ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ನದಿ, ಹತ್ತು ಅಣೆಕಟ್ಟು

ಶರಾವತಿ ನೀರನ್ನು ಬೆಂಗಳೂರಿಗೆ ತಂದರೆ ಪರಿಸರದ ಮೇಲಾಗುವ ಪರಿಣಾಮವೇನು?
Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ಶರಾವತಿ ಕರ್ನಾಟಕದ ದೊಡ್ಡ ನದಿಯೇನಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿಯೇ ಹುಟ್ಟಿ, ಇಲ್ಲಿಯ ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಹರಿದು ಮುಂದೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ, ಹೊನ್ನಾವರ ತಾಲ್ಲೂಕುಗಳಲ್ಲಿ ಹರಿದು, ತನ್ನ 112ನೇ ಕಿಲೊಮೀಟರಿನಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಮೊದಲ ಎರಡು ತಾಲ್ಲೂಕುಗಳಲ್ಲಿ ಈ ನದಿ ಕೇವಲ ಕಾಡು ಮೇಡುಗಳಲ್ಲಿ ಹರಿಯುತ್ತದೆ. ಸುಮಾರು 12 ಉಪನದಿಗಳು ಸೇರುವುದರಿಂದ ಇದಕ್ಕೆ ‘ಬಾರಗಂಗಾ’ ಎಂಬ ಹೆಸರೂ ಇದೆ. ಭಾರಂಗಿ ಎಂದು ಇದನ್ನು ಗ್ರಾಮಸ್ಥರು ಕರೆಯುತ್ತಾರೆ. ಜೋಗದ ನಂತರ ಇದು ಹರಿಯುವುದು ಆಳವಾದ ಕಣಿವೆಯಲ್ಲಿ.

ಕಣಿವೆಯಲ್ಲಿ ಹರಿಯುವ ಈ ನದಿಯನ್ನು ನೋಡುವುದು ನಯನ ಮನೋಹರ. ಗೇರುಸೊಪ್ಪೆಯ ನಂತರ ಇದು ವಿಶಾಲವಾಗುತ್ತದೆ. ಮುಂದೆ ಹೋಗುತ್ತಾ ಹೋಗುತ್ತಾ ಸಮುದ್ರವೇ ಆಗುತ್ತದೆ.ಶರಾವತಿಯ ದಡದ ಮೇಲೆ ಪುಣ್ಯಕ್ಷೇತ್ರಗಳಾಗಲೀ, ಭಾರಿ ಕೈಗಾರಿಕಾ ನಗರಗಳಾಗಲೀ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ಇಡ‌ಗುಂಜಿ ಎಂಬ ಪ್ರವಾಸಿ ಕೇಂದ್ರವು ಈ ನದಿ ದಂಡೆಯ ಮೇಲಿರುವ ಒಂದು ಮುಖ್ಯ ಊರು.

ಅತೀ ಕಡಿಮೆ ವೆಚ್ಚದಲ್ಲಿ ನಾವು ಉತ್ಪಾದಿಸಬಹುದಾದ ಜಲವಿದ್ಯುತ್ತನ್ನು ಶರಾವತಿ ನೀಡುತ್ತಾ ಬಂದಿದೆ. ಈ ಕಾರಣದಿಂದಾಗಿ ಶರಾವತಿ ತನ್ನ ಒಡಲ ಉದ್ದಕ್ಕೂ ಹಲವು ವಿದ್ಯುದಾಗಾರಗಳು, ಅಣೆಕಟ್ಟುಗಳು, ವಿದ್ಯುತ್ ಉತ್ಪಾದನಾ ಕೇಂದ್ರ ಇತ್ಯಾದಿಗಳನ್ನು ಹೊಂದಿದೆ. ಬಹಳ ಮುಖ್ಯವಾಗಿ ಜೋಗ ಜಲಪಾತ ಎನ್ನುವ ವಿಶ್ವವಿಖ್ಯಾತ ಸ್ಥಳವನ್ನು ಕೇಂದ್ರವನ್ನಾಗಿ ಇರಿಸಿಕೊಂಡೇ ಹಲವಾರು ಅಣೆಕಟ್ಟುಗಳು ಇವೆ. ವರ್ಷದ ಹತ್ತು ತಿಂಗಳು ತುಂಬಿ ಧುಮ್ಮಿಕ್ಕುತ್ತಿದ್ದ ಜೋಗ ಜಲಪಾತ, ಈ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಮಳೆ ಬಂದಾಗಲಷ್ಟೇ ಜೀವ ತಾಳುತ್ತದೆ.

ನದಿಯ ಒಡಲನ್ನು ಬಗೆದು ಅಣೆಕಟ್ಟುಗಳನ್ನು ನಿರ್ಮಿಸುವ ಪ್ರವೃತ್ತಿ ಹಿಂದೆಯೇ ಆರಂಭವಾಗಿದೆ. 1939ರಲ್ಲಿ ಹಿರೇಭಾಸ್ಕರದ ಬಳಿ ಶರಾವತಿಗೆ ಮೊದಲ ಅಣೆಕಟ್ಟು ನಿರ್ಮಿಸಲಾಯಿತು. ಇದರ ಉದ್ದ3,870 ಅಡಿ, ಎತ್ತರ 104 ಅಡಿ. ಇತ್ತೀಚೆಗೆ ಕಟ್ಟಲಾದ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಈಅಣೆಕಟ್ಟೆ ಮುಳುಗಿದರೂ ಇಂದಿಗೂ ಇದು ಗಟ್ಟಿಯಾಗಿ ನಿಂತಿದೆ. ಜೊತೆಗೆ ಜೋಗದಲ್ಲಿ ಶಿರೂರು ಎಂಬ ಕೆರೆಗೆ ಕಾರ್ಗಲ್ಲಿನಿಂದ ಬಂದ ನೀರನ್ನು ಹಾಯಿಸಿ ಶಿರೂರ್ ಬಂಡ್ ಎಂಬ ಜಲಾಶಯ ನಿರ್ಮಿಸಲಾಯಿತು. ಈ ಎರಡೂ ನಿರ್ಮಾಣಗಳು ಒಂದು ಅರ್ಥದಲ್ಲಿ ಮತ್ತೆ ಅಣೆಕಟ್ಟುಗಳೇ. ವಿದ್ಯುತ್ ಉತ್ಪಾದಿಸಲು ಬೇಕಾದ ಭರಪೂರ ನೀರು ಈ ಜಲಾಶಯಗಳಲ್ಲಿ
ನಿಲ್ಲುತ್ತದಾದ್ದರಿಂದ ಇವುಗಳನ್ನು ನಾನುಅಣೆಕಟ್ಟುಗಳ ಸಾಲಿಗೆ ಸೇರಿಸಿದ್ದೇನೆ.

ನಂತರ ನಿರ್ಮಾಣವಾದದ್ದು ಲಿಂಗನಮಕ್ಕಿ ಅಣೆಕಟ್ಟು. ಇದು ಬೃಹತ್ ಕಟ್ಟು. ಲಿಂಗನಮಕ್ಕಿಎತ್ತರ 201 ಅಡಿ, ಉದ್ದ 9,020 ಅಡಿ. ಇದರ ನೀರಿನ ಸಂಗ್ರಹಣಾಸಾಮರ್ಥ್ಯ 1.56 ಲಕ್ಷ ಕ್ಯುಸೆಕ್‌. ಇದಕ್ಕೆ ಕೆಲವೇ ಕಿ.ಮೀ ದೂರದಲ್ಲಿ ಇರುವುದೇ ತಲಕಳಲೆ ಜಲಾಶಯ. ಶರಾವತಿಯ ಉಪನದಿಯಾದ ತಲಕಳಲೆಗೆ ಮುಖ್ಯ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತದೆ ಹಾಗೂ ಎ.ಬಿ. ಸೈಟಿನ ವಿದ್ಯುದಾ
ಗಾರಕ್ಕೆ ಸರಬರಾಜಾಗುವ ನೀರನ್ನು ಸಮತೋಲನದಲ್ಲಿ ಇರಿಸಿಕೊಳ್ಳುವ ಕೆಲಸವನ್ನು ಇದು ಮಾಡುತ್ತದೆ.

ಶರಾವತಿಗೆ ನಿರ್ಮಿಸಲಾದ ಮುಂದಿನ ಅಣೆಕಟ್ಟು ಗೇರುಸೊಪ್ಪೆ ವಿದ್ಯುದಾಗಾರಕ್ಕೆಂದು ನಿರ್ಮಿತವಾದದ್ದು. ಸುಮಾರು ನಾಲ್ಕು ಘಟಕಗಳ ಮೂಲಕ 240 ಮೆಗಾವಾಟ್ ವಿದ್ಯುತ್ತನ್ನು ಗೇರುಸೊಪ್ಪೆ ಘಟಕ ಉತ್ಪಾದಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆ ಊರಿಗೆ ಸನಿಹದಲ್ಲಿ ಈ ಉತ್ಪಾದನಾ ಕೇಂದ್ರವಿದೆ. ಆದರೆ ಅಣೆಕಟ್ಟು ದಟ್ಟ ಕಾಡಿನ ನಡುವೆ ಇದೆ. ಜೋಗದ ಮಹಾತ್ಮ ಗಾಂಧಿ ವಿದ್ಯುದಾಗಾರಕ್ಕೂ ಎ.ಬಿ. ಸೈಟ್ ವಿದ್ಯುದಾಗಾರಕ್ಕೂ ನಡುವೆ ಅನ್ನುವಂತೆ ಮತ್ತೊಂದು ವಿದ್ಯುದಾಗಾರ ಇದೆ. ಶರಾವತಿ ನದಿ ದಂಡೆಗೆ ಅಂಟಿಕೊಂಡ ಹಾಗೆ ವಿದ್ಯುದಾಗಾರ ಹಾಗೂ ಅಣೆಕಟ್ಟು ಹೊಂದಿರುವ ಈ ಯೋಜನೆ ಹೊಸದಾಗಿ ಆರಂಭವಾದದ್ದು.

ಶರಾವತಿಯ ಕತೆ ಇಲ್ಲಿಗೇ ಮುಗಿಯುವುದಿಲ್ಲ. ಇದೀಗ ಎ.ಬಿ. ಸೈಟ್ ವಿದ್ಯುದಾಗಾರದಿಂದ ಬರುವ ನೀರನ್ನು ಪುನಃ ಭೂಗತ ಪೈಪುಗಳ ಮೂಲಕ ಹಿಂದಕ್ಕೆ ಹಾಯಿಸಿ, ಅದನ್ನೊಂದು ಅಣೆಕಟ್ಟೆಯಲ್ಲಿ ಸಂಗ್ರಹಿಸಿ, ಅದರಿಂದ ಮತ್ತೆ ವಿದ್ಯುತ್‌ ಉತ್ಪಾದಿಸಬೇಕೆಂಬ ವಿಚಾರ ನಮ್ಮ ಎಂಜಿನಿಯರುಗಳ ತಲೆಯಲ್ಲಿ ಸುಳಿದಾಡುತ್ತಿದೆ. ಇದಕ್ಕಾಗಿ ಸೈಟನ್ನು ಹುಡುಕಿ ಇಡಲಾಗಿದೆ. ಎಲ್ಲ ತಾಂತ್ರಿಕ ಮಾಹಿತಿ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ನಮ್ಮ ರಾಜಕಾರಣಿಗಳು ಎಂಜಿನಿಯರುಗಳ ಮಾತನ್ನು ಭಿಡೆ ಇಲ್ಲದೆ ನಂಬುವುದರಿಂದ ಈ ಕೆಲಸ ಇನ್ನು ಕೆಲವೇ ದಿನಗಳಲ್ಲಿ ಕಾರ್ಯಗತವಾದರೂ ಅಚ್ಚರಿ ಇಲ್ಲ.

ಜೊತೆಗೆ ‘ತೈಲ’ ದೇಶವಾಸಿಯಾಗಿರುವ ನಮ್ಮ ದೇಶದ ಓರ್ವ ಶ್ರೀಮಂತರು, ಬತ್ತಿ ಹೋಗಿರುವ ಜೋಗ ಜಲಪಾತಕ್ಕೆ ಕೃತಕವಾಗಿ ಜೀವ ತುಂಬಲು ಹೊರಟಿದ್ದಾರೆ. ಇಂದಿನ ಸೀತಾಕಟ್ಟೆ ಸೇತುವೆಯ ಬಳಿ ಒಂದು ಅಣೆಕಟ್ಟು, ಕೆಳಗೆ ಕಣಿವೆಯಲ್ಲಿ ರಾಜಾ ಜಲಪಾತದ ಬಳಿ ಒಂದು ಅಣೆಕಟ್ಟನ್ನು ನಿರ್ಮಿಸಿ, ಸುರಂಗಗಳ ಮೂಲಕ ಜಲಪಾತಕ್ಕೆ ನೀರು ಹರಿಯಬಿಟ್ಟು, ವರ್ಷದ ಅಷ್ಟೂ ದಿನ ಜಲಪಾತ ಇರುವಂತೆ ನೋಡಿಕೊಳ್ಳಲು ಯತ್ನಿಸುವ ಪ್ರಸ್ತಾವವನ್ನು ಸರ್ಕಾರದ ಮುಂದೆ ಇರಿಸಿದ್ದಾರೆ ಎಂದು ಹೇಳಲಾಗಿದೆ. ಈ ಯೋಜನೆ ಕಾರ್ಯಗತವಾದರೆ 112 ಕಿ.ಮೀ ಉದ್ದದ ಶರಾವತಿಗೆ ಒಟ್ಟು 10 ಅಣೆಕಟ್ಟುಗಳು ಪ್ರಾಪ್ತವಾಗುತ್ತವೆ. ಇದರ ಜೊತೆಗೆ ಶರಾವತಿಯ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ನಮ್ಮ ಕೆಲವು ಎಂಜಿನಿಯರುಗಳು ಈಗ ಸಿದ್ಧರಿರುವುದರಿಂದ ಶರಾವತಿಯ ಭಾಗ್ಯಕ್ಕೆ ಎಣೆ ಇಲ್ಲವೆಂದೇ ಹೇಳಬಹುದು! ನೀರನ್ನು ಮೇಲೆತ್ತಿ ಬೆಂಗಳೂರಿಗೆ ಸರಬರಾಜು ಮಾಡಲು ಮತ್ತೂ ಕೆಲವು ಅಣೆಕಟ್ಟುಗಳು ಬೇಕಾಗುವುದರಿಂದ ಶರಾವತಿಯ ಅದೃಷ್ಟ ಇನ್ನೂ ಖುಲಾಯಿಸುತ್ತದೆ!

ಕೆಲವು ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಭಾರಿ ಭೂಕಂಪ ಆಗಿತ್ತು. ಭೂಕಂಪದ ರೇಖೆಯು ಕೊಯ್ನಾದವರೆಗೂ ಬಂದು ನಿಂತಿತ್ತು. ಅಣೆಕಟ್ಟುಗಳು ಭೂಕಂಪಕ್ಕೆ ದಾರಿಯಾಗಬಹುದು ಎಂಬ ಮಾತು ಕೇಳಿಬಂದಿತ್ತು. ಅದೇ ಸಮಯದಲ್ಲಿ ಶರಾವತಿ ಪ್ರದೇಶದಲ್ಲೂ ಭೂಕಂಪನ ಕಾಣಿಸಿಕೊಂಡಿತ್ತು. ಆಗ ರಷ್ಯಾದ ವಿಜ್ಞಾನಿಗಳು, ‘ಭೂಕಂಪನಗಳು ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ ನೀರಿನಿಂದ ಉಂಟಾಗಬಹುದು’ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಹೋದ ವರ್ಷ ಕೊಡಗಿನಲ್ಲಿ ಆದ ಅನಾಹುತಗಳಿಗೆ ಹಲವಾರು ಅಣೆಕಟ್ಟುಗಳು ಒಂದೇ ಸಾರಿ ತುಂಬಿ ಹರಿದಿದ್ದೇ ಕಾರಣ ಎಂಬ ಅಭಿಪ್ರಾಯ ಇದೆ.

ಶರಾವತಿ ಸಣ್ಣ ನದಿ ಎಂಬುದೇ ಮುಂದೆ ಅನಾಹುತಗಳಿಗೆ ಕಾರಣವಾಗಬಹುದು. ಎಲ್ಲ ಅಣೆಕಟ್ಟುಗಳು ಒಂದರ ಪಕ್ಕ ಒಂದರಂತೆ ಕಟ್ಟಲ್ಪಟ್ಟಿರುವಾಗ, ಪ್ರತಿ ಅಣೆಕಟ್ಟೆಯೂ ತುಂಬಿ ತನ್ನ ಭಾರವನ್ನು ಪರಿಸರದ ಮೇಲೆ ಹೊರಿಸುವಾಗ ಏನಾಗಬಹುದು ಎಂಬುದನ್ನು ಹೇಳಲು ಆಗುವುದಿಲ್ಲ. ತನ್ನ ಪಾಡಿಗೆ ತಾನು ಹರಿದು ಹೋಗುವ ನದಿಯನ್ನು ತಡೆದು, ಸ್ಫೋಟಕ ಬಳಸಿ ಅದರ ನೈಸರ್ಗಿಕ ಹರಿವು ಛಿದ್ರಗೊಳಿಸಿ ಅದರ ವೈಶಿಷ್ಟ್ಯವನ್ನೇ ನಾಶ ಮಾಡುವುದು ಎಷ್ಟು ಸರಿ?

ಸೂರ್ಯನ ತಾಪ, ಸಮುದ್ರದ ಅಲೆ, ಗಾಳಿಯಿಂದೆಲ್ಲ ವಿದ್ಯುತ್ ಉತ್ಪಾದಿಸಬಲ್ಲ ದಾರಿಗಳು ಇರುವಾಗ ನದಿಯ ನೀರನ್ನು ಇದಕ್ಕಾಗಿ ಬಳಸಿಕೊಳ್ಳುವುದು ಇನ್ನು ನಿಲ್ಲಬೇಕು. ಕೆಲವೇ ಪೈಸೆಗಳಲ್ಲಿ ವಿದ್ಯುತ್ ದೊರೆಯುತ್ತದೆ ಎನ್ನುವ ಕಾರಣಕ್ಕೆ, ಹಲವು ನೈಸರ್ಗಿಕ ಉದ್ದೇಶಗಳನ್ನು ‌‌‌ನೆರವೇರಿಸುವ ನದಿಯ ದುರುಪಯೋಗ ಆಗಬಾರದು. ನಾಡಿನಲ್ಲಿ ಇರುವ ಎಲ್ಲ ನದಿಗಳನ್ನೂ ಇದಕ್ಕಾಗಿ ಬಳಸುವ ಹುಮ್ಮಸ್ಸಿನಲ್ಲಿ ಇರುವ ನಮ್ಮ ತಂತ್ರಜ್ಞರು ತುಸು ಯೋಚಿಸಬೇಕು.

ವಿಶೇಷವಾಗಿ ಪರಿಸರವು ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಇಂದಿನ ದಿನಮಾನಗಳಲ್ಲಿ ಮನುಷ್ಯ ಎಚ್ಚರಿಕೆಯಿಂದ ಇರಬೇಕು. ಇಡೀ ಪ್ರಕೃತಿಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಲ್ಲೆ ಎಂಬ ಅಹಂಕಾರದಿಂದ ಬೀಗುತ್ತಿರುವ ಆತ ತುಸು ಯೋಚಿಸಿ ಕಾರ್ಯಗತನಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT