ಗುರುವಾರ , ಫೆಬ್ರವರಿ 27, 2020
19 °C
ಹೊಸ ಯೋಜನೆಯಿಂದಾಗಿ ಭಾರತ ಮೂಲದವರೂ ಸಮಸ್ಯೆಗೆ ಸಿಲುಕಬಹುದು

ಕೀನ್ಯಾ: ಗುರುತಿನ ಸಂಖ್ಯೆ ಪಡಿಪಾಟಲು

ಅಬ್ದಿ ಲತೀಫ್ ದಾಹಿರ್ Updated:

ಅಕ್ಷರ ಗಾತ್ರ : | |

Prajavani

ಅಹಮದ್ ಖಲೀಲ್ ಅವರು 73 ವರ್ಷಗಳ ಕಾಲ ಕೀನ್ಯಾದ ಪ್ರಜೆಯಾಗಿ ಜೀವನ ಸಾಗಿಸಿದರು. ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಜನಿಸಿದ ಖಲೀಲ್, ಅಲ್ಲಿನ ಅಧ್ಯಕ್ಷರ ರಕ್ಷಣಾ ತಂಡದಲ್ಲಿ ಕೂಡ ಕೆಲಸ ಮಾಡಿದ್ದರು ಎಂದು ದಾಖಲೆಗಳು ಹೇಳುತ್ತವೆ.

ಆದರೆ, ಕಳೆದ ವರ್ಷದ ಏಪ್ರಿಲ್‌ನಲ್ಲಿ, ರಾಷ್ಟ್ರೀಯ ಗುರುತಿನ ಯೋಜನೆಗೆ ನೋಂದಾಯಿಸಲು ಹೋದ ಇವರು ನಿರಾಶರಾಗಿ ಹಿಂದಿರುಗಬೇಕಾಯಿತು. ಈ ಯೋಜನೆಯು ಕೀನ್ಯಾದ ಜನಸಂಖ್ಯೆಯ ವಿಚಾರದಲ್ಲಿ ‘ಸತ್ಯದ ಏಕೈಕ ಮೂಲ’ವಾಗಿರಲಿದೆ ಎಂದು ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯಾಟ್ಟಾ ಹೇಳಿದ್ದಾರೆ. ‘ಈಗ ನಾನು ನೆಲೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇನೆ’ ಎಂದು ಖಲೀಲ್ ಹೇಳುತ್ತಾರೆ. ಹೊಸದೊಂದು ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಕೀನ್ಯಾ ಸರ್ಕಾರವು ಪ್ರತಿ ಪ್ರಜೆಗೂ ಒಂದು ವಿಶಿಷ್ಟ ಗುರುತಿನ ಸಂಖ್ಯೆ ನೀಡಲಿದೆ. ಶಾಲೆಗೆ ಸೇರಿಕೊಳ್ಳಲು, ಆರೋಗ್ಯ ಸೇವೆ ಪಡೆಯಲು, ವಸತಿ ಸೌಲಭ್ಯ ಪಡೆಯಲು, ಮತದಾರರಾಗಿ ನೋಂದಾಯಿಸಿಕೊಳ್ಳಲು, ಮದುವೆ ಆಗಲು, ಚಾಲನಾ ಪರವಾನಗಿ ಪಡೆಯಲು, ಬ್ಯಾಂಕ್ ಖಾತೆ ಹೊಂದಲು ಈ ವಿಶಿಷ್ಟ ಸಂಖ್ಯೆಯು ಬೇಕಾಗುತ್ತದೆ. ನಾಲ್ಕು ಕೋಟಿ ಕೀನ್ಯನ್ನರು ತಮ್ಮ ಬಯೊಮೆಟ್ರಿಕ್ ವಿವರವನ್ನು ಈ ಯೋಜನೆಗಾಗಿ ಈಗಾಗಲೇ ನೀಡಿದ್ದಾರೆ.

ಆದರೆ ಜನಾಂಗೀಯ, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಲಕ್ಷಾಂತರ ಜನ ತೊಂದರೆಗೆ ಸಿಲುಕುತ್ತಿದ್ದಾರೆ. ಅವರು ಗುರುತಿನ ಸಂಖ್ಯೆಗೆ ಅಗತ್ಯವಿರುವ ದಾಖಲೆಗಳಿಗೆ ಅರ್ಜಿ ಸಲ್ಲಿಸಿದಾಗ ಹೆಚ್ಚುವರಿ ಪರಿಶೀಲನೆಗೆ ಒಳಗಾಗುತ್ತಿದ್ದಾರೆ. ಕೆಲವರ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಬಯೊಮೆಟ್ರಿಕ್ ಯೋಜನೆಯನ್ನು ಈಗ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

‘ಸರ್ಕಾರವು ತಾರತಮ್ಯಕ್ಕೆ ಡಿಜಿಟಲ್ ಸ್ಪರ್ಶ ನೀಡುತ್ತಿದೆ’ ಎನ್ನುತ್ತಾರೆ ನುಬಿಯನ್ನರ ಹಕ್ಕುಗಳ ವೇದಿಕೆ ಅಧ್ಯಕ್ಷ ಶಫಿ ಅಲಿ. ಯೋಜನೆಯನ್ನು ನ್ಯಾಯಾಲಯದ ಕಟಕಟೆಗೆ ಎಳೆದಿರುವ ಮೂರು ಗುಂಪುಗಳ ಪೈಕಿ ಇದೂ ಒಂದು. ಗುರುತಿನ ಚೀಟಿ ಮತ್ತು ಸಂಖ್ಯೆ ಇಲ್ಲದಿದ್ದರೆ ಮನುಷ್ಯರು ಇಲ್ಲಿ ಇದ್ದೂ ಸತ್ತಂತೆ ಎಂದು ಅವರು ಹೇಳುತ್ತಾರೆ.

ಬಯೊಮೆಟ್ರಿಕ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೀನ್ಯಾದ ಆಂತರಿಕ ವ್ಯವಹಾರಗಳ ಸಚಿವಾಲಯವು ಇದಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿದೆ ಎಂಬ ಕಾರಣ ನೀಡಿ ಯಾವುದೇ ಪ್ರತಿಕ್ರಿಯೆ ಕೊಡಲು ನಿರಾಕರಿಸಿದೆ. ಇಂತಹ ಯೋಜನೆಗಳು ಈಗ ಸಾಮಾನ್ಯವಾಗುತ್ತಿವೆ. ಕೆಲವು ಸಂದರ್ಭಗಳಲ್ಲಿ, ಜನರಿಗೆ ಹಣಕಾಸು ಸೇವೆಗಳನ್ನು ಲಭ್ಯವಾಗಿಸುತ್ತವೆ ಎಂಬ ಕಾರಣಕ್ಕೆ ಇಂಥವುಗಳನ್ನು ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಪ್ರಶಂಸಿಸಿವೆ.

19 ಲಕ್ಷ ಜನರು ತಮ್ಮ ಪೌರತ್ವ ಸಾಬೀತು ಮಾಡದಿದ್ದರೆ, ಅವರನ್ನು ‘ದೇಶರಹಿತರು’ ಎಂದು ಘೋಷಿಸಬಹುದು ಎಂಬ ಸ್ಥಿತಿ ಭಾರತದಲ್ಲಿ (ಅಸ್ಸಾಂ ರಾಜ್ಯದಲ್ಲಿ) ನಿರ್ಮಾಣವಾಗಿದೆ. ಇದಕ್ಕಾಗಿ ಭಾರತದ ಆಳುವ ವರ್ಗ ಟೀಕೆಗೆ ಗುರಿಯಾಗಿದೆ. ಅದೇ ರೀತಿಯಲ್ಲಿ, ಕೀನ್ಯಾ ಸರ್ಕಾರ ಕೂಡ ‘ಈಗಾಗಲೇ ದುರ್ಬಲರಾಗಿರುವವರನ್ನು ಇನ್ನಷ್ಟು ಅಂಚಿಗೆ ತಳ್ಳುತ್ತಿದೆ’ ಎಂಬ ಟೀಕೆಗೆ ಗುರಿಯಾಗಿದೆ. ‘ನಿಜವಾದ ಸಮಸ್ಯೆ ಇರುವುದು ಇಲ್ಲಿ’ ಎನ್ನುವುದು ಕೀನ್ಯಾದ ಬಯೊಮೆಟ್ರಿಕ್ ಯೋಜನೆಯ ಅಧ್ಯಯನ ನಡೆಸುತ್ತಿರುವ ಕೆರೆನ್ ವೇಸ್‌ಬರ್ಗ್‌ ಅಭಿಪ್ರಾಯ. ‘ಈ ಗುರುತಿನ ಚೀಟಿಗಳು ಈಗಿರುವ ಅಸಮಾನತೆಗಳನ್ನೇ ಮತ್ತೊಂದು ರೀತಿಯಲ್ಲಿ ಸೃಷ್ಟಿಸುತ್ತವೆ ಹಾಗೂ ನಿಜವಾದ ಕೀನ್ಯನ್ ಯಾರು ಎಂಬ ಚರ್ಚೆಗೆ ಇನ್ನಷ್ಟು ಕಾವು ಕೊಡುತ್ತವೆ’ ಎಂದು ವೇಸ್‌ಬರ್ಗ್‌ ಹೇಳುತ್ತಾರೆ.

ವಿವಿಧ ಜನಾಂಗೀಯ ಗುಂಪುಗಳ ನಡುವಿನ ಸಂಘರ್ಷದ ಇತಿಹಾಸ ಹೊಂದಿರುವ ವೈವಿಧ್ಯಮಯ ದೇಶ ಕೀನ್ಯಾ. ಬ್ರಿಟಿಷ್ ವಸಾಹತುಶಾಹಿಗಳ ಕಾರಣದಿಂದಾಗಿ ಕೀನ್ಯಾಕ್ಕೆ ಬಂದ ಭಾರತೀಯರು ಮತ್ತು ನುಬಿಯನ್ನರು ಇಲ್ಲಿ ಪೂರ್ಣ ಪ್ರಮಾಣದ ಪೌರತ್ವಕ್ಕಾಗಿ ತಲೆಮಾರುಗಳ ಕಾಲ ಹೆಣಗಾಟ ನಡೆಸಿದ್ದಾರೆ. ಅಲ್–ಶಬಾಬ್ ಎಂಬ ಭಯೋತ್ಪಾದಕರ ಗುಂಪು ನಡೆಸಿದ ದಾಳಿಗಳ ಕಾರಣದಿಂದಾಗಿ ಸೊಮಾಲಿ ಮೂಲದ ಕೀನ್ಯನ್ನರು ಅನುಮಾನಕ್ಕೆ, ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಕೀನ್ಯಾದಲ್ಲಿ ಬಯೊಮೆಟ್ರಿಕ್ ಗುರುತಿನ ಸಂಖ್ಯೆ ಪಡೆಯಲು ವಯಸ್ಕರು ಯಾವುದಾದರೊಂದು ರಾಷ್ಟ್ರೀಯ ಗುರುತಿನ ಚೀಟಿ ನೀಡಬೇಕು, 18 ವರ್ಷಕ್ಕಿಂತ ಚಿಕ್ಕವರು ಜನ್ಮದಾಖಲೆ ನೀಡಬೇಕು. ರಾಷ್ಟ್ರೀಯ ಗುರುತಿನ ಚೀಟಿಗೆ ಅಗತ್ಯವಿರುವ ದಾಖಲೆಗಳಿಗೆ ಅರ್ಜಿ ಸಲ್ಲಿಸುವುದನ್ನು ನುಬಿಯನ್ನರು, ಸೊಮಾಲಿಗಳು, ಬೊರಾನಾಗಳು, ಭಾರತೀಯರು ಮತ್ತು ಅರಬ್ಬರಿಗೆ ಕೀನ್ಯಾ ಸರ್ಕಾರವು ಈ ಹಿಂದೆಯೇ ಕಷ್ಟಕರ (ಕೆಲವೊಮ್ಮೆ ಅಸಾಧ್ಯವೆನಿಸುವ) ಪ್ರಕ್ರಿಯೆಯನ್ನಾಗಿಸಿದೆ.

ಅವರಲ್ಲಿ ಜಮೀನು ಮಾಲೀಕತ್ವದ ದಾಖಲೆ ಅಥವಾ ಅವರ ತಾತಂದಿರ ದಾಖಲೆಗಳನ್ನು ಕೇಳಬಹುದು. ಅಥವಾ ಅವರನ್ನು ಭದ್ರತಾ ಸಿಬ್ಬಂದಿ ಪ್ರಶ್ನಿಸಬಹುದು. ಬಹುತೇಕ ಸಂದರ್ಭಗಳಲ್ಲಿ ಅವರು, ವಾರದ ನಿರ್ದಿಷ್ಟ ದಿನಗಳಂದು ಅಥವಾ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಈ ಸಮುದಾಯಗಳ ಜನ ಕೀನ್ಯಾದ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಭದ್ರತೆಗೆ ಅಪಾಯ ತರುವ ಅಥವಾ ಯುದ್ಧಪೀಡಿತ ಸೊಮಾಲಿಯಾದಿಂದ ನುಸುಳುವವರನ್ನು ತಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಹೇಳುತ್ತಾರೆ. ಆದರೆ ಸರ್ಕಾರದ ಕ್ರಮವು ಗಡಿ ಪ್ರದೇಶಗಳಲ್ಲಿ ವಾಸಿಸುವ ಮಸಾಯಿ ಮತ್ತು ಸಂಬುರು ಅಲೆಮಾರಿ ಸಮುದಾಯಗಳ ಜನರ ಮೇಲೆಯೂ ಪರಿಣಾಮ ಉಂಟುಮಾಡುತ್ತದೆ.

ಹೆಚ್ಚುವರಿ ಅಡೆತಡೆಗಳು ಕೀನ್ಯಾದ ಕನಿಷ್ಠ 50 ಲಕ್ಷ ಜನರಿಗೆ ತೊಂದರೆ ಮಾಡಿವೆ. ಅವರ ಗುರುತಿನ ಚೀಟಿಗಳನ್ನು ಸಿದ್ಧಪಡಿಸುವುದು ನಿಧಾನವಾಗುತ್ತಿದೆ ಅಥವಾ ಕೆಲವರ ಅರ್ಜಿಗಳೇ ತಿರಸ್ಕೃತ ಆಗುತ್ತಿವೆ ಎಂದು ಅಂತರರಾಷ್ಟ್ರೀಯ ಕಾನೂನು ನ್ಯಾಯ ಸಂಘಟನೆ ‘ನಮತಿ’ಯ ಪೌರತ್ವ ಯೋಜನೆ ನಿರ್ದೇಶಕ ಕಾರಾ ಗುಡ್‌ವಿನ್‌ ಹೇಳುತ್ತಾರೆ. ಹಿಂದಿನ ವರ್ಷದ ಏಪ್ರಿಲ್‌, ಮೇ ತಿಂಗಳುಗಳಲ್ಲಿ ಬಯೊಮೆಟ್ರಿಕ್ ನೋಂದಣಿ ಅಭಿಯಾನ ನಡೆದಾಗ, ಹಲವರನ್ನು ವಾಪಸ್ ಕಳುಹಿಸಲಾಯಿತು ಎಂದು ಮಾನವ ಹಕ್ಕುಗಳ ಪರ ಕಾರ್ಯಕರ್ತರು ಹೇಳುತ್ತಾರೆ. ಈ ಯೋಜನೆ ಮುಂದುವರಿದರೆ, ಲಕ್ಷಾಂತರ ಜನರಿಗೆ ಗುರುತಿನ ಸಂಖ್ಯೆ ಇಲ್ಲದಂತಾಗುತ್ತದೆ ಎಂದು ಗುಡ್‌ವಿನ್‌ ಹೇಳುತ್ತಾರೆ. ಖಲೀಲ್ ಅವರ ಪೂರ್ವಿಕರನ್ನು ಬ್ರಿಟಿಷರು ಸುಡಾನ್‌ನಿಂದ ನೂರಾರು ವರ್ಷಗಳ ಹಿಂದೆ ಕರೆತಂದರು. ಈಗ ಸರ್ಕಾರದ ಈ ಯೋಜನೆಯ ಕಾರಣದಿಂದಾಗಿ, ಅವರು ‘ದೇಶವಿಲ್ಲದ’ ವ್ಯಕ್ತಿಯಾಗುವ ಅಪಾಯ ಎದುರಾಗಿದೆ.

ಪೊಲೀಸ್ ಸೇವೆಯಿಂದ ಹೊರಬಂದ ನಂತರ, 1970ರ ದಶಕದಲ್ಲಿ ತನ್ನ ರಾಷ್ಟ್ರೀಯ ಗುರುತಿನ ಚೀಟಿಯನ್ನು ಕಳೆದುಕೊಂಡೆ ಎಂದು ಖಲೀಲ್ ಹೇಳುತ್ತಾರೆ. ಇದಾದ ನಂತರ, ಬದಲಿ ಗುರುತಿನ ಚೀಟಿ ಪಡೆದುಕೊಳ್ಳಲು ಅವರಿಂದ ಆಗಿಲ್ಲ. ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆಯಡಿ ನೋಂದಣಿ ಆಗದವರಿಗೆ ದಂಡ, ಜೈಲು ವಾಸದ ಶಿಕ್ಷೆಯನ್ನು ನಿಗದಿ ಮಾಡಲಾಗಿದೆ. ಇದು ತೀರಾ ಅತಿ ಎಂಬ ಟೀಕೆಗಳು ವ್ಯಕ್ತವಾಗಿವೆ. ‘ಜನರಿಗೆ ಒಳ್ಳೆಯದು ಎನ್ನುವ ಯೋಜನೆಗಳಲ್ಲಿ ಭಾಗಿಯಾಗಲು ಜನರನ್ನು ಬ್ಲ್ಯಾಕ್‌ಮೇಲ್‌ಗೆ ಒಳ‍ಪಡಿಸಬೇಕಿಲ್ಲ’ ಎನ್ನುವುದು ಲೇಖಕ ನಂಜಲಾ ನ್ಯಬೊಲಾ ಅವರ ಅಭಿಪ್ರಾಯ.

ಖಲೀಲ್ ಅವರಿಗೆ ಒಂದು ಆಶಾಕಿರಣ ಇದೆ. ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆಯ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಲು ಒಪ್ಪಿದ ನಂತರ ಅವರ ಮನೆಗೆ ಈ ಯೋಜನೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಖಲೀಲ್ ಅವರ ದಾಖಲೆಗಳನ್ನು ಪಡೆದು, ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ‘ಕೀನ್ಯಾದವರು ಕೀನ್ಯನ್ ಆಗುವುದು ಯಾವಾಗ. ಎಲ್ಲರಿಗೂ ಒಳಿತು ಮಾಡುವ ವ್ಯವಸ್ಥೆ ಬೇಕು’ ಎಂದು ಖಲೀಲ್ ಹೇಳುತ್ತಾರೆ.

ಕೃಪೆ: ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು