ಬುಧವಾರ, ಜನವರಿ 29, 2020
30 °C
ರೈತರ ಬೀಜ ಸ್ವಾತಂತ್ರ್ಯ ಮತ್ತು ಕೃಷಿ ಜೀವವೈವಿಧ್ಯಕ್ಕೆ ಕುತ್ತಾಗಬಲ್ಲದು ಬೀಜ ಮಸೂದೆ

ರೈತರ ಹಿತವೇ ಬೀಜಮಂತ್ರವಾಗಲಿ

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ಬೀಜದಿಂದ ವಂಶಾಭಿವೃದ್ಧಿಯಾಗುವ ಸಸ್ಯಲೋಕದ ವಂಶವಾಹಿಗಳ ನಡವಳಿಕೆಯಲ್ಲೊಂದು ಕೌತುಕವಿದೆ. ಒಂದೇ ಪ್ರಭೇದದ ವಿಭಿನ್ನ ತಳಿಗಳ ಹೂಗಳ ನಡುವೆ ಪರಾಗಸ್ಪರ್ಶವಾಗಿ ರೂಪುಗೊಳ್ಳುವ ಬೀಜಗಳಿಂದ ಚಿಗುರೊಡೆಯುವ ಗಿಡಗಳ ಗುಣ- ರೂಪಗಳಲ್ಲಿ ಹೊಸ ಚೈತನ್ಯವಿದ್ದರೆ, ತಳಿಯೊಂದರ ಅಂತಸ್ಸಂಬಂಧೀಯ ಪರಾಗಸ್ಪರ್ಶದಿಂದ ಜನಿಸಿದ ಬೀಜಗಳ ಗುಣಗಳಲ್ಲಾದರೋ ಕುಸಿತವಾಗುತ್ತದೆ!

ಈ ಸತ್ಯವನ್ನಾಧರಿಸಿ ಹೊಸ ಹೊಸ ಮಿಶ್ರತಳಿಗಳನ್ನು ಉತ್ಪಾದಿಸುತ್ತ ಸಾಗಿದ್ದೇ ತಳಿವರ್ಧನೆಶಾಸ್ತ್ರ. ಇಳುವರಿ ಮತ್ತು ಉತ್ಪಾದನೆ ಹೆಚ್ಚಿಸುವ ಸ್ಪರ್ಧಾತ್ಮಕ ಯುಗಕ್ಕೆ ನಾಂದಿ ಹಾಡಿದ ಹಸಿರುಕ್ರಾಂತಿಯ ತೊಟ್ಟಿಲ ತೂಗುವಲ್ಲೂ ಈ ಹೈಬ್ರಿಡ್ ತಂತ್ರಜ್ಞಾನದ ಕೈಗಳಿದ್ದವು. ಈಗಂತೂ, ಜೀವಕೋಶದೊಳಗಿನ ಕೋಶಕೇಂದ್ರಕ್ಕೇ ಕೈಹಾಕಿ ವಂಶವಾಹಿಗಳನ್ನೇ ತಿದ್ದುವ ಜೈವಿಕ ತಂತ್ರಜ್ಞಾನವೂ (ಜಿ.ಎಂ) ಜೊತೆಯಾಗಿದೆ. ಕೃಷಿಯ ಪ್ರಮುಖ ಒಳಸುರಿಯಾದ ಬೀಜ ಪೂರೈಸುವ ಇಂದಿನ ಬೀಜೋದ್ಯಮವನ್ನು ನಿಯಂತ್ರಿಸುತ್ತಿರುವುದು ಈ ಎರಡು ತಂತ್ರಜ್ಞಾನಗಳೇ.

ಇದರ ಪರಿಣಾಮವೇನಾಯಿತು? ತಮ್ಮಲ್ಲಿ ಬೆಳೆದ ಬೀಜವನ್ನೇ ಮುಂದಿನ ಫಸಲಿಗೆ ಬಿತ್ತುತ್ತ, ಊರು-ಕೇರಿಗಳ ಒಡನಾಡಿಗಳೊಂದಿಗೆ ಬಿತ್ತನೆಕಾಳು ಹಂಚಿಕೊಳ್ಳುತ್ತ ಸಾಗಿಬಂದಿರುವ ಕೃಷಿಕರ ಪಾರಂಪರಿಕ ಬೀಜ ಸಂಸ್ಕೃತಿಯು, ನಾಲ್ಕು ದಶಕಗಳಿಂದ ಈಚೆಗೆ ವ್ಯಾಪಕವಾಗಿ ಬದಲಾಗತೊಡಗಿದೆ. ಶೇ 90ಕ್ಕೂ ಮಿಕ್ಕಿ ಹತ್ತಿ ಬೆಳೆಯು ಇಂದು ಬಿ.ಟಿ. ಬೀಜದಿಂದಲೂ, ಶೇ 60ಕ್ಕೂ ಮಿಕ್ಕಿ ಜೋಳವು ಹೈಬ್ರಿಡ್ ಬೀಜದಿಂದಲೂ ಉತ್ಪಾದನೆಯಾಗುತ್ತಿವೆ. ದೇಶದ ಉತ್ಪಾದನೆಯ ಕಾಲು ಭಾಗಕ್ಕಿಂತ ಹೆಚ್ಚಿನ ಹಣ್ಣು ಮತ್ತು ತರಕಾರಿಗಳನ್ನೂ ಹೈಬ್ರಿಡ್ ಬೀಜ ಬಿತ್ತಿಯೇ ಬೆಳೆಸಲಾಗುತ್ತಿದೆ.

ಇದರ ಫಲಶ್ರುತಿ ಗಮನಿಸಬೇಕಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ದೇಶದ ಅಗತ್ಯಕ್ಕಾಗಿ ‘ಹಸಿರುಕ್ರಾಂತಿ’ ಆರಂಭವಾಯಿತು. ಇದನ್ನು ಪೋಷಿಸಲು ವ್ಯಾಪಕವಾದ ಸರ್ಕಾರಿ ಸ್ವಾಮ್ಯದ ಕೃಷಿ ಸಂಶೋಧನಾ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ರೂಪುಗೊಂಡವು. ಅಲ್ಲಿ ಅಭಿವೃದ್ಧಿಯಾದ ತಂತ್ರಜ್ಞಾನವನ್ನಾಧರಿಸಿ ಗುಣಮಟ್ಟದ ಬೀಜಗಳನ್ನು ರೈತರಿಗೆ ಒದಗಿಸಲು ಸರ್ಕಾರಿ ಅಥವಾ ಸಹಕಾರಿ ಕ್ಷೇತ್ರದ ಬೀಜದ ಕಂಪನಿಗಳೂ ಉದಯವಾದವು. ಕಳೆದ ದಶಕದ ಆರಂಭದವರೆಗೂ ದೇಶದ ಒಟ್ಟಾರೆ ಬೀಜೋದ್ಯಮ ಈ ಕ್ಷೇತ್ರಗಳ ಸಂಸ್ಥೆಗಳ ಹಿಡಿತದಲ್ಲಿತ್ತು. ಆದರೆ, ನಿರಂತರವಾಗಿ ಏರಿದ ಕೃಷಿ ಉತ್ಪನ್ನಗಳ ಬೇಡಿಕೆಯಿಂದಾಗಿ, ಕಳೆದ ಎರಡು ದಶಕಗಳಲ್ಲಿ ಭಾರತವು ವಿಶ್ವದ ಕೃಷಿ ಉದ್ಯಮದ ಬೃಹತ್ ಮಾರುಕಟ್ಟೆಗಳಲ್ಲಿ ಒಂದಾಗಿ ವಿಕಾಸವಾಗಿದೆ.

ಹೈಬ್ರಿಡ್ ಬೆಳೆಯ ಬೀಜವನ್ನು ಮರುಫಸಲಿಗೆ ಬಿತ್ತಲು ಬರದಿರುವುದರಿಂದ, ಪ್ರತಿವರ್ಷವೂ ಕೃಷಿಕರಿಗೆ ಹೊಸ ಬಿತ್ತನೆ ಬೀಜವೇ ಬೇಕು. ಇವುಗಳಿಂದಾಗಿ ಬೀಜದ ಮಾರುಕಟ್ಟೆ ಹಿಗ್ಗತೊಡಗಿತು. ಇದನ್ನೆಲ್ಲ ಗಮನಿಸುತ್ತಿದ್ದ ಖಾಸಗಿ ಕೃಷಿ ಉದ್ಯಮ ಜಗತ್ತು, ಉದಾರೀಕರಣ ನೀತಿಯನ್ನು ಬಳಸಿಕೊಂಡು ಯಶಸ್ವಿಯಾಗಿ ಮಾರುಕಟ್ಟೆಗೆ ಕಾಲಿಟ್ಟಿತು. ಅಂಕಿಅಂಶಗಳ ಪ್ರಕಾರ, ಸುಮಾರು ₹ 4.30 ಲಕ್ಷ ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟಿರುವ ದೇಶದ ಇಂದಿನ ಬಿತ್ತನೆ ಬೀಜ ಮಾರುಕಟ್ಟೆಯ ಶೇ 50ಕ್ಕೂ ಹೆಚ್ಚಿನ ಪಾಲು ಖಾಸಗಿ ಉದ್ಯಮದ ಪಾಲಾಗಿದೆ. ಸಹಸ್ರಮಾನಗಳಿಂದ ತಮ್ಮದೇ ಬಿತ್ತನೆ ಬೀಜ ಬಳಸುವ ಸ್ವಾತಂತ್ರ್ಯ ಹೊಂದಿದ್ದ ಹಾಗೂ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿರುವ ದೇಶದ ಬಹುಪಾಲು ಸಣ್ಣ ಹಾಗೂ ಅತಿಸಣ್ಣ ರೈತರು, ಬಿತ್ತನೆ ಬೀಜಕ್ಕಾಗಿ ಇಂದು ಬೀಜದ ಕಂಪನಿಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಕಾಲುವೆ ನೀರಾವರಿ, ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಲಭ್ಯತೆ ಹೆಚ್ಚಿದಂತೆಲ್ಲ ಆಹಾರ ಸುರಕ್ಷೆಯ ಮೂಲಾಧಾರವಾದ ಭತ್ತದ ಕೃಷಿಗೂ ಈ ಹೈಬ್ರಿಡ್ ಮಾಯೆ ಆವರಿಸುತ್ತಿದೆ.

ಇಂದು ಜಾರಿಯಲ್ಲಿರುವ 1966ರ ಬೀಜ ಕಾಯ್ದೆಯು, ಸಂಕೀರ್ಣವಾಗಿ ಬೆಳೆದಿರುವ ಇಂದಿನ ಬಿತ್ತನೆ ಬೀಜ ಕ್ಷೇತ್ರವನ್ನು ನಿರ್ವಹಿಸಲಾಗುತ್ತಿಲ್ಲ. ಹೀಗಾಗಿ ಈ ಕುರಿತ ಹೊಸ ಸಮಗ್ರ ಕಾನೂನೊಂದರ ಅವಶ್ಯಕತೆಯಿತ್ತು. ಈ ಉದ್ದೇಶದಿಂದ ಸರ್ಕಾರವು  ‘ಬೀಜ ಮಸೂದೆ- 2019’ ರೂಪಿಸಿದೆ. ಈ ಹಿಂದೆ 2004 ಹಾಗೂ 2010ರಲ್ಲಿ ಮಂಡಿಸಿದ್ದ ಮಸೂದೆಗಳನ್ನೇ ಆಧರಿಸಿ, ತಜ್ಞರು, ಸಾರ್ವಜನಿಕರು ಹಾಗೂ ಸಂಸತ್ತಿನ ಜಂಟಿ ಸಮಿತಿಯ ಸಲಹೆಗಳೊಂದಿಗೆ ಈ ಹೊಸ ಮಸೂದೆಯನ್ನು ರೂಪಿಸಲಾಗಿದ್ದು, ಸಂಸತ್ತಿನಲ್ಲಿ ಮಂಡಿಸಿ, ಅನುಮೋದನೆ ಪಡೆಯುವುದಷ್ಟೇ ಬಾಕಿಯುಳಿದಿದೆ. ಇಂಥದ್ದೊಂದು ಕಾನೂನಿನ ಅಗತ್ಯ ಇರುವುದರಿಂದ, ಸರ್ಕಾರದ ಈ ಕ್ರಮ ಅಪೇಕ್ಷಣೀಯವೇ. ಆದರೆ, ಕೃಷಿಕರ ಬೀಜ ಸ್ವಾತಂತ್ರ್ಯ, ಪಾರಂಪರಿಕ ತಳಿ ಸಂರಕ್ಷಣೆ ಹಾಗೂ ದೇಶದ ಆಹಾರ ಸುರಕ್ಷೆಗೆ ಭಂಗ ತರಬಲ್ಲ ಕೆಲವು ಗಂಭೀರ ನ್ಯೂನತೆಗಳನ್ನು, ತಜ್ಞರು ಈ ಮಸೂದೆಯಲ್ಲಿ ಗುರುತಿಸಿದ್ದಾರೆ.

ಎರಡು ಪ್ರಮುಖ ಅಂಶಗಳ ಕುರಿತಾಗಿ ಮಾತ್ರ ಇಲ್ಲಿ ಚಿಂತಿಸಲಾಗಿದೆ. ಮೊದಲಿನದು, ರೈತರು ಬಳಸುವ ಬೀಜಗಳೆಲ್ಲವೂ ಕಡ್ಡಾಯವಾಗಿ ನೋಂದಣಿಯಾಗಿರ ಬೇಕೆಂಬ ನಿಯಮ. ಕೃಷಿ ವಿಜ್ಞಾನಿಗಳೇನೋ ಅಭಿವೃದ್ಧಿಪಡಿಸುವ ತಳಿಗಳನ್ನೆಲ್ಲ ನೋಂದಣಿ ಮಾಡಿಯೇ ಬಿಡುಗಡೆ ಮಾಡುತ್ತಾರೆ. ಆದರೆ ರೈತರು ತಮ್ಮ ಹೊಲದಲ್ಲಿ ಈಗಲೂ ಬೆಳೆಯುತ್ತ ಕಾಪಾಡಿಕೊಂಡು ಬಂದಿರುವ ಪಾರಂಪರಿಕ ತಳಿಗಳನ್ನು ಕೃಷಿ ವಿಜ್ಞಾನಿಗಳ ರೀತಿಯಲ್ಲಿ ನೋಂದಾಯಿಸಲಾಗದು. ಈ ಕುರಿತು ಪ್ರತ್ಯೇಕವಾದ ‘ಸಸ್ಯ ತಳಿಗಳು ಹಾಗೂ ರೈತರ ಹಕ್ಕಿನ ರಕ್ಷಣಾ ಕಾಯ್ದೆ’ (PPVFR-2001) ಜಾರಿಯಲ್ಲಿದ್ದರೂ, ಅದರನ್ವಯ ನೋಂದಣಿ ಕಡ್ಡಾಯವಲ್ಲ! ಹೀಗಾಗಿ, ಪಾರಂಪರಿಕ ತಳಿಗಳು ಆಧುನಿಕ ಕೃಷಿ ತಂತ್ರಜ್ಞರ ಕೈಸೇರಿ ಹೊಸ ತಳಿಯ ಹೆಸರಿನೊಂದಿಗೆ ನೋಂದಣಿಯಾಗಿ, ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯೇ ಹೆಚ್ಚು. ಈ ಕುರಿತ ಹಕ್ಕುಸ್ವಾಮ್ಯ, ಗೌರವಧನವೆಲ್ಲ ಆಗ ಸೇರುವುದು ಬೀಜೋತ್ಪಾದನಾ ಸಂಸ್ಥೆಗಳಿಗೆ! ತಲೆತಲಾಂತರದಿಂದ ಕೃಷಿ ಮಾಡುತ್ತಲೇ ವಿಶಿಷ್ಟ ತಳಿಗಳನ್ನು ಸಂರಕ್ಷಿಸಿಕೊಂಡು ಬಂದ ರೈತರೋ ಅಥವಾ ಹೊಲದಲ್ಲೇ ವಿಭಿನ್ನ ಗುಣಗಳ ತಳಿ ಅಭಿವೃದ್ಧಿಪಡಿಸಿದ ರೈತ ಸಂಶೋಧಕರೋ ಇದರಿಂದ ವಂಚಿತರಾಗುತ್ತಾರೆ. ಹೊಲಗಳಲ್ಲಿ ಇಂದೂ ಇರುವ ಹತ್ತಾರು ಸಾವಿರ ಬಗೆಯ ಭತ್ತದ ತಳಿಗಳು ಅಥವಾ ಸಾವಿರಾರು ಬಗೆಯ ತರಕಾರಿ ತಳಿಗಳ ಸಮುದಾಯ ಹಕ್ಕುಗಳೆಲ್ಲ, ಭವಿಷ್ಯದಲ್ಲಿ ವ್ಯವಸ್ಥಿತವಾಗಿ ಖಾಸಗಿ ಸ್ವತ್ತಾಗಿ ಮಾರ್ಪಡುವ ರಾಜಮಾರ್ಗವಲ್ಲವೇ ಇದು?

ಮಸೂದೆಯ ಇನ್ನೊಂದು ಆಘಾತಕಾರಿ ಅಂಶವೆಂದರೆ, ಬೀಜೋದ್ಯಮಕ್ಕೆ ನೀಡುತ್ತಿರುವ ಅತಿಯಾದ ಅಧಿಕಾರ. ತಾವು ಉತ್ಪಾದಿಸುವ ಬಿತ್ತನೆ ಬೀಜದ ದರ ನಿಗದಿ ಮಾಡುವುದು, ಅವುಗಳ ಆಯಾತ- ನಿರ್ಯಾತ, ಉತ್ಪಾದಿಸಿದ ಬೀಜದ ಗುಣಗಳನ್ನು ಪರಾಮರ್ಶಿಸಿ ತಾವೇ ಪ್ರಮಾಣೀಕರಿಸುವುದು– ಈ ಎಲ್ಲ ಅಧಿಕಾರಗಳು ಖಾಸಗಿ ಬೀಜೋದ್ಯಮಕ್ಕೂ ದಕ್ಕಲಿವೆ. ಫಸಲಿನಲ್ಲಿ ಉಳಿಸಿದ ಕಾಳನ್ನು ಬಿತ್ತುವ ರೈತರ ಯಾವತ್ತಿನ ಸ್ವಾತಂತ್ರ್ಯಕ್ಕೆ ಮಾತ್ರ ಕಡಿವಾಣ ಬೀಳಲಿದೆ!

ಕೃಷಿಕರು ಬೆಳೆಯಬೇಕಾದ ಬೆಳೆ, ಬಿತ್ತಬೇಕಾದ ಬೀಜ ಮತ್ತು ಅದರ ದರ- ಇವನ್ನೆಲ್ಲ ನಿರ್ಧರಿಸುವ ಅಧಿಕಾರವು ಬೀಜೋದ್ಯಮಕ್ಕೆ ಸೇರಿದ್ದಾದರೆ, ಉಳಿಯುವ ರೈತರ ಸ್ವಾತಂತ್ರ್ಯವಾದರೂ ಏನು? ಹವಾಮಾನ ಬದಲಾವಣೆಯಿಂದಾಗಿ ಕೃಷಿ ಕ್ಷೇತ್ರವು ಈಗಾಗಲೇ ಕಂಗೆಟ್ಟಿದೆ. ಹೈಬ್ರಿಡ್ ಬೆಳೆಗಳು ಅತಿಯಾಗಿ ಬೇಡುವ ನೀರು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳಿಂದಾಗಿ ರೈತರ ಆರ್ಥಿಕ ಸ್ಥಿತಿ ಕುಸಿಯುತ್ತಿದೆ; ಮಣ್ಣಿನ ಹದ ಹಾಳಾಗುತ್ತಿದೆ. ರೈತರ ಬೀಜ ಸ್ವಾತಂತ್ರ್ಯವೂ ಈಗ ಕೊನೆಗೊಂಡರೆ, ಕಾಲಾಂತರದಿಂದ ಕಾಪಿಟ್ಟುಕೊಂಡು ಬಂದ ಕೃಷಿ ಜೀವವೈವಿಧ್ಯವೂ ಕಣ್ಮರೆಯಾಗುತ್ತದೆ. ಬಲಿಷ್ಠ ಬಹುರಾಷ್ಟ್ರೀಯ ಕಂಪನಿಗಳಿಂದಲೇ ಮುನ್ನಡೆಸಲ್ಪಡುತ್ತಿರುವ ದೇಶದ ಬೀಜೋದ್ಯಮಕ್ಕೆ, ಸರ್ಕಾರವು ಈ ಪರಿ ಉದಾರವಾದರೆ, ಅಪಾಯಕ್ಕೀಡಾಗುವುದು ರೈತರ ಹಿತವಷ್ಟೇ ಅಲ್ಲ; ದೇಶದ ಆಹಾರ ಭದ್ರತೆ ಕೂಡ!

ಸಮುದಾಯ ಜ್ಞಾನವನ್ನು ಖಾಸಗಿ ಸ್ವತ್ತಾಗಿಸುವ, ರೈತರ ಹಕ್ಕುಗಳಿಗೆ ಚ್ಯುತಿ ತರುವ ಮಸೂದೆ ಕುರಿತು ಚರ್ಚೆಯಾಗಬೇಕಿದೆ. ರೈತರು ಹಾಗೂ ಸರ್ಕಾರಿ ಕ್ಷೇತ್ರದ ಕೃಷಿ ಪರಿಣತರು ಈ ಕುರಿತು ಧ್ವನಿಯೆತ್ತಬೇಕಿದೆ.

ಕೇಶವ ಎಚ್. ಕೊರ್ಸೆ

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು