ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ‘ಆಪ್‌’ ಗೆಲುವು ಬೆಂಗಳೂರಿಗೆ ಹೇಳುತ್ತಿರುವ ಪಾಠವೇನು?

Last Updated 11 ಫೆಬ್ರುವರಿ 2020, 8:49 IST
ಅಕ್ಷರ ಗಾತ್ರ

( 2015ರಫೆ. 15 ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಪದ್ಮರಾಜ ದಂಡಾವತಿ ಅವರ ನಾಲ್ಕನೇ ಆಯಾಮ ಲೇಖನ)

‘ಪ್ರಪಂಚದ ರಾಜಧಾನಿಗಳಲ್ಲೆಲ್ಲ ಅತ್ಯಂತ ಮೋಹಕಳೂ ಅತ್ಯಂತ ಭ್ರಷ್ಟಳೂ ಆದ ನಾಯಕಸಾನಿ ಎಂದರೆ ಡೆಲ್ಲಿ. ಯಾವುದೇ ಒಬ್ಬ ಪ್ರಾಮಾಣಿಕ ಪ್ರೇಮಿಗೆ ಆಕೆ ಈ ತನಕವೂ ತನ್ನನ್ನು ಒಪ್ಪಿಸಿಕೊಂಡಿದ್ದಿಲ್ಲ. ಹೆಚ್ಚೂ ಕಡಿಮೆ ಸತತವಾಗಿ ಅನಾಗರಿಕ ಕ್ರೂರಿಗಳಿಂದ ಆಕೆ ದಮನಕ್ಕೆ ಒಳಗಾಗಿದ್ದಾಳೆ.’

ದೆಹಲಿಗೆ ಆದ ಗತಿಯನ್ನು ಡಾ.ರಾಮ ಮನೋಹರ ಲೋಹಿಯಾ ತಮ್ಮ ‘ಡೆಲ್ಲಿ ಎಂದೂ ಕರೆಯುವ ದೆಹಲಿ’ ಲೇಖನದಲ್ಲಿ ಬಣ್ಣಿಸಿದ ರೀತಿ ಇದು. ಅವರು ಪ್ರಪಂಚದ ಎಲ್ಲ ರಾಜಧಾನಿಗಳ ಪೈಕಿ ದೆಹಲಿಗೆ ಅತ್ಯಂತ ಮೋಹಕಳು ಎಂಬ ಪಟ್ಟ ಕಟ್ಟಿದ್ದರು. ನಮ್ಮ ದೇಶದ ಎಲ್ಲ ರಾಜಧಾನಿಗಳ ಪೈಕಿ ಬೆಂಗಳೂರು ಅತ್ಯಂತ ಮೋಹಕಳು. ಆಕೆಯೂ ಈಗ ಅತ್ಯಂತ ಭ್ರಷ್ಟಳಾಗಿದ್ದಾಳೆ; ಯಾವುದೇ ಪ್ರಾಮಾಣಿಕ ಪ್ರೇಮಿಗೆ ಇದುವರೆಗೆ ಆಕೆ ತನ್ನನ್ನು ಒಪ್ಪಿಸಿಕೊಂಡಿಲ್ಲ. ಈತ ಪ್ರಾಮಾಣಿಕನಿರಬಹುದು ಎಂದು ಎಲ್ಲರನ್ನೂ ಪ್ರೇಮಿಸಿದ್ದಾಳೆ.

ಆದರೆ, ಅವರೆಲ್ಲ ಲುಚ್ಚಾಗಳಂತೆ, ಲಂಪಟರಂತೆ ವರ್ತಿಸಿದ್ದಾರೆ. ಅವರಿಗೆಲ್ಲ ಪ್ರೇಮಿಯ ಜತೆಗೆ ಎಷ್ಟು ಕೋಮಲವಾಗಿ ವರ್ತಿಸಬೇಕು ಎಂದೂ ಗೊತ್ತಿಲ್ಲ. ನಡುಬೀದಿಯಲ್ಲಿ ಆಕೆಯ ವಸ್ತ್ರಾಪಹರಣ ಮಾಡಿದ್ದಾರೆ. ವಸ್ತ್ರಾಪಹರಣದ ನಂತರ, ಉಳಿದುದನ್ನೂ ನಡುಬೀದಿಯಲ್ಲಿಯೇ ಮಾಡಿದ್ದಾರೆ. ಈಗ ಬೆಂಗಳೂರು ಎಂಬ ಸುಂದರಿಯ ಮೈಮೇಲೆ ಒಂಚೂರು ಬಟ್ಟೆಯಿಲ್ಲದೇ ತೀರಾ ಅವಮಾನದಿಂದ ಆಕೆ ಮಾನ ಮುಚ್ಚಿಕೊಳ್ಳಲು ಅವಸರಿಸುತ್ತಿರುವಂತೆ ಕಾಣುತ್ತದೆ. ದ್ರೌಪದಿಯ ವಸ್ತ್ರಾಪಹರಣ ಆಗುತ್ತಿದ್ದಾಗ ದುರ್ಯೋಧನನ ಆಸ್ಥಾನದಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದ ಭೀಷ್ಮಾದಿಗಳ ಹಾಗೆ ಬೆಂಗಳೂರಿನ ಮಂದಿ ಎಲ್ಲ ನೋಡಿಕೊಂಡು ಸುಮ್ಮನೆ ಇದ್ದಾರೆ. ಅವರು ಒಂದು ಅವಕಾಶಕ್ಕೆ ಕಾಯುತ್ತಿದ್ದಾರೆಯೇ?

ನಾನೇನು ತೀರಾ ಭಾವುಕನಾಗಿ ಇದನ್ನೆಲ್ಲ ಬರೆಯುತ್ತಿಲ್ಲ. ಬೆಂಗಳೂರಿನ ಜನರು ಅವಕಾಶಕ್ಕಾಗಿ ಕಾಯುತ್ತಿರಬಹುದು ಎಂದು ಏಕೋ ಅನಿಸುತ್ತಿದೆ. ದೆಹಲಿಯ ಜನರು ಹೀಗೆ ಜನಾದೇಶ ಕೊಡಬಹುದು ಎಂದು ನಮಗೆ ಯಾರಿಗಾದರೂ ಅನಿಸಿತ್ತೇ? ಕೆಲವು ವಾರಗಳ ಹಿಂದೆ ನಾನೇ ಈ ಅಂಕಣದಲ್ಲಿ ಎಎಪಿ ಸೋಲುತ್ತದೆ ಎಂದು ಭವಿಷ್ಯ ನುಡಿಯುವ ರೀತಿಯಲ್ಲಿ ಬರೆದುದು ಪರಮ ಮೂರ್ಖತನ ಎಂದು ಈಗ ನನಗೇ ನಾಚಿಕೆಯಾಗಿದೆ. ಪತ್ರಕರ್ತರಿಗೆ ವಿನಾಕಾರಣ ಭವಿಷ್ಯ ನುಡಿಯುವ ಚಪಲ ಇರುತ್ತದೆ. ಅಥವಾ ಅದು ತಮಗೆ ತಿಳಿಯದ್ದು ಏನಿದೆ ಎಂಬ ಅಹಂಕಾರವೂ ಇರಬಹುದು!

ಬೆಂಗಳೂರಿಗೆ ದೆಹಲಿ ಬಹಳ ದೂರ. ಆ ಊರೇ ಬೇರೆ, ಈ ಊರೇ ಬೇರೆ. ಅಲ್ಲಿಯ ಸಮಸ್ಯೆಗಳೇ ಬೇರೆ, ಇಲ್ಲಿಯ ಸಮಸ್ಯೆಗಳೇ ಬೇರೆ. ಎಎಪಿಗೆ ಅದೇ ಊರಿನಲ್ಲಿ ಬೀಜ ಸಿಕ್ಕುದು, ನೆಟ್ಟುದು, ಮೊಳೆತುದು. ಈಗ ಅದು ಹೆಮ್ಮರವಾಗಿ ಬೆಳೆದು ನಿಂತಿದೆ. ಒಬ್ಬ ನಾಯಕ ಅಥವಾ ನಾಯಕಿ ಹುಟ್ಟಿ ಬರಲು ಒಂದು ಸಂದರ್ಭ ಎಂದು ಇರುತ್ತದೆ. ಅರವಿಂದ ಕೇಜ್ರಿವಾಲ್‌ ಹಾಗೆ ಒಂದು ಸಂದರ್ಭದಲ್ಲಿ ಹುಟ್ಟಿಬಂದ ನಾಯಕ. ಅವರು ಈ ದೇಶದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರ ಎಂಬ ಪೆಡಂಭೂತವನ್ನು ಎದುರಿಸಲು ಜನರು ಹುಟ್ಟಿ ಹಾಕಿರುವ ನಾಯಕ. ಅವರಲ್ಲಿ ಜನರಿಗೆ ಅಪಾರ ನಂಬಿಕೆ ಇದೆ. ಆತ ಒಬ್ಬ ಅವತಾರ ಪುರುಷ ಎಂದು ಅವರು ಭಾವಿಸಿದಂತಿದೆ.

ಇಲ್ಲವಾದರೆ ಮೊನ್ನೆ ಮೊನ್ನೆಯಷ್ಟೇ, ಮೂವತ್ತು ವರ್ಷಗಳ ನಂತರ, ಭಾರಿ ಬಹುಮತ ಪಡೆದ ಒಂದು ಪಕ್ಷಕ್ಕೆ ಮತ್ತು ಅದರ ನೇತಾರನಿಗೆ ಜನರು ಹೀಗೆ ಪಾಠ ಕಲಿಸುತ್ತಿರಲಿಲ್ಲ. ಈ ದೇಶವನ್ನು ಮುತ್ತಿ ಕಾಡುತ್ತಿರುವ ಭ್ರಷ್ಟಾಚಾರವನ್ನು ಕೇಜ್ರಿವಾಲ್‌ ಎದುರಿಸಿ, ಅದನ್ನು ಮಟ್ಟ ಹಾಕಿ, ತಮ್ಮ ಉದ್ದೇಶದಲ್ಲಿ ಯಶಸ್ಸು ಗಳಿಸುತ್ತಾರೆಯೇ? ಅವರು ಯಶ ಗಳಿಸಲಿ ಮತ್ತು ತಮ್ಮ ಬದುಕು ಹಸನಾಗಲಿ ಎಂದು ಜನರು ಕಾಯುತ್ತಿದ್ದಾರೆ. ದೆಹಲಿಯಲ್ಲಿ ಎಎಪಿಗೆ ಬರೀ ಬಡವರು ಮಾತ್ರ ಮತ ಹಾಕಿದರೇ? ಮಧ್ಯಮ ವರ್ಗವೂ ಅದರ ಬೆನ್ನಿಗೆ ನಿಂತಿತ್ತು. ಫಲಿತಾಂಶದಲ್ಲಿ ಅದು ಸ್ಪಷ್ಟವಾಗಿದೆ.

ಎಎಪಿಯನ್ನು ದೆಹಲಿ ಜನರು ಹೀಗೆ ನೀರು ಹಾಕಿ ಪೊರೆದಂತೆ ಬೆಂಗಳೂರಿನ ಜನರು ಕೂಡ ಮಾಡಬಹುದು ಎಂದು ಅನಿಸತೊಡಗಿದೆ. ದೆಹಲಿ ಮತ್ತು ಬೆಂಗಳೂರಿನ ನಡುವೆ ಬಹಳ ಹೋಲಿಕೆಗಳು ಇಲ್ಲದೇ ಇರಬಹುದು. ಆದರೆ, ಕೆಲವು ಹೋಲಿಕೆಗಳಾದರೂ ಇವೆ. ಅಲ್ಲಿಯ ಹಾಗೆ ಇಲ್ಲಿಯೂ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚುತ್ತಿದೆ. ಶ್ರೀಮಂತರು ತಮ್ಮ ಭೋಗಲಾಲಸೆಗೆ ಬೆಂಗಳೂರಿನ ಸಂಪನ್ಮೂಲಗಳ ಶೋಷಣೆ ಮಾಡುತ್ತಿದ್ದಾರೆ. ಬೆಂಗಳೂರು ಬೆಳೆಯುವ ರೀತಿಯನ್ನು ನೋಡಿದರೆ ಭಯ ಆಗುವುದಿಲ್ಲವೇ? ಅದು ಬೆಳೆಯುವ ರೀತಿ ನೋಡಿದರೆ ಕಾವೇರಿಯ ನೀರೆಲ್ಲವನ್ನು ನಮಗೇ ಕೊಟ್ಟರೂ ಸಾಲದು ಎಂದು ಅನಿಸುವುದಿಲ್ಲವೇ? ಅಂತರ್ಜಲದ ನೀರೆಲ್ಲ ಎಷ್ಟು ಆಳಕ್ಕೆ ಹೋಗಿದೆ ಎಂದು ಯಾರಾದರೂ ಲೆಕ್ಕ ಹಾಕಿದ್ದಾರೆಯೇ ಗೊತ್ತಿಲ್ಲ.

ಬೆಂಗಳೂರು ಎಂಬ ಊರು ಯಾರಿಗಾದರೂ ಬೇಕಾಗಿದೆಯೇ ಎಂದು ಅನೇಕ ಸಾರಿ ಅನಿಸುತ್ತದೆ. ಐದು ವರ್ಷಗಳ ಹಿಂದೆ ಬೆಂಗಳೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ತಾವೆಲ್ಲ ಬಹಳ ಪ್ರಾಮಾಣಿಕರು ಮತ್ತು ಸಚ್ಚಾರಿತ್ರ್ಯವಂತರು ಎಂದು ಹೇಳಿಕೊಂಡವರು ಅವರು. ಅವರೆಲ್ಲ ಕಳೆದ ಐದು ವರ್ಷಗಳಲ್ಲಿ ಏನು ಮಾಡಿದರು? ಅವರ ಬಳಿ ಬೆಂಗಳೂರಿನ ಅಭಿವೃದ್ಧಿಗೆ ಒಂದು ಯೋಜನೆ ಎಂಬುದೇ ಇರಲಿಲ್ಲ. ಸುಮ್ಮನೆ ಬೃಹತ್‌ ಗಾತ್ರದ ಬಜೆಟ್‌ ಮಂಡಿಸಿದರು. ಸಂಪನ್ಮೂಲ ಸಂಗ್ರಹಕ್ಕೂ, ಬಜೆಟ್ಟಿನ ಗಾತ್ರಕ್ಕೂ ತಾಳೆಯೇ ಆಗುತ್ತಿರಲಿಲ್ಲ. ಹಾಗಾಗಿ ಅವರು ಹಾಕಿದ ಯೋಜನೆಗಳು ಯಾವುವೂ ಜಾರಿಗೆ ಬರಲಿಲ್ಲ. ಆಗಾಗ ಬಂದ ಆಯುಕ್ತರು ತಮಗೆ ತೋಚಿದ್ದನ್ನು ಮಾಡಿದರು. ಒಬ್ಬರು ಎಲಿಮೆಂಟ್‌ ಹಾಕಿ ಅಂಡರ್‌ ಪಾಸ್‌ಗಳನ್ನು ಮಾಡಿದರು. ಅವರೇ ರಸ್ತೆಗಳನ್ನು ದಾಟಲು ನೆಲದಡಿ ಸುರಂಗ ಮಾರ್ಗಗಳನ್ನು ಮಾಡಿದರು. ಇನ್ನೊಬ್ಬರು ಇದಕ್ಕೆಲ್ಲ ಫ್ಲೈ ಓವರ್‌ಗಳು ಉತ್ತರ ಎಂದರು. ಮತ್ತೊಬ್ಬರು ಬಂದು ಗೋಡೆಗಳ ಮೇಲೆ ಚಿತ್ರ ಬರೆಸಿದರು...

ಮೊದಲೇ ಇಡಿಕಿರಿದಾದ ನಗರದಲ್ಲಿ ರಸ್ತೆಗಳನ್ನು ಕಿರಿದು ಮಾಡಿ ಪಾದಚಾರಿ ರಸ್ತೆಗಳನ್ನು ದೊಡ್ಡದು ಮಾಡುವ ಕೆಲಸ ನಡೆದಿದೆ. ಪಾದಚಾರಿಗಳು ದಾಟಲು ನಿರ್ಮಿಸಿದ ಎಲ್ಲ ಅಂಡರ್‌ಪಾಸ್‌ಗಳಿಗೆ ಈಗ ಬೀಗ ಹಾಕಿದ್ದಾರೆ. ಗೋಡೆ ಮೇಲೆ ಬರೆಸಿದ ಯಾವ ಚಿತ್ರಗಳ ಬಣ್ಣವೂ ಈಗ ಉಳಿದಿಲ್ಲ. ವಾಹನಗಳ ಸಂಚಾರಕ್ಕೆ ನಿರ್ಮಿಸಿದ ಫ್ಲೈ ಓವರ್‌ಗಳು ಉತ್ತರ ಎನಿಸಿಲ್ಲ. ಬೆಳೆಯುತ್ತಿರುವ ಬೆಂಗಳೂರಿಗೆ ನಗರ ಯೋಜಕರ ಬಳಿ ಪರಿಹಾರಗಳೇ ಇದ್ದಂತೆ ಇಲ್ಲ. ಅಥವಾ ನಗರ ಯೋಜಕರು ಇರುವಂತೆಯೇ ಕಾಣುವುದಿಲ್ಲ. ಎಲ್ಲವೂ ಅಡ್‌ಹಾಕ್‌ನಂತೆ ತೋರುತ್ತದೆ.

ನೂರು ವಾರ್ಡ್‌ಗಳು ಹೋಗಿ ನೂರಾ ತೊಂಬತ್ತೆಂಟು ವಾರ್ಡುಗಳು ಆಗಿರುವ ಬೆಂಗಳೂರು ಮಹಾ ನಗರಪಾಲಿಕೆಯನ್ನು ಈಗ ಮತ್ತೆ ಚಿಕ್ಕದು ಮಾಡಲು ರಾಜ್ಯ ಸರ್ಕಾರ ಹೊರಟಂತೆ ಇದೆ. ಸರ್ಕಾರಕ್ಕೆ ತಕ್ಷಣ ಚುನಾವಣೆ ಮಾಡುವ ಇರಾದೆ ಇಲ್ಲ. ಸಾಮಾನ್ಯವಾಗಿ ಕಾಂಗ್ರೆಸ್ಸಿಗೆ ನಗರ ಸಂಸ್ಥೆಗಳ ಚುನಾವಣೆ ಮಾಡುವ ಇಷ್ಟ ಇರುವುದಿಲ್ಲ. ಏಕೆಂದರೆ ನಗರ ಮತದಾರರು ತನಗೆ ಮತ ಹಾಕುವುದಿಲ್ಲ ಎಂಬ ಅಳುಕು ಅದಕ್ಕೆ. 1982ರಲ್ಲಿ ರಾಜ್ಯದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಬೆಂಗಳೂರು ನಗರ ಪಾಲಿಕೆಗೆ ಅದಕ್ಕೂ ಹಿಂದಿನ 12 ವರ್ಷಗಳಿಂದ ಚುನಾವಣೆ ಆಗಿರಲಿಲ್ಲ.

ಜನತಾ ಸರ್ಕಾರ ಚುನಾವಣೆಯನ್ನು ನಡೆಸಿತು. ಕಳೆದ ಸಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಮೂರು ವರ್ಷಗಳ ಕಾಲ ಪಾಲಿಕೆಗೆ ಚುನಾವಣೆ ನಡೆಯಲಿಲ್ಲ. ಕೊನೆಗೆ ನ್ಯಾಯಾಲಯ ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಮಂಗಳಾರತಿ ಮಾಡಿದ ಮೇಲೆಯೇ ಚುನಾವಣೆ ನಡೆಯಿತು. ಈ ಸಾರಿ ಏನಾಗುತ್ತದೆಯೋ ಗೊತ್ತಿಲ್ಲ. ಕಾಂಗ್ರೆಸ್ಸಿಗೆ ಬೆಂಗಳೂರಿನ ಮೇಲೆ ಹಿಡಿತ ಸಾಧಿಸುವ ಉದ್ದೇಶ ಇದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಬೆಂಗಳೂರಿನ ಜನರು ಕಾಂಗ್ರೆಸ್ಸಿನವರನ್ನೂ ನೋಡಿದ್ದಾರೆ. ಬಿಜೆಪಿಯವರನ್ನೂ ನೋಡಿದ್ದಾರೆ. ಅವರನ್ನು ವಿಧಾನಸೌಧದಲ್ಲಿ ನಿಯಂತ್ರಿಸುವ ಸಚಿವ ಸಾಮ್ರಾಟರನ್ನೂ ನೋಡಿದ್ದಾರೆ. ‘ಸಾಮ್ರಾಟ’ರು ಎಂದ ಕೂಡಲೇ ಅವರು ಬಿಜೆಪಿಯಲ್ಲಿ ಇದ್ದರು ಎಂಬ ಧ್ವನಿ ಬರುತ್ತದೆಯಂತೆ! ಅವರಿಗಿಂತ ಬಲಿಷ್ಠ ‘ಸಾಮ್ರಾಟ’ರು ಕಾಂಗ್ರೆಸ್ಸಿನಲ್ಲಿಯೂ ಇದ್ದಾರೆ. ಬೆಂಗಳೂರಿನ ಸಮಸ್ಯೆ ಎಂದರೆ ಈ ಊರಿನಿಂದ ಆಯ್ಕೆಯಾಗಿ ಹೋಗುವ ಇಂಥ ಸಚಿವರು ಮತ್ತು ಶಾಸಕರು.

ಸ್ಥಾಪಿತ ರಾಜಕೀಯ ಪಕ್ಷಗಳ ಶಾಸಕರ ಮತ್ತು ಸಚಿವರ ಹಿಡಿತದಿಂದ ತಪ್ಪಿಸಿಕೊಂಡ ಆಡಳಿತವೊಂದು ಬೆಂಗಳೂರಿಗೆ ಸಿಕ್ಕರೆ ಒಳಿತಾಗಬಹುದೇ? ಜೀವನದ ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರೆಲ್ಲ ಒಂದು ಕಡೆ ಸೇರಿ ಒಂದೊಂದು ವಾರ್ಡುಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಜನರು ಅವರನ್ನು ಆರಿಸಬಹುದೇ? ಎಎಪಿ ಅಂಥ ತಯಾರಿಯಲ್ಲಿ ಇದ್ದಂತೆ ಕಾಣುತ್ತದೆ. ದೆಹಲಿಯಲ್ಲಿ ಅದು ಇದನ್ನೇ ಮಾಡಿತು. ಕೇಜ್ರಿವಾಲ್‌ ಮತ್ತು ಗೆಳೆಯರು ತಣ್ಣಗೇ ಬೀದಿ ಬೀದಿ ಸುತ್ತಿ ಜನರ ಜೊತೆಗೆ ಸಂಪರ್ಕ ಸಾಧಿಸಿದ್ದರು. ಬಿಜೆಪಿಯವರು ದೆಹಲಿ ಚುನಾವಣೆಯನ್ನು ಎಷ್ಟು ಮುಂದಕ್ಕೆ ಹಾಕಿದರೂ ಅದು ಎಎಪಿಗೇ ಅನುಕೂಲವಾಯಿತು. ಈಗಲೂ ಬೆಂಗಳೂರಿನ ಚುನಾವಣೆಯನ್ನು ಕಾಂಗ್ರೆಸ್ಸು ತನಗೆ ಅನುಕೂಲವಾಗಲಿ ಎಂದು ಮುಂದಕ್ಕೆ ಹಾಕುವ ಸನ್ನಾಹದಲ್ಲಿ ಇದೆ. ಅದಕ್ಕೆ ಅನುಕೂಲವಾಗುವಂತೆ ಬೆಂಗಳೂರು ಪಾಲಿಕೆ ವಿಭಜನೆ ಕುರಿತು ಸಲಹೆ ಕೊಡಲು ಒಂದು ಸಮಿತಿಯನ್ನೂ ರಚನೆ ಮಾಡಿದೆ. ಆ ಸಮಿತಿಯ ನೆಪದಲ್ಲಿಯೇ ಚುನಾವಣೆ ಮುಂದೆ ಹೋಗಬಹುದು.

ಅಧಿಕಾರ ಕಳೆದುಕೊಂಡ ದಿನವೇ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಮತ್ತೆ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ದೆಹಲಿ ಬಗೆಗೆ ಅವರಿಗೆ ಇರುವ ಕನಸುಗಳಿಗೆ ಲೆಕ್ಕವಿಲ್ಲ. ಆ ನಗರವನ್ನು ಭ್ರಷ್ಟಾಚಾರ ಮುಕ್ತ ನಗರ ಮಾಡುವ, ಬಡವರ ಸ್ನೇಹಿ ಮಾಡುವ ಶಪಥ ಅವರದು. ಅವರು ಅಧಿಕಾರ ವಹಿಸಿಕೊಂಡ ದಿನ ಪ್ರೇಮಿಗಳ ದಿನವಾಗಿರುವುದು ಒಂದು ಆಕಸ್ಮಿಕವಾಗಿರಲಾರದು. ಊರನ್ನು ಪ್ರೇಮಿಸುವ, ಜನರನ್ನು ಪ್ರೇಮಿಸುವ ನಾಯಕ ಅಥವಾ ನಾಯಕಿ ಈಗ ನಮಗೆ ಬೇಕಾಗಿದ್ದಾರೆ.

ಬೆಂಗಳೂರಿಗೂ ಈಗ ಕಾಮಿಯಾದ ವಿಟಪುರುಷ ಬೇಡವಾಗಿದೆ. ಒಬ್ಬ ಪ್ರೇಮಿ ಬೇಕಾಗಿದೆ. ಈ ನಗರವನ್ನು ಪ್ರೇಯಸಿಯ ಹಾಗೆ ಪ್ರೀತಿಸುವ ವ್ಯಕ್ತಿ ಆತ ಆಗಿರಬೇಕು. ಅದನ್ನು ನಾಶ ಮಾಡುವ ಬದಲು ಪೊರೆಯುವಂಥ ವ್ಯಕ್ತಿ ಆತನಾಗಿರಬೇಕು. ಈ ನಗರವನ್ನು ಕೊಳ್ಳೆ ಹೊಡೆದು ತಾನು ಶ್ರೀಮಂತನಾಗುವ ‘ಲಾಲಚಿ’ ಆತ ಆಗಿರಬಾರದು. ಅಂಥ ಲಾಲಸೆ ಅವನಲ್ಲಿ ಇದ್ದರೂ ಅದನ್ನು ಆತ ಗೆಲ್ಲುವಂಥವನಾಗಿರಬೇಕು. ಎಎಪಿ ಅಧ್ಯಕ್ಷರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡ ಮೇಲೆ, ‘ದೇವರೇ ನನಗೆ ಆಸೆಗಳನ್ನು ಗೆಲ್ಲುವ ಛಲ ಕೊಡು’ ಎಂದು ಪ್ರಾರ್ಥಿಸಿದ್ದಾರೆ.

ಅವರಿಗೆ ಬೆಂಗಳೂರಿನ ಮೇಲೆ ಕಣ್ಣು ಇದೆಯೇ ಇಲ್ಲವೋ ಗೊತ್ತಿಲ್ಲ. ಆದರೆ, ಬೆಂಗಳೂರು ಅವರ ಕಡೆ ಆಸೆಗಣ್ಣಿನಿಂದ ನೋಡುತ್ತಲಿದೆ. ಇದುವರೆಗೆ ಬೆಂಗಳೂರಿಗೆ ಸಿಕ್ಕದ ಪ್ರಾಮಾಣಿಕ ಪ್ರೇಮಿ ಆತ ಆಗಿರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT