ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಕಾವಿ, ಖಾದಿ ಮತ್ತು ನಿಜದ ನೆಲೆ

ದೇವಮಾನವ–ರಾಜಕಾರಣಿ ನಡುವಿನ ಸಂಬಂಧ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ
Last Updated 17 ಜನವರಿ 2020, 5:33 IST
ಅಕ್ಷರ ಗಾತ್ರ

ಪಂಚಮಸಾಲಿ ಸಮುದಾಯದ ಮೂವರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಮಠಾಧೀಶರೊಬ್ಬರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಬಹಿರಂಗವಾಗಿ ಆಗ್ರಹಿಸಿದ ವಿದ್ಯಮಾನದಲ್ಲಿ ಅತ್ಯಂತ ಹೆಚ್ಚು ಕಾಡುವ ಅಂಶ: ಸಮಷ್ಟಿಯ ಡೋಂಗಿತನ, ಪರೋಕ್ಷ ಬೆದರಿಕೆಗೆ ಎದುರಾದ ಪೊಳ್ಳು ಆಕ್ರೋಶ. ಆಕ್ರೋಶ ಮೊದಲು ಎದುರಾಗಿದ್ದು ಯಡಿಯೂರಪ್ಪ ಅವರಿಂದ, ನಂತರ ಇತರರಿಂದ.

ಚುನಾಯಿತ ನಾಯಕನಿಗೆ ಬೆದರಿಕೆ ಒಡ್ಡಲು ಸ್ವಾಮೀಜಿ ತೋರಿದ ಧೈರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಟೀಕಿಸಲಾಗಿದೆ. ಹಾಗೆಯೇ, ಯಡಿಯೂರಪ್ಪ ತೋರಿದ ಕೋಪಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಲೌಕಿಕದಿಂದ ದೂರವಿರುವವರು ಎನ್ನಲಾದ ವ್ಯಕ್ತಿಯೊಬ್ಬರು ಕ್ಷಣಿಕವೆನ್ನಿಸುವಂಥ ವಿಚಾರಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಪ್ರಶ್ನಿಸುವ, ಒಳ್ಳೆಯ ಉದ್ದೇಶದ ಬರಹಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಎಲ್ಲವೂ ಸರಿ. ಆದರೆ ನಾವು ಯಾರ ಬಳಿ ತಮಾಷೆ ಮಾಡುತ್ತಿದ್ದೇವೆ? ಇಂದು ಬಹುತೇಕ ಹಿಂದೂ ಸ್ವಾಮೀಜಿಗಳ ಮನಸ್ಸಿನಲ್ಲಿ ಕಡೆಯ ಸ್ಥಾನ ಪಡೆದಿರುವುದು ‘ಆಲೋಚನೆ, ಮಾತು ಹಾಗೂ ಕೃತಿಗಳಲ್ಲಿ ಶುದ್ಧತೆ’. ಭ್ರಷ್ಟರು, ಠಕ್ಕರಿಂದ ಹಣ ವಸೂಲಿ ಮಾಡುವ ಕಾರಣಕ್ಕೆ ಹಲವರು ಪ್ರಸಿದ್ಧಿ ಪಡೆದಿದ್ದಾರೆ. ಲೈಂಗಿಕತೆಯ ವಿಚಾರದಲ್ಲಿ ತಪ್ಪು ಮಾಡಿದ ಕಾರಣಕ್ಕೆ ಕೆಲವರು ಜೈಲಿಗೆ ಹೋಗಿದ್ದಾರೆ,ಕೆಲವರು ಹೋಗಲು ಸಿದ್ಧತೆ ನಡೆಸಿದ್ದಾರೆ. ಕೆಲವು ದೊಡ್ಡ ಹೆಸರುಗಳು ಪರಿಸರದ ಮೇಲೆ ಹಲ್ಲೆ ನಡೆಸಿದ್ದಕ್ಕೆ ಖ್ಯಾತಿ ಪಡೆದಿವೆ. ಅವರು ತಮ್ಮ ಮಹಾನ್ ಧರ್ಮದ ‍ಪ್ರತಿನಿಧಿ ಆಗಿರುವ ವಿಚಾರವಾಗಿ ಹೇಳುವುದಾದರೆ: ಒಳಗೊಳ್ಳುವಿಕೆ ಎಂಬುದು ಹಿಂದೂ ಧರ್ಮದ ಅತ್ಯಂತ ಉದಾತ್ತ ಗುಣ. ಆದರೆ, ಪೌರತ್ವ (ತಿದ್ದುಪಡಿ) ಕಾಯ್ದೆಯ ವಿಚಾರವಾಗಿ ಮುಸ್ಲಿಮರು ವ್ಯಕ್ತಪಡಿಸಿದ ಕೋಪದ ಪರಿಣಾಮವಾಗಿ ಭಾರತದ ಆತ್ಮಸಾಕ್ಷಿ ಕಲಕಿದಾಗ ಯಾವ ಹಿಂದೂ ‘ದೇವಮಾನವ’ ಒಳಗೊಳ್ಳುವಿಕೆಯಧಾಟಿಯಲ್ಲಿ ಮಾತನಾಡಿದ್ದನ್ನು ಕಂಡಿದ್ದೀರಿ? ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಾಗ ಅಥವಾ ಶೈಕ್ಷಣಿಕ ಸಂಸ್ಥೆಗಳ ವಾತಾವರಣವನ್ನು ಆರ್‌ಎಸ್‌ಎಸ್‌ಬೆಂಬಲಿಗರು ಹಾಳು ಮಾಡಿದಾಗ ಅಹಿಂಸೆಯನ್ನು ಬೋಧಿಸುವ ಅಥವಾ ಸರಸ್ವತಿಯನ್ನು ಆರಾಧಿಸುವ ಯಾವ ಸ್ವಾಮಿ, ಬಾಬಾ ಅಥವಾ ಯೋಗಿ ಅಹಿಂಸೆಯ ಪರ ಮಾತನಾಡಿದ್ದನ್ನುನೋಡಿದ್ದೀರಿ?

ಹರಿಹರದಲ್ಲಿ ಯುವ ‘ದೇವಮಾನವ’, ಯಡಿಯೂರಪ್ಪ ಅವರಲ್ಲಿ ಸಾರ್ವಜನಿಕರ ಎದುರು ತೋರಿದ ವರ್ತನೆಯನ್ನೇ ಸ್ವಾಮೀಜಿಗಳು (ಅವರು ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಅಥವಾ ಇನ್ಯಾವುದೇ ಸಮುದಾಯಕ್ಕೆ ಸೇರಿರಬಹುದು) ರಾಜಕೀಯ ನಾಯಕರು ತಮ್ಮ ಬಳಿ ‘ಆಶೀರ್ವಾದ’ ಕೋರಿ ಬಂದಾಗ ಖಾಸಗಿಯಾಗಿ ತೋರುತ್ತಾರೆ ಎಂಬ ಅನುಮಾನ ಬಹುಪಾಲು ಜನರಲ್ಲಿದೆ. ಇದು ಒಂದು ರೀತಿ ಒಬ್ಬರಿಗೆ ಇನ್ನೊಬ್ಬರು ಲಾಭ ತಂದುಕೊಡುವ, ವಾಣಿಜ್ಯ ವಹಿವಾಟಿನಂತಹ ಸಂಬಂಧ. ಇಲ್ಲಿ ಕೊಡು–ಕೊಳ್ಳುವಿಕೆ ಇದೆ. ಇಬ್ಬರಿಗೂ ಲಾಭವಿದೆ. ರಾಜ್ಯದ ರಾಜಕೀಯ ಹಾಗೂ ಸಾರ್ವಜನಿಕ ವಿಚಾರಗಳ ಮೇಲೆ ‘ದೇವಮಾನವ’ರು ಹೊಂದಿರುವ ಹಿಡಿತದ ಕರಾಳ ರಹಸ್ಯವನ್ನು ಕ್ಯಾಮೆರಾಗಳ ಎದುರು ಬಹಿರಂಗಪಡಿಸಿದ್ದು ವಚನಾನಂದ ಸ್ವಾಮೀಜಿ ಮಾಡಿದ ಮುಖ್ಯ ಅಪರಾಧ!

ಇನ್ನೊಂದು ರೀತಿಯಲ್ಲಿ ನೋಡಿದರೆ, ಯಡಿ ಯೂರಪ್ಪ ಅವರಿಗೆವಚನಾನಂದ ಸ್ವಾಮೀಜಿ ದೊಡ್ಡ ಅನುಕೂಲ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ವೀರೇಂದ್ರ ಪಾಟೀಲರಿಗೆ ಮಾಡಿತು ಎನ್ನಲಾದಅವಮಾನವು ಆ ಸಮುದಾಯವನ್ನು ಬಿಜೆಪಿಯ ಕಡೆ ಇಡಿಯಾಗಿ ಸೆಳೆಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಚುನಾವಣೆಯಲ್ಲಿ ಲಿಂಗಾಯತ ಸಮುದಾಯವು ಬಿಜೆಪಿಗೆ ಬದ್ಧತೆ ತೋರಿರುವ ಕಾರಣದಿಂದಾಗಿಯೇ ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದೆ.

ಯಡಿಯೂರಪ್ಪ ಎದುರು ಇಂಥದ್ದೊಂದು ಮಾತು ಆಡುವ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಸ್ವಾಮೀಜಿ ಒಂದು ಸಂದೇಶ ರವಾನಿಸಿದ್ದಾರೆ. ಕೈಕಟ್ಟಿಹಾಕಿದ ಸ್ಥಿತಿಯಲ್ಲಿ ಇರುವ ಯಡಿಯೂರಪ್ಪ ಅವರಿಗೆ ಈ ಸಂದೇಶ ರವಾನಿಸುವುದು ಕಷ್ಟವಾಗುತ್ತಿದೆ. ಅಧಿಕಾರಕ್ಕೆ ಬಂದ ನಂತರ ಲಿಂಗಾಯತ ಸಮುದಾಯವನ್ನು ಉಪೇಕ್ಷಿಸಲು ಆಗದು ಎನ್ನುವುದು ಆ ಸಂದೇಶ. ಈ ಮೂಲಕ, ಯಡಿಯೂರಪ್ಪ ಮೇಲಿನ ಭಾರವನ್ನುಸ್ವಾಮೀಜಿ ಕಡಿಮೆ ಮಾಡಿದ್ದಾರೆ. ಪಂಚಮಸಾಲಿ ಸಮುದಾಯದ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳುವುದಕ್ಕಿಂತಲೂ ಮಿಗಿಲಾಗಿ, ಕಣ್ಣು ಇನ್ನಷ್ಟು ಅಗಲವಾಗುವಂತೆ ಮಾಡುವ ಸಂಗತಿ, ಆ ಯುವ ಸ್ವಾಮೀಜಿ ತಮಗಿಂತ ಎರಡು ಪಟ್ಟು ಹೆಚ್ಚು ವಯಸ್ಸಾಗಿರುವ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಧೈರ್ಯದಿಂದ, ‘ಕೂತ್ಕೋಬೇಕು, ಕೂತ್ಕೊಳ್ಳಿ ನೀವು, ಕೂತ್ಕೊಳ್ಳಿ’ ಎಂದು ಹೇಳುವುದು. ಹೀಗೆ ಹೇಳುವಾಗ ಸ್ವಾಮೀಜಿ ತಾವು ಆಸನದಿಂದ ಏಳುವುದಿಲ್ಲ.

ಭಾರತದ ರಾಜಕಾರಣಿಗಳು ತಮಗೆ ದೇವಮಾನವರಿ ಗಿಂತ ಕಡಿಮೆ ಎತ್ತರದ ಆಸನ ನಿಗದಿ ಮಾಡಿದಾಗಎರಡನೆಯ ಬಾರಿ ಆಲೋಚನೆ ಮಾಡುವುದಿಲ್ಲ. ಯಡಿಯೂರಪ್ಪ ಪ್ರತಿಭಟನೆಯ ರೂಪದಲ್ಲಿ ಎದ್ದು ನಿಂತಾಗ, ಅವರಿಗೆ ಆಸನವನ್ನು ತೋರಿಸಿದ ಪರಿಯು ‘ನಾವು ಹೆಚ್ಚು ಶಕ್ತಿವಂತರ ಎದುರು ಇದ್ದೇವೆ’ ಎಂದು ತಪ್ಪಾಗಿ ಭಾವಿಸುವವರನ್ನು ಆತ್ಮಾವಲೋಕನಕ್ಕೆ ಹಚ್ಚಬೇಕು.

ಭಾರತದ ಅತ್ಯಂತ ಪ್ರಗತಿಪರ ರಾಜ್ಯವೊಂದರಲ್ಲಿ ಧರ್ಮ ಮತ್ತು ಜಾತಿ ಸಾರ್ವಜನಿಕ ಜೀವನದಲ್ಲಿ ಹೊಂದಿರುವ ಹಿಡಿತವೇನು ಎಂಬ ಬಗ್ಗೆ ಯಡಿಯೂರಪ್ಪ ವಿದ್ಯಮಾನವು ಹೊರಜಗತ್ತಿಗೆ ಹೇಳುತ್ತಿದೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಯೋಗಿ ರಾಮದೇವ್ ಅವರ ವಾಣಿಜ್ಯ ಸಾಮ್ರಾಜ್ಯ ಕಂಡ ಬೆಳವಣಿಗೆ, ಶ್ರೀ ಶ್ರೀ ರವಿಶಂಕರ್ ಮತ್ತು ಜಗ್ಗಿ ವಾಸುದೇವ್ ಅವರು ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳದಿದ್ದರೂ ಅವರು ಪಡೆದುಕೊಂಡ ಬೆಂಬಲ ಇವೆಲ್ಲ ದೇವಮಾನವ–ರಾಜಕಾರಣಿ ನಡುವಿನ ಸಂಬಂಧ ಕರ್ನಾಟಕಕ್ಕೆ ಅಥವಾ ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮಿತವಾದದ್ದಲ್ಲ ಎಂಬುದನ್ನು ತೋರಿಸುತ್ತದೆ.

ಬಾಬುಲ್ ಸುಪ್ರಿಯೊ ಅವರು ತಮಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಹೇಗೆ ಎಂಬುದನ್ನು ವಿವರಿಸಿ ಲೇಖನ ಬರೆದಿದ್ದರು. ಸುಪ್ರಿಯೊ ಅವರು ವಿಮಾನವೊಂದರಲ್ಲಿ ರಾಮದೇವ್ ಪಕ್ಕ ಕುಳಿತಿದ್ದರು. ಟಿಕೆಟ್ ಹಂಚಿಕೆ ಬಗ್ಗೆ ರಾಮದೇವ್ ಮಾತನಾಡಿದ್ದು ಅವರಿಗೆ ಕೇಳಿಸಿತು. ‘ನನಗೂ ಟಿಕೆಟ್ ಬೇಕು. ಕೊಡದಿದ್ದರೆ, ನೀವು ಟಿಕೆಟ್ ಹಂಚಿಕೆ ಮಾಡುತ್ತೀರಿ ಎಂಬುದನ್ನು ನಾನು ಮಾಧ್ಯಮದವರ ಎದುರು ಹೇಳುವೆ’ ಎಂದು ರಾಮದೇವ್‌ ಅವರಲ್ಲಿ ಸುಪ್ರಿಯೊ ಹೇಳಿದರು. ನಂತರ ಆರ್‌ಎಸ್‌ಎಸ್‌ ಪ್ರಚಾರಕ ಎಂದು ಗುರುತಿಸಿಕೊಂಡ ರಾಕೇಶ್ ಅವರಿಂದ ಒಂದು ದಿನ ಕರೆ ಬಂತು. ‘ನಾನು ಮೋದಿ ಅವರನ್ನು ಇಷ್ಟಪಡುತ್ತೇನೆ. ಹಾಗಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದೇನೆ’ ಎಂದು ಸುಪ್ರಿಯೊ ಹೇಳಿದರು. ಮೂರು ದಿನಗಳ ನಂತರ ಟಿಕೆಟ್ ಖಾತರಿ ಆಗಿರುವ ಬಗ್ಗೆ ರಾಮದೇವ್‌ ಅವರಿಂದಲೇ ಕರೆ ಬಂತು. ವಿಮಾನದಲ್ಲಿ ಭೇಟಿಯಾದ ಗಾಯಕನಿಗೆ ರಾಮದೇವ್‌ ಟಿಕೆಟ್ ಕೊಡಿಸುವುದುಸರಿಯಾದರೆ, ಮುರುಗೇಶ್ ನಿರಾಣಿ ಮತ್ತು ಇತರರಿಗೆ ಸಚಿವ ಸ್ಥಾನ ಕೊಡಿ ಎಂದು ವಚನಾನಂದ ಸ್ವಾಮೀಜಿ ಹೇಳುವುದು ಎಷ್ಟರ ಮಟ್ಟಿಗೆ ತಪ್ಪು?

ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿರಿಸಲು ಚುನಾವಣಾ ಆಯೋಗ ಕೆಲವು ನಿಯಮಗಳನ್ನು ರೂಪಿಸಿದೆ. ಆದರೆ, ವಲಸಿಗರನ್ನು ‘ಗೆದ್ದಲು’ ಎನ್ನುವುದು, ಭಿನ್ನ ಅಭಿಪ್ರಾಯ ಹೊಂದಿರುವವರನ್ನು ‘ನಾಯಿಗೆ ಗುಂಡಿಕ್ಕಿದಂತೆ’ ಗುಂಡಿಕ್ಕಲಾಗುವುದು ಎಂದು ಹೇಳುವುದು ರಾಷ್ಟ್ರೀಯ ಚರ್ಚೆಗಳ ಭಾಗ ಆಗಿರುವಾಗ, ಧರ್ಮ ಇಲ್ಲದಿದ್ದರೆ ರಾಜಕೀಯಕ್ಕೆ ಅರ್ಥವೇ ಇಲ್ಲ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹೇಳುವಾಗ, ವಚನಾನಂದ ಸ್ವಾಮೀಜಿ ಆಡಿದ ಮಾತನ್ನು ಯಾವ ಮುಖ ಇಟ್ಟುಕೊಂಡು ವಿರೋಧಿಸಬಹುದು?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT