ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರ ಮತ್ತು ಪ್ರತಿರೋಧ

ಪ್ರಜಾಸತ್ತೆಗೆ ಇಂದು ಬಂದೊದಗಿರುವ ಪ್ರಕ್ಷುಬ್ಧತೆಯು ನಮ್ಮೆಲ್ಲರನ್ನೂ ಚಿಂತನೆಗೆ ಹಚ್ಚಬೇಕಿದೆ
Last Updated 23 ಫೆಬ್ರುವರಿ 2020, 20:08 IST
ಅಕ್ಷರ ಗಾತ್ರ

ಪ್ರಜಾತಂತ್ರವನ್ನು ಸರ್ವೇಸಾಮಾನ್ಯವಾಗಿ ನಾವು ರಾಜಕೀಯ ಪದ್ಧತಿ ಎಂದಷ್ಟೇ ನೋಡುತ್ತಿದ್ದೇವೆ. ಆದರೆ ಅದು ನಮ್ಮ ಬದುಕಿನ ಒಂದು ಮಾರ್ಗವೂ ಹೌದು ಎಂಬುದನ್ನು ನಾವು ತಿಳಿದಂತಿಲ್ಲ. ಈ ತಿಳಿವಿನ ಕೊರತೆಗೆ, ಪ್ರಾಯಶಃ ಪ್ರಜಾತಂತ್ರ ನಮ್ಮ ಪರಂಪರೆ- ಸಂಸ್ಕೃತಿಗಳ ಭಾಗವಾಗಿ ಹುಟ್ಟದೇ ಇರುವುದೂ ಒಂದು ಕಾರಣವಾಗಿದ್ದಿರಬಹುದು. ಅದೇನೇ ಇರಲಿ, ಪ್ರಜಾತಂತ್ರವು ಮನುಷ್ಯನ ಮೂಲಭೂತ ಸ್ವಭಾವವನ್ನು, ಆತನ ವಿದ್ಯಾ-ಬುದ್ಧಿಗಳನ್ನು ತಿದ್ದುವ ಮತ್ತು ತೀಡುವ ಪ್ರಕ್ರಿಯೆಯಲ್ಲೇ ತನ್ನ ಹೊಳಪನ್ನು ಉಜ್ವಲಗೊಳಿಸುವ ಸಂಕೀರ್ಣವಾದ ತತ್ತ್ವಜ್ಞಾನ. ಆದುದರಿಂದಲೇ ಅದರ ರಾಜಕೀಯ ಆಯಾಮವೂ ಸಹಜವಾಗಿಯೇ ಕ್ಲಿಷ್ಟವಾಗಿದೆ.

ಪ್ರಜಾತಂತ್ರವು ತನ್ನ ತಾತ್ವಿಕ ಜಿಜ್ಞಾಸೆಯಲ್ಲಿ, ಪೂರ್ವನಿಗದಿತವಾದ ಮತ್ತು ಸ್ವಯಂಸಿದ್ಧವಾದ ‘ಸತ್ಯ’ ಎಂಬುದಿಲ್ಲ; ಬದಲಾಗಿ ಸಾಮುದಾಯಿಕ ಸಮಾಲೋಚನೆ- ಸಂವಾದಗಳ ಮೂಲಕ ಸತ್ಯ ರೂಪುಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತದೆ. ಆ ಅರ್ಥದಲ್ಲಿ ಪ್ರಜಾತಂತ್ರವು ಸಮಾಲೋಚನೆಯಲ್ಲಿ ರೂಪುಗೊಳ್ಳುವ ಚಲನಶೀಲ ಸತ್ಯವನ್ನು ಪ್ರತಿನಿಧಿಸುತ್ತದೆ. ಅಂತಹ ಸತ್ಯವನ್ನು ಸಾಧಿಸಲು ಸಂವಿಧಾನ, ಸಂಸತ್ತು, ರಾಜಕೀಯ ಪಕ್ಷಗಳು, ಚುನಾವಣೆಗಳು, ನ್ಯಾಯಾಂಗ, ನಾಗರಿಕ ಸಮಾಜ ಮೊದಲಾದ ಸಂಘ-ಸಂಸ್ಥೆಗಳು ಒಂದು ಬಗೆಯ ಮೌಲಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಸಂಘ-ಸಂಸ್ಥೆಗಳ ಮುಖಾಂತರವೇ ಪ್ರಜಾತಂತ್ರವು ಜನಸಮುದಾಯಗಳಿಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಹಕ್ಕುಗಳಂಥ ಮೌಲ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ವಾತಾವರಣವನ್ನು ನಿರ್ಮಿಸುತ್ತದೆ.

ಪಾಶ್ಚಾತ್ಯ ಸಮಾಜಗಳ ಸಾಂಸ್ಕೃತಿಕ ಪರ್ಯಾವರಣದಲ್ಲಿ ರೂಪುಗೊಂಡ ಪ್ರಜಾತಂತ್ರವೆನ್ನುವ ತಾತ್ವಿಕ ವಿದ್ಯಮಾನಕ್ಕೆ ಸುದೀರ್ಘ ಇತಿಹಾಸವಿದೆ. ಅದು ಪ್ರಾಚೀನ ಗ್ರೀಕ್ ದೇಶದಲ್ಲಿ ಜನ್ಮತಳೆಯಿತಾದರೂ ಈಗ ನಾವು ಯಾವುದನ್ನು ಪ್ರಜಾತಂತ್ರವೆಂದು ಕರೆಯುತ್ತೇವೆಯೋ ಅದು ಆಧುನಿಕ ಯುರೋಪಿನಲ್ಲಿ ಮರುಹುಟ್ಟು ಪಡೆದ ರಾಜಕೀಯ ತತ್ತ್ವ. ಲಿಬರಲ್ ಪ್ರಜಾತಂತ್ರ, ಕ್ರಾಂತಿಕಾರಿ ಪ್ರಜಾತಂತ್ರ, ಸಾಮಾಜಿಕ ಪ್ರಜಾತಂತ್ರ, ವಿಚಾರಶೀಲ ಪ್ರಜಾತಂತ್ರ, ಸಮಾನತಾವಾದಿ ಪ್ರಜಾತಂತ್ರ ಎನ್ನುವ ಪ್ರಜಾತಂತ್ರದ ಅನೇಕ ಮಾದರಿಗಳು ನಮ್ಮ ಮುಂದಿವೆ.

ನಮ್ಮ ದೇಶ, ಪ್ರಜಾತಂತ್ರ ಎನ್ನುವ ಈ ಬಹುರೂಪಿ ವಿದ್ಯಮಾನವನ್ನು ತನ್ನ ದೀರ್ಘಕಾಲದ ಸ್ವಾತಂತ್ರ್ಯ ಹೋರಾಟದ ಮೂಲಕ ತನ್ನದಾಗಿಸಿಕೊಳ್ಳುವ ಪ್ರಯತ್ನ ನಡೆಸಿತ್ತು. ವಸಾಹತುಶಾಹಿಯ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಜಾತಂತ್ರ ಎನ್ನುವ ಮೌಲಿಕ ದೃಷ್ಟಿಕೋನ ವ್ಯಕ್ತವಾಗಿ ಕಾಣಿಸಿಕೊಳ್ಳದಿದ್ದರೂ ಆ ಕಾಲದ ನಮ್ಮ ನಾಯಕರು ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಬಹುತ್ವ ಮೊದಲಾದ ಪ್ರಜಾತಂತ್ರದ ಕೌಟುಂಬಿಕ ಮೌಲ್ಯಗಳನ್ನು ತಮ್ಮ ನಡೆ-ನುಡಿಗಳಲ್ಲಿ ಧರಿಸಿದ್ದರು. ಆದ್ದರಿಂದಲೇ ಸ್ವಾತಂತ್ರ್ಯ ಹೋರಾಟದ ಕೊನೆಯಲ್ಲಿ ಅಸ್ತಿತ್ವಕ್ಕೆ ಬಂದ ಭಾರತದ ಸಂವಿಧಾನವು ಈ ಮೇರು ಮೌಲ್ಯಗಳ ಪ್ರತಿಬಿಂಬವಾಗಿ ಕಾಣಿಸುತ್ತದೆ.

ಪ್ರಜಾತಂತ್ರಕ್ಕಿರುವ ಜಾಗತಿಕ ಹಿನ್ನೆಲೆ ಮತ್ತು ಪ್ರಜಾತಂತ್ರದ ಭಾರತೀಯ ರೂಪ ಕುರಿತಾದ ನಮ್ಮ ಈ ಜಿಜ್ಞಾಸೆಗೆ ಎರಡು ನಿರ್ದಿಷ್ಟ ಉದ್ದೇಶಗಳಿವೆ. ಒಂದು, ನಮ್ಮ ಇಂದಿನ ಕಾಲಘಟ್ಟದ ಪ್ರಜಾತಂತ್ರದ ಸಂದಿಗ್ಧವನ್ನು ಅರ್ಥಮಾಡಿಕೊಳ್ಳುವುದು. ಎರಡನೆಯದು, ಈ ಸಂದಿಗ್ಧಕ್ಕೆ ಕ್ರಿಯಾತ್ಮಕವಾಗಿ ಸ್ಪಂದಿಸುವ ನೆಲೆಯಿಂದ ಕೆಲವು ವಿಚಾರಗಳನ್ನು ಮುಂದಿಡುವುದು.

ಪ್ರಜಾತಂತ್ರ ಇಂದು ಭಾರತದಲ್ಲಷ್ಟೇ ಸಂಕಟ ಎದುರಿಸುತ್ತಿಲ್ಲ. ಜಗತ್ತಿನ ಎಲ್ಲ ಪ್ರಜಾತಾಂತ್ರಿಕ ದೇಶಗಳೂ ಒಂದಲ್ಲ ಒಂದು ರೀತಿಯ ಸಂಕಟ ಅನುಭವಿಸುತ್ತಿವೆ. ಜಾಗತೀಕರಣಎನ್ನುವ ನವಿರಾದ ನಾಮಧೇಯದ ಸಾಮ್ರಾಜ್ಯಶಾಹಿ ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಕೊಬ್ಬಿರುವ ಬಂಡವಾಳದ ಮೂಲಕ ವಿಶಿಷ್ಟ ಬಗೆಯ ಬಲಪಂಥೀಯ ಸಾಂಸ್ಕೃತಿಕ ರಾಷ್ಟ್ರೀಯತೆಯ ಮುಸುಕಿನಲ್ಲಿ ಪ್ರಜಾತಂತ್ರದ ಮೌಲ್ಯಗಳನ್ನು ಹಿಸುಕುತ್ತಿದೆ. ತತ್ಪರಿಣಾಮವಾಗಿ ಪ್ರಜಾತಂತ್ರದ ಹೆಸರಿನಲ್ಲಿ ಬಹುಸಂಖ್ಯಾಕತ್ವದ ದಬ್ಬಾಳಿಕೆ ನಡೆಯುತ್ತಿದೆ. ಪ್ರಜಾತಂತ್ರದ ಈ ಬಗೆಯ ಅವನತಿ ಎಲ್ಲ ಬಗೆಯ ಅಲ್ಪಸಂಖ್ಯಾಕತೆಯನ್ನು ಅನಾಥಗೊಳಿಸುವ, ಅಂಚಿನಲ್ಲಿರುವ ಜನಸಮುದಾಯಗಳನ್ನು ನಿರ್ನಾಮಗೊಳಿಸುವ ಸಂಕೇತಗಳನ್ನು ನೀಡುತ್ತಿದೆ.

ಭಾರತದ ಪ್ರಜಾತಂತ್ರದ ಪ್ರಸ್ತುತ ಸಂಕಟ ವಿಶ್ವದುದ್ದಕ್ಕೂ ಪ್ರಜಾತಾಂತ್ರಿಕ ಸಮಾಜಗಳು ಎದುರಿಸುತ್ತಿರುವ ಅವನತಿಯ ಜೊತೆಗೆ ಹೆಣೆದುಕೊಂಡಿದೆ. ಹೀಗಿದ್ದರೂ ಪ್ರಜಾತಂತ್ರಕ್ಕೆ ಭಾರತದ ಸಂದರ್ಭದಲ್ಲಿ ಬಂದಿರುವ ಸಂಕಟವನ್ನು ಭಾರತೀಯ ಸಮಾಜದ ನಿರ್ದಿಷ್ಟತೆ
ಯಲ್ಲಿಯೂ ಅರಿಯಬೇಕಿದೆ. ಕಳೆದ 73 ವರ್ಷಗಳ ಪ್ರಜಾತಂತ್ರದ ನಮ್ಮ ಪ್ರಯೋಗ ಮೇಲ್ನೋಟಕ್ಕೆ ಯಶಸ್ವಿ
ಯಾಗಿ ಕಂಡರೂ ಆಳವಾದ ವಿಪರ್ಯಾಸಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಇವುಗಳ ಬಗ್ಗೆ ಸ್ವತಂತ್ರ ಭಾರತದ ಮೊದಲ ತಲೆಮಾರಿನ ಅನೇಕ ನಾಯಕರಿಗೆ ಅರಿವಿತ್ತು. ಉದಾಹರಣೆಗೆ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಾಧಿಸಿದಾಗ ಮಾತ್ರ ರಾಜಕೀಯ ಪ್ರಜಾತಂತ್ರ ಪರಿಪೂರ್ಣವಾಗುತ್ತದೆ ಎಂದು ಬಿ.ಆರ್‌.ಅಂಬೇಡ್ಕರ್‌ ಪ್ರತಿಪಾದಿಸಿದರು. ಸಮಾಜವಾದಿ ನಾಯಕರಾದ ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್, ಭಾರತದ ಪ್ರಜಾತಂತ್ರವನ್ನು ಅಧಿಕಾರ ವಿಕೇಂದ್ರೀಕರಣದ ನೆಲೆಯಲ್ಲಿ ಮರುನಿರೂಪಿಸಬೇಕೆಂದರು.

ನಮ್ಮ ಮೊದಲ ತಲೆಮಾರಿನ ನಾಯಕತ್ವದ ಚಿಂತನಶೀಲತೆಯ ಹೊರತಾಗಿಯೂ ಈ ದೇಶದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳು ಹಂತಹಂತವಾಗಿ ಕಡೆಗಣಿಸಲ್ಪಟ್ಟಿವೆ. ಪ್ರಜಾತಂತ್ರದ ಯಶಸ್ವಿ ಕಾರ್ಯನಿರ್ವಹಣೆಗೆ ಅಗತ್ಯವಾದ ಸಂಘ-ಸಂಸ್ಥೆಗಳು ನಿರಂತರ ಅಪಮೌಲ್ಯಗಳಿಗೆ ಒಳಗಾಗಿವೆ. ಪ್ರಜಾತಂತ್ರ ಕುಸಿತದ ಭೀಕರ ಘಟ್ಟವನ್ನು ನಾವು 1970ರ ದಶಕದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕಂಡಿದ್ದೇವೆ. ಪ್ರಜಾತಂತ್ರದ ಉಳಿವಿಗೆ ಮುಖ್ಯವಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ರಾಜಕೀಯ ಪಕ್ಷಗಳ ಸಂಘಟನೆಯ ಸ್ವಾತಂತ್ರ್ಯವನ್ನು ತುರ್ತುಪರಿಸ್ಥಿತಿಯಲ್ಲಿ ನಿರ್ದಾಕ್ಷಿಣ್ಯವಾಗಿ ದಮನಿಸಲಾಯಿತು. ಅದಕ್ಕಿಂತಲೂ ಗಂಭೀರ ಮತ್ತು ವಿಷಮವಾದ ಸಂದರ್ಭ ಈಗ ನಮ್ಮ ಮುಂದಿದೆ. ಎಲ್ಲ ಬಗೆಯ ಭಿನ್ನಮತಗಳು, ಪ್ರತಿರೋಧ
ಗಳನ್ನು ದೇಶದ್ರೋಹ ಎಂದು ಬಗೆಯುವ ಇಂದಿನ ನಮ್ಮ ವ್ಯವಸ್ಥೆ, ಜಗತ್ತಿನ ಬೃಹತ್ ಪ್ರಜಾಸತ್ತಾತ್ಮಕ ದೇಶ ಎಂಬ ಕೀರ್ತಿಯನ್ನು ಪಡೆದ ರಾಷ್ಟ್ರದಲ್ಲಿರುವ ಪ್ರಜಾತಂತ್ರದ ಕೊರತೆಯನ್ನು ಸೂಚಿಸುತ್ತಿಲ್ಲವೇ?

ಜನಾಂಗೀಯ ದ್ವೇಷವನ್ನು ಹರಡುವ ನಮ್ಮ ರಾಜಕಾರಣಿಗಳ ಲಂಗು-ಲಗಾಮಿಲ್ಲದ ಭಾಷಣಗಳು, ಪೌರತ್ವ ತಿದ್ದುಪಡಿ ಕಾಯ್ದೆಗೆ ಪ್ರತಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ ಸಮುದಾಯವನ್ನು ಪ್ರಭುತ್ವ ದಮನಿಸಲು ಯತ್ನಿಸಿದ ರೀತಿ, ಎಲ್ಲ ಬಗೆಯ ಸದ್ದುಗಳನ್ನು ಅಡಗಿಸುವ ರಾಷ್ಟ್ರವಾದದ ಭೋರ್ಗರೆತವು ನಮ್ಮ ಹಿರಿಯರು ಕಷ್ಟಪಟ್ಟು ಗಳಿಸಿದ ಪ್ರಜಾತಂತ್ರ ಎಂಬ ಒಡವೆಯನ್ನು ಉಡಾಫೆಯಿಂದ ಕಾಲಕಸದಂತೆ ಭಾವಿಸಿದಂತಿದೆ.

ಇಂದು ನಮ್ಮ ಜಗತ್ತು ಮತ್ತು ದೇಶ ಎದುರಿಸುತ್ತಿರುವ ಪ್ರಜಾಸತ್ತೆಯ ಈ ಪ್ರಕ್ಷುಬ್ಧತೆ ನಮ್ಮೆಲ್ಲರನ್ನೂ ಆಳವಾದ ಚಿಂತನೆಗೆ ಹಚ್ಚಬೇಕಾಗಿದೆ. ಪ್ರಜಾತಂತ್ರ ಪ್ರತಿನಿಧಿಸುವ ಮುಕ್ತನೋಟದ ಸತ್ಯವನ್ನು ಪ್ರತಿಪಾದಿಸಬೇಕಾದರೆ ಬೌದ್ಧಿಕ ಅಭಿವ್ಯಕ್ತಿ ಸ್ವಾತಂತ್ರ್ಯ ಬಹುಮುಖ್ಯವಾದುದಾಗಿದೆ. ಸತ್ಯದ ಬಗೆಗಿನ ಯಾವುದೇ ಶಕ್ತಿಶಾಲಿ ದಾವೆಗಳನ್ನು ಪ್ರತಿದಾವೆಯ ಮೂಲಕ ಎದುರಿಸಲು ನಮಗೆ ಪ್ರಜಾತಂತ್ರದ ಚಿಂತನೆಯಲ್ಲಿರುವ ‘ಪ್ರತಿರೋಧ’ದ ಮಾದರಿ ಬಹುಮುಖ್ಯವಾದುದು. ಈ ಪ್ರತಿರೋಧ
ವನ್ನು ಸಾಮೂಹಿಕ ಶಕ್ತಿಯಾಗಿ ಮಾರ್ಪಡಿಸುವ ದಾರಿಗಳನ್ನು ನಾವು ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ಗಾಂಧೀಜಿ, ಲೋಹಿಯಾ ಮತ್ತು ಜೆ.ಪಿ ಅವರಿಂದ ನಾವು ಬಳುವಳಿಯಾಗಿ ಪಡೆದುಕೊಂಡ ನಾಗರಿಕ ಅಸಹಕಾರದ ಅಥವಾ ಸತ್ಯಾಗ್ರಹದ ಕಲ್ಪನೆಯನ್ನು ನಾವು ಭಾರತೀಯ ಪ್ರಜಾತಂತ್ರದ ಧ್ಯೇಯವಾಕ್ಯವನ್ನಾಗಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT