ಭಾನುವಾರ, ಏಪ್ರಿಲ್ 5, 2020
19 °C
ವನ್ಯಪ್ರಾಣಿ ಹಾವಳಿ ತಡೆಗೆ ಪರಿಸರಸ್ನೇಹಿ ಸಂಯೋಜಿತ ತಂತ್ರಗಳೇ ಬೇಕು

ಕಪಿಕಾಟ ಮತ್ತು ಕಡಿವಾಣದ ತುರ್ತು

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

Prajavani

ಬೆಳೆಹಾನಿ ಮಾಡುವ ಮಂಗನಕಾಟ ತಡೆಯಲು ದೀರ್ಘಾವಧಿ ಯೋಜನೆಯೊಂದನ್ನು ರೂಪಿಸುವ ಪ್ರಸ್ತಾವ, ಇತ್ತೀಚೆಗೆ ಮಂಡನೆಯಾದ ರಾಜ್ಯ ಮುಂಗಡಪತ್ರದಲ್ಲಿ ಇದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಈ ಯೋಜನೆಯ ಜಾರಿಗಾಗಿ ಒಂದೂಕಾಲು ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದೆಂದೂ ಹೇಳಲಾಗಿದೆ. ಹೊಲ-ತೋಟಗಳಿಗೆ ನುಗ್ಗಿ ಬೆಳೆಯನ್ನು ನಾಶ ಮಾಡುವ ಮಂಗನಕಾಟದಂಥ ಪ್ರಾಣಿ ಹಾವಳಿ ಸಮಸ್ಯೆ ರಾಜ್ಯ ದಾದ್ಯಂತ ಇದ್ದು, ಅದು ಎಷ್ಟು ಗಂಭೀರವಾಗಿದೆ ಎಂಬು ದನ್ನು ಸರ್ಕಾರವು ಗುರುತಿಸಿರುವುದು ಸ್ವಾಗತಾರ್ಹ. ಕೈಗೊಳ್ಳುವ ಪರಿಹಾರದ ಸ್ವರೂಪ ಹೇಗಿರಬೇಕೆಂದು ಈಗ ಚಿಂತಿಸಬೇಕಿದೆ.

ರೈತರ ಅಂಗಳಕ್ಕೆ ವನ್ಯಪ್ರಾಣಿಗಳು ದಾಳಿಯಿಡುತ್ತಿ ರುವ ಪ್ರಕರಣಗಳು ಒಂದೂವರೆ ದಶಕದಿಂದ ನಾಡಿ ನೆಲ್ಲೆಡೆ ಹೆಚ್ಚುತ್ತಿವೆ. ನಿರಂತರವಾಗಿ ಕಾಡು ಕ್ಷೀಣಿಸುತ್ತ, ಅದರೊಳಗಣ ಜೀವವೈವಿಧ್ಯ ನಾಶವಾಗುತ್ತ ಸಾಗಿದಂತೆಲ್ಲ, ಅರಣ್ಯ ಪ್ರದೇಶಗಳ ಧಾರಣಾಶಕ್ತಿಯೇ ಕುಸಿಯತೊಡಗಿತಲ್ಲವೇ? ಹೊಳೆ-ಕೆರೆಗಳಂಥ ಜಲಮೂಲಗಳು ಬತ್ತಿ, ಆಹಾರ ಲಭ್ಯತೆಯೂ ಕಡಿಮೆಯಾಗಿ, ಅಲ್ಲಿನ ವನ್ಯಪ್ರಾಣಿಗಳು ಊರು-ಕೇರಿ, ಹೊಲ-ತೋಟಗಳಿಗೆ ದಾಳಿಯಿಡುವ ಸಂದರ್ಭಗಳು ಹೆಚ್ಚಾಗತೊಡಗಿದವು. ವಾಸಸ್ಥಾನ ಛಿದ್ರಗೊಂಡು ನಾಡಿಗೆ ಬರುವ ಆನೆ, ಚಿರತೆಗಳ ದಾಳಿ ಯಾದರೋ ಒಂದಷ್ಟು ಪ್ರದೇಶಗಳಿಗೆ ಸೀಮಿತ. ಆದರೆ, ಕೃಷಿಭೂಮಿಯಲ್ಲೇ ಠಿಕಾಣಿ ಹೂಡುತ್ತಿರುವ ಮಂಗಗಳ ಕಾಟ ಮಾತ್ರ ಎಲ್ಲೆಡೆಯೂ ಇದೆ. ಮಲೆನಾಡು- ಕರಾವಳಿಯ ರೈತರಿಗಂತೂ ಇದು ದೊಡ್ಡ ಸಮಸ್ಯೆ. ರಾಜ್ಯದಲ್ಲಿ ವಾರ್ಷಿಕ ₹ 400 ಕೋಟಿಗೂ ಮಿಕ್ಕಿ ಬೆಳೆಹಾನಿ ಯಾಗುತ್ತಿದೆಯೆಂದು ಕೃಷಿ ಇಲಾಖೆಯೇ ಅಂದಾಜಿಸಿದೆ!

ದೇಶದಾದ್ಯಂತ ಹನ್ನೆರಡಕ್ಕೂ ಮಿಕ್ಕಿ ಮಂಗನ ಪ್ರಭೇದಗಳಿವೆ. ಆದರೆ, ನಾಡನ್ನು ಇಂದು ಕಾಡುತ್ತಿರು ವುದು ಬಿಳಿಮಂಗ ಮತ್ತು ಕೋಡಗದ ಸಂತತಿ ಮಾತ್ರ. ಹಳ್ಳಿ-ಪಟ್ಟಣಗಳಂಚಿನ ಕಾಡಿನಲ್ಲಿ ಬಿಳಿಮಂಗದ (ಬಾನೆಟ್ ಕೋತಿ) ಸಂಖ್ಯೆ ಹೆಚ್ಚಿದ್ದರೆ, ದಟ್ಟ ಕಾಡಿ
ನಲ್ಲಿ ಕೋಡಗದ (ಲಂಗೂರ್ ಕೋತಿ) ಸಾಂದ್ರತೆ ಹೆಚ್ಚು. ಮಿದುಳು ಬಲು ವಿಕಾಸವಾಗಿರುವ ಈ ಚಾಣಾಕ್ಷ ಸಸ್ತನಿಗಳ ಸಾಮಾಜಿಕ ಜೀವನವು ವಿಶಿಷ್ಟವಾದದ್ದು. ಆಹಾರ ಸಂಗ್ರಹ, ವೈರಿಗಳಿಂದ ರಕ್ಷಣೆ, ಸಂಗಾತಿಗಳ ಆಯ್ಕೆ, ಸಂತಾನವೃದ್ಧಿ- ಯಾವುದೇ ಇರಲಿ, ಗುಂಪಿನ ಸದಸ್ಯರು ಪರಸ್ಪರ ಸಹಾಯ ಮಾಡುತ್ತ ಬದುಕುವುದನ್ನು ವಿಜ್ಞಾನಿಗಳು ಅಚ್ಚರಿಯಿಂದಲೇ ದಾಖಲಿಸಿದ್ದಾರೆ. ನಲ್ಲಿ ತಿರುಗಿಸಿ ನೀರು ಕುಡಿಯುವಷ್ಟು ಅಥವಾ ಕಲ್ಯಾಣಮಂಟಪದಲ್ಲಿ ಬಿಸಾಡುವ ಊಟದ ಎಲೆಗೆ ಕಾಯು ವಷ್ಟು ಹೊಸ ಪರಿಸರಕ್ಕೆ ಒಗ್ಗಿಕೊಂಡಿರುವ ಅವುಗಳ ಜೀವನ ವಿಧಾನವು ಜೀವವಿಕಾಸದ ವಿಶಿಷ್ಟ ವಿದ್ಯಮಾನವೇ ಸರಿ!

ಹವಾಮಾನ ಬದಲಾವಣೆಯ ಪರಿಣಾಮಗಳನ್ನೂ ಮೆಟ್ಟಿನಿಲ್ಲುತ್ತಿರುವ ಮಂಗದ ಈ ಜೀವನಕೌಶಲದ ಯಶಸ್ಸಿನ ಹಿಂದೆ, ಮೂರ್ನಾಲ್ಕು ದಶಕಗಳಿಂದ ಕೃಷಿ-ಅರಣ್ಯ ಪರಿಸರವನ್ನು ನಾವು ನಿರ್ವಹಿಸುತ್ತಿರುವ ರೀತಿಯ ಕೊಡುಗೆಯೂ ಇದೆ. ಕೊಳವೆಬಾವಿಯ ಮೂಲಕ ಅಂತರ್ಜಲವನ್ನು ನಿರಂತರವಾಗಿ ಹೀರುತ್ತಲೇ ವಿಸ್ತರಿಸುತ್ತಿರುವ ಆಧುನಿಕ ಕೃಷಿ ವಿಧಾನಗಳಿಂದಾಗಿ, ಒಣಭೂಮಿಯೂ ಹಸಿರಾಗತೊಡಗಿತು. ಭತ್ತ-ಜೋಳದ ಗದ್ದೆಗಳಲ್ಲಿ ಬಾಳೆ, ಅಡಿಕೆ, ಕಾಫಿ ಬೆಳೆಗಳು ಮೇಲೆದ್ದವು. ಸಮೃದ್ಧ ಆಹಾರವು ಕಾಡಿಗಿಂತ ಹೆಚ್ಚಾಗಿ ಪಕ್ಕದ ಹೊಲ-ತೋಟಗಳಲ್ಲೇ ಮಂಗಗಳಿಗೆ ಲಭಿಸತೊಡಗಿತು. ಪರಿಸರದ ಪಾಠವನ್ನು ಬೇಗ ಕಲಿಯುವ ಅವು ಈ ಹೊಸ ಅವಕಾಶಗಳನ್ನು ವೇಗವಾಗಿ ಅಪ್ಪಿಕೊಂಡವು.

ಮಂಗಗಳನ್ನು ಹನುಮಂತ ಸ್ವರೂಪಿ ಎಂದು ನಂಬುವುದರಿಂದ, ರೈತರು ಅವನ್ನು ಕೊಲ್ಲುವುದೂ ಕಡಿಮೆ. ಹೀಗಾಗಿ, ಮಂಗಗಳ ಆರೋಗ್ಯ, ಆಯುಷ್ಯ ಹೆಚ್ಚುತ್ತಿವೆ. ಮಲೆನಾಡು ಹಾಗೂ ಕರಾವಳಿಯಲ್ಲಿ ಅವುಗಳ ಸಂತಾನವು ಮಿತಿಮೀರಿ ವೃದ್ಧಿಯಾಗುತ್ತಿರುವುದನ್ನು ಪರಿಸರ ತಜ್ಞರು ಗುರುತಿಸಿದ್ದಾರೆ. ಕಾಡಿಗಿಂತ ನಾಡನ್ನೇ ಮಂಗಗಳು ನೆಚ್ಚಿಬಿಟ್ಟಿವೆಯಲ್ಲ! ಮಣ್ಣಿನಗುಣ, ವಾತಾವರಣದ ಸ್ವರೂಪ, ನೈಸರ್ಗಿಕ ನೀರಿನ ಲಭ್ಯತೆ- ಇವೆಲ್ಲವನ್ನೂ ಧಿಕ್ಕರಿಸಿ ಕಳೆದ ಮೂರು ದಶಕಗಳಿಂದ ನಾಡಿನ ಕೃಷಿಪರಿಸರದ ಸ್ವರೂಪವನ್ನೇ ಬದಲಾಯಿಸಿರುವ ನೆಲಬಳಕೆ ನೀತಿಗೆ ಯಾರನ್ನು ದೂಷಿಸಬೇಕು?

ರೈತರನ್ನು ಹಿಂಡುತ್ತಿರುವ ಈ ಮಂಗನಕಾಟಕ್ಕೆ ಪರಿಹಾರ ಕಂಡುಕೊಳ್ಳುವ ತುರ್ತಿರುವುದು ನಿಜ. ಹಾಗೆಂದು, ಅರಣ್ಯ ಇಲಾಖೆ ಪ್ರಸ್ತಾಪಿಸುತ್ತಿರುವಂತೆ ಶಿವಮೊಗ್ಗದ ಶರಾವತಿ ಹಿನ್ನೀರಿನ ಕಾಡಿನಲ್ಲಿ ‘ಮಂಗನ ಪಾರ್ಕ್’ ಸ್ಥಾಪಿಸಲು ಮುಂದಾದರೆ, ಭವಿಷ್ಯದಲ್ಲಿ ಇನ್ನಷ್ಟು ಅನಾಹುತಗಳಾದಾವು. ನಾಡಿನಲ್ಲಿರುವ ಲಕ್ಷಾಂತರ ಮಂಗಗಳಿಗೆ ಎಷ್ಟೆಂದು ಪಾರ್ಕ್ ಸ್ಥಾಪಿಸುತ್ತೀರಿ? ಪ್ರತಿ ಊರಿನ ರೈತರೂ ಅಂಥ ಬೇಡಿಕೆಯಿಟ್ಟರೆ ಏನಾದೀತು? ಮಂಗಗಳನ್ನು ಹಿಡಿದು ಸಾಗಿಸಿ, ‘ಮಂಗೋದ್ಯಾನ’ಗಳಲ್ಲಿ ಆಹಾರವಿತ್ತು ಸಾಕುವುದು ಖಂಡಿತಕ್ಕೂ ಆರ್ಥಿಕವಾಗಿ ಸಾಧುವಲ್ಲ. ಇಷ್ಟಕ್ಕೂ, ವನ್ಯಪ್ರಾಣಿಗಳನ್ನು ಕೃತಕನೆಲೆಗೆ ವರ್ಗಾಯಿಸಿದರೆ, ಹೊಸ-ಹೊಸ ಪ್ರಾಣಿಜನ್ಯ ರೋಗಗಳು ಉದ್ಭವಿಸುವ ಕುರಿತು ವಿಜ್ಞಾನವು ಎಚ್ಚರಿಸುತ್ತಲೇ ಇದೆ. ಇನ್ನು, ರೈತರನ್ನು ಕಾಡಿಸುತ್ತಿರುವುದು ಮಂಗವೊಂದೇ ಅಲ್ಲವಲ್ಲ. ಬೆಳೆಗಳ ಮೇಲೆ ವ್ಯಾಪಕವಾಗಿ ದಾಳಿಯಿಡುತ್ತಿರುವ ಕಾಡುಹಂದಿ, ಮುಳ್ಳುಹಂದಿ, ನವಿಲು, ಕೆಂದಳಿಲಿಗೆ ಏನು ಮಾಡುವುದು? ಕೃಷಿಯ ಪೋಷಣೆಗೆ ಅಗತ್ಯವಿರುವ ಸುತ್ತಲಿನ ಪರಿಸರದ ಸೂಕ್ಷ್ಮ ಸಂಬಂಧಗಳನ್ನು ಧಿಕ್ಕರಿಸುವ ‘ಮಂಗನ ಪಾರ್ಕ್’ ತರಹದ ಕೇಂದ್ರೀಕೃತ ಪರಿಹಾರ ಖಂಡಿತಾ ಸಾಧುವಲ್ಲ.

ಹಾಗಾದರೆ, ಏನು ಮಾಡಬೇಕು? ಮಂಗನಿಂದಾದ ಬೆಳೆ ನಾಶಕ್ಕೆ, ತಕ್ಷಣದ ಕ್ರಮವಾಗಿ ರೈತರಿಗೆ ಸೂಕ್ತ ಅರ್ಥಿಕ ಪರಿಹಾರವನ್ನು ಸರ್ಕಾರ ನೀಡಬೇಕು. ಜೊತೆಗೆ, ರೈತರೊಂದಿಗೆ ವಿವೇಕದಿಂದ ಸಮಾಲೋಚಿಸಿದರೆ ದೀರ್ಘಕಾಲೀನ ಪರಿಹಾರಮಾರ್ಗಗಳೂ ಗೋಚರಿಸಬಲ್ಲವು. ಗದ್ದೆ-ತೋಟಗಳಿಗೆ ಹೊಂದಿಕೊಂಡಿರುವ ಕಾಡು-ಗೋಮಾಳಗಳ ಪರಿಸರವನ್ನು ರಕ್ಷಿಸಬೇಕಿದೆ. ಪ್ರತಿ ಗ್ರಾಮದಲ್ಲೂ ಅಂಥ ಹಸಿರುವಲಯ ರೂಪಿಸಿ, ಆಲ, ಅತ್ತಿ, ಅರಳಿ, ಹೊಂಗೆ, ನೇರಳೆ, ಮಾವು, ಹಲಸಿನಂಥ ಹಣ್ಣಿನ ಮರಗಳನ್ನು ಬೆಳೆಸಿದ್ದಾದರೆ, ಮಂಗಗಳು ಕಾಡಿ ನಲ್ಲೇ ನೆಲೆಯಾಗಲು ಸಾಧ್ಯ. ಕಾಡಿನಲ್ಲಿನ ಕೆರೆ-ತೊರೆಗಳನ್ನು ಪುನರುಜ್ಜೀವನ ಮಾಡಿ, ನೀರಿನ ಲಭ್ಯತೆಯನ್ನೂ ಹೆಚ್ಚಿಸಬಹುದು. ಇವನ್ನೆಲ್ಲ ಸಹಕಾರಿ ಸಂಘಗಳು, ಗ್ರಾಮ ಅರಣ್ಯ ಸಮಿತಿಗಳು, ಸಾವಯವ ಗುಂಪುಗಳಂಥ ರೈತ ಸಮುದಾಯದ ಸಹಭಾಗಿತ್ವದಲ್ಲಿ ಸಾಧಿಸಲು ಸಾಧ್ಯವಿದೆ.

ಇಷ್ಟಾಗ್ಯೂ ದಾಳಿಯಿಡುವ ಮಂಗಗಳನ್ನು ಓಡಿಸಲು ರೈತರಿಗೇ ತಿಳಿದಿರುವ ಅಸಂಖ್ಯ ಉಪಾಯಗಳನ್ನೂ ಮುನ್ನೆಲೆಗೆ ತರಬೇಕಿದೆ. ಕನ್ನಡಿ, ಬೆದರುಗೊಂಬೆಗಳನ್ನಿರಿಸಿ ಮಂಗಗಳನ್ನು ಓಡಿಸುವುದಿದೆ. ಮೆಣಸಿನಪುಡಿಯಲ್ಲಿ ಅದ್ದಿದ ಒಣಮೀನಿನಿಂದ ಬೆದರಿಸಲೂ ರೈತರು ಬಲ್ಲರು. ನಾಯಿ ಸಾಕಿಯೋ ಹುಸಿ ಶಬ್ದ ಮಾಡುವ ಕೋವಿಗಳಿಂದಲೋ ಹೆದರಿಸುವ ತಂತ್ರವಂತೂ ಸಾಮಾನ್ಯ. ಗ್ರಾಮಕ್ಕೊಬ್ಬ ಮಂಗನ ಕಾವಲುಗಾರನನ್ನು ನಿಯಮಿಸುವ ಪರಿಪಾಟ ಮಲೆನಾಡಿನಲ್ಲಿದೆ. ನಾಯಿ ಅಥವಾ ಹುಲಿ ಕೂಗಿನ ಧ್ವನಿಮುದ್ರಿಕೆಗಳನ್ನೋ ಅಥವಾ ಹುಲಿ ಮೂತ್ರದ ವಾಸನೆಯ ದ್ರವ್ಯ ಬಳಸಿಯೋ ಮಂಗನನ್ನು ಓಡಿಸುವ ಬೇಸಾಯಗಾರರೂ ಇದ್ದಾರೆ! ಈ ಬಗೆಯ ಸೂಕ್ತ ತಂತ್ರಗಳನ್ನೆಲ್ಲ ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ರೈತ ಸಮುದಾಯಕ್ಕೆ ಪ್ರೇರಣೆ ಹಾಗೂ ಅಗತ್ಯ ಸೌಲಭ್ಯ ನೀಡಲು ಕೃಷಿ ಇಲಾಖೆಯು ಗಮನಹರಿಸಬಾರದೇಕೆ? ಅಂತಿಮವಾಗಿ, ಇನ್ನೊಂದು ಮಾರ್ಗವನ್ನೂ ಪರಿಶೀಲಿಸಬೇಕಿದೆ.

ಮಂಗಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸಾ ವಿಧಾನಗಳನ್ನು ಸೀಮಿತವಾಗಿ ಅಳವಡಿಸಿಕೊಳ್ಳಲು ಸಾಧ್ಯವೆಂದು ವನ್ಯಜೀವಿ ತಜ್ಞರು ಹೇಳುತ್ತಿದ್ದಾರೆ. ಇದು ಸೂಕ್ತವೇ ಎಂಬುದೂ ಚರ್ಚೆಯಾಗಬೇಕಿದೆ. ಪ್ರಾಯೋಗಿಕವಾಗಿಯಾದರೂ ಇದನ್ನು ಕೈಗೊಳ್ಳುವ ಕಾಲ ಸನ್ನಿಹಿತವಾದಂತಿದೆ.

ರೈತರ ಸಹಭಾಗಿತ್ವದ ಹಾಗೂ ಪರಿಸರಸ್ನೇಹಿ ಯಾದ ಈ ಬಗೆಯ ಕ್ರಮಗಳಿಂದ ಮಾತ್ರ ಈ ಸಮ ಸ್ಯೆಗೆ ನೈಜ ಉತ್ತರ ದೊರಕೀತು. ಹವಾಮಾನ ಬದ ಲಾವಣೆಯ ಸಮಸ್ಯೆಗಳಿಂದಾಗಿ ರೈತರು ಕೃಷಿ ಕ್ಷೇತ್ರವನ್ನೇ ತೊರೆಯುತ್ತಿರುವ ಇಂದಿನ ಸಂದರ್ಭದಲ್ಲಿ, ಕೃಷಿ ಹಾಗೂ ಪರಿಸರದ ನಡುವಣ ಸೂಕ್ಷ್ಮಸಂಬಂಧವನ್ನು ಪುರಸ್ಕರಿಸುವ ಯೋಜನೆಗಳನ್ನು ಜಾರಿ ಮಾಡುವ ವಿವೇಕವನ್ನು ಸರ್ಕಾರ ತೋರಬೇಕಿದೆ.


ಕೇಶವ ಎಚ್. ಕೊರ್ಸೆ, ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು