ಮಂಗಳವಾರ, ಆಗಸ್ಟ್ 20, 2019
21 °C
ಆಹಾರದ ಆಯ್ಕೆಗೂ ಅದನ್ನು ಪೂರೈಸುವ ವ್ಯಕ್ತಿಯ ಆಯ್ಕೆಗೂ ವ್ಯತ್ಯಾಸವಿಲ್ಲವೇ?

ಆಹಾರ ಧರ್ಮ ಮತ್ತು ವ್ಯಾಪಾರ ಧರ್ಮ

Published:
Updated:
Prajavani

ಯು.ಆರ್. ಅನಂತಮೂರ್ತಿಯವರ ‘ಪ್ರಕೃತಿ’ ಎಂಬ ಸಣ್ಣಕತೆಯಲ್ಲಿ ವ್ಯವಸಾಯವನ್ನೇ ನಂಬಿಕೊಂಡಿದ್ದ ಸಂಕಪ್ಪಯ್ಯನೆಂಬ ವಯೋವೃದ್ಧನ ಪಾತ್ರವೊಂದಿದೆ. ಈ ಸಂಕಪ್ಪಯ್ಯನವರ ಮಗ ವ್ಯವಸಾಯ ಬಿಟ್ಟು ಪಟ್ಟಣಕ್ಕೆ ಹೋಗಿ ಹೋಟೆಲ್ ವ್ಯಾಪಾರ ನಡೆಸುವ ಇಚ್ಛೆ ವ್ಯಕ್ತಪಡಿಸಿ ದಾಗ, ಸಂಪ್ರದಾಯಸ್ಥರಾದ ಸಂಕಪ್ಪಯ್ಯ ಹೌಹಾರುತ್ತಾರೆ.

‘ತಿನ್ನುವ ಅನ್ನವನ್ನು ಯಾರಾದರೂ ಮಾರಾಟ ಮಾಡು ತ್ತಾರೆಯೇ? ಅನ್ನ ವಿಕ್ರಯಕ್ಕಿಂತ ಮಿಗಿಲಿನ ಪಾಪವುಂಟೇ’ ಎನ್ನುತ್ತ ಮಗನ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ಕೊನೆಗೆ ಮಗ, ಅಪ್ಪನ ಮಾತು ಕೇಳದೆ ಪಟ್ಟಣ ಸೇರಿ ತನ್ನ ಭವಿಷ್ಯ ಕಟ್ಟಿಕೊಳ್ಳುತ್ತಾನೆ. ಇತ್ತ ಸಂಕಪ್ಪಯ್ಯನಿಗೆ ತಮ್ಮ ಜಮೀನು, ಕುಟುಂಬದ ಆಗುಹೋಗುಗಳನ್ನು ನಿಯಂತ್ರಿಸಲಾಗದಿದ್ದರೂ- ಅನ್ಯರ ದೃಷ್ಟಿಗೆ ಹಟಮಾರಿಯಂತೆ ಕಾಣಿಸುತ್ತಿದ್ದ- ತಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಸಫಲರಾಗುತ್ತಾರೆ.

ಮನುಷ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಶಿಕ್ಷಣ, ಸೇವೆ, ಕಲೆ, ಸಾಹಿತ್ಯ, ಅಧ್ಯಾತ್ಮ, ರಾಜಕಾರಣ ಮುಂತಾದ ಎಲ್ಲ ಚಟುವಟಿಕೆಗಳ ಹಿಂದೆಯೂ ವ್ಯಾಪಾರದ ಒಂದು ಆಯಾಮ ಇದ್ದೇ ಇರುತ್ತದೆ. ಸಂಪ್ರದಾಯಸ್ಥರು ಎನಿಸಿಕೊಂಡ ಕೆಲವರು ಈ ಆಯಾಮವನ್ನು ಕಾಣುವ ಸೂಕ್ಷ್ಮತೆಯನ್ನಾಗಲೀ ಪ್ರಾಮಾಣಿಕತೆಯನ್ನಾಗಲೀ ತೋರಿಸದಿರುವುದು ದುರದೃಷ್ಟಕರ.

ಇಂದು ಅನ್ನ ವಿಕ್ರಯ ಬರೀ ವ್ಯಾಪಾರವಾಗಿ ಉಳಿದಿಲ್ಲ, ಅದೇ ಇಂದು ಧರ್ಮವಾಗಿದೆ. ಹಾಗೆಂದು ಜೊಮ್ಯಾಟೊ ಕಂಪನಿ ತನ್ನ ಒಬ್ಬ ಗ್ರಾಹಕನಿಗೆ ಕಿವಿಮಾತು ಹೇಳಿದೆ. ಡೆಲಿವರಿ ಹುಡುಗ ಹಿಂದೂ ಅಲ್ಲ ಎಂಬ ಕಾರಣಕ್ಕೆ ಅಮಿತ್ ಶುಕ್ಲಾ ಎಂಬ ಗ್ರಾಹಕ ಆಹಾರದ ಪೊಟ್ಟಣವನ್ನು ಸ್ವೀಕರಿಸದೆ ಹಿಂದಕ್ಕೆ ಕಳುಹಿಸಿದ್ದರು. ಬಳಿಕ ಕಂಪನಿಯನ್ನು ಸಂಪರ್ಕಿಸಿ ಹಣವನ್ನು ಮರುಪಾವತಿಸಬೇಕೆಂದು ಕೋರಿದರು. ಕಂಪನಿಯು ಮರುಪಾವತಿಯನ್ನು ನಿರಾಕರಿಸಿತಲ್ಲದೆ ‘ಆಹಾರಕ್ಕೆ ಧರ್ಮವಿಲ್ಲ, ಆಹಾರವೇ ಧರ್ಮ’ ಎಂದು ಅವರಿಗೆ ಕಿವಿಮಾತು ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸಿತು. ಜಮ್ಮು ಮತ್ತು ಕಾಶ್ಮೀರದ ಒಬ್ಬ ಮಾಜಿ ಮುಖ್ಯಮಂತ್ರಿಯನ್ನೂ ಒಳಗೊಂಡಂತೆ ದೇಶದ ಹಲವು ಪ್ರಸಿದ್ಧ ವ್ಯಕ್ತಿಗಳು ಕಂಪನಿಯ ಈ ನಿಲುವನ್ನು ಮೆಚ್ಚಿ ಬೆಂಬಲಿಸಿದ್ದರು.

ಆಹಾರದ ಪೊಟ್ಟಣವನ್ನು ನಿರಾಕರಿಸಿದ ಅಮಿತ್ ಶುಕ್ಲಾ ‘ಶ್ರಾವಣ ಮಾಸ ಪ್ರಾರಂಭವಾದ ಕಾರಣ ನಾನು ಅನ್ಯಧರ್ಮೀಯರಿಂದ ಆಹಾರ ಸ್ವೀಕರಿಸಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಶ್ರಾವಣ ಮಾಸಕ್ಕೂ ಈ ಸ್ಪಷ್ಟನೆಗೂ ಎತ್ತಣಿಂದೆತ್ತ ಸಂಬಂಧ? (ಹಾಗೆ ನೋಡಿದರೆ ಶ್ರಾವಣ ಮಾಸ ಜಿಹ್ವೇಂದ್ರಿಯಕ್ಕೆ ಸಂಬಂಧಿಸಿದ ಮಾಸವಲ್ಲ. ಶ್ರಾವಣ ಎಂಬ ಪದ ಶ್ರವಣೇಂದ್ರಿಯಕ್ಕೆ, ಕಿವಿಗೆ ಸಂಬಂಧಿಸಿದ್ದು. ಶ್ರಾವಣ ಮಾಸದಲ್ಲಿ ಪುರಾಣ ಪುಣ್ಯಕತೆ ಗಳನ್ನು ಕೇಳುತ್ತ ಕಾಲಕ್ಷೇಪ ಮಾಡಬೇಕೆಂದು ನಮ್ಮ ಜನ ನಂಬುತ್ತಾರೆ). ಒಂದು ವೇಳೆ ಶುಕ್ಲಾ ಹೇಳುವಂಥ ಶಾಸ್ತ್ರನಿಯಮವಿದ್ದರೂ ಅದು ಸರಿಯೇ ಅಲ್ಲವೇ ಎಂದು ನಿರ್ಧರಿಸುವ ವಿವೇಚನೆ ಬೇಡವೇ? ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬ ಕವಿವಾಣಿ ಇಲ್ಲವೇ! ಮುಂದೊಂದು ದಿನ ಎದೆಯ ದನಿ ಬತ್ತಿಹೋಗುವ ಕಾಲವೂ ಬರಬಹುದು ಎಂಬ ಕಲ್ಪನೆ ಪ್ರಾಯಶಃ ಆ ಸಾಲುಗಳನ್ನು ಬರೆದ ಕವಿಗೆ ಆಗ ಮೂಡಿರಲಿಲ್ಲವೇನೋ!

ಇದು, ಒಬ್ಬ ಅಮಿತ್ ಶುಕ್ಲಾ ಅವರ ಒಂದು ಪ್ರತ್ಯೇಕ ಪ್ರಕರಣವಲ್ಲ. ಅಮಿತ್ ಶುಕ್ಲಾ ಚಹರೆಯುಳ್ಳ ಲೆಕ್ಕವಿಲ್ಲದಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಈ ಪ್ರಕರಣ ಬೆಳಕಿಗೆ ಬಂದಾಗ ಅವರ ನಿಲುವನ್ನು ಖಂಡಿಸಿ ದವರಿಗಿಂತ ಬೆಂಬಲಿಸಿದವರ ಸಂಖ್ಯೆಯೇ ಹೆಚ್ಚಿತ್ತು. ಇವರು ಜೊಮ್ಯಾಟೊ ಆ್ಯಪ್‍ಗೆ ಕಳಪೆ ಗುಣಮಟ್ಟದ ಸ್ಟಾರ್ ಮೌಲ್ಯ ನೀಡುವ, ಆ್ಯಪ್‍ ಅನ್ನು ಅನ್‍ಇನ್‍ಸ್ಟಾಲ್ ಮಾಡುವ ಅಭಿಯಾನವನ್ನೇ ನಡೆಸಿದರು. ಕಂಪನಿ ತಾನು ಪೂರೈಸುವ ಆಹಾರ ಪೊಟ್ಟಣಗಳ ಮೇಲೆ ಜೈನ್, ಹಲಾಲ್, ಕೋಶರ್, ನವರತ್ನ ಥಾಲಿ ಮುಂತಾದ ಧರ್ಮ ಸಂಬಂಧಿ ವಿವರಗಳನ್ನು ನಮೂದಿಸುತ್ತದೆ. ‘ಆಹಾರಕ್ಕೆ ಧರ್ಮವಿಲ್ಲ’ ಎಂದು ಘೋಷಿಸುವ ಕಂಪನಿಯು ಹೀಗೆ ನಮೂದಿಸಬಹುದೇ ಎಂದು ಟೀಕಿಸಿದರು.

ಆಹಾರದ ಆಯ್ಕೆ ಮಾಡುವುದಕ್ಕೂ ಆಹಾರ ಸರಬ ರಾಜು ಮಾಡುವ ವ್ಯಕ್ತಿಯ ಜಾತಿ, ಧರ್ಮದ ಆಯ್ಕೆ ಮಾಡುವುದಕ್ಕೂ ವ್ಯತ್ಯಾಸವಿಲ್ಲವೇ? ಇಂಗು, ತೆಂಗು, ಈರುಳ್ಳಿ ಅಥವಾ ಬೆಳ್ಳುಳ್ಳಿ ಬೆರೆತ, ಬೆರೆತಿರದ ಆಹಾರವೇ ಬೇಕು ಎಂದು ಆಗ್ರಹಿಸುವ ಪೂರ್ಣ ಸ್ವಾತಂತ್ರ್ಯಗ್ರಾಹಕನಿಗಿರುತ್ತದೆ. ಆದರೆ ಆಹಾರ ಪೂರೈಸುವವನು ಇಂಥದ್ದೇ ಜಾತಿಯವನಾಗಿರಬೇಕು ಎಂಬ ಸಾರ್ವಜನಿಕ ಆಗ್ರಹಕ್ಕೆ ಸಮರ್ಥನೆ ಇರಲಾರದು. ಇಷ್ಟು ಪ್ರಾಥಮಿಕ ಸಂಗತಿಯನ್ನು ವಿವೇಚಿಸಲಾರದವರ ವರ್ತನೆ ಏನನ್ನು ಸೂಚಿಸುತ್ತದೆ? ಒಂದು ಕುಂಟು ನೆವ ದೊರೆತರೂ ಸಾಕು, ಇವರು ಅನ್ಯಧರ್ಮೀಯರ ಮೇಲಿನ ತಮ್ಮ ಅಸಹಿಷ್ಣುತೆಯನ್ನು ಕಾರಿಕೊಳ್ಳಲು ಕಾಯುತ್ತಿರುತ್ತಾರೆ ಎಂಬುದನ್ನಲ್ಲವೇ?

ಇಂಥದ್ದನ್ನೆಲ್ಲ ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಸದಾ ಹೊಂಚು ಹಾಕುತ್ತಿರುತ್ತಾರೆ. ಹಿಂದೂ-ಮುಸ್ಲಿಂ ಉದ್ಯೋಗಿಗಳಿಂದ ದನ-ಹಂದಿ ಮಾಂಸದ ಆಹಾರ ವಿಲೇವಾರಿ ಮಾಡಿಸಬಾರದೆಂದು ಸ್ಥಳೀಯ ಪುಢಾರಿಗಳು, ಇಲ್ಲದ ಹೊಸ ವಿವಾದವನ್ನು ಎಬ್ಬಿಸಿ ಇದ್ದಕ್ಕಿದ್ದಂತೆ ಘೋಷಣೆ ಕೂಗಲಾರಂಭಿಸಿದ್ದಾರೆ. ಇಂದಿನ ಕೆಲವು ಸ್ಟಾರ್ಟ್‌ಅಪ್ ಕಂಪನಿಗಳು ಡೆಲಿವರಿ ಬಾಯ್‍ಗಳಿಗೆ ಸೂಕ್ತ ಉದ್ಯೋಗ ಭದ್ರತೆ ನೀಡುವುದಿಲ್ಲ, ಗುತ್ತಿಗೆ ಆಧಾರದಲ್ಲಿ ನಿಯೋಜಿಸಿಕೊಂಡು ಒಂದು ಡೆಲಿವರಿಗೆ ಇಂತಿಷ್ಟು ಹಣ ನೀಡಿ ಕೈತೊಳೆದುಕೊಳ್ಳುತ್ತವೆ. ಬಹುಕೋಟಿ ವಹಿವಾಟು ಮಾಡುವ ಕಂಪನಿಗಳು ತನಗಾಗಿ ದುಡಿವ ನೌಕರರ ಬಗ್ಗೆ ಕನಿಷ್ಠ ಕಾಳಜಿ ಹೊಂದಿರಬೇಕಾಗುತ್ತದೆ. ಆದರೆ ಪ್ರತಿ ಯೊಂದನ್ನೂ ಧರ್ಮದೊಂದಿಗೆ ಜೋಡಿಸುತ್ತ ಹೋದರೆ ಅಸಲಿ ಪ್ರಶ್ನೆಗಳು ಪಕ್ಕಕ್ಕೆ ಸರಿದುಬಿಡುತ್ತವೆ. ಬಡಪಾಯಿ ಉದ್ಯೋಗಿಗಳು ಅತಂತ್ರ ಸ್ಥಿತಿಯಲ್ಲಿ ನವೆಯಬೇಕಾಗುತ್ತದೆ. ಇಂತಹ ಕಂಪನಿಗಳು ಮಾಡುತ್ತಿರುವ ಶೋಷಣೆಯೂ ಚರ್ಚೆಗೆ ಬಾರದೆ ಹೋಗುತ್ತದೆ.

ಇಂದಿನ ಆಧುನಿಕತೆಯು ವ್ಯಕ್ತಿಗಳನ್ನು ಹೇಗೆ ನಾಶ ಮಾಡುತ್ತಿದೆ ಎಂಬುದಕ್ಕೆ ಈ ಪ್ರಕರಣ ಒಂದು ಉತ್ತಮ ಉದಾಹರಣೆಯಾಗಿದೆ. ಆಹಾರದ ಪೊಟ್ಟಣವನ್ನು ತರುವ ಹುಡುಗನ ಜಾತಿ, ಚಹರೆಗಳು ಪತ್ತೆಯಾಗುವಂತೆ ಆಹಾರವನ್ನು ತಯಾರಿಸಿದವನ, ಅದನ್ನು ಬೆಳೆದವನ ಅಥವಾ ಸರಬರಾಜು ಮಾಡಿದವನ ವಿವರಗಳನ್ನು ಪತ್ತೆ ಮಾಡಲಾದೀತೇ? ಜಾತಿ, ಧರ್ಮದ ಹೆಸರಿನಲ್ಲಿ ನಾವು ಪ್ರತ್ಯೇಕರೆಂಬಂತೆ ವರ್ತಿಸಿದರೂ ಆಳದಲ್ಲಿ ನಾವು ಪರಸ್ಪರಾವಲಂಬಿಗಳು ಎಂಬ ಸರಳವಾದ ಸತ್ಯ ನಮಗೆ ಕಾಣಿಸದೇ ಹೋದರೆ ನಮ್ಮ ಧಾರ್ಮಿಕ ನಿಷ್ಠೆಯು ಕುರುಡುತನ ಎನಿಸುತ್ತದೆ. ನಮ್ಮ ಧಾರ್ಮಿಕ ಸೌಹಾರ್ದದ ಮಾತು ಸೋಗಲಾಡಿತನವಾಗುತ್ತದೆ.

ಕಂಡವರ ಜಾತಿ, ಜನಾಂಗದ ಜಾಡು ಹಿಡಿದು ಅದನ್ನು ಪತ್ತೆ ಮಾಡಲು ಪ್ರಯತ್ನಿಸುವುದು ಧಾರ್ಮಿಕತೆಯಲ್ಲ. ವ್ಯಕ್ತಿ ತನ್ನ ಅಂತರಂಗದ ಸ್ವರೂಪದ ಜಾಡು ಹಿಡಿದು ಅದನ್ನು ಕಂಡುಕೊಳ್ಳುವುದು ನಿಜವಾದ ಧಾರ್ಮಿಕತೆಯಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಆಹಾರವೊಂದೇ ಅಲ್ಲ; ರಿಯಾಲಿಟಿ ಷೋಗಳ ಹೆಸರಿನಲ್ಲಿ ವ್ಯಕ್ತಿ ವಿಶಿಷ್ಟವಾದ ಪ್ರತಿಭೆ, ಸ್ನೇಹ ಸಂಬಂಧ, ಆತ್ಮೀಯತೆ, ಅಂತರಂಗದ ಪರಿಶುದ್ಧ ಭಾವನೆಗಳು ಎಲ್ಲವೂ ಸಹ ವಿಕ್ರಯದ ವಸ್ತುಗಳಾಗುತ್ತಿವೆ, ಮನುಷ್ಯ ನಿರ್ಜೀವ ಯಂತ್ರವಾಗುತ್ತಿದ್ದಾನೆ.

ಹೊಸ ಬದುಕಿನ ಚಳವಳಿಗೆ ಕರೆ ನೀಡಿದ ಡಾ.ಅಂಬೇಡ್ಕರ್, ನಗರ ಪ್ರದೇಶದ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿದ್ದರು. ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನಗರ ಪ್ರದೇಶಗಳಲ್ಲಿ ವಿಮೋಚನೆ ಇದೆ ಎಂದು ಭವಿಷ್ಯವಾಣಿ ನುಡಿದಿದ್ದರು. ಆದರೆ ಈ ಬೆಳವಣಿಗೆಗಳು ಅವರ ಭವಿಷ್ಯವಾಣಿಯನ್ನು ಸುಳ್ಳಾಗಿಸಿವೆ. ಜಾಗತೀಕರಣವು ಮನುಷ್ಯನ ಆಲೋಚನೆಯನ್ನು ಜಾಗತಿಕ ಮಟ್ಟಕ್ಕೆ ಏರಿಸುವುದಿಲ್ಲ, ಬದಲಾಗಿ ಅವನನ್ನು ಕುಬ್ಜನನ್ನಾಗಿಸುತ್ತದೆ. ಅವನ ಕಂದಾಚಾರವನ್ನು ಇನ್ನಷ್ಟು ಜಟಿಲಗೊಳಿಸುತ್ತದೆ ಎಂಬುದು ಈ ಪ್ರಕರಣದಿಂದ ಬಯಲಾಗಿದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

Post Comments (+)