ಭಾನುವಾರ, ಅಕ್ಟೋಬರ್ 2, 2022
28 °C

ಮಾಯದಂತ ಮಳೆ ಮಾಯವಾಗುತ್ತಾ...!

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Deccan Herald

ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಮುಂದಿನ 100 ವರ್ಷಗಳಲ್ಲಿ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮಳೆ ಪ್ರಮಾಣ ಕುಸಿಯುತ್ತದೆ. ಮಧ್ಯ ಕರ್ನಾಟಕದಲ್ಲಿ ಮಳೆ ಹೆಚ್ಚುತ್ತದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಮಳೆ ಪ್ರಮಾಣ ಕಡಿಮೆ ಆಗುವುದಲ್ಲದೆ ತಾಪಮಾನವೂ ಹೆಚ್ಚಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಎಲ್ಲೆಡೆ ಮರಗಳನ್ನು ಬೆಳೆಸಬೇಕು ಎನ್ನುತ್ತಾರೆ ಕೃಷಿ ಹವಾಮಾನ ವಿಜ್ಞಾನಿ ಡಾ.ಎಂ.ಬಿ. ರಾಜೇಗೌಡ.

ರಾಜ್ಯದ 84 ತಾಲ್ಲೂಕುಗಳಲ್ಲಿ ನಿರಂತರ ಬರ ಕಾಡುತ್ತಿದೆ ಇದಕ್ಕೆ ಕಾರಣಗಳೇನು?

ನಿಶ್ಚಿತವಾಗಿಯೂ ಜಾಗತಿಕ ಹವಾಮಾನ ಬದಲಾವಣೆಯೇ ಕಾರಣ. ಇದು ಇಂದು– ನಿನ್ನೆಯ ವಿದ್ಯಮಾನವಲ್ಲ. ಭೂಮಿ ಸೃಷ್ಟಿ ಆದ ದಿನದಿಂದಲೂ ನಡೆಯುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಏರಿಕೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ತಾಪಮಾನ ಏರಿಕೆಯ ಇತಿಹಾಸವನ್ನು ಕೆದಕಿ ನೋಡಿದರೆ, 1880 ರಿಂದ 1980 ರವರೆಗಿನ ಅವಧಿಯಲ್ಲಿ ಭೂಮಿಯ ತಾಪಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಿತ್ತು. ಆ ಬಳಿಕ ಕೇವಲ 20 ವರ್ಷಗಳಲ್ಲಿ ಅಂದರೆ, 1980 ರಿಂದ
2000 ವರೆಗಿನ ಅವಧಿಯಲ್ಲಿ ಇನ್ನೂ 1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಏರಿಕೆ ಆಯಿತು. ಇದಕ್ಕೆ ಮುಖ್ಯ ಕಾರಣ ಬದಲಾದ ಜೀವನ ಶೈಲಿ.

ಹವಾಮಾನ ಬದಲಾವಣೆಗೆ ಜೀವನ ಶೈಲಿ ಕಾರಣ ಹೇಗಾಗುತ್ತದೆ?

ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ ಆಗಿರುವುದನ್ನು ಕಾಣಬಹುದು. ಕೃಷಿ ಕ್ಷೇತ್ರವನ್ನು ತೆಗೆದುಕೊಳ್ಳಿ, ಹಿಂದೆ ಮಳೆ ಆಶ್ರಿತ ಕೃಷಿ ಹೆಚ್ಚಾಗಿತ್ತು. ನೀರಾವರಿ ಆಶ್ರಿತ ಕೃಷಿಯೂ
ಇತ್ತು. ಆದರೆ, ದೇಶದಲ್ಲಿ ಜನಸಂಖ್ಯೆ ಏರಿಕೆ ಎಲ್ಲವನ್ನೂ ಬುಡಮೇಲು ಮಾಡಿತು. ಅಷ್ಟೂ ಜನರಿಗೆ ಅನ್ನ ನೀಡುವುದು ಸರ್ಕಾರ ಹೊಣೆಗಾರಿಕೆಯೂ ಆಯಿತು. ಇದಕ್ಕಾಗಿ ಹೆಚ್ಚು ಇಳುವರಿ ನೀಡುವ ಕೃಷಿ ಪದ್ಧತಿ ಅನುಸರಿಸಲಾಯಿತು. ಕೃಷಿಗೆ ನೀರುಣಿಸಲು ಬೋರ್‌ವೆಲ್‌ ತೋಡುವುದು, ರಸಗೊಬ್ಬರ, ಕೀಟ ನಾಶಕಗಳ ಬಳಕೆ ಅಧಿಕವಾಯಿತು. ಇದರಿಂದಾಗಿ ಕೃಷಿಗೆ ನೀರಿನ ಅಗತ್ಯ ಹಲವು ಪಟ್ಟು ಹೆಚ್ಚಾಯಿತು. ಭೂಮಿಯೊಳಗಿಂದ ಹೆಚ್ಚು ಹೆಚ್ಚು ನೀರು ತೆಗೆದು ಬಳಸಲಾರಂಭಿಸಿದ ಬಳಿಕ ವಾತಾವರಣದಲ್ಲಿ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಾಯಿತು. ಇದರಿಂದ ಭೂಮಿ ಬಿಸಿ ಏರುವಿಕೆ ಹೆಚ್ಚಾಯಿತು. ಇದು ವಾತಾವರಣದಲ್ಲಿ ಅಸಮತೋಲನ ಉಂಟಾಗಲು ಪ್ರಮುಖ ಕಾರಣ. ಇನ್ನು ಕೃಷಿಯೇತರ ಕಾರಣಗಳೆಂದರೆ, ಹವಾನಿಯಂತ್ರಣ ವ್ಯವಸ್ಥೆ(ಎಸಿ),
ರೆಫ್ರಿಜರೇಟರ್‌, ದೊಡ್ಡ ಕಟ್ಟಡಗಳು ಮತ್ತು ಅದಕ್ಕೆ ಗಾಜು ಬಳಸುವುದು, ದೂಳಿನ ಕಣಗಳೂ ಭೂ–ಬಿಸಿ ಏರಿಕೆಗೆ ಕಾರಣವಾಗಿವೆ. ವಾಹನಗಳಿಂದಾಗುವ ಮಾಲಿನ್ಯ, ಅದಕ್ಕೆ ಬಳಸುವ ಹವಾ ನಿಯಂತ್ರಣ ವ್ಯವಸ್ಥೆ ಇನ್ನೊಂದು ಮುಖ್ಯ ಕಾರಣ. ವಾಹನ, ಕೈಗಾರಿಕೆಗಳು ಹೊರ ಸೂಸುವ ಭಾರಿ ಪ್ರಮಾಣದ ಇಂಗಾಲಾಮ್ಲ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ಬೆಂಗಳೂರಿನಂಥ ನಗರಗಳ ಮೇಲೆ ಸ್ವಲ್ಪ ಮೋಡವಿದ್ದರೂ ಅತಿ ಬೇಗನೆ ತಾಪಮಾನ ಹೆಚ್ಚಾಗುವುದರಿಂದ, ನೀರು ಆವಿಯಾಗಿ, ದೂಳಿನ ಕಣಗಳ ಜತೆ ಸೇರಿ ಭಾರಿ ಮಳೆ ಸುರಿಯುತ್ತದೆ.

ಹವಾಮಾನ ಬದಲಾವಣೆಗೂ ರಾಜ್ಯದ ನಿರಂತರ ಬರಕ್ಕೂ ಏನು ಸಂಬಂಧ?

ರಾಜ್ಯದಲ್ಲಿ ಮಳೆ ಬೀಳುವ ಪ್ರಮಾಣದ ಕುರಿತು 100 ವರ್ಷಗಳ ದತ್ತಾಂಶವನ್ನು ಅಧ್ಯಯನ ಮಾಡಿದೆವು. ಪ್ರತಿ 16 ವರ್ಷಕ್ಕೆ ಮಳೆಯ ಚಕ್ರ ಬದಲಾಗುವುದನ್ನು ಗುರುತಿಸಿದೆವು. ಮೊದಲ 8 ವರ್ಷಗಳು ಮಳೆ ಸರಾಸರಿಗಿಂತ ಹೆಚ್ಚು ಇದ್ದರೆ, ನಂತರದ ಎಂಟು ವರ್ಷಗಳು ಸರಾಸರಿಗಿಂತ ಕಡಿಮೆ ಇರುತ್ತದೆ. 1998ರಲ್ಲಿ ಭೀಕರ ಬರ ಇದ್ದಾಗ, 1901 ರಿಂದ ಮಳೆಯ ಮಾಹಿತಿಯನ್ನು ಅವಲೋಕಿಸಿದೆವು. ಆಗ 16 ವರ್ಷಗಳಿಗೆ ಮಳೆ ಚಕ್ರ ಬದಲಾಗುವುದು ಗಮನಕ್ಕೆ ಬಂದಿತು. 2017 ಕೂಡ ಮಳೆ ಕೊರತೆಯ ವರ್ಷವೇ ಆಗಿತ್ತು. ಆದರೆ, ಈ ವರ್ಷದಿಂದ (2018) ಮಳೆ ಪ್ರಮಾಣ ಹೆಚ್ಚು. ಮುಂದಿನ ನಾಲ್ಕೈದು ವರ್ಷ ರಾಜ್ಯದ ಎಲ್ಲ ಭಾಗಗಳಲ್ಲೂ ಸಾಧಾರಣಕ್ಕಿಂತ ಹೆಚ್ಚು ಮಳೆ ಆಗುತ್ತದೆ.

ಈ ವರ್ಷ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರಿ ಮಳೆ ಆಯಿತು. ಆದರೆ, ಉತ್ತರ ಒಳನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆಯೇ ಆಗಲಿಲ್ಲ. ಬರದ ದವಡೆಗೆ ಸಿಲುಕಿವೆಯಲ್ಲ?

ಇದಕ್ಕೂ ಹವಾಮಾನ ಬದಲಾವಣೆಗೂ ಸಂಬಂಧವಿದೆ. ಈ ವರ್ಷ ಬೇಸಿಗೆ (ಏಪ್ರಿಲ್‌– ಮೇ) ಮಳೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ 5 ರಿಂದ 10 ರಷ್ಟು ಹೆಚ್ಚಾಗಿತ್ತು. ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿಯೇ ಇತ್ತು. ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದಾಗ ಮೋಡಗಳು ಕರಾವಳಿ ಮತ್ತು ಮಲೆನಾಡು ದಾಟಿ ಉತ್ತರ ಮತ್ತು ದಕ್ಷಿಣ ಒಳನಾಡು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ವಾತಾವರಣದ ತಡೆಗೋಡೆಯೇ (atmosphere barrier) ಕಾರಣ. ಅಂದರೆ, ಏಪ್ರಿಲ್‌– ಮೇ ತಿಂಗಳಲ್ಲಿ ರಾಜ್ಯದಲ್ಲಿ ಮಳೆ ಆಗಿದ್ದರಿಂದ ವಾತಾ ರಣದಲ್ಲಿ ನೀರಿನಂಶ ಹೆಚ್ಚಾಗಿ ಸೇರಿಕೊಂಡಿತ್ತು. ಪರಿಣಾಮ ಉಷ್ಣಾಂಶ ಕಡಿಮೆ ಆಗಿ, ವಾಯುಭಾರ ಹೆಚ್ಚಾಯಿತು. ಇದರಿಂದ ಉಷ್ಣಾಂಶದ ತಡೆಗೋಡೆ ನಿರ್ಮಾಣವಾಗಿ, ಮೋಡಗಳು ಕರಾವಳಿ ಮತ್ತು ಮಲೆನಾಡು ದಾಟಿ ಬರಲೇ ಇಲ್ಲ. ಅಲ್ಲೇ ಭಾರಿ ಮಳೆ ಸುರಿಯಿತು. ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಇತ್ತು.

ಹಾಗಿದ್ದರೆ, ಈ ವರ್ಷ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿಗೆ ಮಳೆ ಇಲ್ಲವೇ?

ನಿರಾಶರಾಗಬೇಕಿಲ್ಲ. ಇದೇ ತಿಂಗಳು ಈ ಭಾಗದಲ್ಲಿ ಸರಾಸರಿಗಿಂತಲೂ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಅಕ್ಟೋಬರ್‌ನಲ್ಲೂ ಮಳೆ ಆಗಲಿದೆ.

ಇಂತಹ ಪ್ರತಿಕೂಲ ಸ್ಥಿತಿಯಲ್ಲಿ ರೈತರು ಏನು ಮಾಡಬೇಕು?

ಹವಾಮಾನ ಬದಲಾವಣೆಯ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಪದ್ಧತಿ ಅನುಸರಿಸುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ. ಉದಾಹರಣೆಗೆ ಮಳೆ ಕಡಿಮೆ ಆಗುತ್ತದೆ ಎಂಬ ಸೂಚನೆ ಸಿಕ್ಕಿದರೆ, ಅಲ್ಪಾವಧಿಯ ಬೆಳೆಗಳನ್ನು ಬೆಳೆದುಕೊಳ್ಳಬೇಕು. ಮಳೆ ಇಲ್ಲದೆ, ಅಣೆಕಟ್ಟುಗಳಲ್ಲಿ ನೀರೂ ಇಲ್ಲದಿದ್ದರೆ, ಕಬ್ಬು, ಬತ್ತ ಬೆಳೆಯಬೇಕು ಎನ್ನುವುದು, ಇನ್ನು ಮುಂದೆ ಸಾಧ್ಯವಿಲ್ಲದ ಮಾತು. ಮಳೆ ಚೆನ್ನಾಗಿ ಆದಾಗ ದೀರ್ಘಾವಧಿ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಇಲ್ಲವಾದಲ್ಲಿ, ಕಡಿಮೆ ನೀರು ಬೇಡುವ ರಾಗಿ, ಜೋಳ, ಬೇಳೆ–ಕಾಳುಗಳು, ಸೂರ್ಯಕಾಂತಿ, ಅಲಸಂದೆ, ಉದ್ದು, ಹೆಸರು ಇತ್ಯಾದಿ ಬೆಳೆಯುವ ಕಡೆಗೆ ಗಮನ ಹರಿಸಬೇಕು.

ಮುಂಬರುವ ವರ್ಷಗಳಲ್ಲಿ ರಾಜ್ಯದ ಹವಾಮಾನ, ವಾತಾವರಣ ಮತ್ತು ಕೃಷಿ ಸ್ಥಿತಿಗತಿ ಹೇಗಿರುತ್ತದೆ?

ಮುಂದಿನ 100 ವರ್ಷ ಅಂದರೆ 2100 ಇಸವಿವರೆಗೆ ರಾಜ್ಯದ ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತವೆ. ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುತ್ತದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ಶೇ 10 ರಿಂದ 20 ರಷ್ಟು ಮಳೆ ಹೆಚ್ಚಾಗುತ್ತದೆ. ಆದರೆ, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗುತ್ತದೆ, ಉಷ್ಣಾಂಶ ಹೆಚ್ಚುತ್ತದೆ. ಇದೇ ರೀತಿಯಲ್ಲಿ ಬೀದರ್‌, ಕಲಬುರ್ಗಿ, ರಾಯಚೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಉಷ್ಣಾಂಶ ಇನ್ನೂ ಅಧಿಕವಾಗುತ್ತದೆ. ಮಳೆ ಪ್ರಮಾಣ ಎಲ್ಲಿ ಕಡಿಮೆ ಆಗುತ್ತದೆಯೊ ಆ ಪ್ರದೇಶಗಳಲ್ಲಿ ತೇವಾಂಶವೂ ಕಡಿಮೆ ಆಗುವುದರಿಂದ, ಬೆಳೆ ಪದ್ಧತಿಯನ್ನೇ ಬದಲಿಸಬೇಕಾಗುತ್ತದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವಾಣಿಜ್ಯ ಬೆಳೆಗಳನ್ನು ಮುಂದುವರಿಸುವುದು ಸಾಧ್ಯವಾಗದು. ಪರ್ಯಾಯ ಬೆಳೆಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಲಭ್ಯವಿರುವ ನೀರನ್ನು ಮೊದಲು ಕುಡಿಯುವುದಕ್ಕೆ ಬಳಸಬೇಕು. ಬೀಳುವ ಮಳೆಗೆ ಅನುಗುಣವಾಗಿ ಕೃಷಿ ಕಾರ್ಯ ಕೈಗೊಳ್ಳಬೇಕು.

ಹವಾಮಾನ ಬದಲಾವಣೆಯ ಬಿಸಿ ತಪ್ಪಿಸಿಕೊಳ್ಳಲು ಪ್ರತಿಯೊಬ್ಬ ನಾಗರಿಕ ಏನು ಮಾಡಬೇಕು?

ಜೀವನ ಶೈಲಿ ಬದಲಿಸಿಕೊಳ್ಳಬೇಕು. ಪಳೆಯುಳಿಕೆ ಇಂಧನ ಆಧಾರಿತ ವಾಹನ ಬಳಕೆ ಕಡಿಮೆ ಆಗಬೇಕು. ಕಟ್ಟಡ ನಿರ್ಮಾಣದಲ್ಲಿ ಗಾಜು ಬಳಕೆ ನಿಲ್ಲಿಸಬೇಕು. ಹವಾನಿಯಂತ್ರಣ ವ್ಯವಸ್ಥೆ, ರೆಫ್ರಿಜರೇಟರ್‌ ಬಳಕೆ ಕಡಿಮೆ ಮಾಡಬೇಕು. ಅರಣ್ಯ ನಾಶಕ್ಕೆ ಕಡಿವಾಣ ಹಾಕಬೇಕು. ಎಲ್ಲ ಕಡೆ ಮರಗಳನ್ನು ಬೆಳೆಸಬೇಕು. ಇದೊಂದೇ ನಮ್ಮನ್ನು ನಾವು ಉಳಿಸಿಕೊಳ್ಳಲು ಇರುವ ದಾರಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು