ಶುಕ್ರವಾರ, ಜುಲೈ 30, 2021
28 °C
ಬಲಿಷ್ಠ ಅರ್ಥವ್ಯವಸ್ಥೆ ಕಟ್ಟುವತ್ತ ಈಗ ನಾವು ಗಮನಹರಿಸಬೇಕಿದೆ

ವಿಶ್ಲೇಷಣೆ | ನೆಹರೂ ತಪ್ಪನ್ನು ಮೋದಿ ಕೂಡ ಮಾಡಿದರೇ?

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

prajavani

‘ಚೀನಾ ದೇಶವು ಭಾರತದ ಬೆನ್ನಿಗೆ ಚೂರಿ ಹಾಕಿದೆ’ ಎಂದು ಬಿಜೆಪಿಯ ವಕ್ತಾರರು ಟಿ.ವಿ. ವಾಹಿನಿಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಆಕ್ರೋಶದಿಂದ ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಮಹಾಬಲಿಪುರದಲ್ಲಿ ಸ್ನೇಹಪೂರ್ವಕವಾಗಿ ವರ್ತಿಸಿದ್ದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಮೋದಿ ಅವರಿಗೆ ದ್ರೋಹವೆಸಗಿದ್ದಾರೆ ಎಂದೂ ವಕ್ತಾರರು ಹೇಳುತ್ತಿದ್ದಾರೆ. ಚೀನೀಯರ ಆಕ್ರಮಣಕ್ಕೆ ಕಾರಣವೇನು ಎಂಬ ಬಗ್ಗೆ ಸ್ಥಿತಪ್ರಜ್ಞವಾಗಿ ಅವಲೋಕನ ನಡೆಸುವ ಬದಲು ಅವರು ಭ್ರಾಂತಿಗೆ ಒಳಗಾಗಿದ್ದಾರೆ.

ಅನುಭವ ಇಲ್ಲದ ಇಂಥವರು ಚೀನಾದಂತಹ ರಾಷ್ಟ್ರಗಳ ವಿಚಾರದಲ್ಲಿ ಸಲಹೆ ನೀಡುವುದು ರಾಷ್ಟ್ರೀಯ ಭದ್ರತೆಗೆ ಅಪಾಯ. 1962ರಲ್ಲಿ ಭಾರತದ ಮೇಲೆ ಚೀನಾ ಆಕ್ರಮಣ ನಡೆಸಬಹುದು ಎಂದು ಅರ್ಥ ಮಾಡಿಕೊಳ್ಳುವಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಸೋತಿದ್ದಂತೆಯೇ, ಈಗ ಆಗಿರುವುದು ಮೋದಿ ಅವರ ಸೋಲು ಎಂದು ಪತ್ರಕರ್ತ ಹರೀಶ್ ಖಾರೆ ಹೇಳಿದ್ದಾರೆ.

ಇದನ್ನೂ ಓದಿ: ಆಗ ನೆಹರು-ಮಾವೊ, ಈಗ ಷಿನ್‌ಪಿಂಗ್-ಮೋದಿ: ಎಷ್ಟೆಲ್ಲಾ ಸಾಮ್ಯ, ಏನೆಲ್ಲಾ ಭಿನ್ನ

ಭಾರತದ ಇಂದಿನ ಎಲ್ಲ ಸಮಸ್ಯೆಗಳಿಗೆ ನೆಹರೂ ಕಾರಣ ಎಂದು ಮೋದಿ ಮತ್ತು ಅವರ ಪಕ್ಷದವರು ವಿಪರೀತದ ಆರೋಪ ಮಾಡುವುದಿದೆ. ಆದರೆ, ನೆಹರೂ ಅವರು ಹಿಂದಿ–ಚೀನಿ ಭಾಯಿ ಭಾಯಿ ಎನ್ನುವ ಮಾತಿನ ಅಲೆಯಲ್ಲಿ ತೇಲಿಹೋಗಿದ್ದು ನಿಜ. 1962ರಲ್ಲಿ ಭಾರತದ ಸೇನೆ ಯುದ್ಧಸನ್ನದ್ಧ ಆಗಿರಲಿಲ್ಲ, ಚೀನಾ ಬಗ್ಗೆ ಸೇನೆಗೆ ಅನುಮಾನವೂ ಇರಲಿಲ್ಲ. ಹೀಗಿದ್ದಾಗ ಯುದ್ಧ ಎದುರಾಯಿತು. ಭಾರತವು ತನ್ನ ನೆಲವನ್ನು ಕಳೆದುಕೊಳ್ಳಬೇಕಾಯಿತು, ಸೈನಿಕರು ಪ್ರಾಣ ತೆರಬೇಕಾಯಿತು. ಈಗಿನಂತೆಯೇ, ಆಗ ಕೂಡ ನಮ್ಮ ದೇಶದ ಜನ ‘ಚೀನಾ ಮೋಸಗಾರ ದೇಶ’ ಎಂದು ಭಾವಿಸಿದರು.

1962ರಲ್ಲಿ ಆಗಿದ್ದಕ್ಕೂ ಈಗಿನದ್ದಕ್ಕೂ ಹಲವು ಸಾಮ್ಯಗಳು ಇವೆ. ನೆಹರೂ ಅವರು ಆಕ್ರಮಣಕಾರಿ (Forward policy) ನೀತಿಯನ್ನು ಅನುಸರಿಸಿದರು. ಮಕ್‌ಮೊಹನ್‌ ರೇಖೆಯನ್ನು ಅಧಿಕೃತ ಗಡಿರೇಖೆ ಎಂದು ಭಾರತ ಮತ್ತು ಟಿಬೆಟ್ ಒಪ್ಪಿಕೊಂಡಿದ್ದವು. ಭಾರತದ ಸೇನೆಯು ಮಕ್‌ಮೊಹನ್ ರೇಖೆಯ ಉತ್ತರಕ್ಕೆ ಇದ್ದ ಚೀನಿ ಶಿಬಿರಗಳ ಬಳಿ ಶೋಧ ಕಾರ್ಯಗಳನ್ನು ನಡೆಸುತ್ತಿತ್ತು. ಇತಿಹಾಸಕಾರ ಕೂಡ ಆಗಿದ್ದ ನೆಹರೂ, ಪುರಾತನ ಗಡಿರೇಖೆಯು ಮಕ್‌ಮೊಹನ್ ರೇಖೆಯ ಉತ್ತರದಲ್ಲಿ ಕಣಿವೆ, ಶಿಖರಗಳ ನಡುವೆ ಸಾಗಿದೆ ಎಂದು ನಂಬಿದ್ದರು.

ನೆಹರೂ ಅವರು ದಲೈಲಾಮಾ ಮತ್ತು ಅವರ ಬೆಂಬಲಿಗರಿಗೆ ಭಾರತದಲ್ಲಿ ಆಶ್ರಯ ನೀಡಿದರು. ಟಿಬೆಟಿಯನ್ನರ ನಿಲುವುಗಳನ್ನು ಬಹಿರಂಗವಾಗಿ ಬೆಂಬಲಿಸುವ ಮೂಲಕ ಚೀನೀಯರ ಕೋಪ ಹೆಚ್ಚಿಸಿದರು. ರಹಸ್ಯವಾದ ಟಿಬೆಟ್ ಗಡಿ ಪಡೆಯನ್ನು ಕಟ್ಟಲು ನೆಹರೂ ಅನುಮತಿ ನೀಡಿದರು. ಈ ಪಡೆಯು ಟಿಬೆಟಿಯನ್ನರನ್ನು ನೇಮಿಸಿಕೊಂಡು, ಗಡಿಗಳಲ್ಲಿ ಕಣ್ಗಾವಲು ಇರಿಸುವ ಕೆಲಸ ಮಾಡುತ್ತಿತ್ತು. ಭಾರತದ ಈ ಕ್ರಿಯೆಗಳನ್ನು ಟಿಬೆಟ್‌ನಲ್ಲಿನ ತನ್ನ ಆಡಳಿತವನ್ನು ಬುಡಮೇಲುಗೊಳಿಸುವ ಪ್ರಯತ್ನವೆಂದು ಚೀನಾ ಭಾವಿಸಿತು.

ಇದನ್ನೂ ಓದಿ: ಸಂಕಲನ | ಚೀನಾ ಗಡಿ ಸಂಘರ್ಷ: ಈವರೆಗೆ ಏನೆಲ್ಲಾ ಆಯ್ತು? ತಂತ್ರ ಪ್ರತಿತಂತ್ರಗಳ ನೋಟ

ನೆಹರೂ ಇವೆಲ್ಲವನ್ನೂ ಮಾಡುತ್ತಿದ್ದಾಗ, ರಕ್ಷಣಾ ಬಜೆಟ್ ಹೆಚ್ಚಿಸಲು ಒಪ್ಪದಿದ್ದುದು ಅರ್ಥವಾಗದ್ದು. ಮಿಲಿಟರಿ ಕಮಾಂಡರ್‌ಗಳಲ್ಲಿ ಹಲವರು ಸಲಹೆ ನೀಡಿದರೂ ಯುದ್ಧಸನ್ನದ್ಧವಾಗಿರಲು ನೆಹರೂ ಒಪ್ಪಲಿಲ್ಲ, ವಾಸ್ತವವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಬೃಹತ್ ಅಣೆಕಟ್ಟುಗಳು, ಉಕ್ಕಿನ ಕಾರ್ಖಾನೆಗಳನ್ನು ನಿರ್ಮಿಸುವತ್ತ ಹೆಚ್ಚಿನ ಗಮನ ನೀಡಿದ್ದ ನೆಹರೂ, ಚೀನಾದ ಬೆದರಿಕೆಯನ್ನು ಉಪೇಕ್ಷಿಸಿದ್ದರು. 1961ರಲ್ಲಿ ಗೋವಾ ರಾಜ್ಯವನ್ನು ಪೋರ್ಚುಗೀಸರಿಂದ ಮುಕ್ತವಾಗಿಸಲು ಭಾರತ ಸೇನೆಯನ್ನು ಕಳಿಸಿದಾಗ, ಸೇನೆಯು ಪೋರ್ಚುಗೀಸರನ್ನು ಎತ್ತಂಗಡಿ ಮಾಡಿದಾಗ, ‘ಅಕ್ಸಾಯ್‌ ಚಿನ್‌ನಿಂದ ಚೀನಾ ತಾನಾಗಿಯೇ ವಾಪಸ್ ಹೋಗದಿದ್ದರೆ ಆ ದೇಶಕ್ಕೂ ಇದೇ ರೀತಿಯ ಪಾಠ ಕಲಿಸಲಾಗುವುದು’ ಎಂದು ಅಂದಿನ ಗೃಹ ಸಚಿವ ಲಾಲ್ ಬಹದ್ದೂರ್ ಶಾಸ್ತ್ರಿ ಆದಿಯಾಗಿ ಕಾಂಗ್ರೆಸ್ಸಿನ ಹಲವು ಮುಖಂಡರು ಸಂಸತ್ತಿನಲ್ಲಿ ಜಂಭ ಕೊಚ್ಚಿಕೊಂಡಿದ್ದರು. ನೆಹರೂ ಅವರು ಜೌ ಎನ್‌ಲಾಯ್‌ ಜೊತೆ ಮಾತುಕತೆ ನಡೆಸುತ್ತ, ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯತ್ನಿಸುತ್ತ ಇದ್ದಾಗ, ಟಿಬೆಟ್ಟನ್ನು ಚೀನಾದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾವೊಗೆ ಸಿಟ್ಟು ತರಿಸಿತು. ನೆಹರೂ ಅವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾವೊ ಭಾವಿಸಿದರು.

ರಷ್ಯಾ ಮತ್ತು ಅಮೆರಿಕದಿಂದ ಏಕಾಂಗಿಯಾಗುತ್ತಿದ್ದ ಚೀನಾ, ‘ಭಾರತದ ಸಾಮ್ರಾಜ್ಯಶಾಹಿ ವರ್ತನೆ’ ಎಂದು ತಾನು ಭಾವಿಸಿದ್ದನ್ನು ತಡೆಯಲು ಬೃಹತ್ ದಾಳಿಗೆ ಸಂಪನ್ಮೂಲ ಒಗ್ಗೂಡಿಸಿತು. 1962ರಲ್ಲಿ ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ದಾಳಿ ನಡೆಸಿತು. ನೆಹರೂ ಬೆಂಬಲಿಗರು ಆಗಿನ ಸಂದರ್ಭಕ್ಕೆ ಹೊಸದಾಗಿದ್ದ ವಿಶ್ವದ ವ್ಯವಸ್ಥೆಯ ವಿಚಾರದಲ್ಲಿ ವಾಸ್ತವವನ್ನು ಅರ್ಥಮಾಡಿಕೊಂಡಿರಲಿಲ್ಲ.

1962ರ ಎಡವಟ್ಟಿಗೆ ನೆಹರೂ ಅವರನ್ನು ನಿರಂತರವಾಗಿ ಹೊಣೆ ಮಾಡುತ್ತಿದ್ದ ಇಂದಿನ ಸರ್ಕಾರವು ಅವಕಾಶ ಸಿಕ್ಕಾಗಲೆಲ್ಲ ಬಲಿಷ್ಠ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಲೇ ನೆಹರೂ ಮಾಡಿದ ತಪ್ಪನ್ನೇ ತಾನೂ ಮಾಡಿದ್ದು ಏಕೆ?

ನೆಹರೂ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲಿಪ್ತ ನೀತಿಯನ್ನು ಪ್ರತಿಪಾದಿಸುತ್ತಿದ್ದರು. 1962ಕ್ಕೂ ಮೊದಲು ಜೌ ಎನ್‌ಲಾಯ್‌ ಜೊತೆ ಪಂಚಶೀಲ ತತ್ವಗಳನ್ನು ಹೇಳುತ್ತಿದ್ದರು. ಆದರೆ, ಅಮೆರಿಕ ಮತ್ತು ರಷ್ಯಾ ಕಡೆಯಿಂದ ಬೆದರಿಕೆ ಎದುರಿಸಿದ್ದ ಚೀನಾ ತನ್ನ ಮಿಲಿಟರಿ ಉದ್ದೇಶವನ್ನು ಸ್ಪಷ್ಟಪಡಿಸಿತ್ತು. ‘ನಾವು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳನ್ನು, ಆರ್ಟಿಲ್ಲರಿಗಳನ್ನು ಹೊಂದಲಿದ್ದೇವೆ. ಅಷ್ಟೇ ಅಲ್ಲ; ಅಣು ಬಾಂಬನ್ನೂ ಹೊಂದಲಿದ್ದೇವೆ’ ಎಂದು 1956ರಲ್ಲಿ ಮಾವೊ ಹೇಳಿದ್ದರು.

ನೆಹರೂ ಮತ್ತು ಅವರ ಬಳಗ, ಇಂದಿನ ಸರ್ಕಾರ ಮತ್ತು ಅದರ ಸಲಹೆಗಾರರು ಚೀನಾವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಸೋತರು. ಚೀನಾ ನಡೆಸುತ್ತಿರುವ ಸೇನಾ ಜಮಾವಣೆ, ಮದ್ದುಗುಂಡುಗಳ ಸಂಗ್ರಹ ಕುರಿತು ಹಲವರು ಎಚ್ಚರಿಸಿದ್ದರೂ ಹಿಂದಿನ ಯುಪಿಎ ಸರ್ಕಾರ ಮತ್ತು ಇಂದಿನ ಎನ್‌ಡಿಎ ಸರ್ಕಾರ ನಿರ್ಲಕ್ಷ್ಯ ವಹಿಸಿದವು.

ಇವೆಲ್ಲವುಗಳಲ್ಲಿ ಎರಡು ಆಯಾಮಗಳಿವೆ. ವಿವೇಕಯುತ ರಾಜತಾಂತ್ರಿಕ ನೀತಿಗಳನ್ನು, ಮಿಲಿಟರಿ ಸಾಮರ್ಥ್ಯವೃದ್ಧಿಯನ್ನು ಏಕಕಾಲದಲ್ಲಿ ನಡೆಸಬೇಕು. ನೆಹರೂ ಮಾಡಿದ ತಪ್ಪನ್ನು ಮೋದಿ ಅವರೂ ಮಾಡಿದರೇ? ಲೆಫ್ಟಿನೆಂಟ್ ಜನರಲ್ ಎಚ್.ಎಸ್. ಪನಾಗ್ ಅವರಂತಹ ನಿವೃತ್ತ ಸೇನಾಧಿಕಾರಿಗಳು, ಬ್ರಹ್ಮ ಚೆಲಾನಿ ಅವರಂತಹ ತಜ್ಞರು ಹೌದು ಎನ್ನುತ್ತಿದ್ದಾರೆ.

ಮೋದಿ ಅವರು ಚೀನಾ ಜೊತೆ ಆರಂಭಿಸಿದ ರಾಜತಾಂತ್ರಿಕ ಉಪಕ್ರಮಗಳು ದಿಟ್ಟವಾಗಿದ್ದವು, ಪ್ರಶಂಸಾರ್ಹವಾಗಿದ್ದವು. ಆದರೆ, ವಾಸ್ತವ ಗಡಿ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾ ನಡೆಸಿದ ಸೇನಾ ಜಮಾವಣೆ ಬಗ್ಗೆಯೂ ಭಾರತ ಜಾಗರೂಕವಾಗಿರ ಬೇಕಿತ್ತು. ಅವರ ಕ್ರಮಗಳಿಗೆ ಪ್ರತಿಯಾಗಿ ಭಾರತವೂ ಹೆಜ್ಜೆ ಇರಿಸಬೇಕಿತ್ತು.

ಎಂ.ಕೆ. ನಾರಾಯಣನ್ ಅವರು ಯುಪಿಎ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾ ಗಿದ್ದವರು. ಇವರು 2010ರಿಂದ 2015ರವರೆಗೆ ನಡೆದ ಗಡಿ ವಿವಾದದ ಮಾತುಕತೆಗಳಲ್ಲಿ ವಿಶೇಷ ಪ್ರತಿನಿಧಿಯಾಗಿ ಪಾಲ್ಗೊಂಡವರು. ‘ಭಾರತ ಮತ್ತು ಚೀನಾ ನಡುವಿನ ಎಲ್ಲ ಗಡಿ ಒಪ್ಪಂದಗಳೂ, ಎರಡೂ ದೇಶಗಳು ತಟಸ್ಥ ನಿಲುವು ಹೊಂದಿರುತ್ತವೆ ಎಂಬ ನೆಲೆಯನ್ನು ಆಧರಿಸಿವೆ’ ಎಂದು ನಾರಾಯಣನ್ ಹೇಳಿದ್ದಾರೆ. ಅಂದರೆ, ಚೀನಾ ಜೊತೆಗಿನ ಗಡಿ ವ್ಯಾಜ್ಯವನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು ಎಂದಾದರೆ ಭಾರತವು, ಚೀನಾದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ವಿಚಾರಗಳಲ್ಲಿ ಅಮೆರಿಕದ ಜೊತೆ ಗುರುತಿಸಿಕೊಳ್ಳಲಾಗದು. ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಓಲೈಸಲು ಮುಂದಾದರು. ಅಮೆರಿಕ–ಚೀನಾ ಹಿತಾಸಕ್ತಿ ಸಂಘರ್ಷಗಳಲ್ಲಿ ಅಮೆರಿಕದ ಜೊತೆ ನಿಂತರು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ವಿಸ್ತರಣಾವಾದಿ ಚಟುವಟಿಕೆಗಳನ್ನು ಹಿಮ್ಮೆಟ್ಟಿಸುವ ಉದ್ದೇಶದ ಕ್ವಾಡ್ (ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತ) ಗುಂಪಿನ ಜೊತೆ ಗುರುತಿಸಿಕೊಂಡರು.

‘ತೋಳದ ಜೊತೆಯೂ ಸ್ನೇಹ, ನರಿಯ ಸಂಗಡವೂ ಸಂಬಂಧ’ ಎಂಬ ಧೋರಣೆಯಂತೆ ಇದು ಷಿ ಅವರಿಗೆ ಕಾಣಿಸಿತು. ಗಡಿ ವಿವಾದ ಇತ್ಯರ್ಥಕ್ಕೆ ಯತ್ನಿಸುತ್ತಲೇ ಅಮೆರಿಕದ ಪರ ನಿಲುವು ತಾಳುವುದು ಷಿ ಕೋಪಕ್ಕೆ ಕಾರಣವಾಯಿತು. ಅದೇನೇ ಇರಲಿ, ನಾವು ಈಗ ಬಲಿಷ್ಠ ಅರ್ಥವ್ಯವಸ್ಥೆಯನ್ನು ಕಟ್ಟುವತ್ತ ಗಮನ ನೀಡಬೇಕು; ಏಕೆಂದರೆ, ಬಲಿಷ್ಠ ಮಿಲಿಟರಿ ಕಟ್ಟಲು ಅದು ಅಗತ್ಯ!

ಲೇಖಕ: ಚೀನಾ ಜೊತೆಗಿನ ಚೋಲಾ ಗಡಿಯಲ್ಲಿ ಯೋಧನಾಗಿ ಕೆಲಸ ಮಾಡಿದವರು, ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡಿದ್ದವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು