ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಎನ್‌ಕೌಂಟರ್ | ರಾಕ್ಷಸರ ವಿರುದ್ಧ ಹೋರಾಡುವವರೇ ರಾಕ್ಷಸರಾಗುವ ಅಪಾಯ

ರಾಕ್ಷಸರ ವಿರುದ್ಧದ ಹೋರಾಟದಲ್ಲಿ ನಾವೇ ರಾಕ್ಷಸರಾಗಿ ಬದಲಾಗುವ ಅಪಾಯವಿದೆ
Last Updated 11 ಡಿಸೆಂಬರ್ 2019, 1:21 IST
ಅಕ್ಷರ ಗಾತ್ರ

ಡಿಸೆಂಬರ್ 6ರ ಮುಂಜಾನೆಯ ಸುದ್ದಿ ನೋಡಿದ ಹಲವರಿಗೆ ಕಂಡಿದ್ದು, ಅತ್ಯಾಚಾರ ನಡೆಸಿದ ಆರೋಪ ಹೊತ್ತ ನಾಲ್ವರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದುಹಾಕಿದ ವಿಚಾರ. ಈ ಸುದ್ದಿಯು ಸಮಾಧಾನದ ಹಾಗೂ ನ್ಯಾಯ ಸಿಕ್ಕಿದ ಭಾವನೆಯೊಂದನ್ನು ಮೂಡಿಸಿತು. ಅತ್ಯಾಚಾರ ಎಸಗಿದವರ ವಿರುದ್ಧ ಪ್ರತೀಕಾರ ತೀರಿಸಿಕೊಂಡಂತೆ ಆಗಿದೆ, ಅಂತಹ ಕೃತ್ಯಕ್ಕೆ ಇದು ತಕ್ಕ ಶಿಕ್ಷೆ ಎಂದು ಜನ ಭಾವಿಸಿದರು. ಪೊಲೀಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನ ಮುಕ್ತಕಂಠದಿಂದ ಪ್ರಶಂಸಿಸಿದರು.

ಆದರೆ ಈ ಎನ್‌ಕೌಂಟರ್‌ ನಕಲಿ ಎಂಬ ಅನುಮಾನ ಮಾನವ ಹಕ್ಕುಗಳ ಕಾರ್ಯಕರ್ತರದ್ದು. ಆರೋಪಿಗಳು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದರು ಎಂದು ಪೊಲೀಸರು ನೀಡಿದ ವಿವರಣೆ ತೀರಾ ಕಲ್ಪಿತ ಎಂದು ಅವರಿಗೆ ಅನ್ನಿಸಿತು. ಪೊಲೀಸರು ಆರೋಪಿಗಳ ಕೈಗಳಿಗೆ ಕೋಳ ತೊಡಿಸದೆಯೇ, ಅಪರಾಧ ನಡೆದ ಸ್ಥಳಕ್ಕೆ ಅವರನ್ನು ನಸುಕಿನ ಮೂರು ಗಂಟೆಯ ಹೊತ್ತಿನಲ್ಲಿ ಕರೆದೊಯ್ದರು ಎಂಬುದನ್ನು ನಂಬುವುದು ಕಷ್ಟ. ಈ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ವಕೀಲೆ ಅಂಜಲಿ ಮೋದಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ದೂರು ಸಲ್ಲಿಸಿದ್ದಾರೆ. ಎನ್‌ಕೌಂಟರ್‌ ನಡೆದ ನಂತರ ಟ್ವಿಟರ್‌ನಲ್ಲೂ ಭಾರಿ ಚರ್ಚೆ ನಡೆಯಿತು. ‘ಆರೋಪಿಯು ವಿಐಪಿ ಆಗಿದ್ದರೆ ಪೊಲೀಸರು ಸಂತ್ರಸ್ತರನ್ನು ಕೊಲ್ಲುತ್ತಾರೆ. ಆರೋಪಿಗಳು ತೀರಾ ನಗಣ್ಯ ಮನುಷ್ಯರಾದರೆ, ಪೊಲೀಸರು ಆರೋಪಿಗಳನ್ನೇ ಕೊಲ್ಲುತ್ತಾರೆ’ ಎಂದು ಒಂದು ಟ್ವೀಟ್‌ನಲ್ಲಿ ಬರೆಯಲಾಗಿತ್ತು.

ಎನ್‌ಕೌಂಟರ್‌ ಸುದ್ದಿ ನೋಡಿದ ತಕ್ಷಣ ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿದೆ. ಆದರೆ, ನನ್ನ ಪ್ರತಿಕ್ರಿಯೆ ಕಂಡು ನನಗೇ ಆಘಾತವಾಯಿತು. ನಂತರ ನಾಚಿಕೆಯೂ ಆಯಿತು. ಕಾನೂನು ಕೈಗೆತ್ತಿಕೊಳ್ಳಲು ಹವಣಿಸುವ ಮನುಷ್ಯನೊಬ್ಬ ನನ್ನಲ್ಲಿ ಸುಪ್ತವಾಗಿದ್ದ. ಅವನು ಅನ್ಯಾಯದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ಬಯಸುತ್ತಿದ್ದ. ಒಂದು ಅಪರಾಧವನ್ನು ಇನ್ನೊಂದು ಅಪರಾಧದ ಮೂಲಕ ಸರಿಪಡಿಸಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿತ್ತು. ಆದರೂ, ರಕ್ತಕ್ಕಾಗಿ ಹಪಹಪಿಸುತ್ತಿದ್ದ ರಾಕ್ಷಸ ನನ್ನೊಳಗೆ ಇದ್ದ ಎಂಬುದು ನಾಚಿಕೆ ಮೂಡಿಸಿತು.

ಹಾಲಿವುಡ್ ಸಿನಿಮಾಗಳಲ್ಲಿ ಜಾನ್ ವೇನ್‌ನಂತಹ ನಾಯಕನಟರು ಖಳನಟರ ಮುಖಕ್ಕೆ ಗುದ್ದಿದಾಗ ಸಂಭ್ರಮಿಸದವರು ಯಾರಾದರೂ ಇದ್ದಾರೆಯೇ? ‘ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ’ ಚಿತ್ರದಲ್ಲಿ ಕ್ಲಿಂಟ್ ಈಸ್ಟ್‌ವುಡ್‌, ಲೀ ವ್ಯಾನ್ ಕ್ಲೀಫ್ ಕಾಲಿಗೆ ಗುಂಡು ಹಾರಿಸಿದಾಗ ಖುಷಿಪಡದವರು ಯಾರಾದರೂ ಇದ್ದಾರೆಯೇ? ‘ಶೋಲೆ’ ಚಿತ್ರದಲ್ಲಿ ಗಬ್ಬರ್‌ಸಿಂಗ್‌ನನ್ನು ವೀರು ಥಳಿಸಿ, ಅವನನ್ನು ಕೊಲ್ಲಲು ಮುಂದಾದಾಗ, ಠಾಕೂರ್ ತಡೆಯುತ್ತಾನೆ. ಗಬ್ಬರ್ ಸಿಂಗ್‌ನ ಕೈಗಳನ್ನು ತನ್ನ ಮುಳ್ಳುಮುಳ್ಳು ಬೂಟುಗಳಿಂದ ಜಜ್ಜುತ್ತಾನೆ. ಗಬ್ಬರ್ ಸಿಂಗ್ ಕೆಲವು ವರ್ಷಗಳ ಹಿಂದೆ ತನ್ನ ಕೈಗಳನ್ನು ತುಂಡರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಾನೆ. ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ನ್ಯಾಯ ಕೊಡಿಸುವುದು ನಮ್ಮ ಹಲವು ಕಥೆಗಳ ಭಾಗವೂ ಹೌದು. ಈ ರೀತಿ ನ್ಯಾಯ ಕೊಡಿಸುವ ಧೋರಣೆ ಚೆಂದಕ್ಕೆ ಕಾಣಿಸುವಂತೆ ಮಾಡುವ ಕಥೆಗಳು ಪಾಶ್ಚಿಮಾತ್ಯರಲ್ಲೂ ಪೂರ್ವದ ದೇಶಗಳಲ್ಲೂ ಇವೆ. ರಾಬಿನ್‌ಹುಡ್‌ನನ್ನು, ಬ್ಯಾಟ್‌ಮ್ಯಾನ್‌ನನ್ನು ಎಲ್ಲರೂ ಇಷ್ಟಪಡುತ್ತಾರೆ. ಕಾನೂನು ಕೈಗೆತ್ತಿಕೊಂಡು ಖಳನಿಗೆ ಪಾಠ ಕಲಿಸುವ ನಾಯಕರು ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಇದ್ದಾರೆ.

ಎನ್‌ಕೌಂಟರ್‌ ನಡೆದಿದ್ದಕ್ಕೆ ಖುಷಿಪಟ್ಟವರ ಹಾಗೂ ಪೊಲೀಸರ ಮೇಲೆ ಹೂವಿನ ಮಳೆಗರೆದವರ ದೃಶ್ಯಗಳನ್ನು ಟಿ.ವಿ.ಯಲ್ಲಿ ಕಂಡು ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್ ಸರಣಿ ‘ಡೆಕ್ಸ್ಟರ್’ ನೆನಪಾಯಿತು. ಮಾರ್ಗನ್ ಡೆಕ್ಸ್ಟರ್‌ ಎನ್ನುವವನು ಚಿಕ್ಕವನಾಗಿದ್ದಾಗ ಅವನ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತಾಯಿಯನ್ನು ಕಳೆದುಕೊಂಡು ಅನಾಥನಾದ ಅವನನ್ನು ಪೊಲೀಸ್ ಅಧಿಕಾರಿಯೊಬ್ಬರು ಸಾಕಿರುತ್ತಾರೆ.

ಸರಣಿ ಅತ್ಯಾಚಾರಿಗಳು, ಕೊಲೆಗಡುಕರು ಸಾಕ್ಷ್ಯಗಳ ಕೊರತೆಯ ಕಾರಣದಿಂದಾಗಿ ಶಿಕ್ಷೆಗೆ ಗುರಿಯಾಗುವುದು ಕಡಿಮೆ ಎಂದು ಆತ ಕಂಡುಕೊಳ್ಳುತ್ತಾನೆ. ನಂತರ, ತಾನೇ ಕಾನೂನನ್ನು ಕೈಗೆತ್ತಿಕೊಳ್ಳುವ ಡೆಕ್ಸ್ಟರ್‌, ಪಾತಕಿಗಳನ್ನು ಇನ್ನಿಲ್ಲವಾಗಿಸುತ್ತಾನೆ. ಇಂತಹ ಡೆಕ್ಸ್ಟರ್‌ನನ್ನು ನಾವು ಪ್ರೀತಿಸಬಹುದಾದ ಹೀರೊ ಆಗಿ, ರಾಬಿನ್‌ಹುಡ್‌ ರೀತಿಯಲ್ಲಿ ಚಿತ್ರಿಸಲಾಗಿದೆ. ಅವನನ್ನು ಇಷ್ಟಪಡದೇ ಇರಲು ಸಾಧ್ಯವಿಲ್ಲ. ನಮ್ಮೆಲ್ಲರಲ್ಲಿಯೂ ಇರುವ ‘ನಾವೇ ನ್ಯಾಯ ಕೊಡಿಸಿಬಿಡಬೇಕು’ ಎನ್ನುವ ಹಂಬಲವನ್ನು ಖುಷಿಪಡಿಸುವ ರೀತಿಯಲ್ಲಿ ಈ ಪಾತ್ರ ಇದೆ. ಈ ವೆಬ್ ಸರಣಿ ನೋಡುವಾಗ, ಅತ್ಯಾಚಾರಿಯನ್ನು ಡೆಕ್ಸ್ಟರ್‌ ಹಿಡಿದು, ಕೊಂದುಹಾಕಲಿ ಎಂದು ನಾನು ಮನಸ್ಸಿನಲ್ಲೇ ಬಯಸುತ್ತಿದ್ದೆ.

ಅತ್ಯಾಚಾರಕ್ಕೆ ಒಳಗಾದ ಅಥವಾ ಹತ್ಯೆಗೀಡಾದ ವ್ಯಕ್ತಿಯ ತಂದೆ-ತಾಯಿಯರಂತೆಯೇ ಪೊಲೀಸರೂ ಭಾವಾವೇಶಕ್ಕೆ ಒಳಗಾಗುತ್ತಾರೆ. ಅತ್ಯಾಚಾರಿಗಳು, ಕೊಲೆಗಡುಕರಿಗೆ ತಕ್ಕ ಶಾಸ್ತಿಯಾಗುವಂತೆ ಮಾಡಲಾಗದ ಅಸಹಾಯಕತೆಗೆ ಇತರರು ಒಳಗಾಗುವಂತೆ, ಪೊಲೀಸರೂ ಒಳಗಾಗುತ್ತಾರೆ. ಏಕೆಂದರೆ, ತಾವೂ ಒಂದು ಭಾಗ ಆಗಿರುವ ನ್ಯಾಯದಾನ ವ್ಯವಸ್ಥೆಯು ವಿಫಲವಾಗಿದೆ, ಅದು ನ್ಯಾಯ ಕೊಡುತ್ತಿಲ್ಲ ಎಂದು ಪೊಲೀಸರು ಭಾವಿಸುತ್ತಾರೆ. ಇದೊಂದು ವ್ಯಂಗ್ಯ. ಕಾನೂನು ಪರಿಣಾಮಕಾರಿ ಆಗಿಲ್ಲದ ಕಾರಣ ಕಾನೂನಿನ ವ್ಯವಸ್ಥೆಯ ಹೊರಗೇ ಅಪರಾಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದೂ ಅವರು ಬಯಸುತ್ತಾರೆ.

ಕಾನೂನು-ಸುವ್ಯವಸ್ಥೆ ಕುಸಿದಾಗ, ಸಂಸ್ಥೆಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸದೆ ಇದ್ದಾಗ ಹಾಗೂ ಎಲ್ಲರಿಗೂ ವ್ಯವಸ್ಥೆ ಮೇಲೆ ನಂಬಿಕೆ ಹೊರಟುಹೋದರೆ ಹೈದರಾಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ ತರಹದವು (ಈ ಎನ್‌ಕೌಂಟರ್‌ ನಕಲಿಯೋ, ಅಲ್ಲವೋ ಎಂದು ನ್ಯಾಯಾಲಯಗಳು ತೀರ್ಮಾನಿಸಲು ದಶಕವೇ ಬೇಕಾಗಬಹುದು) ಮುಂದೆಯೂ ಆಗುವ ಸಾಧ್ಯತೆ ಇದೆ. ಸ್ವತಂತ್ರವಾದ, ಸ್ವಾಯತ್ತ
ವಾದ ಸಂಸ್ಥೆಗಳನ್ನು ಕಟ್ಟುವುದು ರಾಜಕಾರಣಿಗಳಿಗೆ ಬೇಕಿಲ್ಲ. ಹಾಗೆಯೇ ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಅಧಿಕಾರದಲ್ಲಿದ್ದಾಗ ಅತ್ಯಲ್ಪ ಕೆಲಸ ಮಾಡುವ ರಾಜಕಾರಣಿಗಳು, ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತಾಗ ವ್ಯವಸ್ಥೆಯ ಬಗ್ಗೆ ದೂರುತ್ತಾರೆ.

ಹೈದರಾಬಾದ್‌ನಲ್ಲಿ ನಡೆದಂತಹ ಕ್ರೌರ್ಯ ಹಾಗೂ ಅದಕ್ಕೆ ಪ್ರತಿಯಾಗಿ ನಡೆದ ಹಿಂಸೆಯನ್ನು ತಡೆಯಲು ಇರುವ ದಾರಿ ಒಂದೇ. ಅದು; ಕಾನೂನನ್ನು ಬಲಿಷ್ಠಗೊಳಿಸುವುದು, ನ್ಯಾಯ ಎಲ್ಲೆಡೆಯೂ ಪಸರಿಸುವಂತೆ ಮಾಡುವುದು. ನ್ಯಾಯದಾನ ತ್ವರಿತವಾಗಿ ಆಗುವಂತೆ ಮಾಡಲು ಬೇಕಿರುವ ಬದಲಾವಣೆಗಳನ್ನು ಕ್ಷಿಪ್ರವಾಗಿ ಜಾರಿಗೆ ತರಬೇಕು. ಪೊಲೀಸ್, ಸಿಬಿಐನಂತಹಸಂಸ್ಥೆಗಳು ರಾಜಕೀಯ ಪಕ್ಷಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಬೇಕು. ಆದರೆ, ಹೀಗೆ ಮಾಡುವ ವಿಚಾರದಲ್ಲಿ ಬಿಜೆಪಿ ಪೂರ್ಣ ಮನಸ್ಸು ಹೊಂದಿರುವಂತೆ ಕಾಣುತ್ತಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪ್ರಾದೇಶಿಕ ಪಕ್ಷಗಳಿಗೂ ಈ ವಿಚಾರದಲ್ಲಿ ಮನಸ್ಸಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ಕೆಲಸ ಮಾಡಿದ್ದು ತೀರಾ ಕಡಿಮೆ.

ಅಪರಾಧ ಎಷ್ಟೇ ಕ್ರೂರವಾಗಿರಲಿ, ಕಾನೂನನ್ನು ನಾವೇ ಕೈಗೆತ್ತಿಕೊಳ್ಳುವುದರಿಂದ ಅಪರಾಧಗಳು ಇನ್ನಷ್ಟು ಹೆಚ್ಚಾಗುತ್ತವೆ. ಇದನ್ನು ಹಲವು ಕಡೆ ಕಂಡಿದ್ದೇವೆ. ಕಾನೂನನ್ನು ಕೈಗೆತ್ತಿಕೊಂಡಾಗ ಅಮಾಯಕರೂ ಬಲಿಯಾಗಬೇಕಾಗುತ್ತದೆ. ರಾಕ್ಷಸರ ವಿರುದ್ಧದ ಹೋರಾಟದಲ್ಲಿ ನಾವೇ ರಾಕ್ಷಸರಾಗಿ ಬದಲಾಗುವ ಅಪಾಯ ಕೂಡ ಇದೆ. ಮಹಾತ್ಮ ಹೇಳಿದಂತೆ, ‘ಒಂದು ಕಣ್ಣಿಗೆ ಇನ್ನೊಂದು ಕಣ್ಣು ತೆಗೆಯುತ್ತಾ ಸಾಗಿದರೆ ಇಡೀ ಜಗತ್ತು ಕುರುಡಾಗುತ್ತದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT