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು