ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಜೀವನಕ್ಕೆ ಬೇಕು ಜೀವನದಿಗಳ ಹರಿವು

ತಿರುಗಿಸಬೇಕಾದುದು ನದಿಗಳನ್ನಲ್ಲ, ಸುಸ್ಥಿರ ನೀರು ಬಳಕೆಯತ್ತ ಅಧಿಕಾರಸ್ಥರ ದೃಷ್ಟಿಯನ್ನು!
Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಯಮುನಾ ನದಿಯನ್ನು ಓರ್ವ ಜೀವಿಯೆಂದೇ ಪರಿಗಣಿಸ ಬೇಕೆಂದು ಉತ್ತರಾಖಂಡದ ಹೈಕೋರ್ಟ್ ಎರಡು ವರ್ಷ ಗಳ ಹಿಂದೆ ತೀರ್ಪಿತ್ತಾಗ, ಅಭಿವೃದ್ಧಿ ಚಿಂತನಾವಲಯದಲ್ಲಿ ಹೊಸ ಸಂಚಲನವಾಗಿತ್ತು. ಅನಾದಿಯಿಂದ ನದಿತೊರೆಗಳನ್ನು ಪೂಜಿಸುತ್ತಿರುವ ಜನಮಾನಸದ ವಿವೇಕವನ್ನೂ, ನದಿಗಳ ಪಾರಿಸರಿಕ ಮಹತ್ವವನ್ನು ಸಾರುವ ವೈಜ್ಞಾನಿಕ ಕಾಣ್ಕೆಗಳನ್ನೂ ನ್ಯಾಯಾಂಗವು ಎತ್ತಿ ಹಿಡಿದ ಐತಿಹಾಸಿಕ ಸಂದರ್ಭವದು. ಅಂಥ ವಿವೇಕವು ಕೇಂದ್ರ ಹಣಕಾಸು ಸಚಿವೆ ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿದ 2019ರ ಆರ್ಥಿಕ ಸಮೀಕ್ಷಾ ವರದಿಯಲ್ಲೂ ವ್ಯಕ್ತವಾಯಿತು. ಮಿತಿಮೀರಿ ಜಲಮೂಲಗಳನ್ನೆಲ್ಲ ಬಳಸಿದ್ದರಿಂದಾಗಿ ದೇಶದೆಲ್ಲೆಡೆ ನೀರಿನ ಲಭ್ಯತೆ ಅಪಾಯಕ್ಕೆ ಸಿಲುಕಿರುವುದನ್ನು ಅದು ಸ್ಪಷ್ಟವಾಗಿ ಗುರುತಿಸಿದೆ. ನದಿ, ಅರಣ್ಯ, ಖನಿಜಗಳಂಥ ನೈಸರ್ಗಿಕ ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸಿದರೆ ಮಾತ್ರ, ಭವಿಷ್ಯದಲ್ಲಿ ತಲಾದಾಯ ಬೆಳವಣಿಗೆಯು ಸುಸ್ಥಿರವಾಗಬಲ್ಲದು ಎಂಬ ಎಚ್ಚರಿಕೆಯನ್ನೂ ನೀಡಿದೆ.

ಆರ್ಥಿಕತೆಯ ಸ್ಥಿರತೆಗಾಗಿಯಾದರೂ ನಿಸರ್ಗವನ್ನು ಕಾಪಾಡುವಂತೆ ನ್ಯಾಯಾಂಗ, ವೈಜ್ಞಾನಿಕ ಅಧ್ಯಯನಗಳು, ತಜ್ಞ ಸಮಿತಿಗಳು, ಪರಿಸರ ಚಳವಳಿಗಳು ಹಾಗೂ ಮಾಧ್ಯಮಗಳು ಸರ್ಕಾರಗಳನ್ನು ಎಚ್ಚರಿಸುತ್ತಲೇ ಇವೆ. ಈ ಕಾಳಜಿಗಳನ್ನೆಲ್ಲ ಮೇಲ್ನೋಟಕ್ಕೆ ಒಪ್ಪಿಕೊಂಡರೂ, ಸರ್ಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಅವು ವ್ಯಕ್ತವಾಗದಿರುವುದೇ ಇಂದಿನ ಆತಂಕ. ದೇಶದೆಲ್ಲೆಡೆ ಇಂದು ತಲೆದೋರಿರುವ ಕುಡಿಯುವ ಹಾಗೂ ಕೃಷಿ ನೀರಿನ ಕೊರತೆಯನ್ನು ಎದುರಿಸಲು ಸರ್ಕಾರಗಳು ಹಮ್ಮಿಕೊಳ್ಳುತ್ತಿರುವ ಯೋಜನೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ನೈಸರ್ಗಿಕ ಸಂಪನ್ಮೂಲ ಗಳನ್ನು ಹಿತಮಿತವಾಗಿ ಬಳಸುತ್ತ ಸುಸ್ಥಿರ ಅಭಿವೃದ್ಧಿ ಸಾಧಿಸಲು, ಸೂಕ್ತ ಜಲನೀತಿಯೊಂದರ ಆಧಾರದಲ್ಲಿ ನೀರು ಪೂರೈಕೆ ಯೋಜನೆಗಳು ರೂಪುಗೊಳ್ಳಬೇಕಾದದ್ದು ಇಂದಿನ ಅಗತ್ಯ. ಅದರ ಬದಲು, ನದಿಪಾತ್ರಗಳನ್ನು ಬೆಸೆದು ದೇಶದೆಲ್ಲೆಡೆ ನೀರು ಹರಿಸುವ ನದಿ ಜೋಡಣೆ ಯೋಜನೆಯಂಥ ‘ಮಾಯಾ ಪರಿಹಾರ’ವೇ ಪುನಃ ಸರ್ಕಾರಿ ಚಿಂತನೆಯ ಮುನ್ನೆಲೆಗೆ ಬರುತ್ತಿರುವುದು ವಿಪರ್ಯಾಸವೇ ಸರಿ. ತಾತ್ವಿಕವಾಗಿ ನದಿಗಳ ಜೋಡಣೆಯೇನೋ ಪರಿಗಣಿಸಬೇಕಾದ ವಿಧಾನವೇ. ಆದರೆ, ದೇಶದೆಲ್ಲೆಡೆ ಇದನ್ನು ಏಕೈಕ ಸೂತ್ರವೆಂಬಂತೆ ಅಳವಡಿಸುವ ಸರ್ಕಾರಿ ಯೋಚನೆಯಲ್ಲಿ ಗಂಭೀರ ಲೋಪವಿದೆ.

ಒಂದೇ ತೆರನ ಭೌಗೋಳಿಕ ಪರಿಸರ ಹಾಗೂ ಹವಾಮಾನವಿರುವ ಪ್ರಸ್ಥಭೂಮಿ ರಾಜ್ಯಗಳ ಬಯಲು ಪ್ರದೇಶಗಳಲ್ಲಿ, ಒಂದೇ ದಿಕ್ಕಿನಲ್ಲಿ ಹರಿಯುವ ಅಕ್ಕಪಕ್ಕದ ಸಮಾನಾಂತರ ನದಿಗಳನ್ನು ಜೋಡಿಸುವುದಕ್ಕೆ ಅರ್ಥವಿದೆ. ಆದರೆ, ಹಿಮಾಲಯಶ್ರೇಣಿ, ಈಶಾನ್ಯ ರಾಜ್ಯಗಳ ಗುಡ್ಡಗಾಡು ಪ್ರದೇಶಗಳು, ದಕ್ಷಿಣ ಭಾರತದ ಪಶ್ಚಿಮಘಟ್ಟ ಶ್ರೇಣಿ ಮತ್ತು ಕರಾವಳಿಯಂಥ ಸೂಕ್ಷ್ಮ ಪರಿಸರಗಳಲ್ಲಿ ಭೂಮಿಯನ್ನು ಆಳವಾಗಿ ಕತ್ತರಿಸುವ ಈ ಬಗೆಯ ಯೋಜನೆಗಳು ಸೂಕ್ತವಲ್ಲವೆಂದು ಅಧ್ಯಯನಗಳು ಹೇಳುತ್ತಿವೆ. ಭೂಕುಸಿತ, ಅಂತರ್ಜಲ ಬಸಿಯುವುದು, ಮಾಲಿನ್ಯಯುಕ್ತ ನೀರಿನ ಪ್ರಸರಣ, ಜೌಗು ಪ್ರದೇಶದ ನಿರ್ಮಾಣ, ಸಾಗಣೆ ಮಾರ್ಗದಲ್ಲಿ ಆವಿಯಾಗಿ ನೀರು ನಷ್ಟವಾಗುವುದು, ಕರಾವಳಿಯ ನದಿ ನೀರು ಉಪ್ಪಾಗುವುದು ಇತ್ಯಾದಿ ಹಲವು ಗಂಭೀರ ಸಮಸ್ಯೆಗಳು ಎದುರಾಗುವುದರಿಂದ, ಜೀವವೈವಿಧ್ಯಭರಿತ ಗುಡ್ಡಗಾಡಿಗೆ ಇವು ಹೊಂದುವಂಥವಲ್ಲ. ಅಪಾರ ಹಣ ಹೂಡಿಕೆಯ ಈ ‘ಎಂಜಿನಿಯರಿಂಗ್ ಕೌತುಕ’ಗಳು ಕೃತಕ ಕಾಲುವೆಗಳಾಗಬಹುದಷ್ಟೇ ಹೊರತು, ನೈಜ ನದಿಗಳಾಗಲಾರವು. ಇಷ್ಟಾಗ್ಯೂ ಕೇಂದ್ರ ಜಲಸಂಪನ್ಮೂಲ ಇಲಾಖೆಯು (ಇದೀಗ ಜಲಶಕ್ತಿ) ಪಶ್ಚಿಮಘಟ್ಟದಂಥ ಸೂಕ್ಷ್ಮ ಪರಿಸರದಲ್ಲೂ ಇಂಥ ಯೋಜನೆಗಳನ್ನು ಪ್ರಸ್ತಾಪಿಸಿದೆ! ಮಲೆನಾಡಿನ ನೇತ್ರಾವತಿ- ಹೇಮಾವತಿ ಹಾಗೂ ಬೇಡ್ತಿ-ವರದಾ ನದಿ ಯೋಜನೆಗಳೂ ಇದರಲ್ಲಿವೆ.

ಕೇಂದ್ರದ ಇಂಥ ಮೆಗಾ ಯೋಜನೆಗಳಿಂದ ಪ್ರೇರೇಪಿತವಾದಂತಿರುವ ರಾಜ್ಯ ಸರ್ಕಾರವೂ ನದಿಗಳನ್ನು ಕಾಲುವೆಗಳೆಂಬಂತೆ ಮನಬಂದ ದಿಕ್ಕಿಗೆ ತಿರುಗಿಸುವ ಸಾಹಸಕ್ಕಿಳಿಯುತ್ತಿದೆ. ಕುಡಿಯುವ ನೀರಿನ ಹೆಸರಿನಲ್ಲಿ ಯೋಜನೆ ಪ್ರಸ್ತಾಪಿಸಿದರೆ, ಅರಣ್ಯ ಮತ್ತು ಪರಿಸರ ಇಲಾಖೆಯ ಹಲವಾರು ನಿಬಂಧನೆಗಳಿಂದ ವಿನಾಯಿತಿ ಪಡೆಯಬಹುದೆಂಬ ಅಡ್ಡದಾರಿಯೂ ಅದಕ್ಕೆ ಗೊತ್ತಾಗಿದೆ. ಹೀಗೆ ಅನುಷ್ಠಾನವಾದದ್ದೇ ಎತ್ತಿನಹೊಳೆ ಯೋಜನೆ. ನೇತ್ರಾವತಿ ಕಣಿವೆಯ ಪಶ್ಚಿಮಘಟ್ಟ ಪ್ರದೇಶವನ್ನು ಧ್ವಂಸಗೊಳಿಸಿರುವ ಈ ಯೋಜನೆಯನ್ನೊಮ್ಮೆ ಗಮನಿಸಬೇಕು. ಕೋಲಾರ, ಚಿಕ್ಕಬಳ್ಳಾಪುರ ಪ್ರದೇಶಗಳ ಎಲ್ಲೆಡೆ ಒಮ್ಮೆಲೇ ನೀರು ಒದಗಿಸುವ ಭ್ರಮೆ ಹುಟ್ಟಿಸಿದ್ದ ಈ ಯೋಜನೆಯು ನಿರೀಕ್ಷಿಸಿದ ನೀರಿನ ಕಾಲಂಶವನ್ನೂ ಪೂರೈಸಲಿಕ್ಕಿಲ್ಲವೆಂದು ಸರ್ಕಾರವೇ ಈಗ ಒಪ್ಪಿಕೊಳ್ಳುತ್ತಿದೆ!

ಇದೀಗ, ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಪಂಪ್ ಮಾಡಿ, ಬೆಂಗಳೂರಿಗೆ ಸಾಗಿಸಲು ವಿಸ್ಕೃತ ಯೋಜನಾ ವರದಿ ತಯಾರಿಸಲು ಸರ್ಕಾರ ಆದೇಶಿಸಿದೆ. ಇನ್ನೂ ನಾಶವಾಗದೆ ಉಳಿದಿರುವ ಉತ್ತರ ಕನ್ನಡದ ಅಘನಾಶಿನಿ ನದಿ ನೀರನ್ನು ತುಮಕೂರು- ಬೆಂಗಳೂರಿನೆಡೆಗೆ ಸಾಗಿಸುವ ಕನಸನ್ನೂ ಹರಿಬಿಡಲಾಗುತ್ತಿದೆ. ಈಗಾಗಲೇ ಹಲವಾರು ಜಲ ವಿದ್ಯುತ್ ಯೋಜನೆಗಳಿರುವ ಕಾರವಾರಕ್ಕೆ ಹರಿ ಯುವ ಕಾಳಿ ನದಿಯನ್ನು ಕೃಷ್ಣಾ ಕಣಿವೆಗೆ ಜೋಡಿಸುವ ಬೇಡಿಕೆಯೂ ಕೇಳಿಬರುತ್ತಿದೆ. ನಾಗರಿಕತೆ ಪೊರೆಯುವ ನದಿಗಳು ನಗರೀಕರಣಕ್ಕೆ ಬಲಿಯಾಗುವ ರೀತಿಯಿದು. ರಾಜಕಾರಣಿಗಳು, ಅಧಿಕಾರಶಾಹಿ ಹಾಗೂ ಗುತ್ತಿಗೆದಾರರ ಗುಪ್ತ ಮೈತ್ರಿಯಲ್ಲದೆ, ಬರಗಾಲಪೀಡಿತ ಮುಗ್ಧ ಜನರಲ್ಲಿ ಈ ಬಗೆಯ ಭ್ರಮೆಗಳನ್ನು ಇನ್ನಾರು ಹರಿಬಿಡಲು ಸಾಧ್ಯ?

ನೀರಿನ ಕುರಿತಂತೆ ಅಧಿಕಾರಸ್ಥರ ಅರಿವಿನಲ್ಲಿ ಎರಡು ಗಂಭೀರ ಸಮಸ್ಯೆಗಳಿವೆ. ಒಂದನೆಯದು, ನೀರಿನ ಪೂರೈಕೆ ಪ್ರಮಾಣವನ್ನು ಅವರು ಗಮನಿಸುತ್ತಾರೆಯೇ ಹೊರತು, ಬಳಕೆಯ ಶಿಸ್ತಿನ ಕುರಿತಲ್ಲ. ಬೆಂಗಳೂರನ್ನೇ ಗಮನಿಸುವುದಾದರೆ, ಈಗಿನ ಪೂರೈಕೆಯ ಸುಮಾರು ಐವತ್ತು ಪ್ರತಿಶತ ನೀರು ಸೋರಿಹೋಗುತ್ತಿರುವುದನ್ನು ಅಧ್ಯಯನಗಳು ನಿರೂಪಿಸಿವೆ. ಆ ನಷ್ಟ ತಡೆಯುವುದು, ವ್ಯಾಪಕ ಮಳೆನೀರು ಸಂಗ್ರಹ, ನೀರಿನ ಮರುಬಳಕೆ- ಇವೆಲ್ಲ ವಿಧಾನಗಳಿಂದ ಸುಮಾರು 24 ಟಿಎಂಸಿ ಅಡಿಗೂ ಮಿಕ್ಕಿ ನೀರನ್ನು ಪಡೆಯಬಹುದೆಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನಗಳು ಹೇಳುತ್ತಿವೆ. ಪ್ರಸ್ತುತ ಕೊರತೆಯು ಬಳಕೆಯ ವೈಫಲ್ಯದ್ದೇ ಹೊರತು, ಪೂರೈಕೆಯ ವ್ಯತ್ಯಯದ್ದಲ್ಲ!

ಅಧಿಕಾರಸ್ಥರ ಇನ್ನೊಂದು ತಪ್ಪು ತಿಳಿವಳಿಕೆಯೆಂದರೆ, ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವ ನದಿಗಳ ನೀರು ಸಮುದ್ರ ಸೇರಿ ನಷ್ಟವಾಗುತ್ತದೆ ಎಂಬುದು. ಗುಡ್ಡಗಾಡು ಹಾಗೂ ಕರಾವಳಿ ಪ್ರದೇಶದ ಅಂತರ್ಜಲ ಮರುಪೂರಣ ಮಾಡುವುದು, ವೈವಿಧ್ಯ ಮಯ ಕಾಡುಗಳನ್ನು ಪೊರೆಯುವುದು ಪಶ್ಚಿಮಕ್ಕೆ ಹರಿಯುವ ಈ ನದಿಗಳೇ. ಕರಾವಳಿಯ ಕಾಂಡ್ಲಾ ಕಾಡು ಹಾಗೂ ಸಮುದ್ರಕ್ಕೆ ಅವು ಪೋಷಕಾಂಶಯುಕ್ತ ನೀರನ್ನು ಒಯ್ಯುವುದರಿಂದಲೇ ಅಲ್ಲಿ ಜಲಚರಗಳು ವೃದ್ಧಿಯಾಗುವುದು. ಇತ್ತೀಚೆಗೆ ಕಂಡುಬರುತ್ತಿರುವ ಸಮುದ್ರದ ಮೀನುಕ್ಷಾಮಕ್ಕೆ ನದಿಗಳು ತರುವ ಸಿಹಿನೀರ ಕೊರತೆಯೂ ಕಾರಣವೆಂಬುದು ಈಗ ಸಾಬೀತಾದ ಸಂಗತಿ. ನದಿಗಳೆಂದರೆ ನೀರಿನ ಕಾಲುವೆಗಳಲ್ಲ; ತಾವೇ ಒಂದು ಜೀವಸೆಲೆ!

ಸಹ್ಯಾದ್ರಿಯಲ್ಲಿ ವಿಶಿಷ್ಟ ಭೂರಚನೆ ಮತ್ತು ಮಳೆಕಾಡು ಗಳಿಂದಾಗಿ ಹೆಚ್ಚು ಮಳೆ ಬರುವುದೇ ಹೊರತು, ಅದೇನೂ ನೀರು ನಿಂತ ತೊಟ್ಟಿಯಲ್ಲ. ಈ ಪರಿಸರ ಮತ್ತು ನದಿಗಳ ಸಹಜ ಹರಿವನ್ನು ಕಾಪಾಡಿಕೊಂಡರೆ ಮಾತ್ರ ನಿರಂತರ ನೀರಿನ ಇಳುವರಿ ಪಡೆಯಲು ಸಾಧ್ಯ. ನದಿಯೂ ಒಂದು ಜೀವಿ ಎಂಬುದರ ಅರ್ಥವೈಶಾಲ್ಯ ವದು. ಸರ್ಕಾರ ಕೇಂದ್ರದ್ದಾಗಲಿ ಅಥವಾ ರಾಜ್ಯದ್ದಾಗಲಿ, ಮಲೆನಾಡಿನ ನದಿಗಳನ್ನೆಲ್ಲ ತಿರುಗಿಸಿ, ಒಡಲೊಡೆದು ನೀರು ಪಡೆಯಲು ಯತ್ನಿಸುವುದು ಚಿನ್ನದ ಮೊಟ್ಟೆ ಇಡುವ ಕೋಳಿ ಕೊಯ್ದಂತೆ. ತಿರುಗಿಸಬೇಕಾದುದು ನದಿಗಳನ್ನಲ್ಲ, ವಿಕೇಂದ್ರೀಕೃತ ಮತ್ತು ಸುಸ್ಥಿರವಾದ ನೀರು ಬಳಕೆ ವಿಧಾನಗಳತ್ತ ಅಧಿಕಾರಸ್ಥರ ದೃಷ್ಟಿಯನ್ನು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT