ಭಾನುವಾರ, ಜೂನ್ 7, 2020
24 °C
ಎಷ್ಟು ಮನೆಗಳಲ್ಲಿ ಇದು ಸಾಧ್ಯ | ಹಾಸ್ಪಿಟಲ್ ಕ್ವಾರಂಟೈನ್ ಒಳಿತು

ಹೋಂ ಕ್ವಾರಂಟೈನ್ ವ್ಯವಸ್ಥೆಯ ಅಪಾಯಗಳು

ಚೈತ್ರಿಕಾ ನಾಯ್ಕ ಹರ್ಗಿ Updated:

ಅಕ್ಷರ ಗಾತ್ರ : | |

ಕೊರೊನಾ ಶಂಕಿತರನ್ನು ಗೃಹಬಂಧಿಯಾಗಿಸುವ ಕ್ರಮ ನಿಜಕ್ಕೂ ವೈಜ್ಞಾನಿಕವಾಗಿದೆಯೇ? ಹೋಂ ಕ್ವಾರಂಟೈನ್ ಎಂಬುದು ಈಗ ಇರುವ ಕ್ರಮದಲ್ಲಿಯೇ ಮುಂದುವರಿದರೆ, ಅವು ಸೋಂಕು ಹರಡುವ ಕೇಂದ್ರಗಳಾಗಿ ಬದಲಾಗುವ ಸಾಧ್ಯತೆಗಳೂ ಇವೆ.

---

'ಕರ್ನಾಟಕದಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ ಹತ್ತು ಸಾವಿರ ಕೊರೊನಾ ಸೋಂಕಿತರನ್ನು ಸಂಖ್ಯೆ ಹತ್ತು ಸಾವಿರ ತಲುಪಿದರೂ, ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ' ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಸಮುದಾಯ ಪ್ರಸರಣ ಕರ್ನಾಟಕದಲ್ಲಿ ಆಗಿಲ್ಲ ಎಂದು ಹೇಳುತ್ತಿರುವಾಗಲೇ, 200ರ ಗಡಿ ದಾಟಿರುವ ಕೊರೊನಾ ಪ್ರಕರಣಗಳು ಏಪ್ರಿಲ್ ಅಂತ್ಯಕ್ಕೆ ಮಿತಿಮೀರುವ ಅಪಾಯ ಆತಂಕ ಹುಟ್ಟಿಸುವ ಹಾಗಿದೆ.

ಲಾಕ್ ಡೌನ್ ಇದೆ. ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಆದರೂ ಪ್ರಕರಣಗಳು ಹೆಚ್ಚಲು ಕಾರಣವೇನು? ಹಾಗಾದರೆ ನಾವು ಅನುಸರಿಸುತ್ತಿರುವ ಕ್ವಾರಂಟೈನ್ ಮತ್ತು ಐಸೋಲೇಷನ್ ಮಾರ್ಗಗಳಲ್ಲಿ ಲೋಪವಿದೆಯೆ? ಈ ಕಾರಣದಿಂದ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆಯೆ ಎಂದು ನೋಡಿದರೆ, ಮೇಲ್ನೋಟಕ್ಕೆ ಈಗಿನ ವ್ಯವಸ್ಥೆಯಲ್ಲಿನ ಕೆಲವು ದೋಷಗಳು ಕಾಣಿಸುತ್ತವೆ. ಇತ್ತೀಚೆಗೆ ದೃಢಪಟ್ಟ ಎರಡು ಕೊರೊನಾ ಪ್ರಕರಣಗಳ ಮೂಲಕ ಈ ಬಗ್ಗೆ ಇನ್ನಷ್ಟು ಸೂಕ್ಷ್ಮವಾಗಿ ಅರಿಯಲು ಯತ್ನಿಸೋಣ.

ಇದನ್ನೂ ಓದಿ: ನಂಜನಗೂಡಿನಲ್ಲಿ ಮತ್ತೆ ಐವರಿಗೆ ಕೊರೊನಾ ವೈರಸ್‌ ಸೋಂಕು ದೃಢ

ನಂಜನಗೂಡಿನಲ್ಲಿ ಕೊರೊನಾ

ಕರ್ನಾಟಕದಲ್ಲಿ ಸೋಂಕಿನ ಮೂಲ ಪತ್ತೆಯಾಗದ ಕೋವಿಡ್-19 ಪ್ರಕರಣಗಳಲ್ಲಿ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಆದ ಪ್ರಕರಣ ಕೂಡ ಒಂದು. ಇದು ವೈದ್ಯಕೀಯ ಕ್ಷೇತ್ರ ಮತ್ತು ರಾಜ್ಯ ಸರ್ಕಾರಕ್ಕೆ ಸವಾಲಾಗಿರುವಾಗಲೇ ಈ ಪ್ರಕರಣದಿಂದಾಗುತ್ತಿರುವ ಪ್ರಸರಣ ಸಂಖ್ಯೆ ಹೆಚ್ಚುತ್ತಿವೆ. ಕಾರ್ಖಾನೆಯ ಕಾರ್ಮಿಕನಲ್ಲಿ ಕೊರೊನಾ ಸೋಂಕು ಪತ್ತೆಯಾದ ಕೂಡಲೇ ಆತನ ಸಂಪರ್ಕಕ್ಕೆ ಬಂದ ಉದ್ಯೋಗಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇದು ಸೂಕ್ತವಾದ ಮತ್ತು ಪ್ರಶಂಸನಾಯೋಗ್ಯ ನಿರ್ಧಾರವೇ. ಆದರೆ ಈ ಕ್ವಾರಂಟೈನ್ ವಿಧಾನ ವೈಜ್ಞಾನಿಕವಾಗಿದೆಯೇ? ಈ ಪ್ರಶ್ನೆ ಕೇಳಿಕೊಳ್ಳಲು ಕಾರಣವಿದೆ.

ಈಗ ಕ್ವಾರಂಟೈನ್‌ನಲ್ಲಿ ಇದ್ದವರ ಕುಟುಂಬದವರು ಮತ್ತು ಸಂಬಂಧಿಕರಿಗೆ ಸೋಂಕು ತಗುಲಿದೆ. ಮೈಸೂರಿನಲ್ಲಿ ಪತ್ತೆಯಾದ ಪ್ರಕರಣದಲ್ಲಿ ಇವರ ಸಂಖ್ಯೆಯೆ ಜಾಸ್ತಿ ಇದೆ. ಇಂತಹ ಸಂದಿಗ್ಧತೆಯಲ್ಲಿ ಎಂಟು ವರ್ಷದ ಮಗುವಿಗೆ ಕೋವಿಡ್-19 ಪತ್ತೆಯಾಗಿದೆ. ಕ್ವಾರಂಟೈನ್‌ನಲ್ಲಿ ಇರುವ ತಂದೆಯ ಮೂಲಕ ಆ ಮಗುವಿಗೆ ಸೋಂಕು ತಗುಲಿದೆ.

ಇದನ್ನೂ ಓದಿ: ಭಟ್ಕಳದಲ್ಲಿ 26 ವರ್ಷದ ಗರ್ಭಿಣಿಗೆ ಕೋವಿಡ್- 19 ದೃಢ

ಭಟ್ಕಳದ ಗರ್ಭಿಣಿಯಲ್ಲಿ ಕೊರೊನಾ

ಭಟ್ಕಳದಲ್ಲಿ 26 ವರ್ಷದ ಗರ್ಭಿಣಿಗೆ ಕೋವಿಡ್ ಸೋಂಕು ತಗುಲಿರುವುದು. ಆಕೆಯ ಗಂಡ ದುಬೈನಿಂದ ಬಂದ ವ್ಯಕ್ತಿ. ಬಂದಾಗಲೇ ಆ ವ್ಯಕ್ತಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಪರೀಕ್ಷೆಯಲ್ಲಿ ಆತನಿಗೆ ಕೊರೊನ ವೈರಸ್ ಪತ್ತೆ ಆಗಿಲ್ಲ. ಆದರೂ ಹೋಂ ಕ್ವಾರಂಟೈನ್‌ನಲ್ಲಿ 14 ದಿನಗಳ ಕಾಲ ಇದ್ದ. ಈ ಸಮಯದಲ್ಲಿ  ಆತನ ಹೆಂಡತಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಅವಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮಹಿಳೆ ಬಾಹ್ಯವಾಗಿ ಯಾವುದೇ ಕೊರೊನಾ ಸೋಂಕಿತರೊಂದಿಗೂ ಸಂಪರ್ಕ ಹೊಂದಿಲ್ಲ. ವೈದ್ಯರ ಪ್ರಕಾರ ಆಕೆಯ ಪತಿಗೆ ರೋಗನಿರೋಧಕ ಶಕ್ತಿ ಜಾಸ್ತಿ ಇರುವುದರಿಂದ ಆತನಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ, ಆದರೆ ಆತನ ಹೆಂಡತಿಗೆ ಸೋಂಕು ತಗುಲಿದೆ. ಕೋವಿಡ್-19ರ ಲಕ್ಷಣಗಳು ಕಾಣಿಸಿಕೊಂಡಿವೆ.

ಹಾಗಾದರೆ ಹೀಗೆಯೇ ಕೊರೊನಾ ವೈರಸ್ ಸೋಂಕು ಪತ್ತೆ ಆಗದೆ ಹದಿನಾಲ್ಕು ದಿನ ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಸಾಕಷ್ಟು ಜನರಿದ್ದಾರಲ್ಲವೇ? ವೈದ್ಯರು ಹೇಳುವ ಮಾತನ್ನು ನಾವು ಪರಿಗಣಿಸಿದರೆ, ಕೊರೊನಾ ಪತ್ತೆಯಾಗದೆ, ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಂದ ಅವರ ಕುಟುಂಬದವರಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದಾಯಿತು. ಮನೆಯಲ್ಲಿಯೇ ಇದ್ದರೂ ಕುಟುಂಬದ ಸದಸ್ಯರಿಂದ ಸಂಪರ್ಕವನ್ನು ಪೂರ್ತಿ ಕಡಿದುಕೊಂಡು, ಸುರಕ್ಷಿತ ಅಂತರ ಕಾಪಾಡಿಕೊಂಡಿದ್ದರೆ ವೈರಸ್ ಬರುವ ಸಾಧ್ಯತೆ ಇಲ್ಲ ಎನ್ನುವುದೇನೋ ನಿಜ. ಆದರೆ ಆ ಸೌಲಭ್ಯ ಭಾರತದ ಎಷ್ಟು ಕುಟುಂಬಗಳಲ್ಲಿ ಇರಲು ಸಾಧ್ಯವಿದೆ?

ಇದನ್ನೂ ಓದಿ: Explainer | ಹೋಂ ಕ್ವಾರಂಟೈನ್: ಪ್ರತ್ಯೇಕವಾಸ ಹೀಗಿರಲಿ

ಹೋಂ ಕ್ವಾರಂಟೈನ್‌ಗೆ ಬೇಕಾದ ವ್ಯವಸ್ಥೆ ಮನೆಗಳಲ್ಲಿ ಇದೆಯೆ?

ವಿದೇಶದಿಂದ ಬಂದವರನ್ನು, ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಗುರುತಿಸಿ, ಅವರ ಕೈ ಮೇಲೆ ಕೋವಿಡ್-19 ಮುದ್ರೆ ಒತ್ತಿ 14 ದಿನದ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮನೆ ಮುಂದೆ ಬೋರ್ಡ್‌ಗಳನ್ನೂ ತಗುಲಿ ಹಾಕಲಾಗುತ್ತಿದೆ. ಇಂಥ ವ್ಯಕ್ತಿಗಳು ಮನೆಯೊಳಗೇ ಇದ್ದಾರೆ ಎಂಬುದನ್ನು ಪೊಲೀಸರು ಸಹ ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ಕ್ವಾರಂಟೈನ್‌ನಲ್ಲಿ ಇರುವವರಿಗೆ ವಿಡಿಯೊ ಕಾಲ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಮನೆಬಿಟ್ಟು ಹೋಗದಂತೆ ಅವರ ಮೇಲೆ ನಿಗಾ ಇಡಲು ಆ್ಯಪ್‌ ಕೂಡ ಸಿದ್ಧವಾಗಿದೆ. ಆದರೆ ಮುಖ್ಯವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಿಸುವ ಮೊದಲು ಕ್ವಾರಂಟೈನ್‌ಗೆ ಬೇಕಾದ ವಾತಾವರಣ ಮನೆಯಲ್ಲಿ ಇದೆಯೇ ಎನ್ನುವುದನ್ನು ಪರೀಕ್ಷಿಸಲಾಗುತ್ತಿದೆಯೇ?

ಎಲ್ಲಾ ಸೋಂಕು ಶಂಕಿತರ ಮನೆಯಲ್ಲಿ ಕ್ವಾರಂಟೈನ್‌ಗೆ ಬೇಕಾದ ಪ್ರತ್ಯೇಕ ಕೊಠಡಿ ಇದ್ದಿರಲಾರದು. ನಮ್ಮಲ್ಲಿ ಕೂಡು ಮನೆಗಳು ಜಾಸ್ತಿ. ಪ್ರತ್ಯೇಕ ಮಲಗುವ ಕೋಣೆ ಇರದ ಮನೆಗಳು, ಎಲ್ಲರೂ ಒಂದೆ ಜಗಲಿಯಲ್ಲಿ ಮಲಗುವ ಅನಿವಾರ್ಯ ಇರುವ ಮನೆಗಳು ಇವೆ. ಒಂದೇ ಪಾಯಖಾನೆ, ಒಂದೇ ಸ್ನಾನಗೃಹ ಇರುವ ಮನೆಗಳಲ್ಲಿ ಹೋಂ ಕ್ವಾರಂಟೈನ್ ಅಸಾಧ್ಯ.

ಇನ್ನೊಂದು ಸಮಸ್ಯೆಯೆಂದರೆ ಮನೆಯಲ್ಲಿ ಪ್ರತ್ಯೇಕ ಕೋಣೆ ಇದ್ದರೂ ಸಂಪೂರ್ಣವಾಗಿ ಪ್ರತ್ಯೇಕವಾಗಿ ಇರಲು ಸಾಧ್ಯವಾಗುವುದಿಲ್ಲ. ಯಾವುದಾದರೂ ಒಂದು ಕಾರಣಕ್ಕೆ ಇತರರ ಸಂಪರ್ಕಕ್ಕೆ ಬರಲೇಬೇಕಾಗುತ್ತದೆ. ಊಟ, ಅಡುಗೆ ಮನೆ, ಅಡುಗೆ ಪಾತ್ರೆ ಸಿಂಕ್ ಇವುಗಳನ್ನಂತೂ ಉಪಯೋಗಿಸಲೇ ಬೇಕಾಗುತ್ತದೆ. ಇವುಗಳನ್ನೆಲ್ಲ ಪ್ರತ್ಯೇಕಗೊಳಿಸುವ ಸಾಧ್ಯತೆ ಇರದಿದ್ದ ಪಕ್ಷದಲ್ಲಿ ಮನೆಯಲ್ಲಿ ಇರುವ ಇತರರಿಗೆ ಸೋಂಕು ತಗುಲುವ ಸಾಧ್ಯತೆ ಇದ್ದೇ ಇರುತ್ತದಲ್ಲವೇ? ರಕ್ತಸಂಬಂಧಿಗಳು, ಬಾಳ ಸಂಗಾತಿಗಳ ನಡುವಿನ ಭಾವುಕತೆಯೂ ಹೋಂ ಕ್ವಾರಂಟೈನ್‌ನ ನಿಯಮಗಳನ್ನು ಮರೆಯುವಂತೆ ಮಾಡಬಹುದು. 14 ದಿನದ ಮಧ್ಯದಲ್ಲಿ ಅಥವಾ ನಂತರ ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಸೋಂಕು ಕಾಣಿಸಿಕೊಂಡು ಅದು ಮನೆಯವರಿಗೆ ಹರಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಮೈಸೂರು ಮತ್ತು ಭಟ್ಕಳದಲ್ಲಿ ಆಗಿದ್ದು ಹೀಗೆಯೆ.

ಇದನ್ನೂ ಓದಿ: ದೇವರು, ವೈರಸ್ಸು, ಪೊಲೀಸು: ಹಸಿದು ಬೀದಿಗೆ ಬಂದವರಿಗೆ ಬಡಿದರೆ ಕೊರೊನಾ ಸಾಯುವುದೇ?

ಪ್ರತ್ಯೇಕ ಸೌಲಭ್ಯಗಳು ಇರುವಾಗ ಹೋಂ ಕ್ವಾರಂಟೈನ್ ಸಾಧ್ಯವೇ?

ಪ್ರತ್ಯೇಕ ಕೋಣೆಗಳಿದ್ದ ಮಾತ್ರಕ್ಕೆ ಹೋಂ ಕ್ವಾರೆಂಟೈನ್‌ನ ಸಮಸ್ಯೆ ಮುಗಿಯುವುದಿಲ್ಲ. ಅವರಿಗೆ ಸಾರ್ವಜನಿಕರಿಂದ ಆಗುತ್ತಿರುವ ಕಿರಿಕಿರಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಸೋಂಕಿನಿಂದ ಗೆಲ್ಲಲು ಮಾನಸಿಕ ಇಚ್ಛಾಶಕ್ತಿಯೂ ಅಷ್ಟೇ ಮುಖ್ಯವಲ್ಲವೇ?

ವಿದೇಶದಿಂದ ಬಂದ ಒಂದು ಕುಟುಂಬವನ್ನು ದೆಹಲಿಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈವರೆಗೆ ಅವರ ಮನೆಯಲ್ಲಿ ಯಾರಿಗೂ ಕೋವಿಡ್-19 ಪತ್ತೆಯಾಗಿಲ್ಲ. ಆದರೆ ಮನೆ ಮುಂದೆ ಹೋಗಿ ಬರುವ ಜನರು ಕ್ವಾರಂಟೈನ್ ಬೋರ್ಡ್ ಮತ್ತು ಬ್ಯಾರಿಕೇಡ್‌ಗಳನ್ನು ನೋಡಿ ಫೋಟೊ ತೆಗೆಯುವುದು, ವಿಡಿಯೊ ಮಾಡುವುದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಾಲ್ಕನಿಗೆ ಹೋದರೆ ಪಕ್ಕದ ಮನೆಯವರ ಬೈಗುಳ.

‘‌ಜನರು ನಮ್ಮನ್ನು ನೋಡುತ್ತಿರುವ ರೀತಿಯಿಂದ ಮಾನಸಿಕವಾಗಿ ನೊಂದಿದ್ದೇವೆ. ಸರ್ಕಾರ, ಅಧಿಕಾರಿಗಳ ಸ್ಪಂದನೆ ಚೆನ್ನಾಗಿದೆ. ಆದರೆ ಜನರಿಂದ ತುಂಬಾ ಕಿರಿಕಿರಿ ಅನುಭವಿಸುತ್ತಿದ್ದೇವೆ' ಎಂದು ಮನೆಯವರು ರಾಷ್ಟ್ರೀಯ ಮಾಧ್ಯಮಗಳಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಶ್‌... ಅವಿತಿರಿ, ಕೊರೊನಾ ಹಿಮ್ಮೆಟ್ಟಿಸುವ ಶಸ್ತ್ರಾಸ್ತ್ರ ಸಜ್ಜಾಗಿಲ್ಲ!

ಏನು ಮಾಡಬಹುದು?

ಸೋಂಕಿತರ ಪ್ರಮಾಣ ಹೆಚ್ಚಾಗಿರುವೆಡೆ ಸರ್ಕಾರ ಸೀಲ್ ಡೌನ್ ಮಾಡುತ್ತಿದೆ. ಟಾಸ್ಕ್ ಫೋರ್ಸ್‌ಗಳನ್ನು ಈಗಾಗಲೇ ರಚಿಸಲಾಗಿದೆ. ಸಾಮಾಜಿಕ ಅಂತರ ಬಹುಮಟ್ಟಿಗೆ ಸಫಲವಾಗಿದೆ. ಹಾಗೆಯೇ ಸೋಂಕು ಶಂಕಿತರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸುವುದರಿಂದ ಪ್ರಸರಣ ಸಂಖ್ಯೆ ಜಾಸ್ತಿಯಾಗುತ್ತಿರುವುದನ್ನೂ ಪರಿಗಣಿಸಿ ಎಚ್ಚೆತ್ತುಕೊಳ್ಳಬೇಕಿದೆ. ಇದು ಅವೈಜ್ಞಾನಿಕ ಅಷ್ಟೇ ಅಲ್ಲ, ಅಮಾನವೀಯವೂ ಹೌದು. ಆದ್ದರಿಂದ ಇವರನ್ನು ಹೋಂ ಕ್ವಾರಂಟೈನ್ ಪರಿಕಲ್ಪನೆಯನ್ನು ಕೈಬಿಟ್ಟು ಹಾಸ್ಪಿಟಲ್ ಕ್ವಾರಂಟೈನ್ ಮಾಡುವುದೊಂದೇ ಉಳಿದಿರುವ ಮಾರ್ಗ. ಹಾಗೆ ಕ್ವಾರಂಟೈನ್ ಅವಧಿಯನ್ನೂ ಜಾಸ್ತಿ ಮಾಡಬೇಕಿದೆ. ಆದರೆ ಶಂಕಿತರನ್ನೆಲ್ಲ ಹಾಸ್ಪಿಟಲ್ ಕ್ವಾರಂಟೈನ್ ಮಾಡಲು ಹೊರಟರೆ ಅದನ್ನು ನಿಭಾಯಿಸುವ ಮೂಲಭೂತ ಸೌಕರ್ಯಗಳು ನಮ್ಮಲ್ಲಿ ಇವೆಯೇ ಎಂಬುದನ್ನೂ ಗಮನಿಸಬೇಕಾಗುತ್ತದೆ. ಈ ದಿಶೆಯಲ್ಲಿ ಕೆಲವು ದಿಟ್ಟ – ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ.

ಈಗಾಗಲೇ ರೈಲುಗಳನ್ನು ಕ್ವಾರಂಟೈನ್‌ ರೂಮ್‌ಗಳನನ್ನಾಗಿ ಪರಿವರ್ತಿಸಿ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಆಯ್ದ ಹೊಟೆಲ್‌ಗಳು, (ಲಾಕ್‌ಡೌನ್ ಸಮಯದಲ್ಲಿ ಎಲ್ಲ ಹೋಟೆಲ್‌ಗಳೂ ಖಾಲಿ ಇರುತ್ತವೆ) ಖಾಸಗಿ ಆಸ್ಪತ್ರೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಿ ಸೋಂಕು ಶಂಕಿತರನ್ನ ಇರಿಸಬೇಕು. ಜೊತೆಗೆ ಕೊರೊನಾಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಳ ಆರೋಗ್ಯ ರಕ್ಷಣಗೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಈಗಾಗಲೇ ಸುಮಾರು ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ತಗುಲಿದ ಶಂಕೆ ಇರುವುದರಿಂದ ಮತ್ತು ಕೊರೊನಾ ರೋಗಿಗಳನ್ನು ಚಿಕಿತ್ಸೆ ಮಾಡಿರುವುದರಿಂದ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಮೊದಲು ಅವರ ಸುರಕ್ಷತೆಗೆ ಬೇಕಾದ ರಕ್ಷಣಾ ಸೌಲಭ್ಯವನ್ನು ಒದಗಿಸಿದರೆ ಮಾತ್ರ ಅವರು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯ.

ಇದರ ಜೊತೆಗೆ ಕ್ವಾರಂಟೈನ್ ಎಂದರೆ ಅದೊಂದು ಶಿಕ್ಷೆ ಎನ್ನುವ ಭಾವ ಮನಸಲ್ಲಿ ಇದೆ. ಜನರ ಮನಸ್ಸಿಲ್ಲಿರುವ ಈ ಆತಂಕದ ಭಾವ ಹೋಗದ ಹೊರತು ಸಮುದಾಯ ಸ್ವಯಂಪ್ರೇರಿತವಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ತೊಡಗಿಕೊಳ್ಳಲಾರದು. ಹಾಗಾಗಿ ಕ್ವಾರಂಟೈನ್‌ನಲ್ಲಿ ಶಂಕಿತರು ಮತ್ತು ಸೋಂಕಿತರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಹಾಗೆಯೇ ಅವರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬುದನ್ನು ಸರ್ಕಾರವೇ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಕ್ವಾರಂಟೈನ್ ಎನ್ನುವುದು ಸೆರೆವಾಸ ಅಲ್ಲ ಎಂಬ ಭಾವ ಮೂಡಲು ಈ ಕ್ರಮ ಸಹಕಾರಿ ಆಗುತ್ತದೆ.

ಹೋಂ ಕ್ವಾರಂಟೈನ್ ಎಂಬುದು ಈಗ ಇರುವ ಕ್ರಮದಲ್ಲಿಯೇ ಮುಂದುವರಿದರೆ, ಅವು ಸೋಂಕು ಹರಡುವ ಕೇಂದ್ರಗಳಾಗಿ ಬದಲಾಗುವ ಎಲ್ಲ ಸಾಧ್ಯತೆಗಳೂ ಇವೆ. 

1965ರಲ್ಲಿ ಲಂಡನ್‌ನಲ್ಲಿ ಪ್ಲೇಗ್ ರೋಗ ದೇಶವನ್ನು ವ್ಯಾಪಿಸಿದ್ದಾಗ, ಪ್ಲೇಗ್ ರೋಗ ಬಂದವರನ್ನು ಅವರ ಕುಟುಂಬದ ಸಮೇತ ಮನೆಯಲ್ಲಿ ಕೂಡಿಹಾಕಿ ಹೊರಗಿನಿಂದ ಬೀಗ ಹಾಕಲಾಗುತ್ತಿತ್ತು. ಆ ಮನೆಯ ಬಾಗಿಲಿಗೆ ಕೆಂಪು ಬಣ್ಣದ ಶಿಲುಬೆ ಚಿಹ್ನೆ ಬಿಡಿಸಿ ಅದು ಸೋಂಕಿತರ ಮನೆ ಎಂಬುದರ ಸೂಚನೆಯನ್ನೂ ನೀಡಲಾಗುತ್ತಿತ್ತು. ಹೀಗಾಗಿ ಮನೆಯೊಳಗೆ ಒಬ್ಬ ಸದಸ್ಯನಿಂದ ಇನ್ನೊಬ್ಬನಿಗೆ ಹರಡಿ ಇಡೀ ಕುಟುಂಬವೇ ಪ್ಲೇಗ್ ರೋಗಕ್ಕೆ ಬಲಿಯಾಗುತ್ತಿತ್ತು. ಆ ಕಾಲವನ್ನು ದಾಟಿ ಮುರೂವರೆ ಶತಮಾನಗಳಷ್ಟು ಮುಂದೆ ಬಂದಿದ್ದೇವೆ. ನಾವು ಈಗ ಒಂದು ಸಾಕ್ರಾಮಿಕ ರೋಗದ ಶಂಕಿತರನ್ನು ನಡೆಸಿಕೊಳ್ಳುತ್ತಿರುವ ರೀತಿಗೂ, ಅಂದಿನ ರೀತಿಗೂ ವ್ಯತ್ಯಾಸವಿಲ್ಲ ಎಂದರೆ ವಿಪರ್ಯಾಸವೇ ಅಲ್ಲವೇ?

(ಬೆಂಗಳೂರಿನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತ್ತಿರುವ ಚೈತ್ರಿಕಾ ನಾಯ್ಕ ಹರ್ಗಿ, ಉತ್ತರಕನ್ನಡದ ಸಿದ್ದಾಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಓದಿದ್ದಾರೆ. ಸಾಹಿತ್ಯ, ರಾಜಕೀಯ ಮತ್ತು ಸಮಕಾಲೀನ ಸಾಮಾಜಿಕ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರಗಳು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು