ಗುರುವಾರ , ಆಗಸ್ಟ್ 13, 2020
24 °C

ತೆರಿಗೆ ವಂಚಕರ ಪತ್ತೆಗೆ ಕಠಿಣ ಕ್ರಮ

ವಿಜಯ್‌ ಸಿ. ಬಳ್ಳಾರಿ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ Updated:

ಅಕ್ಷರ ಗಾತ್ರ : | |

Prajavani

* ಬೆಂಗಳೂರು ದಕ್ಷಿಣ ಜಿಎಸ್‌ಟಿ ಕಮಿಷನ ರೇಟ್‌ನ ಕೇಂದ್ರೀಯ ತೆರಿಗೆ ಮತ್ತು ಕಸ್ಟಮ್ಸ್‌ ಇಲಾಖೆಯ ಸೂಪರಿಂಟೆಂಡೆಂಟ್‌ ಆಗಿ 2018–19ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾಗಿದ್ದೀರಿ. ಈ ಪ್ರಶಸ್ತಿಗೆ ಮಾನದಂಡವೇನು?

ಸೆಂಟ್ರಲ್‌ ಎಕ್ಸೈಸ್‌, ಸೇವಾ ತೆರಿಗೆ, ಕಸ್ಟಮ್ಸ್‌ ಮತ್ತು ಜಿಎಸ್‌ಟಿಯಲ್ಲಿನ ನನ್ನ ಸೇವಾ ದಕ್ಷತೆ ಪರಿಗಣಿಸಲಾಗಿದೆ.

* ಆಯ್ಕೆ ಪ್ರಕ್ರಿಯೆ ಹೇಗೆ?

ಅದೊಂದು ಕಠಿಣ ಪ್ರಕ್ರಿಯೆ. ಸೇವಾ ದಾಖಲೆ ಪುಸ್ತಕದಲ್ಲಿ 10 ವರ್ಷಗಳವರೆಗೆ ನಿರಂತರವಾಗಿ ಅತ್ಯುತ್ತಮ ಸೇವೆ ದಾಖಲಾಗಿರುವುದು ಮೊದಲ ಅರ್ಹತೆ. ರಾಷ್ಟ್ರೀಯ ಮಟ್ಟದ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಅಂತಿಮ ಆಯ್ಕೆಯಾಗಿದೆ.

* ಮಾಹಿತಿ ಹೇಗೆ ಕಲೆ ಹಾಕುವಿರಿ?

ಮಾಹಿತಿದಾರರ ಅವಲಂಬನೆ, ತಂತ್ರಜ್ಞಾನದ ನೆರವು, ದತ್ತಾಂಶ ವಿಶ್ಲೇಷಣೆ ಮಾಡಿ ತೆರಿಗೆ ವಂಚಕರನ್ನು ಪತ್ತೆ ಮಾಡಲಾಗುತ್ತದೆ.

* ಜೀವ ಬೆದರಿಕೆ ಎದುರಿಸಿದ್ದೀರಾ?

ಸಾಕಷ್ಟು ಬಾರಿ. ಬಾಹ್ಯ ಒತ್ತಡ, ಪ್ರಭಾವಿಗಳ ಬೈಯ್ಗುಳಕ್ಕೂ ಗುರಿಯಾಗಿರುವೆ.

* ಈ ಪ್ರಶಸ್ತಿಯ ಬಹುಮಾನ ಎಷ್ಟು?

ನಗದು ಬಹುಮಾನ ಇಲ್ಲ.

* ದಕ್ಷ ಅಧಿಕಾರಿಗಳ ಉತ್ತೇಜನ ಹೇಗೆ?

ತೆರಿಗೆ ವಂಚಕರು ತಪ್ಪನ್ನು ಒಪ್ಪಿಕೊಂಡು ದಂಡ ಮತ್ತು ತೆರಿಗೆ ಪಾವತಿಸಿದಾಗ, ಆ ಮೊತ್ತದ ಶೇ 10ರಷ್ಟನ್ನು ಪುರಸ್ಕಾರದ ರೂಪದಲ್ಲಿ ನೀಡಲಾಗುತ್ತಿದೆ.

* ಪುರಸ್ಕಾರಕ್ಕೆ ಗರಿಷ್ಠ ಮಿತಿ ಇದೆಯೇ?

 ಹೌದು, ₹ 20 ಲಕ್ಷದ ಮಿತಿ ಇದೆ.

* ನಿಮ್ಮ ಕೆಲಸದ ಸ್ವರೂಪ ಹೇಗೆ?

ಇಂಟೆಲಿಜೆನ್ಸ್‌ ಏಜೆನ್ಸಿಯಲ್ಲಿ ಕೆಲಸ. ಮಾಹಿತಿ ವಿಶ್ಲೇಷಿಸಿ ತೆರಿಗೆ ವಂಚಕರನ್ನು ಗುರುತಿಸುತ್ತೇವೆ. ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸದ ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ಹೂಡಿ, ದಂಡ ಸಹಿತ ತೆರಿಗೆ ವಸೂಲಿ ಮಾಡುತ್ತೇವೆ.

* ಹೆಚ್ಚು ತೃಪ್ತಿ ನೀಡಿದ ಕೆಲಸ ಯಾವುದು?

ವಿಮಾನ ನಿಲ್ದಾಣದ ಕಸ್ಟಮ್ಸ್‌ ಇಂಟೆಲಿಜೆನ್ಸ್‌ನಲ್ಲಿ ಇದ್ದಾಗ ಗರಿಷ್ಠ ಪ್ರಮಾಣದಲ್ಲಿ ಮಾದಕ ಸರಕು ವಶಪಡಿಸಿಕೊಂಡಿರುವುದು. ವಿದೇಶಿಯರು, ಅದರಲ್ಲೂ ವಿಶೇಷವಾಗಿ ನೈಜೀರಿಯಾ, ವಿಯೆಟ್ನಾಂ ಪ್ರಜೆಗಳ ಬಂಧನ. ಡ್ರಗ್ಸ್‌ ಸಾಗಿಸುವಾಗ ಈಶಾನ್ಯ ಭಾರತದವರೂ ಸೆರೆ ಸಿಕ್ಕಿದ್ದಾರೆ.

* ನಿಮ್ಮ ಇತರ ಪ್ರವೃತ್ತಿ ಏನು?

ನಾನೊಬ್ಬ ಬಾಸ್ಕೆಟ್‌ಬಾಲ್‌ ಪ್ಲೇಯರ್‌. ಆ ಕೋಟಾದಲ್ಲಿಯೇ ಆಯ್ಕೆಯಾಗಿದ್ದೆ. ರಾಜ್ಯ ಮಟ್ಟದ ತಂಡಕ್ಕೂ ಆಡಿದ್ದೇನೆ.

* ನಿಮ್ಮ ಊರು? ಉಳಿದಿರುವ ಸೇವಾವಧಿ?

ನನ್ನೂರು ಧಾರವಾಡ, ನಾಲ್ಕೂವರೆ ವರ್ಷಗಳ ಸೇವಾವಧಿ ಇದೆ.

–ಕೇಶವ ಜಿ. ಝಿಂಗಾಡೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು