ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದ ಜಾತ್ರೆ, ಸಿನಿಮಾದ ಬಿಸಿನೆಸ್ಸು

‘ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ’ ಎನ್ನುವಂತಾಗದಿರಲಿ ಪರಿಸ್ಥಿತಿ
Last Updated 3 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಕಲಬುರ್ಗಿಯಲ್ಲಿ ಈ ತಿಂಗಳ 6ರಿಂದ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ನಮ್ಮ ಸಿನಿಮಾರಂಗ ಎಷ್ಟು ಉತ್ಸಾಹದಿಂದಿದೆ ಎಂದು ವಿಚಾರಿಸಿದರೆ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳ ಮಧ್ಯೆ ಈಗ ಮೊದಲಿನ ಮಧುರ ಸಂಬಂಧ ಇಲ್ಲ ಎನ್ನುವುದು ಗೊತ್ತಾಯಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ₹ 10 ಕೋಟಿ ನೆರವು ನೀಡಿ ಸರ್ಕಾರವೇ ಸಮ್ಮೇಳನದ ಸಾರಥ್ಯ ವಹಿಸಿದೆ. ಲಕ್ಷಾಂತರ ಕನ್ನಡಿಗರು ಭಾಗವಹಿಸುತ್ತಾರೆ. ಇಂತಹ ಸಮ್ಮೇಳನದಲ್ಲಿ ಸಿನಿಮಾರಂಗವೂ ಸಂಭ್ರಮದಿಂದ ಭಾಗವಹಿಸಬೇಕಿತ್ತಲ್ಲವೇ?

‘ಕರೆಯುವುದು ಬಿಡಿ, ನಮಗೊಂದು ಆಹ್ವಾನಪತ್ರಿಕೆಯನ್ನೂ ಕಳಿಸಿಲ್ಲ’ ಎನ್ನುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್‌ ಹೇಳಿದ ಮಾತು. ಗಿರೀಶ ಕಾಸರವಳ್ಳಿ ಅವರನ್ನು ಕೇಳಿದರೆ, ‘ಈವರೆಗೆ ಅವರು ನನ್ನನ್ನು ಕರೆದೂ ಇಲ್ಲ, ನಾನು ಹೋಗಿಯೂ ಇಲ್ಲ’ ಎಂದರು! ಹಿಂದೆ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಬರಗೂರು ರಾಮಚಂದ್ರಪ್ಪ ಕೂಡ ಕಲಬುರ್ಗಿಗೆ ಹೋಗುತ್ತಿಲ್ಲ. ಕಾರಣ ಬೇರೆ. ‘ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕ ನಡೆದುಕೊಂಡ ರೀತಿ ಎಳ್ಳಷ್ಟೂ ಸರಿಯಿಲ್ಲ. ಹಾಗಾಗಿ ಹೋಗುವುದು ಬೇಡವೆಂದು ನಿರ್ಧರಿಸಿದ್ದೇನೆ’ ಎನ್ನುವುದು ಬರಗೂರು ಸ್ಪಷ್ಟನುಡಿ. ಸಾಹಿತ್ಯದ ಬಗ್ಗೆ ಸಾಕಷ್ಟು ಒಲವುಳ್ಳ, ಕನ್ನಡದ ಜನಪ್ರಿಯ ಸಿನಿಮಾ ಹೀರೊ ಒಬ್ಬರನ್ನು ಕೇಳಿದೆ. ‘ಸಾಹಿತ್ಯ ಸಮ್ಮೇಳನ ನಡೆಯುತ್ತಿದೆಯಾ, ಎಲ್ಲಿ... ಯಾವಾಗ’ ಎಂದು ಮರುಪ್ರಶ್ನೆ ಹಾಕಿದರು!

ಫಿಲಂ ಚೇಂಬರ್‌, ಸಿನಿಮಾರಂಗವನ್ನು ಪ್ರತಿನಿಧಿಸುತ್ತಿರುವ ಅಧಿಕೃತ ಸಂಸ್ಥೆ. ಕಸಾಪ ಒಂದು ಆಹ್ವಾನಪತ್ರಿಕೆಯನ್ನು ಏಕೆ ಕಳಿಸಬಾರದು? ಕನ್ನಡ ಸಿನಿಮಾಗಳಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿರುವ ಕಾಸರವಳ್ಳಿ, ಈವರೆಗೆ ನಿರ್ದೇಶಿಸಿರುವ 14 ಸಿನಿಮಾಗಳಲ್ಲಿ 13 ಸಾಹಿತ್ಯ ಕೃತಿಗಳು. ಅನಂತಮೂರ್ತಿ, ತೇಜಸ್ವಿ, ವೈದೇಹಿ, ಬೊಳುವಾರು, ಕುಂವೀ, ಬಾನು ಮುಷ್ತಾಕ್‌, ಎಸ್‌.ಎಲ್‌.ಭೈರಪ್ಪ, ನಾ.ಡಿಸೋಜ, ಯಶವಂತ ಚಿತ್ತಾಲ ಮುಂತಾಗಿ ಕನ್ನಡದ ಪ್ರಮುಖ ಸಾಹಿತಿಗಳ ಕೃತಿಗಳನ್ನೇ ಕಾಸರವಳ್ಳಿ ಬೆಳ್ಳಿತೆರೆಗೆ ತಂದವರು. ಬರಗೂರರ 12ರಲ್ಲಿ 9 ಸಿನಿಮಾ ಅವರದ್ದೇ ಕಥೆ, ಕಾದಂಬರಿ ಆಧರಿಸಿದ್ದು; ಉಳಿದದ್ದು ಇತರರ ಕಥೆಗಳು. ಕನ್ನಡದ ಇನ್ನೊಬ್ಬ ನಿರ್ದೇಶಕ ಶೇಷಾದ್ರಿ, ಕಳೆದ ವರ್ಷ ಧಾರವಾಡದ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದುಂಟು. ಈ ಸಲ ಹೋಗುತ್ತಿಲ್ಲ.ಕಲಬುರ್ಗಿ ಸಮ್ಮೇಳನದಲ್ಲಿ ಸಿನಿಮಾ ಕುರಿತೊಂದು ಗೋಷ್ಠಿಯಿದೆ. ನಾಲ್ವರು ನಿರ್ದೇಶಕರು (ಟಿ.ಎಸ್‌.ನಾಗಾಭರಣ, ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಕೆ.ಎಂ.ಚೈತನ್ಯ ಮತ್ತು ಬಿ.ಸುರೇಶ್‌) ಭಾಗವಹಿಸುತ್ತಿದ್ದಾರೆ. ಆದರೆ ಒಟ್ಟಾರೆ ಸಿನಿಮಾದವರಿಗೆ ಸಮ್ಮೇಳನದ ಬಗ್ಗೆ ಉತ್ಸಾಹವೇ ಇಲ್ಲ.

ಇನ್ನೇನು ತಿಂಗಳ ಕೊನೆಗೆ ಬೆಂಗಳೂರಿನಲ್ಲಿ 12ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದೆ. ಅದೂ ಸರ್ಕಾರದ ಕೃಪಾಶ್ರಯದಲ್ಲೇ. ಕನ್ನಡದ ಪ್ರಮುಖ ಸಾಹಿತಿಗಳು ಹಿಂದೆಯೂ ಚಿತ್ರೋತ್ಸವದಲ್ಲಿ ಪಾಲ್ಗೊಂಡದ್ದಿಲ್ಲ, ಈ ಸಲವೂ ಅವರ ಹೆಸರಿಲ್ಲ. ಸಾಹಿತಿಗಳನ್ನು ಕೇಳಿದರೆ, ‘ಅವರು ಕರೆದಿಲ್ಲ, ನಾವು ಹೋಗಿಲ್ಲ’ ಎನ್ನಬಹುದು.

1921ರಲ್ಲಿ ನಾಟಕವೊಂದನ್ನು ಆಧರಿಸಿ ತೆರೆಗೆ ಬಂದ ಮೂಕಿ ಸಿಮಿಮಾ ‘ನಿರುಪಮಾ’ ಕನ್ನಡದ ಮೊದಲ ಸಾಹಿತ್ಯಕೃತಿ ಆಧರಿಸಿದ ಸಿನಿಮಾ. ಅದಾಗಿ 41 ವರ್ಷಗಳ ಬಳಿಕ ಕೃಷ್ಣಮೂರ್ತಿ ಪುರಾಣಿಕರ ‘ಧರ್ಮದೇವತೆ’ ಕಾದಂಬರಿ ಆಧರಿಸಿದ ‘ಕರುಣೆಯೇ ಕುಟುಂಬದ ಕಣ್ಣು’ ಸಿನಿಮಾ ಆಯಿತು. ಇವೆರಡನ್ನೂ ಈ ನಿಟ್ಟಿನಲ್ಲಿ ಪ್ರಥಮಗಳೆಂದು ಪರಿಗಣಿಸಲಾಗಿದೆ.

ಎಪ್ಪತ್ತರ ದಶಕದಲ್ಲಿ, ಸಿನಿಮಾ ಮತ್ತು ಸಾಹಿತ್ಯದ ನಡುವೆ ಗಾಢ ಗೆಳೆತನವಿತ್ತು. ಹೊಸ ಅಲೆಯ ಚಿತ್ರಗಳದ್ದೇ ಸದ್ದು. ಸಂಸ್ಕಾರ, ವಂಶವೃಕ್ಷ, ಕಾಡು, ಘಟಶ್ರಾದ್ಧ, ತಬ್ಬಲಿಯು ನೀನಾದೆ ಮಗನೆ, ಮೂರು ದಾರಿಗಳು, ಹೇಮಾವತಿ, ಅಬಚೂರಿನ ಪೋಸ್ಟಾಫೀಸು, ಹಂಸಗೀತೆ, ಚೋಮನದುಡಿ, ಪಲ್ಲವಿ– ಹೀಗೆ ಸಾಲುಸಾಲು ಸಾಹಿತ್ಯಕೃತಿಗಳು ಸಿನಿಮಾಗಳಾದವು. ಮುಂದಿನ ದಶಕಗಳಲ್ಲೂ ಟ್ರೆಂಡ್‌ ಮುಂದುವರಿಯಿತು. ತಬರನ ಕಥೆ, ಭುಜಂಗಯ್ಯನ ದಶಾವತಾರ, ಮೈಸೂರು ಮಲ್ಲಿಗೆ, ಸಂಗ್ಯಾಬಾಳ್ಯಾ, ಮಲೆಗಳಲ್ಲಿ ಮದುಮಗಳು, ದ್ವೀಪ, ತಾಯಿಸಾಹೇಬ, ಕಾನೂರು ಹೆಗ್ಗಡಿತಿ, ದೇವೀರಿ, ಹಸೀನಾ– ಹೀಗೆ ಪಟ್ಟಿ ದೊಡ್ಡದಿದೆ. ಪ್ರಶಸ್ತಿಗಳನ್ನೂ ಪಡೆದ ಈ ಸಿನಿಮಾಗಳು ಕನ್ನಡ ಸಾಹಿತ್ಯದ ಕಂಪನ್ನು ಹರಡಿದವು.

ಜನಪ್ರಿಯ ಚಿತ್ರಗಳ ಸಾಲಿನಲ್ಲೂ ಕಾದಂಬರಿ ಆಧಾರಿತ ಚಿತ್ರಗಳ ದೊಡ್ಡ ಪಟ್ಟಿಯಿದೆ. ಎಂ.ಕೆ.ಇಂದಿರಾ, ವಾಣಿ, ಸಾಯಿಸುತೆ, ತ್ರಿವೇಣಿ, ಎಚ್‌.ಜಿ.ರಾಧಾದೇವಿ, ಟಿ.ಕೆ.ರಾಮರಾವ್‌, ಡಾ.ಗಿರಿಜಮ್ಮ ಇವರೆಲ್ಲ ಕನ್ನಡ ಸಿನಿಮಾರಂಗಕ್ಕೆ ಸೋದರ ಸಂಬಂಧಿಗಳೇ ಆದರು. ಕನ್ನಡದಲ್ಲಿ ಇವತ್ತಿಗೂ ‘ಕಲ್ಟ್‌ ಸಿನಿಮಾ’ಗಳೆಂದು ಗುರುತಿಸುವ ‘ಬಂಗಾರದ ಮನುಷ್ಯ’ (ಟಿ.ಕೆ.ರಾಮರಾವ್‌) ಮತ್ತು ‘ಅಂತ’ (ಎಚ್‌.ಕೆ.ಅನಂತರಾವ್‌) ಕೂಡಾ ಜನಪ್ರಿಯ ಕಾದಂಬರಿಗಳೇ.

‘ಬೆಳ್ಳಿಮೋಡ’ದಿಂದ ಶುರುವಾಗಿ ‘ನಾಗರಹಾವ’ನ್ನು ಹಾದು, ‘ಋಣಮುಕ್ತಳು’ವರೆಗೆ ಪುಟ್ಟಣ್ಣ ಕಣಗಾಲ್‌ ಮಾಡಿರುವ 33ಕ್ಕೂ ಹೆಚ್ಚು ಸಿನಿಮಾಗಳು ಬಹುತೇಕ ಕಾದಂಬರಿ ಆಧಾರಿತ. ಕನ್ನಡದ ಜನಪ್ರಿಯ ನಿರ್ದೇಶಕ ಜೋಡಿ ದೊರೆ–ಭಗವಾನ್‌, ಎರಡು ಡಜನ್‌ಗೂ ಹೆಚ್ಚು ಕಾದಂಬರಿಗಳನ್ನು ಬೆಳ್ಳಿತೆರೆಗೆ ತಂದಿತು. 1934ರಲ್ಲಿ ಬಾಕ್ಸಾಫೀಸ್ ದಾಖಲೆ ಸೃಷ್ಟಿಸಿದ ‘ಸತಿ ಸುಲೋಚನ’ಕ್ಕೆ ಚಿತ್ರಸಾಹಿತ್ಯ ಒದಗಿಸಿದ ಬೆಳ್ಳಾವೆ ನರಸಿಂಹಶಾಸ್ತ್ರಿಗಳಿಂದ ಹಿಡಿದು, ದೇವುಡು, ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಅನಕೃ, ಚಂದ್ರಶೇಖರ ಕಂಬಾರ, ಲಂಕೇಶ್‌– ಹೀಗೆ ಸಿನಿಮಾಗೆ ಸಾಹಿತಿಗಳ ಕೊಡುಗೆ ದೊಡ್ಡದು. ಡಾ.ರಾಜ್‌ಕುಮಾರ್ ಅಭಿನಯಿಸಿದ ಕಾದಂಬರಿ ಆಧಾರಿತ ಚಿತ್ರಗಳ ಪಟ್ಟಿಯೂ ಉದ್ದವಿದೆ. (ಬೀದರ್‌ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಆಹ್ವಾನಿಸಿದಾಗ ಅನಾರೋಗ್ಯದ ಕಾರಣ ಕೊಟ್ಟು ರಾಜ್‌ ನಿರಾಕರಿಸಿದ್ದರಂತೆ!)

ಸಿನಿಮಾ ಮತ್ತು ಸಾಹಿತ್ಯದ ನಡುವಣ ಈ ಸ್ನೇಹಬಂಧ ಈಗೇಕೆ ಸಡಿಲಗೊಂಡಿದೆ? ಇವತ್ತೂ ಕಾದಂಬರಿ ಆಧಾರಿತ ಸಿನಿಮಾಗಳಿವೆ. ಆದರೆ ಕಾದಂಬರಿಗಳನ್ನು ನಿರ್ಮಾಪಕರೇ ಹೇಳಿ ಬರೆಸುತ್ತಿದ್ದಾರೆ! ಅದಕ್ಕೆ ಕಾರಣ ಸರ್ಕಾರದ ಸಬ್ಸಿಡಿ! ಪ್ರತಿವರ್ಷ ಕಾದಂಬರಿ ಆಧಾರಿತ ನಾಲ್ಕು ಸಿನಿಮಾಗಳಿಗೆ ಸರ್ಕಾರ ತಲಾ ₹ 15 ಲಕ್ಷ ಕೊಡುತ್ತಿದೆ. ಕನ್ನಡ ಸಿನಿಮಾ ಈಗ ‘ಬಿಸಿನೆಸ್‌’ ಆಗಿರುವುದರಿಂದ ಈ ‘ಸ್ವಸಹಾಯ’ವನ್ನು ಚೇಂಬರ್‌ ಕೂಡಾ ತಪ್ಪೆನ್ನುತ್ತಿಲ್ಲ.ಎಪ್ಪತ್ತರ ದಶಕದಲ್ಲಿ ಸಿನಿಮಾದವರು ಅದಾಗಲೇ ಜನಪ್ರಿಯಗೊಂಡ ಕಾದಂಬರಿಗಳ ಬೆನ್ನುಹತ್ತುತ್ತಿದ್ದರು. ಈಗ ಕಾದಂಬರಿಗಳು ಮಾರಾಟವಾಗುತ್ತಿಲ್ಲ. ಕೈಬೆರಳೆಣಿಕೆಯ ವಾರ–ಮಾಸ ಪತ್ರಿಕೆಗಳಲ್ಲಿ ಪ್ರಕಟವಾದರಷ್ಟೇ ಕಾದಂಬರಿಯ ಓದು. ಹೀಗಾಗಿ ಸಿನಿಮಾದವರ ‘ಸ್ವಸಹಾಯ’ ಪದ್ಧತಿಯೂ ಸರಿಯೇ ಎನ್ನುವವರಿದ್ದಾರೆ.

ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ‘ನಾಗರಹಾವು’ ತರಾಸು ಅವರ ಕಾದಂಬರಿ. ಬಾಕ್ಸಾಫೀಸ್‌ ಗಳಿಕೆಯಲ್ಲಿ ದಾಖಲೆ ನಿರ್ಮಿಸಿತು. ಆದರೆ ಕಾದಂಬರಿ ಬರೆದ ತರಾಸು ಅದನ್ನು ‘ಕೇರೆಹಾವು’ ಎಂದರು! ಹೊಸಕಾಲದ ಯುವಕರ ರೆಬೆಲ್‌ ಮನೋಭಾವವನ್ನು ಹಿಡಿದಿಟ್ಟ ತಮ್ಮ ಕಾದಂಬರಿ ಸರಿಯಾಗಿ ಸಿನಿಮಾದಲ್ಲಿ ಪ್ರತಿಬಿಂಬಿತವಾಗಿಲ್ಲ ಎನ್ನುವುದು ಅವರ ದುಮ್ಮಾನವಾಗಿತ್ತು. ಗಿರೀಶ ಕಾರ್ನಾಡ ಮತ್ತು ಬಿ.ವಿ.ಕಾರಂತರು ಸೇರಿ ನಿರ್ದೇಶಿಸಿದ ಭೈರಪ್ಪನವರ ‘ವಂಶವೃಕ್ಷ’ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. 1971ರಲ್ಲಿ ಭೈರಪ್ಪನವರಿಗೆ ಅತ್ಯುತ್ತಮ ಕಥಾ ಲೇಖಕ ಪ್ರಶಸ್ತಿ ಬಂದಾಗ, ‘ನಾನು ಸಿನಿಮಾಗಾಗಿ ಬರೆದ ಕಥೆಯಲ್ಲವದು’ ಎಂದು ಭೈರಪ್ಪ ಪ್ರಶಸ್ತಿ ನಿರಾಕರಿಸಿದರು.

ಸಿನಿಮಾ ಅನ್ನುವುದು ಸಂಸ್ಕೃತಿಯ ಅವಿಭಾಜ್ಯ ಅಂಗ. ಕಸಾಪ ಅದನ್ನು ಗುರುತಿಸುವ ಕ್ರಮ ಬೇರೆಯಾಗಬೇಕು. ಕಾಟಾಚಾರಕ್ಕೊಂದು ಗೋಷ್ಠಿಯ ಬದಲು, ನಿರ್ದೇಶಕ– ಕಾದಂಬರಿಕಾರರ ಮುಖಾಮುಖಿ ಏರ್ಪಡಿಸಬೇಕು. ಸಮ್ಮೇಳನದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ಪ್ರದರ್ಶನ ಏರ್ಪಡಿಸಿ, ಜನರ ಜೊತೆ ಸಂವಾದ ನಡೆಸಬೇಕು. ಇಲ್ಲವಾದಲ್ಲಿ ‘ಅದು ಜಾತ್ರೆ, ಇದು ವ್ಯಾಪಾರ’ ಎನ್ನುವ ಈಗಿನ ಧೋರಣೆಯೇ ಮುಂದುವರಿಯಲಿದೆ. ಇದರಿಂದ ಸಾಹಿತ್ಯ–ಸಿನಿಮಾ ಎರಡಕ್ಕೂ ನಷ್ಟವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT