ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಟಿಒ: ಯಾರಿಗಾಗಿ ಹೋರಾಟ?

ಈ ವ್ಯಾಪಾರ ಸಂಘಟನೆಗೆ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು ಎದುರಾಗಿದೆ
Last Updated 6 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ವಿರುದ್ಧ ಪ್ರತಿಭಟನೆ ನಡೆಸಲು ಸಿಯಾಟಲ್‌ನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಐವತ್ತು ಸಾವಿರ ಜನ ಸೇರಿದ್ದರು. ಆಗ ಡಬ್ಲ್ಯುಟಿಒ ಆ ನಗರದಲ್ಲಿ ಸಚಿವರ ಮಟ್ಟದ ಸಭೆ ಆಯೋಜಿಸಿತ್ತು. ಜನಜೀವನದ ಹತ್ತುಹಲವು ಮಗ್ಗುಲುಗಳ ಮೇಲೆ ಡಬ್ಲ್ಯುಟಿಒ ನಿಯಂತ್ರಣ ಹೆಚ್ಚಿಸಲು ವಿಶ್ವದ ಅತಿದೊಡ್ಡ ಕಂಪನಿಗಳು ರೂಪಿಸಿದ್ದ ಯೋಜನೆಯನ್ನೂ ಜನ ವಿರೋಧಿಸುತ್ತಿದ್ದರು. ಈ ಪ್ರತಿಭಟನೆಯು ವಿಶ್ವದಾದ್ಯಂತ ಪ್ರಸಾರಗೊಂಡು, ಪ್ರತಿಭಟನೆಗೆ ಅಮೆರಿಕದ ಜನರ ಬೆಂಬಲ ಕೂಡ ಇದೆ ಎಂಬುದನ್ನು ಗೊತ್ತುಮಾಡಿಕೊಟ್ಟಿತು.

ಈ ಪ್ರತಿಭಟನೆ ಹಾಗೂ ಇದರ ನಂತರ ಜಗತ್ತಿನ ಎಲ್ಲೆಡೆ ನಡೆದ ಪ್ರತಿಭಟನೆಗಳು, ಅಭಿವೃದ್ಧಿಶೀಲ ದೇಶಗಳ ಪ್ರತಿನಿಧಿಗಳಿಗೆ ಶಕ್ತಿ ನೀಡಿದವು. ಅವರು ಡಬ್ಲ್ಯುಟಿಒ ಸಂಘಟನೆಗೆ ಲಗಾಮು ಹಾಕಿದರು. ಆದರೆ, ಜಾಗತಿಕ ಅರ್ಥವ್ಯವಸ್ಥೆಯ ರೂಪವನ್ನು ಇಂದಿಗೂ ನಿರ್ಧರಿಸಿ
ರುವುದು ಡಬ್ಲ್ಯುಟಿಒದ ಮೂಲಸೂತ್ರಗಳೇ. ಆ ‘ಜಾಗತೀಕರಣ’ದ ಮಾದರಿಯನ್ನು ಬದಲಿಸಲು ಒಪ್ಪದ ಹಟಮಾರಿ
ತನವು ‘ವ್ಯಾಪಾರ’ದ ವಿರುದ್ಧ ವಿಶ್ವದೆಲ್ಲೆಡೆ ಪ್ರತಿರೋಧ ವ್ಯಕ್ತವಾಗುವಂತೆ ಮಾಡಿದೆ. ಅಷ್ಟೇ ಅಲ್ಲ, ಈಚಿನ ವರ್ಷಗಳಲ್ಲಿ ಈ ಸಂಘಟನೆ ಕುಸಿಯುವ ಹಂತಕ್ಕೆ ತಂದಿದೆ.

ಡಬ್ಲ್ಯುಟಿಒ ಎನ್ನುವುದು ವ್ಯಾಪಾರಕ್ಕೆ ಮಾತ್ರವೇ ಸಂಬಂಧಿಸಿದ ಸಂಘಟನೆಯಲ್ಲ ಎನ್ನುವುದು ವಾಸ್ತವ. ಜಗತ್ತಿನೆಲ್ಲೆಡೆ ಒಂದೇ ಸೂತ್ರವನ್ನು ಹೇರುವ ಪ್ರಾಥಮಿಕ ಹೊಣೆಗಾರಿಕೆ ಈ ಸಂಘಟನೆ ಮೇಲಿದೆ. ಇಂತಹ ಏಕಸೂತ್ರದ ಹೇರಿಕೆಯಿಂದ ಪ್ರಜಾ
ಸತ್ತಾತ್ಮಕ ಸರ್ಕಾರಗಳಿಗೆ ತಮ್ಮ ಸ್ಥಳೀಯ ಅಗತ್ಯಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತದೆ.

ವ್ಯಾಪಾರದ ಜೊತೆ ಸಂಬಂಧವಿಲ್ಲದ ಸಂಗತಿಗಳ ವಿಚಾರಗಳಲ್ಲೂ ನಿಯಮಗಳನ್ನು ರೂಪಿಸುವ ದೊಡ್ಡ ಅಧಿಕಾರ ತನಗೆ ಬೇಕು ಎಂದು ಡಬ್ಲ್ಯುಟಿಒ ಹೇಳುತ್ತದೆ. ವಿವಿಧ ದೇಶಗಳು ತಮ್ಮ ಕಾನೂನು, ನಿಯಮಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳು ಡಬ್ಲ್ಯುಟಿಒದ ನಿಯಮಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಬೇಕು. ಆ ಮೂಲಕ ಕಾರ್ಪೊರೇಟ್ ಜಗತ್ತಿನ ಆರ್ಥಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ತಮ್ಮ ನಿಯಮಗಳು ಇರುವಂತೆ ಮಾಡಬೇಕು. ಇದನ್ನು ದೇಶಗಳು ಪಾಲಿಸದೇ ಇದ್ದರೆ ಅವುಗಳ ಮೇಲೆ ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಅಮೆರಿಕದ ಅಂಗಡಿಗಳಲ್ಲಿ ಮಾರುತ್ತಿದ್ದ ಮಾಂಸದ ಮೇಲೆ ಅದು ಯಾವ ದೇಶದಿಂದ ಬಂದಿದ್ದು ಎಂಬುದು ನಮೂದಾಗಿರುತ್ತಿತ್ತು. ಆದರೆ ಇದು ‘ವ್ಯಾಪಾರದ ಮೇಲಿನ ನಿರ್ಬಂಧ’ ಎಂದು ಹೇಳಿದ ಡಬ್ಲ್ಯುಟಿಒ, ಆ ರೀತಿ ನಮೂದಿಸುವುದನ್ನು ನಿಲ್ಲಿಸಿತು. ವಾಯುಮಾಲಿನ್ಯ ನಿಯಂತ್ರಣ, ಡಾಲ್ಫಿನ್‌ಗಳ ರಕ್ಷಣೆ, ಅಳಿವಿನ ಅಂಚಿನಲ್ಲಿ ಇರುವ ಜೀವಿಗಳ ರಕ್ಷಣೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಇರುವ ಕಾನೂನುಗಳನ್ನು ಕೂಡ ದುರ್ಬಲಗೊಳಿಸುವಂತೆ ಒತ್ತಡ ಹೇರಲಾಯಿತು. ಡಬ್ಲ್ಯುಟಿಒ ಸಂಘಟನೆಗಾಗಿ ಅಮೆರಿಕ ವಹಿಸಿದ ಪಾತ್ರವನ್ನು ಗಮನಿಸಿದವರಿಗೆ, ಆ ಸಂಘಟನೆಯಲ್ಲಿ ದಾಖಲಾದ ತಕರಾರು ಅರ್ಜಿಗಳಲ್ಲಿ ಶೇಕಡ 66ರಷ್ಟು ಅರ್ಜಿಗಳು ಅಮೆರಿಕದ ವಿರುದ್ಧವೇ ಇದ್ದವು ಎಂಬುದು ವ್ಯಂಗ್ಯದಂತೆ ಕಾಣಬಹುದು!

ಅಮೆರಿಕ ಕೂಡ ಇತರ ದೇಶಗಳ ವಿರುದ್ಧ 49 ತಕರಾರು ಅರ್ಜಿಗಳನ್ನು ಸಲ್ಲಿಸಿದೆ. ಈ ಪೈಕಿ, ಬಡ ರೈತರಿಗೆ ಬೀಜಗಳು ಲಭ್ಯವಾಗುವಂತೆ ಮಾಡಲು ಭಾರತ ರೂಪಿಸಿದ್ದ ನೀತಿಗಳ ವಿರುದ್ಧವಾಗಿ ಸಂಘಟನೆ ನಿರ್ಣಯ ನೀಡಿದೆ. ಜೀವರಕ್ಷಕ ಔಷಧಿಗಳ ಲಭ್ಯತೆ ವಿಚಾರವಾಗಿ ಥಾಯ್ಲೆಂಡ್‌, ಬ್ರೆಜಿಲ್, ದಕ್ಷಿಣ ಆಫ್ರಿಕಾ ತಮ್ಮ ನೀತಿಗಳನ್ನು ಸಂಪೂರ್ಣವಾಗಿ ಬದಲಿಸುವಂತೆ ಅಮೆರಿಕ ಬೆದರಿಕೆ ತಂತ್ರವನ್ನೂ ಪ್ರಯೋಗಿಸಿದೆ.

ಈ ಸಂಘಟನೆಯು ಕಣ್ಣು ಕೋರೈಸುವ ರೀತಿಯಲ್ಲಿ ಆರ್ಥಿಕ ಲಾಭ ತಂದುಕೊಡುತ್ತದೆ ಎಂದು ಅದರ ಪರ ಇರುವವರು, ಡಬ್ಲ್ಯುಟಿಒ 1995ರಲ್ಲಿ ರೂಪಪಡೆದ ದಿನದಿಂದಲೂ ಅತಿಯಾಗಿ ಪ್ರಚಾರ ಮಾಡಿದ್ದಾರೆ. ಈ ಸಂಘಟನೆಯು ಅಮೆರಿಕದ ಸಾಮಾನ್ಯ ಕುಟುಂಬಗಳಿಗೆ ಪ್ರತಿವರ್ಷ ಹೆಚ್ಚುವರಿಯಾಗಿ 1,700 ಡಾಲರ್‌ (ಇಂದಿನ ಅಂದಾಜು ₹ 1.21 ಲಕ್ಷ) ಆದಾಯ ತಂದುಕೊಡುತ್ತದೆ ಎಂದು ಬಿಲ್ ಕ್ಲಿಂಟನ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದಾಗ ಹೇಳಿದ್ದರು. ಈ ಸಂಘಟನೆಯಿಂದಾಗಿ ಮುಕ್ತ ಮಾರುಕಟ್ಟೆಗೆ ಇರುವ ಅವಕಾಶ ಹೆಚ್ಚುತ್ತದೆ, ಇದರಿಂದ ದೇಶದ ವ್ಯಾಪಾರ ಕೊರತೆ ಕೂಡ ತಗ್ಗುತ್ತದೆ, ಹೆಚ್ಚಿನ ವೇತನ ನೀಡುವ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದೂ ಅವರು ಹೇಳಿದ್ದರು. ಆದರೆ, ಈ ರೀತಿಯ ಫಲ ನೀಡುವ ರೀತಿಯಲ್ಲಿ ಸಂಘಟನೆಯ ನಿಯಮಗಳನ್ನು ರೂಪಿಸಿರಲಿಲ್ಲ. ಹಾಗಾಗಿ, ಕ್ಲಿಂಟನ್‌ ಹೇಳಿದ್ದು ವಾಸ್ತವದಲ್ಲಿ ಕಾಣಿಸಲಿಲ್ಲ. ವಾಸ್ತವದಲ್ಲಿ, ವಾಣಿಜ್ಯಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಹೆಚ್ಚು ಪ್ರಭಾವಿಯಾಗಿ ಕಾಣಿಸಿದ್ದು ಕಾರ್ಪೊರೇಟ್ ಜಗತ್ತಿನ ಹಿತಾಸಕ್ತಿಗಳು. ಕಾರ್ಮಿಕರ, ಗ್ರಾಹಕರ ಮತ್ತು ಪರಿಸರ ಪರ ದನಿಗಳಿಗೆ ಅಲ್ಲಿ ಹೆಚ್ಚು ಜಾಗ ಸಿಗಲಿಲ್ಲ.

ಕಾರ್ಮಿಕರ ವೇತನ ಹೆಚ್ಚಿಸಬೇಕು ಅಥವಾ ವಾಯುಮಾಲಿನ್ಯ ನಿಯಂತ್ರಿಸಬೇಕು ಎನ್ನುವ ನಿಬಂಧನೆಗಳನ್ನು ಡಬ್ಲ್ಯುಟಿಒ ವಿಧಿಸಿಲ್ಲ ಎಂಬುದರಲ್ಲಿ ತೀರಾ ವಿಶೇಷ ಏನೂ ಇಲ್ಲ. ಈಗ ಜಾಗತಿಕ ಮಾರುಕಟ್ಟೆಗಳನ್ನು ವಿರೂಪಗೊಳಿಸುತ್ತಿರುವ, ಏಕಸ್ವಾಮ್ಯಕ್ಕೆ ಹಾತೊರೆಯುವ ಬೃಹತ್ ಕಂಪನಿಗಳನ್ನು ಶಿಸ್ತಿನ ಚೌಕಟ್ಟಿಗೆ ಒಳ‍ಪಡಿಸುವ ನಿಯಮಗಳೂ ಸಂಘಟನೆಯಲ್ಲಿ ಇಲ್ಲ. ನ್ಯಾಯೋಚಿತ
ವಲ್ಲದ ರೀತಿಯಲ್ಲಿ ಪ್ರಯೋಜನ ತಂದುಕೊಡುವ ಕರೆನ್ಸಿ ಅಪಮೌಲ್ಯೀಕರಣ ತಡೆಯುವ ಹತಾರ ಕೂಡ ಸಂಘಟನೆಯ ಬಳಿ ಇಲ್ಲ. ‘ವಾಣಿಜ್ಯ’ ಒಪ್ಪಂದಗಳಿಂದ ಬಹುದೊಡ್ಡ ಪ್ರಯೋಜನ ಸಿಗುತ್ತದೆ ಎಂಬ ಭರವಸೆಯ ಮಾತುಗಳನ್ನು ಪದೇ ಪದೇ ಕೇಳಿಸಿಕೊಂಡಿದ್ದ ಅಮೆರಿಕದ ಕೆಲವು ಕಾರ್ಮಿಕರು, ಡೊನಾಲ್ಡ್ ಟ್ರಂಪ್ ಅವರು ವಾಣಿಜ್ಯ ವಹಿವಾಟುಗಳ ಕುರಿತು ಆಡಿದ್ದ ಭಾವಾವೇಶದ ಮಾತುಗಳಿಗೆ ಮಾರುಹೋಗಿದ್ದರ ಹಿಂದೆ ಇಂತಹ ಕಾರಣಗಳಿವೆ.

ಡಬ್ಲ್ಯುಟಿಒ ಯುಗದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಕೂಡ, ಉತ್ತಮ ವೇತನ ನೀಡುವ ಲಕ್ಷಾಂತರ ಉದ್ಯೋಗಗಳನ್ನು ಕಳೆದುಕೊಂಡಿವೆ. ಅದರಲ್ಲೂ ಮುಖ್ಯವಾಗಿ ಚೀನಾ 2001ರಲ್ಲಿ ಸಂಘಟನೆಯನ್ನು ಸೇರಿದ ನಂತರ ಹೀಗಾಗಿದೆ. ಶ್ರೀಮಂತ ಮತ್ತು ಬಡ ದೇಶಗಳ ನಡುವಿನ ಆದಾಯ ಅಸಮಾನತೆ ಹೆಚ್ಚಾಗಿದೆ. ದೇಶಗಳ ಒಳಗಿನ ಆದಾಯ ಅಸಮಾನತೆಯೂ ಹೆಚ್ಚಿದೆ. ಡಬ್ಲ್ಯುಟಿಒ ಎನ್ನುವುದು ಇನ್ನೂ ಸತ್ತಿಲ್ಲ; ಆದರೆ ಆವರಿಸುತ್ತಿರುವ ಬಿಕ್ಕಟ್ಟನ್ನು ಕಂಡು ಅದು ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆಯೇ, ಆ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆಯೇ? ಹಾಗೆ ಆಗುವ ಸಾಧ್ಯತೆ ಕಡಿಮೆ.

ಇ–ಕಾಮರ್ಸ್ ಹಾಗೂ ದತ್ತಾಂಶ ಗೋ‍ಪ್ಯತೆಗೆ ಸಂಬಂಧಿಸಿದ ನಿಯಮಗಳಿಗೆ ಹೊಸ ಮಿತಿಗಳನ್ನು ವಿಧಿಸುವುದು ಸಂಘಟನೆಯ ಹೊಸ ಆದ್ಯತೆಯಾಗಿದೆ– ಅದೂ ಈ ವಲಯದ ಉದ್ಯಮಗಳ ಮೇಲೆ ಒಂದಿಷ್ಟು ನಿರ್ಬಂಧಗಳು ಬೇಕು ಎಂದು ಜನ ಆಗ್ರಹಿಸುತ್ತಿರುವ ಹೊತ್ತಿನಲ್ಲಿ.

1948ರಲ್ಲಿ ಸ್ಥಾಪನೆ ಆಗಿದ್ದ ‘ಅಂತರರಾಷ್ಟ್ರೀಯ ವಾಣಿಜ್ಯ ಸಂಘಟನೆ’ಯು (ಐಟಿಒ) ಹೆಚ್ಚು ಉತ್ತಮವಾದ ಜಾಗತಿಕ ವ್ಯಾಪಾರ ನಿಯಮಗಳನ್ನು ರೂಪಿಸಲು ನೆಲೆಗಟ್ಟನ್ನು ಒದಗಿಸಿತ್ತು. ಕಾರ್ಮಿಕರಿಗೆ ಪೂರಕವಾಗಿ, ಏಕಸ್ವಾಮ್ಯ ತಡೆಯುವಿಕೆಗೆ, ಕರೆನ್ಸಿ ಅಪಮೌಲ್ಯೀಕರಣದ ವಿರುದ್ಧ ನಿಯಮಗಳನ್ನು ಐಟಿಒ ಹೊಂದಿತ್ತು. ಅವು ವ್ಯಾಪಾರ ವಹಿವಾಟಿನ ಲಾಭ ಹೆಚ್ಚಿನವರಿಗೆ ವರ್ಗಾವಣೆ ಆಗುವ ರೀತಿಯ ನಿಯಮಗಳಾಗಿದ್ದವು.

ವ್ಯವಸ್ಥೆಯು ಜಗತ್ತಿನ ಎಲ್ಲೆಡೆ ಇರುವ ಜನರಿಗಾಗಿ ಕೆಲಸ ಮಾಡಬೇಕು, ಅದು ಜಗತ್ತಿನ ಅತಿದೊಡ್ಡ ಕಂಪನಿಗಳಿಗಾಗಿ ಮಾತ್ರ ಕೆಲಸ ಮಾಡುವುದಲ್ಲ ಎಂಬುದನ್ನು ನಾವು ಒಪ್ಪಿಕೊಂಡರೆ, ನಿಯಮಗಳ ಅನುಸಾರ ನಡೆಯುವ ಜಾಗತಿಕ ವ್ಯಾಪಾರ ವ್ಯವಸ್ಥೆಯ ಸೃಷ್ಟಿ ಸಾಧ್ಯವಿದೆ. ಸಿಯಾಟಲ್‌ನಲ್ಲಿ ಪ್ರತಿಭಟನೆ ನಡೆದು ಇಪ್ಪತ್ತು ವರ್ಷ ಕಳೆದಿದ್ದರೂ, ನಾವು ಮಾಡಬೇಕಿರುವುದು ಬಹಳಷ್ಟಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT