ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆಗೆ ಹೊಸ ವೇಳಾಪಟ್ಟಿ

ಮಳೆಯ ನಿಖರ ಮುನ್ಸೂಚನೆ ನೀಡುವುದು, ಹವಾಮಾನ ಇಲಾಖೆಗಿರುವ ದೊಡ್ಡ ಸವಾಲು
Last Updated 21 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಪ್ರತೀ ವರ್ಷ ಜೂನ್ ತಿಂಗಳಿನಲ್ಲಿ ಕೇರಳ ಕರಾವಳಿಯ ಮೂಲಕ ಭಾರತವನ್ನು ಪ್ರವೇಶಿಸುವ ನೈರುತ್ಯ ಮಾರುತ, ಸೆಪ್ಟೆಂಬರ್ ಅಂತ್ಯದವರೆಗೆ ನಾಲ್ಕು ತಿಂಗಳ ಕಾಲ ಮುಂಗಾರು ಮಳೆಯನ್ನು ತರುತ್ತದೆ. ಈ ಮುಂಗಾರು ಮಾರುತದ ಪ್ರವೇಶ, ವಿವಿಧ ರಾಜ್ಯಗಳ ಮೂಲಕ ಅದರ ಮುನ್ನಡೆ ಮತ್ತು ಅಂತಿಮವಾಗಿ ನಿರ್ಗಮನವನ್ನು ಸೂಚಿಸುವ ವೇಳಾಪಟ್ಟಿಯೊಂದನ್ನು ಭಾರತೀಯ ಹವಾಮಾನ ಇಲಾಖೆ ಬಳಸುತ್ತಿದೆ. ಇದರ ನೆರವಿನಿಂದ, ದೇಶದ ಯಾವುದೇ ನಿರ್ದಿಷ್ಟ ಪ್ರದೇಶವನ್ನು ಮಳೆಮಾರುತ ಸುಮಾರಾಗಿ ಯಾವ ದಿನಾಂಕದಂದು ಪ್ರವೇಶಿಸಬಹುದು, ನಿರ್ಗಮಿಸಬಹುದು ಎಂಬಂಥ ಮಾಹಿತಿಯನ್ನು ಪಡೆಯಬಹುದು.

ಈ ವೇಳಾಪಟ್ಟಿ ಸಿದ್ಧವಾದದ್ದು 1941ರಲ್ಲಿ. 1901ರಿಂದ 1940ರವರೆಗೆ, ಆ ಸಮಯದಲ್ಲಿ ದೇಶದಲ್ಲಿದ್ದ 150 ಮಳೆಮಾಪನ ಕೇಂದ್ರಗಳು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ. ಆಶ್ಚರ್ಯದ ಸಂಗತಿಯೆಂದರೆ, ಆ ಮಾಹಿತಿಯೇ ಇಲಾಖೆಯ ವೇಳಾಪಟ್ಟಿಗೆ ಆಧಾರ. ಅಂದರೆ 79 ವರ್ಷಗಳ ಹಿಂದೆ ಅಂದಿಗೆ ಪ್ರಸ್ತುತವಾಗಿದ್ದ ವೇಳಾಪಟ್ಟಿಯನ್ನು ಯಾವುದೇ ಬದಲಾವಣೆ, ಉನ್ನತೀಕರಣವಿಲ್ಲದೆ ಇಂದೂ ನಾವು ಬಳಸುತ್ತಿದ್ದೇವೆ! ಇಂಥ ನಿದರ್ಶನ ನಮಗೆ ಬೇರೆಲ್ಲೂ ಸಿಗುವುದಿಲ್ಲ. ಅಷ್ಟೇ ಅಲ್ಲ, ಇಲಾಖೆಯ ಈ ವೇಳಾಪಟ್ಟಿಯೇ ಸಮಸ್ತ ಕೃಷಿ ಚಟುವಟಿಕೆಗಳು, ಜಲಾಶಯಗಳಲ್ಲಿ ನೀರಿನ ನಿರ್ವಹಣೆ, ವಿದ್ಯುತ್ ಉತ್ಪಾದನೆ, ಕೃಷಿಸಾಲ, ಬೆಳೆವಿಮೆ, ಕಟಾವು, ಆಹಾರ ಧಾನ್ಯಗಳ ದಾಸ್ತಾನು ಮುಂತಾದ ಎಲ್ಲ ಸಂಬಂಧಿತ ಕೆಲಸ ಕಾರ್ಯಗಳಿಗೂ ಆಧಾರ! ಈ 79 ವರ್ಷಗಳ ದೀರ್ಘಾವಧಿಯಲ್ಲಿ ನೈರುತ್ಯ ಮಾರುತದ ಸ್ವರೂಪದಲ್ಲಿ ಅನೇಕ ಗಂಭೀರವಾದ, ಸಮಸ್ಯಾತ್ಮಕ ಬದಲಾವಣೆಗಳಾಗಿದ್ದರೂ ವೇಳಾಪಟ್ಟಿ ಮಾತ್ರ 1941ರ ಕಾಲಘಟ್ಟದಲ್ಲೇ ಉಳಿದಿರುವುದರಿಂದ ಮುಂಗಾರು ಮಳೆ ಆಧಾರಿತ ಎಲ್ಲ ಕ್ಷೇತ್ರಗಳಲ್ಲೂ ಗೊಂದಲಗಳಿವೆ.

ಈ ಹಿನ್ನೆಲೆಯಲ್ಲಿ ಮುಂಗಾರು ಮಳೆಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದ ಹೊಸ ವೇಳಾಪಟ್ಟಿಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದ ಹವಾಮಾನ ಇಲಾಖೆ ಕಡೆಗೂ ಯಶಸ್ವಿಯಾಗಿ ಈ ವರ್ಷದ ಮಳೆಗಾಲದಿಂದ ಅದನ್ನು ಜಾರಿಗೆ ತರಲಿದೆ. 1961ರಿಂದ 2019ರವರೆಗಿನ ಮುಂಗಾರು ಮಳೆಯ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಿರುವ ಇಲಾಖೆಯ ವಿಜ್ಞಾನಿಗಳು ನೈರುತ್ಯ ಮಾರುತ ಪ್ರವೇಶದ ದಿನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅಂದರೆ ಮಳೆಗಾಲಕ್ಕೆ ಸಂಬಂಧಿಸಿದ ಎಲ್ಲ ಮಾಪನೆ, ಗಣನೆಗಳೂ ಜೂನ್ 1ರಿಂದಲೇ ಪ್ರಾರಂಭವಾಗುತ್ತವೆ. ಭಾರತದ ವಿವಿಧ ಭಾಗಗಳಿಂದ ನೈರುತ್ಯ ಮಾರುತದ ನಿರ್ಗಮನದ ದಿನಾಂಕಗಳನ್ನು ನಿಗದಿಪಡಿಸಲು 1971ರಿಂದ 2019ರ ಅವಧಿಯ ಮಾಹಿತಿಗಳನ್ನು ಆಧಾರವಾಗಿ ಬಳಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮೂಲದಂತೆ, ಕೇರಳದಿಂದ ಮುಂದುವರಿಯುವ ನೈರುತ್ಯ ಮಾರುತವು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಛತ್ತೀಸಗಡ, ತೆಲಂಗಾಣ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶದ ವಿವಿಧ ಭಾಗಗಳನ್ನು ಇದುವರೆಗೂ ಇದ್ದ ದಿನಾಂಕಗಳಿಗಿಂತ 3ರಿಂದ 7 ದಿನಗಳಷ್ಟು ತಡವಾಗಿ ತಲುಪಲಿದೆ. ವಾಯವ್ಯ ಭಾಗದ ಹಲವಾರು ಪ್ರದೇಶಗಳನ್ನು ಒಂದು ವಾರದಷ್ಟು ಮುಂಚಿತವಾಗಿಯೇ ಪ್ರವೇಶಿಸಲಿದೆ. ರಾಜಸ್ಥಾನದ ವಾಯವ್ಯದ ತುದಿಯಿಂದ ನಿರ್ಗಮಿಸುವ ದಿನಾಂಕವು 7ರಿಂದ 14 ದಿವಸಗಳಷ್ಟು ತಡವಾಗಲಿದೆ. ದಕ್ಷಿಣ ಭಾರತದಿಂದ ಅಕ್ಟೋಬರ್ 15ರಂದು ನಿರ್ಗಮಿಸಲಿದ್ದು, ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂಬೈ ಪ್ರವೇಶಿಸುವ ದಿನಾಂಕ ಜೂನ್ 10ರಿಂದ 11ಕ್ಕೆ ಹೋಗಿದ್ದರೆ, ಲಖನೌನಲ್ಲಿ 20ರಿಂದ 23ಕ್ಕೆ, ದೆಹಲಿಯಲ್ಲಿ 23ರಿಂದ 27ಕ್ಕೆ ಮುಂದೆ ಹೋಗಿದೆ. ಚಂಡೀಗಡದಲ್ಲಿ ಮಳೆಗಾಲ ಜುಲೈ 1ರ ಬದಲಿಗೆ ಜೂನ್ 26ರಂದೇ ಪ್ರಾರಂಭವಾದರೆ, ಜಮ್ಮುವಿನಲ್ಲಿ ಜುಲೈ 13ರ ಬದಲಿಗೆ 15 ದಿನಗಳ ಮುಂಚೆ ಜೂನ್ 28ರಂದು ಪ್ರಾರಂಭವಾಗಲಿದೆ. ರಾಜಸ್ಥಾನ, ಪಂಜಾಬ್, ಹರಿಯಾಣಗಳಿಂದ ಸೆಪ್ಟೆಂಬರ್ 1ರ ಬದಲಿಗೆ ಸೆಪ್ಟೆಂಬರ್ 10ರಿಂದ, 10 ದಿವಸಗಳಷ್ಟು ತಡವಾಗಿ ನಿರ್ಗಮನದ ಪ್ರಕ್ರಿಯೆಯ ಗಣನೆ ಪ್ರಾರಂಭವಾಗುತ್ತದೆ.

ಹೊಸ ವೇಳಾಪಟ್ಟಿಯ ಫಲವಾಗಿ ಹಲವಾರು ನಗರಗಳಲ್ಲಿ ಮಳೆಗಾಲದ ಅವಧಿಯ ಲೆಕ್ಕದಲ್ಲಿ ಹೆಚ್ಚುಕಡಿಮೆಯಾಗಲಿದೆ. ಉದಾಹರಣೆಗೆ, ದೆಹಲಿಗೆ ಮುಂಗಾರು ನಾಲ್ಕು ದಿವಸಗಳು ತಡವಾಗಿ ಪ್ರವೇಶಿಸಿ, ಮೂರು ದಿನಗಳು ತಡವಾಗಿ ನಿರ್ಗಮಿಸಲಿದೆ. ಹೀಗಾಗಿ ದೆಹಲಿಯ ಮಳೆಗಾಲದ ಅಧಿಕೃತ ಅವಧಿ ಒಂದು ದಿನ ಕಡಿಮೆಯಾಗುತ್ತದೆ. ಮುಂಬಯಿಯನ್ನು ಜೂನ್ 10ರ ಬದಲಿಗೆ 11ರಂದು ಪ್ರವೇಶಿಸುವ ಮುಂಗಾರು ಮಳೆ, ಸೆಪ್ಟೆಂಬರ್ 29ರ ಬದಲಿಗೆ ಅಕ್ಟೋಬರ್ 8ರಂದು ನಿರ್ಗಮಿಸಲಿದೆ. ಇದರಿಂದ ಮುಂಬಯಿಯಲ್ಲಿ ಮಳೆಗಾಲದ ಅವಧಿಯು ಲೆಕ್ಕಾಚಾರಗಳ ದೃಷ್ಟಿಯಿಂದ 8 ದಿವಸ ಹೆಚ್ಚಾಗುತ್ತದೆ.

ಕಳೆದ 60 ವರ್ಷಗಳ ಮಾಹಿತಿಯ ವಿಶ್ಲೇಷಣೆಯಿಂದ ಇಲಾಖೆ ಈ ಎಲ್ಲ ನೂತನ ದಿನಾಂಕಗಳನ್ನು ನಿಗದಿಪಡಿಸಿದೆ. ಈ ವರ್ಷದ ಜೂನ್ 1ರಿಂದ, ನೈರುತ್ಯ ಮಾರುತದ ಪ್ರವೇಶ, ಮುನ್ನಡೆ, ನಿರ್ಗಮನಕ್ಕೆ ಸಂಬಂಧಿಸಿದ ಎಲ್ಲ ಲೆಕ್ಕಾಚಾರಗಳಿಗೂ ಈ ದಿನಾಂಕಗಳೇ ಆಧಾರ. ಮುಂಗಾರು ಮಳೆಯ ವರ್ತನೆಯಲ್ಲಿ ಯಾವುದೇ ವ್ಯತ್ಯಾಸವನ್ನು ಗುರುತಿಸಲು ಈ ನೂತನ ದಿನಾಂಕಗಳೇ ಮಾನದಂಡ. ನಮ್ಮ ದೇಶದ ವಿವಿಧ ಹವಾಮಾನ ವಲಯಗಳು, ಅವುಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಸಂಬಂಧಿಸಿದಂತೆ ಈ ಹೊಸ ದಿನಾಂಕಗಳ ಎಲ್ಲ ಮಾಹಿತಿಗಳನ್ನೂ ಮೇ ತಿಂಗಳ 15ರ ಒಳಗಾಗಿ ಒದಗಿಸಲಿದೆ. ಕೃಷಿ, ಜಲವಿದ್ಯುತ್ ಉತ್ಪಾದನೆ, ಅಣೆಕಟ್ಟುಗಳ ನಿರ್ವಹಣೆ, ಬೆಳೆ ವಿಮೆ, ಕೃಷಿಸಾಲ ನೀಡುವ ಬ್ಯಾಂಕ್‍ಗಳು, ಆಹಾರಧಾನ್ಯ ದಾಸ್ತಾನು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಮುಂತಾದವುಗಳಿಗೆ ಸಂಬಂಧಿಸಿದ ಸಚಿವಾಲಯ, ವಿಭಾಗ ಕಚೇರಿಗಳೆಲ್ಲವೂ ಈ ಹೊಸ ಮುಂಗಾರು ಮಳೆಯ ವೇಳಾಪಟ್ಟಿಗೆ ಅನುಗುಣವಾಗಿ ತಮ್ಮ ಕೆಲಸ, ಕಾರ್ಯಗಳನ್ನು ರೂಪಿಸಬೇಕಾಗುತ್ತದೆ.

ಜೂನ್ 1ರಿಂದ ಜಾರಿಗೆ ಬರಲಿರುವ ಈ ಹೊಸ ವೇಳಾಪಟ್ಟಿಯಿಂದ ಇಲಾಖೆ ನೀಡುತ್ತಿದ್ದ ಮುಂಗಾರು ಮಾರುತದ ಪ್ರವೇಶ, ಮುನ್ನಡೆ, ನಿರ್ಗಮನ ಮುಂತಾದವುಗಳಿಗೆ ಸಂಬಂಧಿಸಿದ ಮುನ್ಸೂಚನೆಯ ವಿಶ್ವಾಸಾರ್ಹತೆ ಸ್ವಲ್ಪ ಹೆಚ್ಚಲಿದೆ. ಈ ಹೊಸ ವೇಳಾಪಟ್ಟಿಯ ಸುದ್ದಿಗೆ ಈಗಾಗಲೇ ಪ್ರತಿಕ್ರಿಯಿಸಿರುವ ಮರಾಠವಾಡಾ ಪ್ರದೇಶದ ಎಂಟು ಜಿಲ್ಲೆಗಳ ರೈತ ಸಂಘಟನೆಗಳು ಈ ವೇಳಾಪಟ್ಟಿಗಿಂತ ಹೆಚ್ಚಾಗಿ ಸಣ್ಣ, ಸೀಮಿತ ಪ್ರದೇಶಕ್ಕೆ ಅನ್ವಯವಾಗುವಂತೆ ಹೆಚ್ಚು ನಿಖರವಾದ ಮಳೆಯ ಮುನ್ಸೂಚನೆಗಾಗಿ ಒತ್ತಾಯಿಸಿವೆ. ಈ ಒಂದು ಬೇಡಿಕೆ ಬಹಳ ಸಹಜವಾದರೂ ಹೊಸ ವೇಳಾಪಟ್ಟಿಯಿಂದ ಅದು ಸಾಧ್ಯವಿಲ್ಲ. ಅದು ಇಲಾಖೆಯ ಮುಂದಿರುವ ಬಹು ದೊಡ್ಡ ಸವಾಲು.

ಹವಾಮಾನ ಇಲಾಖೆ ನೀಡುವ ಮುನ್ಸೂಚನೆಯಲ್ಲಿ ಒಟ್ಟು ಮಳೆಯ ಪ್ರಮಾಣ ಮುಖ್ಯವಾಗುತ್ತದೆಯೇ ಹೊರತು ವಿವಿಧ ಪ್ರದೇಶಗಳಲ್ಲಿನ ಹಂಚಿಕೆಯಲ್ಲ. ಇಂತಹ ಮುನ್ಸೂಚನೆಯಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂಬುದು ಬಳಕೆದಾರರ ವಾದ. ತಾಲ್ಲೂಕು ಅಥವಾ ಬ್ಲಾಕ್ ಮಟ್ಟದಲ್ಲಿ ನಮಗೆ ಮುನ್ಸೂಚನೆ ನೀಡಿ ಎಂಬುದು ಎಲ್ಲ ರೈತರ ಕೋರಿಕೆ. ತಾಲ್ಲೂಕಿಗೆ ಅನ್ವಯವಾಗುವಂತಹ ಮುನ್ಸೂಚನೆಗೆ, ಆ ತಾಲ್ಲೂಕಿಗೆ ಸಂಬಂಧಿಸಿದ ವಾಯುಮಂಡಲದ ತಾಪ, ಒತ್ತಡ, ಆರ್ದ್ರತೆ ಮುಂತಾದ ಹವಾಕಾರಕಗಳ ‘ಸದ್ಯದ ಮಾಹಿತಿ’ ಬೇಕಾಗುತ್ತದೆ. ಇದರ ಜೊತೆಗೆ ದೂಳಿನ ಕಣಗಳು, ಏರೋಸಾಲ್, ನೆಲದಲ್ಲಿನ ತೇವಾಂಶ, ಸಾಗರ ಸಂಬಂಧಿ ಮಾಹಿತಿಗಳ ಸಂಗ್ರಹದಲ್ಲಿ ತೊಡಕುಗಳಿವೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಮುನ್ಸೂಚನೆ ಸಾಧ್ಯವಾಗಬಹುದೆಂಬುದು ಇಲಾಖೆಯ ನಿರೀಕ್ಷೆ. ದೇಶದ ಎಲ್ಲ ರೈತರ ಕನಸಾದ ನಿಖರವಾದ, ಸ್ಥಳೀಯವಾಗಿ ಅನ್ವಯವಾಗುವ, ವಿಶ್ವಾಸಾರ್ಹವಾದ ಮುನ್ಸೂಚನೆ ನನಸಾಗಲು ಅಲ್ಲಿಯವರೆಗೆ ನಾವು ಕಾಯಬೇಕಾದುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT