ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈ ಬಾರಿ ಸುಳ್ಳು ಪ್ರಚಾರ ಗೆಲ್ಲಲಾರದು’

Last Updated 4 ಮೇ 2019, 20:01 IST
ಅಕ್ಷರ ಗಾತ್ರ

* ರಾಜಸ್ಥಾನದಲ್ಲಿ ಮೊದಲ ಹಂತದ ಮತದಾನ ಮುಗಿದಿದೆ. ಶೇ 68.5ರಷ್ಟು ಮತ ಚಲಾವಣೆ ಆಗಿದೆ. ಮತ ಪ್ರಮಾಣ ಏನನ್ನು ತೋರಿಸುತ್ತಿದೆ?

ಭಾರಿ ಸೆಖೆ ಇದ್ದರೂ ಮತದಾನ ಪ್ರಮಾಣ ಉತ್ತಮವಾಗಿದೆ. ಜನರು ಭಾರಿ ಸಂಖ್ಯೆಯಲ್ಲಿ ಹೊರಗೆ ಬಂದು ಮತ ಹಾಕಿದ್ದಾರೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಐದು ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಇನ್ನೊಂದು ಕಾರಣವೆಂದರೆ, ವಿಧಾನಸಭೆ ಚುನಾವಣೆ ಈಗಷ್ಟೇ ಮುಗಿದಿದೆ. ಅದರ ಗುಂಗಿನಲ್ಲಿಯೇ ಜನರು ಇದ್ದಾರೆ.

* ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷದ ಗೆಲುವಿನ ಸಾಧ್ಯತೆಗಳೇನು?

ರಾಜಸ್ಥಾನದಲ್ಲಿ ಸರ್ಕಾರ ರಚಿಸಿ ಮೂರು ತಿಂಗಳಷ್ಟೇ ಆಗಿದೆ. ನಾವು ಕೆಲವು ದೊಡ್ಡ ಕ್ರಮ ಕೈಗೊಂಡಿದ್ದೇವೆ. ನಮ್ಮ ಪ್ರಣಾಳಿಕೆಯೇ ಸರ್ಕಾರದ ಅಧಿಕೃತ ದಾಖಲೆಯಾಗಿ ಬದಲಾಗಿದೆ. ಹಾಗಾಗಿ, ಜನರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದ್ದಾರೆ.

* ಲೋಕಸಭಾ ಚುನಾವಣೆಯನ್ನು ‘ಮೋದಿ ವಿರುದ್ಧ ಇತರ ಅಭ್ಯರ್ಥಿಗಳು’ ಎಂದು ಬಿಂಬಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಮೋದಿ ಅಲೆ ಇದೆಯೇ?

ಖಂಡಿತಾ ಇಲ್ಲ. ಇಲ್ಲಿ ಈ ಬಾರಿ ಸುಳ್ಳು ಪ್ರಚಾರ ಮೇಲುಗೈ ಪಡೆಯಲು ಸಾಧ್ಯವಿಲ್ಲ. ದಕ್ಷಿಣದ ರಾಜ್ಯಗಳಲ್ಲಿಯೂ ಭಾರಿ ತಿರುಗೇಟು ಬೀಳಲಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಕಾಂಗ್ರೆಸ್‌–ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಇಲ್ಲಿ ನಮಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ. ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಕಚೇರಿ, ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಿಜೆಪಿ ದುರುಪಯೋಗ
ಪಡಿಸಿಕೊಳ್ಳುತ್ತಿದೆ.

* ವಾಯುದಾಳಿಯನ್ನು ತನ್ನ ಪರವಾಗಿ ಪರಿವರ್ತಿಸಲು ಬಿಜೆಪಿ ಶ್ರಮಿಸುತ್ತಿದೆ. ರಾಜಸ್ಥಾನ ಗಡಿ ರಾಜ್ಯವಾಗಿರುವುದರಿಂದ ಇದು ಬಿಜೆಪಿಗೆ ಅನುಕೂಲಕರವಾಗಿದೆಯೇ

1971ರ ಯುದ್ಧ ನಡೆದಾಗ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದರು. ಅವರು ಪಾಕಿಸ್ತಾನವನ್ನು ಸೋಲಿಸಿ ಆ ದೇಶವನ್ನು ವಿಭಜಿಸಿದರು. ಆದರೆ, ಸೇನಾ ಕಾರ್ಯಾಚರಣೆಯನ್ನು ಮುಂದಿಟ್ಟು ಅವರು ಮತ ಕೇಳಿರಲಿಲ್ಲ. ಪಕ್ಷಗಳು ಬರುತ್ತವೆ, ಹೋಗುತ್ತವೆ. ಜನರು ಬರುತ್ತಾರೆ, ಹೋಗುತ್ತಾರೆ. ಆದರೆ, ಸಶಸ್ತ್ರ ಪಡೆಗಳ ಬಗೆಗಿನ ಗೌರವ ನಮ್ಮ ಹೃದಯದಲ್ಲಿ ಯಾವತ್ತೂ ಇರುತ್ತದೆ.

* ಪಾಕಿಸ್ತಾನ ಮತ್ತು ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್‌ ಮೃದು ಧೋರಣೆ ತಾಳಿದೆ. ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಬಗ್ಗೆ ಏನು ಹೇಳುವಿರಿ?

ಇದು ಬಿಜೆಪಿ ಸೃಷ್ಟಿಸಿದ ಗ್ರಹಿಕೆ. ಸೋನಿಯಾ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಸಂಸತ್ತಿನ ಮೇಲೆ ಉಗ್ರರ ದಾಳಿ ಆಗಿತ್ತು. ಆಗ ಅವರು ‘ಸಂಸತ್ತು ನಿಮ್ಮ ಜತೆಗೆ ನಿಲ್ಲುತ್ತದೆ. ನಮ್ಮ ಪ್ರಜಾಪ್ರಭುತ್ವದ ದೇಗುಲಕ್ಕೆ ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಹೇಳಿದ್ದರು.

* ರಾಜಸ್ಥಾನದ ಕಾಂಗ್ರೆಸ್‌ ಪಕ್ಷ ಒಡೆದ ಮನೆ ಎಂದು ವಿರೋಧ ಪಕ್ಷ ಹೇಳುತ್ತಿದೆಯಲ್ಲ?

ಪರಿಸ್ಥಿತಿ ಅವರು ಹೇಳುತ್ತಿರುವುದಕ್ಕೆ ತದ್ವಿರುದ್ಧವಾಗಿದೆ. ಬಿಜೆಪಿಗೆ ಇಲ್ಲಿ ಮುಖಂಡರೇ ಇಲ್ಲ. ವಸುಂಧರಾರಾಜೇ ಅವರನ್ನು ಕೇಂದ್ರಕ್ಕೆ ಅಟ್ಟಲಾಗಿದೆ. ಈ ಚುನಾವಣೆಯಲ್ಲಿ ಅವರು ಜಲಾವರ್‌ ಮತ್ತು ಇತರ ಕೆಲವು ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಇದ್ದಾರೆ. ಪಕ್ಷದ ಅಧ್ಯಕ್ಷನಾಗಿರುವ ನಾನು ಇದ್ದೇನೆ. ಇಬ್ಬರೂ ಕೆಲಸ ಮಾಡುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT