ಭಾನುವಾರ, ಜನವರಿ 19, 2020
23 °C
ಈ ಸೆಕ್ಷನ್‌ನ ವಿಚಾರದಲ್ಲಿ ‘ಮೈಲಿಗಲ್ಲು’ ಎನ್ನಲಾದ ಎಂಟು ತೀರ್ಪು ಮತ್ತು ವಸ್ತುಸ್ಥಿತಿ

ವಿಶ್ಲೇಷಣೆ| ಸೆಕ್ಷನ್ 144ರ ನಿರಂತರ ದುರ್ಬಳಕೆ!

ಕೆ.ವಿ. ಧನಂಜಯ Updated:

ಅಕ್ಷರ ಗಾತ್ರ : | |

prajavani

ನಿರ್ದಿಷ್ಟ ಸ್ಥಳದಲ್ಲಿ ‘ತುರ್ತು ಸಂದರ್ಭ’ವನ್ನು ನಿಯಂತ್ರಿಸಲು ಅಥವಾ ತುರ್ತು ಸಂದರ್ಭ ಸೃಷ್ಟಿಯಾಗದಂತೆ ತಡೆಯಲು ತನಗೆ ಸೂಕ್ತವೆನಿಸಿದ ಆದೇಶವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅಥವಾ ಸರ್ಕಾರದಿಂದ ಸೂಚಿತನಾದ ಯಾವುದೇ ಅಧಿಕಾರಿ ಹೊರಡಿಸಬಹುದು ಎನ್ನುತ್ತದೆ ಸಿಆರ್‌ಪಿಸಿಯ ಸೆಕ್ಷನ್ 144. ಇದನ್ನು ಬ್ರಿಟಿಷರು ಮತ್ತೆ ಮತ್ತೆ ಬಳಕೆ, ದುರ್ಬಳಕೆ ಮಾಡಿಕೊಂಡಿದ್ದರು. ಈ ಕಾನೂನನ್ನು ಕಿತ್ತೊಗೆಯುವ ಶಪಥವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ್ದರು.

ಈಗಿರುವ ಅಥವಾ ಜಾರಿಗೆ ಬರಲಿರುವ ಕಾನೂನೊಂದನ್ನು ವಿರೋಧಿಸಿ ಒಂದಿಷ್ಟು ಜನ ಪ್ರತಿಭಟಿಸಲು ತೀರ್ಮಾನಿಸಿದ್ದಾರೆ ಎಂದು ಭಾವಿಸಿ. ಪೊಲೀಸರಿಂದ ಪಡೆದ ಮಾಹಿತಿ ಆಧರಿಸಿ ಮ್ಯಾಜಿಸ್ಟ್ರೇಟರು, ‘ಪ್ರತಿಭಟನೆಗೆ ಅವಕಾಶ ನೀಡಿದರೆ ಹಿಂಸಾಚಾರ ಸೃಷ್ಟಿಯಾಗುತ್ತದೆ, ಶಾಂತಿ ಕದಡುತ್ತದೆ. ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಲಿಖಿತ ಆದೇಶ ನೀಡುತ್ತಾರೆ. ಸರ್ಕಾರ ಹೇರುವ ಇಂತಹ ನಿಯಂತ್ರಣವು ಪ್ರಜಾತಾಂತ್ರಿಕ ಎಂದು ಯಾರಾದರೂ ಕರೆಯಬಹುದೇ? ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸರ್ಕಾರ ಇಂತಹ ಉಗ್ರ ಕ್ರಮ ಕೈಗೊಳ್ಳಬಹುದು. ಆದರೆ ‘ತುರ್ತು ಪರಿಸ್ಥಿತಿ’ ಎಂದರೆ ಏನು? ಹಾಗಂದರೆ ಏನು ಎಂಬ ವಿಚಾರದಲ್ಲಿ ದೇಶದಲ್ಲಿ ಬಹುತೇಕರಿಗೆ ಅರಿವಿಲ್ಲ. ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಸರ್ಕಾರ ಹೇಳಿದರೆ ಅಂತಹ ಸ್ಥಿತಿ ಇದೆ ಎಂದು ಅರ್ಥ. ಅಷ್ಟೆ, ಮತ್ತೇನೂ ಇಲ್ಲ!

ದೇಶದ ಭದ್ರತೆಗೆ ಅಪಾಯ ಒಡ್ಡುವ ಆಂತರಿಕ ಕ್ರಾಂತಿಯ ಕಾರಣ ನೀಡಿ ಇಂದಿರಾ ಗಾಂಧಿ ಅವರು 1975ರಲ್ಲಿ ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಹೇರಿದರು. ಆದರೆ ಆ ಸಂದರ್ಭದಲ್ಲಿ ದೇಶದೆಲ್ಲೆಡೆ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಗಳ ಉದ್ದೇಶ ‘ಪ್ರಧಾನಿ ಸ್ಥಾನದಿಂದ ಕೆಳಗಿಳಿಯಿರಿ’ ಎಂದು ಇಂದಿರಾ ಅವರನ್ನು ಒತ್ತಾಯಿಸುವುದಾಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ನೇತೃತ್ವದ ಸರ್ಕಾರ ನಡೆಸಿದ ಎಲ್ಲ ದೌರ್ಜನ್ಯಗಳನ್ನು ಶಾ ಆಯೋಗ ದಾಖಲಿಸಿದೆ.

ಬಿಜೆಪಿ ಆಡಳಿತ ಇರುವ ಇಡೀ ಉತ್ತರ ಪ್ರದೇಶದಲ್ಲಿ ಸಿಆರ್‌ಪಿಸಿಯ ಸೆಕ್ಷನ್‌ 144ರ ಅಡಿ ಈಚೆಗೆ ಪ್ರತಿಬಂಧಕಾಜ್ಞೆ ಹೇರಲಾಗಿತ್ತು. 23 ಕೋಟಿ ಜನಸಂಖ್ಯೆ ಇರುವ ರಾಜ್ಯ ಇದು. ಶಾಂತಿಯುತ ರ್‍ಯಾಲಿಗಳು ಹಾಗೂ ಮೌನ ಪ್ರತಿಭಟನೆಗಳನ್ನು ಕೂಡ ಅಲ್ಲಿ ನಿಷೇಧಿಸಲಾಗಿದೆ. ಕರ್ನಾಟಕ ಸರ್ಕಾರ ಕೂಡ ಸೆಕ್ಷನ್‌ 144 ಅನ್ನು ಬಳಸಿ, ಇಂತಹ ನಿರ್ಬಂಧವನ್ನು ಕೆಲವು ದಿನಗಳ ಹಿಂದೆ ವಿಧಿಸಿತ್ತು.

ಸ್ವಾತಂತ್ರ್ಯ ಪಡೆದ ನಂತರ ಪ್ರತಿ ದಶಕದಲ್ಲೂ ಸುಪ್ರೀಂ ಕೋರ್ಟ್‌, ಸೆಕ್ಷನ್ 144ರ ಮೇಲೆ ಒಂದಾದರೂ ತೀರ್ಪು ನೀಡಿದೆ. ಈ ತೀರ್ಪುಗಳನ್ನು ಸಾಮಾಜಿಕ ಕಾರ್ಯಕರ್ತರು ‘ಮೈಲಿಗಲ್ಲು’ ಎಂದು ಬಣ್ಣಿಸುತ್ತಾರೆ. ದುರದೃಷ್ಟದ ಸಂಗತಿಯೆಂದರೆ ಈ ತೀರ್ಪುಗಳನ್ನು ಕಾರ್ಯಕರ್ತರನ್ನು ಹೊರತುಪಡಿಸಿದರೆ ಬೇರೆ ಯಾರೂ ಓದುತ್ತಿರುವಂತಿಲ್ಲ. ಈ ಸೆಕ್ಷನ್ನಿನ ದುರ್ಬಳಕೆಯನ್ನು ರಾಜ್ಯ ಸರ್ಕಾರಗಳು ಮುಂದುವರಿಸುತ್ತವೆ.

ಸೆಕ್ಷನ್‌ 144, ರಾಜ್ಯ ಸರ್ಕಾರಗಳಿಗೆ ಅನಿರ್ಬಂಧಿತ ಅಧಿಕಾರ ನೀಡುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಗುರುತಿಸಿದೆ. ಕೆಲವು ಮಿತಿಗಳನ್ನು ವಿಧಿಸದೆ ಇದ್ದರೆ ಈ ಸೆಕ್ಷನ್ ಅಡಿ ವಸ್ತುನಿಷ್ಠವಲ್ಲದ ಯಾವುದೇ ಆದೇಶವನ್ನು ಸರ್ಕಾರಗಳು ಹೊರಡಿಸಬಹುದು ಎಂಬುದನ್ನೂ ಕಂಡುಕೊಂಡಿದೆ. ಮ್ಯಾಜಿಸ್ಟ್ರೇಟರು ಲಿಖಿತವಾಗಿ ಆದೇಶ ಹೊರಡಿಸಬೇಕು, ಅದರಲ್ಲಿ ಅವರು ತಮ್ಮೆದುರು ಇದ್ದ ಆಧಾರಗಳನ್ನು ಉಲ್ಲೇಖಿಸಬೇಕು, ನಿರ್ದಿಷ್ಟ ಪ್ರದೇಶದಲ್ಲಿ ತುರ್ತು ಕ್ರಮಕ್ಕೆ ಮುಂದಾಗಲು ಆ ಆಧಾರಗಳು ಸಾಕು ಎಂದು ತಮಗೆ ಅನಿಸಿದವು ಎಂಬುದನ್ನು ಉಲ್ಲೇಖಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮತ್ತೆ ಮತ್ತೆ ಹೇಳಿದೆ. ಮ್ಯಾಜಿಸ್ಟ್ರೇಟರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಆದರೆ ಎಲ್ಲವೂ ಇಷ್ಟು ಸರಳವಾಗಿ, ಇಷ್ಟು ಪಾರದರ್ಶಕವಾಗಿ ನಡೆಯುವಂತಿದ್ದರೆ ಎಷ್ಟು ಚೆನ್ನ!

ಸಾಂವಿಧಾನಿಕ ವಿಷಯಗಳ ಮೇಲೆ ವಾದ ಮಂಡಿಸುವ ದೇಶದ ಅತ್ಯುತ್ತಮ ವಕೀಲರಲ್ಲಿ ಎ.ಜಿ. ನೂರಾನಿ ಕೂಡ ಒಬ್ಬರು. 1984ರಲ್ಲಿ ಸುಪ್ರೀಂ ಕೋರ್ಟ್‌ ಇನ್ನೊಂದು ತೀರ್ಪು ನೀಡಿತ್ತು. ಕಾಶ್ಮೀರದಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144ರ ದುರ್ಬಳಕೆ ಆಗದಂತೆ ನೋಡಿಕೊಳ್ಳುವುದು ಹೇಗೆಂಬುದರ ಬಗ್ಗೆ ಇತ್ತು ಆ ತೀರ್ಪು. ಆ ತೀರ್ಪನ್ನು ಉದ್ದೇಶಿಸಿ ನೂರಾನಿಯವರು, ಅದುವರೆಗಿನ 35 ವರ್ಷಗಳಲ್ಲಿ ಕಾಶ್ಮೀರ ಮತ್ತು ದೇಶದ ಇತರೆಡೆಗಳಲ್ಲಿ ಸೆಕ್ಷನ್ 144ರ ದುರ್ಬಳಕೆಯನ್ನು ತಡೆಯುವಲ್ಲಿ ಸುಪ್ರೀಂ ಕೋರ್ಟ್‌ ವೈಫಲ್ಯ ಕಂಡಿದೆ ಎಂದು ಕಟುವಾಗಿ ಬರೆದಿದ್ದರು. ಸುಪ್ರೀಂ ಕೋರ್ಟ್‌ ಶುಕ್ರವಾರ (ಜ. 10) ಇನ್ನೊಂದು ತೀರ್ಪು ನೀಡಿದೆ. ಸೆಕ್ಷನ್ 144ರ ವಿಚಾರವಾಗಿ ಇದು ಕೂಡ ‘ಮೈಲಿಗಲ್ಲು’ ಎಂಬಂತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಈ ಹೊಸ ತೀರ್ಪಿನ ವಿಚಾರವಾಗಿಯೂ ನೂರಾನಿ ಬರೆಯಬಹುದು. ಅವರು 1984ರಲ್ಲಿ ಬರೆದಿದ್ದನ್ನೇ ಪುನಃ ಬರೆಯಬಹುದು! ಕೊನೆಯಲ್ಲಿ ಅವರು, ‘ಸರ್ಕಾರದ ನೀತಿಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಜನರ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್‌ ಕಳೆದ 70 ವರ್ಷಗಳ ಅವಧಿಯಲ್ಲಿ ಏನೂ ಪ್ರಗತಿ ಸಾಧಿಸಿಲ್ಲ’ ಎಂಬ ಸಾಲು ಸೇರಿಸಬಹುದು.

ಸಂವಿಧಾನದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರಗಳನ್ನು ನೀಡಿತ್ತು. ಈ ವಿಶೇಷಾಧಿಕಾರಗಳನ್ನು ಸಂಸತ್ತು ಹಿಂದಿನ ವರ್ಷ ಹಿಂತೆಗೆಯಿತು. ಸಂಸತ್ತಿನ ತೀರ್ಮಾನಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದರು. ಕಾಶ್ಮೀರವು ಸೆಕ್ಷನ್ 144ರ ಅನುಚಿತ ಬಳಕೆಯನ್ನು ಹಿಂದಿನಿಂದಲೂ ಕಂಡಿದೆ. 2019ರ ಆಗಸ್ಟ್‌ನಲ್ಲಿ ಕಾಶ್ಮೀರದಲ್ಲಿ ಸೆಕ್ಷನ್‌ 144ರ ಅಡಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಯಿತು. ಇದನ್ನು ಕಾಶ್ಮೀರದ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸೆಕ್ಷನ್ 144ರ ಅಡಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತಂದಿದ್ದ ಕೇಂದ್ರ ಸರ್ಕಾರವು ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ ಹೊರಡಿಸಿದ್ದ ಯಾವ ಆದೇಶವನ್ನೂ ಸುಪ್ರೀಂ ಕೋರ್ಟ್‌ಗೆ ಹಾಜರುಪಡಿಸಲಿಲ್ಲ. ಅಲ್ಲಿ ಸೆಕ್ಷನ್ 144ರ ಅಡಿ ನಿರ್ಬಂಧ ವಿಧಿಸಿದ್ದನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‌ಗೆ ಇದೊಂದೇ ನೆಲೆ ಸಾಕಿತ್ತು. ಆದರೆ ಅದು ಅಸಹಾಯಕವಾಗಿ ನಿಂತಿತು. ಆ ಆದೇಶಗಳನ್ನು ಕೇಂದ್ರ ಸರ್ಕಾರವು ಬಹಿರಂಗಪಡಿಸಬೇಕು. ಆಗ ಸಂಬಂಧಪಟ್ಟವರು ನ್ಯಾಯಾಲಯದ ಮೆಟ್ಟಿಲು ಏರಬಹುದು ಎಂದು ಹೇಳಿದೆ.

ಇಂಟರ್ನೆಟ್‌ ಮೇಲೆ ವಿಧಿಸಿದ ನಿರ್ಬಂಧದ ವಿಚಾರವಾಗಿ, ಸೆಕ್ಷನ್‌ 144ರ ಅಡಿ ಇಂತಹ ಕ್ರಮವನ್ನು ಹಿಂದೆಯೂ ಕೈಗೊಳ್ಳಲಾಗಿತ್ತು. ಆದರೆ, ಭಾರತೀಯ ಟೆಲಿಗ್ರಾಫ್ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಈ ಕ್ರಮವನ್ನು ಮತ್ತೆ ಮತ್ತೆ ಪರಿಶೀಲಿಸುತ್ತಿರಬೇಕು ಎಂದು ಹೇಳಿದೆ. ಆದರೆ, ಇಂಟರ್ನೆಟ್‌ ಸೌಲಭ್ಯ ಹೊಂದುವುದು ಮೂಲಭೂತ ಹಕ್ಕು ಹೌದೇ ಎಂಬ ವಿಚಾರವಾಗಿ ತಾನು ತೀರ್ಮಾನ ಮಾಡಿಲ್ಲ ಎಂದು ಕೋರ್ಟ್‌ ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ವಿಸ್ತೃತ ಹಕ್ಕಿನ ಭಾಗ ಇಂಟರ್ನೆಟ್‌ ಎಂದು ಕೋರ್ಟ್‌ ಹೇಳಿದೆ.

ಜನವರಿ 10ರ ತೀರ್ಪನ್ನು ಹಲವರು ‘ಮೈಲಿಗಲ್ಲು’ ಎಂದು ಸಂಭ್ರಮಿಸುತ್ತಿದ್ದಾರೆ. ಸೆಕ್ಷನ್ 144ರ ವಿಚಾರವಾಗಿ ಕಳೆದ 70 ವರ್ಷಗಳಲ್ಲಿ ‘ಮೈಲಿಗಲ್ಲು’ ಎನ್ನಲಾದ ಎಂಟನೆಯ ತೀರ್ಪು ಇದು. ಇಲ್ಲಿ ಎರಡು ವಿಚಾರಗಳು ಸ್ಪಷ್ಟ– ಒಂಬತ್ತನೆಯ ‘ಮೈಲಿಗಲ್ಲು’ ತೀರ್ಪೊಂದು ಮುಂದಿನ ದಶಕದಲ್ಲಿ ಬರಲಿದೆ ಹಾಗೂ ಆ ವೇಳೆಗೆ ಸೆಕ್ಷನ್ 144 ಅನ್ನು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುವುದು ಇನ್ನಷ್ಟು ಹೆಚ್ಚಿರಲಿದೆ.

ಲೇಖಕ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು