ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ– ಮೂಲ ಶಿಕ್ಷಣದ ಮುಖಾಮುಖಿ

ಶಿಕ್ಷಣವೆಂಬ ಕಾಯದ ಬಲಹೀನ ಅಂಗಗಳಿಗೆ ವಿಶೇಷ ಚಿಕಿತ್ಸೆಯೇ ಬೇಕಾಗಿದೆ
Last Updated 17 ಜುಲೈ 2019, 19:45 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌, ದೇಶದ ಆರ್ಥಿಕ ಮುನ್ನಡೆಗೆ ಹತ್ತು ವರ್ಷಗಳ ದಿಕ್ಸೂಚಿ ಎಂಬ ಹೊಗಳಿಕೆಯನ್ನು ಕೆಲವೊಂದು ವಲಯಗಳಿಂದ ಪಡೆದಿದೆ. ಹಣದ ಲೆಕ್ಕಾಚಾರವನ್ನಷ್ಟೇ ನೋಡಿ ಲಾಭದ ಕನಸು ಕಾಣುವವರು, ಅಭಿವೃದ್ಧಿಯ ಭರವಸೆ ಹೊಂದಿದ್ದಾರೆ. ಆದರೆ ಗುಣದ ಲೆಕ್ಕಾಚಾರದಿಂದ ಅಳೆಯುವುದಾದರೆ, ಶಿಕ್ಷಣದತ್ತ ಬಜೆಟ್‍ನ ಚಿತ್ತ ಹೇಗಿದೆ ಎಂದು ನೋಡಬೇಕು.

ಸಚಿವರ ಆಶಯಗಳು ಬಹಳ ಆಕರ್ಷಕವಾಗಿವೆ. ಭಾರತವನ್ನು ಜಾಗತಿಕ ಶಿಕ್ಷಣದ ಬೃಹತ್ ಜಾಲವಾಗಿ ರೂಪಿಸಲು ಅವರು ಬಯಸಿದ್ದಾರೆ. 2019- 20ರಲ್ಲಿ ₹ 400 ಕೋಟಿ ವೆಚ್ಚ ಮಾಡಿ ವಿಶ್ವದರ್ಜೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಲ್ಲದೆ, ವಿದೇಶಿ ವಿದ್ಯಾರ್ಥಿಗಳನ್ನು ಇಲ್ಲಿಗೆ ಆಕರ್ಷಿಸುವ ‘ಭಾರತದಲ್ಲಿ ಕಲಿಯಿರಿ’ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕಾಗಿ ಆಗಬೇಕಾದ ಉನ್ನತ ಶಿಕ್ಷಣದ ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು (ಎಚ್‌ಇಸಿಐ) ಸ್ಥಾಪಿಸುವ ಗುರಿ ಹೊಂದಿದ್ದಾರೆ.

ಅಲ್ಲದೇ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಬದಲಿಗೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು (ನ್ಯಾಷನಲ್‌ ರಿಸರ್ಚ್‌ ಫೌಂಡೇಷನ್‌– ಎನ್‌ಆರ್‌ಎಫ್‌) ಸ್ಥಾಪಿಸಿ, ಉನ್ನತ ಶಿಕ್ಷಣದ ಸಂಯೋಜನೆ ಮಾಡಿ, ಧನಸಹಾಯ ನೀಡಲಾಗುವುದು. ಎನ್‌ಆರ್‌ಎಫ್‌ಗೆ ವಿವಿಧ ಸಚಿವಾಲಯಗಳೂ ಸಂಶೋಧನಾ ಅನುದಾನಗಳನ್ನು ನೀಡಬಹುದು. ಇದರಿಂದ ಭಾರತದಲ್ಲಿ ವೈಜ್ಞಾನಿಕ ಸಂಶೋಧನಾ ಪರಿಸರ ಶಕ್ತಿಯುತವಾಗಿ, ಅಗತ್ಯದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅವಶ್ಯಕತೆಗಳ ಪೂರೈಕೆಗೆ ಕೌಶಲ ಹಾಗೂ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಬಹುದು. ಮೂಲ ವಿಜ್ಞಾನಗಳಲ್ಲಿ ಸಂಶೋಧನೆಗಳು ನಕಲಿಯಾಗದಂತೆ ನೋಡಿಕೊಳ್ಳಲು ಸಾಧ್ಯವಾಗುವಂತೆ ಅತಿ ಗುಣಮಟ್ಟದ ಸಂಸ್ಥೆಗಳ ಉಗಮವಾಗಲಿದೆ. ಇದೆಲ್ಲಕ್ಕೆ ಪೂರಕವಾಗಿ ಉನ್ನತ ಶಿಕ್ಷಣದ ಮಸೂದೆಯೂ ಬರಲಿದೆ. ಇನ್ನು, ಭಾರತೀಯ ವಿದ್ಯಾರ್ಥಿಗಳಿಗೆ ಇಲ್ಲೇ ಗುಣಮಟ್ಟದ ಪ್ರಯೋಗಾಲಯಗಳು ಹಾಗೂ ಸಂಶೋಧನೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಇವು ಜಾಗತಿಕವಾಗಿ ಅತಿ ಉಪಯುಕ್ತವಾದ ಕೌಶಲಗಳ ಅಭಿವೃದ್ಧಿಗೆ ನೆರವಾಗಲಿವೆ. ಶಾಲೆಗಳಲ್ಲಿ ರೋಬೊಟಿಕ್ಸ್, ಕೃತಕ ಬುದ್ಧಿಮತ್ತೆ ಸೇರಿದಂತೆ ಅತ್ಯಾಧುನಿಕ ಕೌಶಲಗಳ ಕಲಿಕೆಗೆ ಒತ್ತು ನೀಡಲಾಗುತ್ತದೆ

ಇವಿಷ್ಟು ಆಶೋತ್ತರಗಳ ವಿವರಣೆ. ಈಗ ಒಂದಿಷ್ಟು ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಬಜೆಟ್ ಮಂಡನೆಯಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಉನ್ನತ ಶಿಕ್ಷಣಕ್ಕೆ ಸಿಕ್ಕಷ್ಟು ಅವಕಾಶವು ಬುನಾದಿಯ ಶಿಕ್ಷಣಕ್ಕೆ ಸಿಗಲಿಲ್ಲ. ಅಂದರೆ, ಪ್ರಾಥಮಿಕ ಶಾಲಾ ಶಿಕ್ಷಣದ ಪುನಶ್ಚೇತನದ ವಿಷಯವೇ ಬರಲಿಲ್ಲ. ಕಳೆದ ವರ್ಷ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ₹ 85,010 ಕೋಟಿ ಅನುದಾನ ಇದ್ದುದನ್ನು ಈ ಬಜೆಟ್‍ನಲ್ಲಿ ₹ 94,854 ಕೋಟಿಗೆ ಏರಿಸಲಾಗಿದೆ. ಆದರೆ, ಹಿಂದಿನ ವರ್ಷದ ಬಜೆಟ್ ಗಾತ್ರ ₹24,42,213 ಕೋಟಿ ಇದ್ದರೆ, ಈ ವರ್ಷ ಅದು ₹ 27,86,349 ಕೋಟಿಗೆ ಏರಿದೆ. ಹಾಗಾಗಿ ವಾಸ್ತವದ ಲೆಕ್ಕಾಚಾರದಲ್ಲಿ ಶಿಕ್ಷಣಕ್ಕೆ ಕಳೆದ ವರ್ಷ ಶೇ 3.48ರಷ್ಟು ಇದ್ದದ್ದು ಶೇ 3.4ಕ್ಕೆ ಇಳಿದಿದೆ. ಇದರ ಬದಲು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಶೇ 6ರಷ್ಟು ಧನ ವಿನಿಯೋಗಕ್ಕೆ ಅವಕಾಶ ಇರಬೇಕು.

ಶಾಲಾ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣಕ್ಕೆ ಅನುದಾನವನ್ನು ₹ 50 ಸಾವಿರ ಕೋಟಿಯಿಂದ ₹ 56,536 ಕೋಟಿಗೆ ಏರಿಸಲಾಗಿದೆ. ಅಂದರೆ ಲೆಕ್ಕಾಚಾರದ ಪ್ರಕಾರ ಶೇ 13ರಷ್ಟು ಏರಿಕೆ ಆಗಿದೆ. ಆದರೆ ಸಮಸ್ಯೆಗಳು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿರುವುದರ ಬಗ್ಗೆ ಯಾರೂ ಮಾತನಾಡಿಲ್ಲ. ಬಡವರ ಶಿಕ್ಷಣಕ್ಕೆ ಆಸರೆಯಾಗಿರುವ ಸರ್ಕಾರಿ ಶಾಲೆಗಳು ಭೌತಿಕವಾಗಿಯೂ ಬೌದ್ಧಿಕವಾಗಿಯೂ ಕುಸಿಯುತ್ತಿವೆ. ಹಳೆಯ ಶಾಲಾ ಕಟ್ಟಡಗಳು ಜೀರ್ಣಾವಸ್ಥೆ ತಲುಪಿದ್ದರೆ, ಹೊಸ ಕಟ್ಟಡಗಳು ವಿಮೆ ಮಾಡಿಸಬೇಕಾದ ಸ್ಥಿತಿಯಲ್ಲಿವೆ. ಶಾಲಾ ಜಾಗಗಳು ಸುತ್ತಮುತ್ತಲಿನವರಿಂದ ಆಕ್ರಮಿಸಲ್ಪಡುತ್ತಿವೆ. ಆವರಣ ಗೋಡೆ, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಪಾಠೋಪಕರಣ, ಪೀಠೋಪಕರಣಗಳು ಕೊರತೆಗಳ ಪಟ್ಟಿಯಲ್ಲಿವೆ. ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರಿಲ್ಲದಿರುವುದು ಒಂದು ಸಮಸ್ಯೆಯಾದರೆ, ನೇಮಕಾತಿಯಾದಾಗ ಹಾಗೂ ವರ್ಗಾವಣೆಯಾದಾಗ ಸೂಕ್ತ ಶಾಲೆಗಾಗಿ ಕೌನ್ಸೆಲಿಂಗ್‌ನಲ್ಲಿ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ನೇಮಕಾತಿ ಪಡೆದವರಲ್ಲಿ ಎಷ್ಟೋ ಮಂದಿ ಹೇಗೆ ಹೇಗೋ ಅಂಕ ಗಳಿಸಿ ಆಯ್ಕೆಯಾದವರಿದ್ದಾರೆ. ಅವರು ಕಲಿಸುವ ಪ್ರಕ್ರಿಯೆಯಲ್ಲಿ ಅಸಮರ್ಥರಿರುತ್ತಾರೆ. ಹಳ್ಳಿಗಳು ಮತ್ತು ಆಡಳಿತ ಕೇಂದ್ರದಿಂದ ದೂರವಿರುವ ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ, ಹಾಜರಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಏಳನೇ ತರಗತಿಗೆ ಬಂದರೂ ಸರಿಯಾದ ಕಲಿಕೆ ಆಗಿರುವುದಿಲ್ಲವೆಂದು ಅನೇಕ ಸ್ವಯಂಸೇವಾ ಸಂಸ್ಥೆಗಳ ಮೌಲ್ಯಮಾಪನಗಳು ತಿಳಿಸಿವೆ. ಇವುಗಳನ್ನು ಸುಧಾರಿಸುವ ಕಡೆಗೆ ಸಚಿವರು ಗಮನ ಕೊಡಲೇಬೇಕಿತ್ತು.

ಖಾಸಗಿ ಶಾಲೆಗಳಲ್ಲಿ ಬಾಯಿಪಾಠದ ಕಲಿಕೆಯ ರೋಗ ವ್ಯಾಪಿಸಿದೆ. ಹೊಸ ಶಿಕ್ಷಣ ನೀತಿಯಲ್ಲಿ ಇದರ ವಿರುದ್ಧ ಉಲ್ಲೇಖಗಳಿದ್ದರೂ ಇಂತಹ ಶಾಲೆಗಳನ್ನು ನಿವಾರಿಸುವ ಉಪಾಯಗಳಿಲ್ಲ. ಶಿಕ್ಷಣ ನೀತಿಯು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಮಾತೃಭಾಷೆಯ ಹೆಸರಿನಲ್ಲಿ, ಇಂಗ್ಲಿಷ್‌ ಭಾಷೆಯ ಮೂಲಕ ಪರೋಕ್ಷವಾಗಿ ಖಾಸಗೀಕರಣಕ್ಕೆ ಒತ್ತು ನೀಡಿದೆ. ಇದರಿಂದಾಗಿ ಭಾರತದ ದೇಸಿ ಭಾಷೆಗಳು ನಶಿಸಿ ವಿದೇಶಿ ಭಾಷೆಯ ಏಕಸಂಸ್ಕೃತಿ ನೆಲೆಗೊಳ್ಳುವ ಅಪಾಯ ಇದೆ. ಇದು ವಿವಿಧತೆಯಲ್ಲಿ ಏಕತೆ ಇರುವ ಭಾರತದ ಲಕ್ಷಣವನ್ನು ಇಲ್ಲವಾಗಿಸಲಿದೆ. ಇದನ್ನು ಸಚಿವರು ಪರಿಗಣಿಸಿದರೆ ಆಗ ಸರ್ಕಾರಿ ಶಾಲೆಗಳ ಸಬಲೀಕರಣದ ಅಗತ್ಯ ಅರ್ಥವಾಗುತ್ತದೆ. ಇದು ನಿಜವಾಗಿ, ಸೊಂಟದಿಂದ ಕೆಳಗೆ ಬಲಹೀನವಾದ ಶಿಕ್ಷಣದ ಕಾಯಕ್ಕೆ ಆಗಬೇಕಾದ ಚಿಕಿತ್ಸೆ. ಸೊಂಟದಿಂದ ಮೇಲೆ, ಉನ್ನತ ಶಿಕ್ಷಣವೆಂದು ಎಷ್ಟೇ ಅಂದಗೊಳಿಸಿದರೂ ಕಾಲಿನಲ್ಲಿ ಬಲವಿಲ್ಲದಿದ್ದರೆ ಎದ್ದು ನಿಲ್ಲುವುದು ಹೇಗೆ? ಹಾಗಾಗಿ ಸಮಗ್ರ ಶಿಕ್ಷಣದ ಅಭಿವೃದ್ಧಿಗಾಗಿ ಚಿಂತಿಸುವುದಾದರೆ, ಎನ್‌ಡಿಎ ನೇತೃತ್ವದ ಸರ್ಕಾರದ ಎರಡನೆಯ ಅವಧಿಯ ಮೊದಲ ಮೂರು ವರ್ಷಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಎದ್ದು ನಿಲ್ಲಿಸುವ ಕೆಲಸವಾಗಲಿ. ಇನ್ನೆರಡು ವರ್ಷಗಳಲ್ಲಿ ಉನ್ನತ ಶಿಕ್ಷಣದ ಬಗ್ಗೆ ಚಿಂತಿಸಲಿ. ಹೇಗೂ ಹತ್ತು ವರ್ಷಗಳ ಸಾಧನೆಯ ಗುರಿ ಇರುವಾಗ ಜಾಗತಿಕ ದರ್ಜೆಯ ಜಾಲಕ್ಕೆ ಅಸಮರ್ಪಕವಾಗಿ ಸೇರುವ ಅವಸರವೇನು?

ಇನ್ನು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಭಾಷೆ, ಜಾನಪದ ಮತ್ತು ಸಮಾಜವಿಜ್ಞಾನ ವಿಭಾಗಗಳಲ್ಲಿ ಪಾಠ, ಪರೀಕ್ಷೆ, ಅಂಕಗಳು, ಸಂಶೋಧನೆ ಮುಂತಾದವುಗಳಲ್ಲಿ ಜೊಳ್ಳಿನ ಎಡೆಯಲ್ಲಿ ಕಾಳು ಹೆಕ್ಕುವುದು ದುಸ್ಸಾಹಸವೇ ಸರಿ. ಹೀಗೆ ಹೇಳಿದವರ ಮೇಲೆ ಕೋಪಗೊಳ್ಳುವ ಪ್ರಾಧ್ಯಾಪಕರಿದ್ದಾರೆ. ಅದೆಷ್ಟೋ ಅನುದಾನಗಳು ವ್ಯರ್ಥವಾಗುವುದರ ಬಗ್ಗೆ ಹಿರಿಯ ಪ್ರಾಧ್ಯಾಪಕರಿಗೇ ಬೇಸರವಿದೆ. ಹೀಗಿರುವಾಗ ಉನ್ನತ ಶಿಕ್ಷಣವನ್ನು ಒಂದೇ ಮಾಪಕದಿಂದ ನೋಡುವುದೂ ಸರಿಯಲ್ಲವೆಂದು ವಿತ್ತ ಸಚಿವರು ಮನಗಾಣಬೇಕಾಗಿದೆ.

ಇನ್ನೂ ಒಂದು ವಿಷಯ ಗಮನೀಯ. ನಮ್ಮ ‘ಇಸ್ರೊ’ ಬಹುದೊಡ್ಡ ಸಾಧನೆ ಮಾಡಿದ ವಿಜ್ಞಾನಿಗಳು ಇರುವ ಕೇಂದ್ರ. ಅವರೆಲ್ಲ ತಮ್ಮ ತಮ್ಮ ಪ್ರಾದೇಶಿಕ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಬೆಳೆದವರು. ಆಗ ಪ್ರಾಥಮಿಕ ಶಿಕ್ಷಣ ಗಟ್ಟಿ ಇತ್ತು. ಈಗ ಬಲಹೀನವಾಗಿದೆ. ಈ ಸತ್ಯವನ್ನು ಮನಗಂಡರೆ, ಹೊಸ ವಿಜ್ಞಾನಿಗಳು ಹುಟ್ಟಲು ಮತ್ತೊಮ್ಮೆ ಸರ್ಕಾರಿ ಶಾಲೆಗಳ ಸಬಲೀಕರಣ ಆಗಬೇಕು. ಆದರೆ ಬಜೆಟ್ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಅಭಿಪ್ರಾಯಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಒಬ್ಬರೂ ಮಾತನಾಡದಿರುವುದು ವಿಪರ್ಯಾಸವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT