ಭಾನುವಾರ, ಸೆಪ್ಟೆಂಬರ್ 19, 2021
26 °C

ಅನ್ನಮೂಲ ಅಧ್ಯಾತ್ಮ ಮತ್ತು ಅರಿವು

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

Prajavani

ಸ್ವಾಮಿ ವಿವೇಕಾನಂದರ ವೈಚಾರಿಕ ಅರಿವು ಇಂದಿಗೂ ಅರ್ಥಪೂರ್ಣವಾಗಿದ್ದು, ಅದನ್ನು ಪೂರ್ಣ ಅರ್ಥ ಮಾಡಿಕೊಂಡು ಅನುಷ್ಠಾನಕ್ಕೆ ತಂದರೆ ದೇಶದಲ್ಲಿ ಸಹಿಷ್ಣುತೆ ಮತ್ತು ಸಮಾನತೆಗೆ ನಿಜದ ನೆಲೆ ಒದಗುತ್ತದೆ. ಆದರೆ ಅವರ ಹೆಸರನ್ನು ಯಥೇಚ್ಛವಾಗಿ ಬಳಸಿಕೊಳ್ಳುವ ಮೂಲಭೂತವಾದಿಗಳಿಗೆ ಅರಿವಿನ ಅರ್ಥಪೂರ್ಣತೆಗಿಂತ ನಾಮದ ಬಲವಷ್ಟೇ ಮುಖ್ಯವಾಗಿದೆ. ಧಾರ್ಮಿಕ ಮೂಲಭೂತ
ವಾದದ ವಿರೋಧಿ ವಲಯಕ್ಕೆ ವಿವೇಕಾನಂದರ ವಿವೇಕದಲ್ಲಿ ಉತ್ತರ ಹುಡುಕುವ ಉಮೇದು ಆದ್ಯತೆ
ಯಾಗಿಲ್ಲ. ಹೀಗಾಗಿ ಅವಿವೇಕಕ್ಕೂ ಅವರ ‘ವಿವೇಕ’ ಬಳಕೆಯಾಗುವ ವಿಪರ್ಯಾಸವನ್ನು ಕಾಣಬೇಕಾಗಿದೆ.

2019ರ ಡಿಸೆಂಬರ್‌ 14ರಂದು ಎನ್‌ಡಿಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ ವಕ್ತಾರ ಭಾಸ್ಕರ್ ಘೋಷ್‌ ‘ಪೌರತ್ವ (ತಿದ್ದುಪಡಿ) ಕಾಯ್ದೆ’ಯನ್ನು ಸಮರ್ಥಿಸುತ್ತ, ವಿವೇಕಾನಂದರು ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ 1893ರ ಸೆ. 11ರಂದು ಆಡಿದ ಮಾತುಗಳನ್ನು ಬಳಸಿಕೊಂಡಿದ್ದು ಇಂಥ ಒಂದು ವಿಪ‍ರ್ಯಾಸ. ವಿವೇಕಾನಂದರ ಮಾತುಗಳು ಹೀಗಿವೆ: ‘ಧಾರ್ಮಿಕ ಸಹನೆಯನ್ನೂ ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನೂ ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು. ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ, ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯ ನೀಡಿದ ದೇಶಕ್ಕೆ ಸೇರಿದವನು ಎಂಬ ಹೆಮ್ಮೆ ನನ್ನದು’. ಈ ಮಾತುಗಳನ್ನು ಉಲ್ಲೇಖಿಸುವ ಮೂಲಕ ಭಾಸ್ಕರ್‌, ವಲಸಿಗರಿಗೆ ಪೌರತ್ವ ನೀಡುವುದು ವಿವೇಕಾನಂದರ ಆದರ್ಶಕ್ಕೆ ಅನುಗುಣವಾಗಿದೆಯೆಂದು ಸಮರ್ಥಿಸಲು ಪ್ರಯತ್ನಿಸಿದರು.

ಇಲ್ಲಿ ಹೇಳಬೇಕಾದ ಸತ್ಯ ಸಂಗತಿಯೆಂದರೆ, ವಿವೇಕಾನಂದರನ್ನು ಯಾವ ಹಿಂದೂ ಸಂಘಟನೆಯೂ ತನ್ನ ಪ್ರತಿನಿಧಿಯಾಗಿ ಸಮ್ಮೇಳನಕ್ಕೆ ಕಳಿಸಿರಲಿಲ್ಲ. ವೈಯಕ್ತಿಕ ನೆಲೆಯಲ್ಲಿ ಹೋಗಿದ್ದ ಅವರಿಗೆ ಖೇತ್ರಿ ಮಹಾರಾಜರು ಸಹಾಯ ಮಾಡಿದ್ದರು. ಅಲ್ಲಿ ಪ್ರತಿನಿಧಿ ಪತ್ರ ಸಿಗಲು ವಿದೇಶಿ ಮಹಿಳೆಯೊಬ್ಬರು ನೆರವಾದರು. ವಿವೇಕಾನಂದರು ಅಂದು ವಿದೇಶದಲ್ಲಿ ಎತ್ತಿಹಿಡಿದ ನಮ್ಮ ದೇಶ ಹಾಗೂ ಹಿಂದೂ ಧರ್ಮದ ಆದರ್ಶ ಇಂದು ಜೀವಶಕ್ತಿಯಾಗಿ ಉಳಿದಿದೆಯೇ ಎಂಬ ಪ್ರಶ್ನೆಯ ಜೊತೆಗೆ, ಅವರು ಸಹಿಷ್ಣುತೆ ಕುರಿತು ಬೇರೊಂದು ಕಡೆ ಕಟ್ಟಿಕೊಟ್ಟ ಆದರ್ಶದ ಮಾದರಿಯನ್ನು ನಿಜವಾದ ದೇಶಪ್ರೇಮಿಗಳು ಹಾಗೂ ಧರ್ಮನಿಷ್ಠರು ಅನುಸರಿಸಬೇಕು.

‘ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್‌ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು. ಆದರೂ ವೇದ, ಬೈಬಲ್, ಕುರಾನ್‌ಗಳ ಐಕ್ಯತೆಯಿಂದ ಇದನ್ನು ಸಾಧಿಸಬೇಕಾಗಿದೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮೆದುಳು, ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ’ (ಸ್ವಾಮಿ ವಿವೇಕಾನಂದ ಕೃತಿಶ್ರೇಣಿ ಸಂಪುಟ– 7, ಪುಟ: 238)– ಈ ವಿವೇಕದ ನುಡಿಗಳು ನಮ್ಮ ಮನದಲ್ಲಿ ಮಿಡಿಯುತ್ತಲೇ ಇದ್ದರೆ ಸಹಿಷ್ಣುತೆ ಹಾದಿ ಸುಗಮವಾಗುತ್ತದೆ.

ವಿವೇಕಾನಂದರ ಪರಿಕಲ್ಪನೆಯ ಹಿಂದೂ ಧರ್ಮದಲ್ಲಿ ಅನ್ಯಮತ ದ್ವೇಷವಿಲ್ಲ, ಸಾಮಾಜಿಕ ಶೋಷಣೆಗೆ ಸಮ್ಮತಿಯಿಲ್ಲ. ಹಿಂದೂ ಧರ್ಮವೊಂದೇ ಶ್ರೇಷ್ಠ, ಉಳಿದ ಧರ್ಮಗಳು ಕನಿಷ್ಠ ಎಂಬ ಭಾವನೆಯಿಲ್ಲ. ಹೀಗಾಗಿ ಅವರು ಹಿಂದೂ ಧರ್ಮದ ಕೊರತೆಗಳನ್ನು ಹೇಳಲು ಹಿಂಜರಿಯಲಿಲ್ಲ: ‘ಪ್ರಪಂಚದ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ. ಪ್ರಪಂಚದ ಯಾವ ಧರ್ಮವೂ ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ. ಅಲ್ಲಿರುವ ಸಂಪ್ರದಾಯಶರಣರು; ಪುರೋಹಿತರದು. ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ರೀತಿಯ ಕ್ರೂರ ವಿಧಾನಗಳನ್ನು ಸೃಷ್ಟಿಸುವ ಠಕ್ಕರದು’ (ಕೃತಿಶ್ರೇಣಿ–ಸಂ–4, ಪುಟ–86).

ಹಾಗೆಂದು, ವಿವೇಕಾನಂದರು ಹಿಂದೂಧರ್ಮದ ಅನುಯಾಯಿಗಳ ಕಾಪಟ್ಯವನ್ನು ಮಾತ್ರ ಟೀಕಿಸಿಲ್ಲ. ಷಿಕಾಗೊದಲ್ಲಿ 1893ರ ಸೆ. 20ರಂದು ಮಾಡಿದ ಭಾಷಣದಲ್ಲಿ ಭಾರತಕ್ಕೆ ಮತಾಂತರ ಮಾತ್ರಕ್ಕಾಗಿ ಬರುವ ಕ್ರೈಸ್ತ ಧರ್ಮೀಯರ ನಡೆಯನ್ನೂ ಟೀಕಿಸುತ್ತಾರೆ: ‘ಕ್ರೈಸ್ತರಲ್ಲದವರ ಆತ್ಮವನ್ನು ಉದ್ಧರಿಸುವುದಕ್ಕೆ ಪಾದ್ರಿಗ
ಳನ್ನು ಕಳಿಸಲು ನೀವು ಇಷ್ಟು ಕಾತರರಾಗಿದ್ದೀರಲ್ಲ, ಉ‍ಪವಾಸದಿಂದ ನರಳುತ್ತಿರುವ ಆ ಜನರ ದೇಹಗಳನ್ನು ಉಳಿಸಲು ನೀವೇಕೆ ಪ್ರಯತ್ನಿಸಬಾರದು’ ಎಂದು ಪ್ರಶ್ನಿಸುತ್ತಾರೆ. ಆನಂತರ ಎಲ್ಲ ಮತಧರ್ಮಗಳನ್ನು ಅನುಲಕ್ಷಿಸಿ ಮುಂದಿನ ಮಾತುಗಳನ್ನು ಆಡುತ್ತಾರೆ: ‘ಉಪವಾಸದಿಂದ ಸಾಯುತ್ತಿರುವವರಿಗೆ ಮತಧರ್ಮವನ್ನು ನೀಡುವುದು ಅವರಿಗೆ ಮಾಡುವ ಅಪಮಾನ. ಅವರಿಗೆ ತತ್ತ್ವಶಾಸ್ತ್ರವನ್ನು ಬೋಧಿಸುವುದೂ ಒಂದು ಅಪಮಾನ’. ಅಂದರೆ ವಿವೇಕಾನಂದರಿಗೆ ಮತಧರ್ಮದ ಬೋಧನೆಗಿಂತ ಜನರ ಹಸಿವು ನೀಗಿಸುವುದು ಆದ್ಯತೆಯಾಗಿತ್ತು.

ಅವರು ವಿದೇಶಕ್ಕೆ ಹೋಗಿದ್ದು ಉಪನ್ಯಾಸ ನೀಡಿ ಹಣ ಸಂಗ್ರಹಿಸಿ ಭಾರತದ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದಲೂ ಹೌದೆಂಬುದನ್ನು ಅವರ ಮಾತುಗಳಲ್ಲೇ ಅರಿಯಬಹುದು. ಇದೇ ಭಾಷಣದಲ್ಲಿ, ‘ನನ್ನ ದೇಶದಲ್ಲಿ ದಾರಿದ್ರ್ಯದಿಂದ ನರಳುತ್ತಿರುವವರಿಗೆ ಸಹಾಯ ಪಡೆಯಲು ಇಲ್ಲಿಗೆ ಬಂದೆ’ ಎಂದು ಹೇಳಿದ್ದಾರೆ. ಕ್ರೈಸ್ತ ದೇಶದಲ್ಲಿ ಕ್ರೈಸ್ತರಲ್ಲದವರಿಗೆ ನೆರವು ಪ‍ಡೆಯುವುದು ಕಷ್ಟಕರವಾಗಿದೆಯೆಂದೂ ವಿಷಾದಿಸಿದ್ದಾರೆ. ಹಾಗೆಂದು ಅವರು ಕ್ರೈಸ್ತರನ್ನಾಗಲಿ, ಅವರ ಧರ್ಮವನ್ನಾಗಲಿ ವಿರೋಧಿಸಲಿಲ್ಲ, ದ್ವೇಷಿಸಲಿಲ್ಲ. ಅಧ್ಯಾತ್ಮ ಎನ್ನುವುದು ಮೊದಲ ಆದ್ಯತೆಯಾಗುವ ಬದಲು ಅನ್ನಮೂಲ ಅಗತ್ಯವನ್ನು ಅರ್ಥ ಮಾಡಿಕೊಳ್ಳ
ಬೇಕೆಂದು ಪ್ರತಿಪಾದಿಸುತ್ತಾರೆ. ಹೀಗಾಗಿ ವಿವೇಕಾನಂದರದು ಅನ್ನಮೂಲ ಅಧ್ಯಾತ್ಮ. ಆದರೆ ಇಂದು ಮಂದಿರಮೂಲ ಅಧ್ಯಾತ್ಮ ಮುಖ್ಯವಾಗಿಬಿಟ್ಟಿದೆ!

ಇದೇ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮವನ್ನು ಒಳಗೊಂಡಂತೆ ಎಲ್ಲ ಧರ್ಮಗಳ ಮಿತಿಗಳನ್ನು ಕೂಪಮಂಡೂಕ ರೂಪಕದ ಮೂಲಕ ವಿವೇಕಾನಂದರು ಹೇಳಿದ್ದಾರೆ: ‘ನಾನೊಬ್ಬ ಹಿಂದೂ. ನಾನು ನನ್ನ ಸಣ್ಣ ಬಾವಿಯಲ್ಲಿ ಕುಳಿತುಕೊಂಡು ಜಗತ್ತೆಲ್ಲ ಈ ನನ್ನ ಬಾವಿ ಎಂದು ಯೋಚಿಸುತ್ತಿರುವೆ. ಕ್ರೈಸ್ತರು ಮತ್ತು ಮಹಮ್ಮದೀಯರು ತಮ್ಮ ತಮ್ಮ ಪುಟ್ಟಬಾವಿಯಲ್ಲಿ ಕುಳಿತು, ಪ್ರಪಂಚವೆಲ್ಲ ಇಷ್ಟೇ ಎಂದು ಭಾವಿಸುವರು. ನಮ್ಮ ನಮ್ಮ ಪುಟ್ಟ ಪ್ರಪಂಚಗಳ ಗೋಡೆಗಳನ್ನು ಒಡೆದು ಹಾಕಲು ಮಹತ್ತಾದ ಪ್ರಯತ್ನ ಮಾಡುತ್ತಿರುವ ಅಮೆರಿಕನ್ನರೇ ನಿಮಗೆ ಕೃತಜ್ಞತೆಗಳು’ ಎಂದು ಸಮ್ಮೇಳನದ ಆಯೋಜಕರನ್ನು ಪ್ರಶಂಸಿಸುತ್ತಾರೆ.

ವಿವೇಕಾನಂದರು ‘ವಿಶ್ವಧರ್ಮ’ದ ಪರಿಕಲ್ಪನೆಯನ್ನು ಪ್ರತಿಪಾದಿಸಿ, ‘ಜಗತ್ತಿನಲ್ಲಿ ಎಂದಾದರೂ ಒಂದು ವಿಶ್ವಧರ್ಮವೆನ್ನುವುದು ಅಸ್ತಿತ್ವಕ್ಕೆ ಬರುವುದಾದರೆ ಅದು ಕಾಲದೇಶಗಳ ಎಲ್ಲೆಯನ್ನು ಮೀರಿರಬೇಕು... ಅದು ಬ್ರಾಹ್ಮಣ ಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಮಹಮ್ಮದೀಯ ಧರ್ಮ ಎಂದು ಮಾತ್ರವಾಗಿರದೆ ಈ ಎಲ್ಲದರ ಮೊತ್ತವಾಗಿರಬೇಕು. ಆ ಧರ್ಮ ತನ್ನ ವೈಶಾಲ್ಯದಿಂದ ತನ್ನ ಅನಂತಬಾಹುಗಳನ್ನು ಚಾಚಿ ಯಾವ ಭೇದವೂ ಇಲ್ಲದೆ ಎಲ್ಲರನ್ನೂ ಆಲಿಂಗಿಸಿಕೊಳ್ಳುವಂತೆ ಇರಬೇಕು’ ಎಂದಿದ್ದರು. ಆಕಾಶದಷ್ಟು ಆದರ್ಶದ ಇಂಥ ಧರ್ಮ ರೂಪುಗೊಳ್ಳುವುದು ಅಸಾಧ್ಯವೆಂದು ಭಾವಿಸಿದರೂ ವಿವೇಕಾನಂದರ ಈ ಪ್ರತಿಪಾದನೆಯಲ್ಲಿ ಯಾವೊಂದು ಧರ್ಮವೂ ತನಗೆ ತಾನೇ ಶ್ರೇಷ್ಠ ಮತ್ತು ಅಂತಿಮ ಎಂದು ಭಾವಿಸಬಾರದೆಂಬ ಹೊಳಹು ಇದೆ.

ಧಾರ್ಮಿಕ ಮೂಲಭೂತವಾದಿಗಳಿಂದ ಸೃಷ್ಟಿಯಾದ ಮಂದಿರ–ಮಸೀದಿ ವಿವಾದದ ಇಂದಿನ ಸಂದರ್ಭದಲ್ಲಿ ಅವರ ಚಿಂತನೆಯ ಕೆಲವು ಸ್ಟಷ್ಟ ನುಡಿಗಳನ್ನು ಗಮನಿಸಿ: ‘ಧರ್ಮವು ದೇವಸ್ಥಾನ ಕಟ್ಟುವುದರಲ್ಲಿ ಇಲ್ಲ ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ, ಅದು ಗ್ರಂಥದಲ್ಲಿಲ್ಲ, ಮಾತಿನಲ್ಲಿಯೂ ಇಲ್ಲ, ಉಪವಾಸದಲ್ಲಿ ಇಲ್ಲ, ಯಾವುದೇ ಸಂಸ್ಥೆಯಲ್ಲಿಲ್ಲ. ಧರ್ಮವೆಂದರೆ ಸಾಕ್ಷಾತ್ಕಾರ’ (ಕೃತಿ ಶ್ರೇಣಿ ಸಂ.5. ಪುಟ: 446).

‘ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ವೈವಿಧ್ಯವೇ ಜೀವನದ ರಹಸ್ಯ... ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ಕೊಡಬೇಕು’ ಎಂದೂ ಹೇಳಿದ್ದರು. ವಿವೇಕಾನಂದರ ಜಯಂತಿಯ (ಜ. 12) ಈ ಸಂದರ್ಭದಲ್ಲಿ, ಎಲ್ಲ ಧರ್ಮಗಳ ಉಗ್ರ
ಮೂಲಭೂತವಾದಿಗಳಿಗೆ ಅವರ ಈ ಪ್ರಖರ ಪ್ರತಿಪಾದನೆಯೇ ಉತ್ತರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು