ಕಾಗೆ ತನ್ನ ಪರಿಶ್ರಮದಿಂದ ಸಂಪಾದಿಸಿದ ಅನ್ನವನ್ನು ಉಪಾಯ ಮಾಡಿ ಹೊಡೆದುಕೊಂಡು ಹೋದ ನರಿಯನ್ನು ‘ಜಾಣ’ನೆಂದೂ ಕಳೆದುಕೊಂಡ ಕಾಗೆಯನ್ನು ‘ದಡ್ಡ’ನೆಂದೂ ವ್ಯಾಖ್ಯಾನಿಸಿದ ನಮ್ಮ ಸಾಂಸ್ಕೃತಿಕ ಪರಂಪರೆ ಮಗ್ಗಲು ಬದಲಿಸಿದಂತಿದೆ. ನಯವಾದ ಮಾತುಗಳ ಮೂಲಕ ಒಬ್ಬರ ಬೆವರಿನ ಫಲವನ್ನು ಕಸಿದುಕೊಳ್ಳುವುದು ಮೋಸಗಾರ ಬುದ್ಧಿ. ಇಂಥ ಸಾಂಸ್ಕೃತಿಕ ವಿದ್ರೋಹದ ಚರಿತ್ರೆಯನ್ನು ಹೀಗೆ ಹೊಸ ಬಗೆಯಲ್ಲಿ ವ್ಯಾಖ್ಯಾನಿಸುತ್ತಿರುವುದು ಜಾಣರಿಗೆ ನಡುಕ ಹುಟ್ಟಿಸಿದಂತಿದೆ. ಕೈ ಕೆಸರು ಮಾಡಿಕೊಳ್ಳದೆಯೇ ತಾವು ಇದುವರೆಗೆ ಬಾಯ್ತುಂಬ ಉಣ್ಣುತ್ತಿದ್ದ ಮೊಸರಿನಲ್ಲಿ ಮರಳು ಸಿಕ್ಕಂತಾಗಿದೆ. ದುಡಿವವರ ಆಲೋಚನೆಗಳಿಗೆ ಚಲನೆ ಸಿಕ್ಕಂತೆಲ್ಲಾ ಜಾಗರೂಕರಾಗುವ ಚರಿತ್ರೆ ಹೊಂದಿರುವ ಜಾಣರ ಲೆಕ್ಕಾಚಾರ ಚುರುಕುಗೊಂಡಿದೆ. ತಮ್ಮ ಲಾಭದಾಯಕ ದಿಕ್ಕಿನ ಕಡೆಗೆ ಆ ಚಲನೆಯನ್ನು ತಿರುಗಿಸಬಲ್ಲ ಚಾಣಾಕ್ಷ ನಿರ್ದೇಶಕ ತಂತ್ರಗಳು ಅಲ್ಲಿವೆ.

ದುಡಿಯಲಾರದೆ ಮೈಬೆಳೆಸಿಕೊಂಡು ಕೊಬ್ಬಿದವರ ಮಿದುಳು ಬೆವರಿನವರ ಬದುಕಿಗೆ ಮೌಲ್ಯಾದರ್ಶಗಳ ಪಾಠ ಹೇಳಲಾರಂಭಿಸಿದೆ. ಇದು ಸಮಾಜದ ನಿಜವಾದ ಉತ್ಪಾದಕರನ್ನು ಎಂದಿನಂತೆ ತುಳಿದು ಕತ್ತಲಿಗೆ ತಳ್ಳುವ ಕುತಂತ್ರ. ದೇಶ ದೇವರು ಧರ್ಮ ಜಾತಿಗಳ ಹೆಸರಿನ ಜೊತೆಗೆ ದಿವ್ಯ ಸಂಸ್ಕೃತಿ, ಭವ್ಯ ಪರಂಪರೆಯಂತಹ ಆದರ್ಶಗಳನ್ನು ತಳುಕು ಹಾಕಲಾಗಿದೆ. ತಾವು ಹೇಳಿದಂತೆಲ್ಲಾ ಕೇಳಿದ ಸಿಂಹ ತನ್ನ ನೀರನೆರಳನ್ನು ತಾನು ಅರಿಯದೆ ಹೋದ ಕಥೆಯ ಜಾಣತನ ಇನ್ನು ಮುಂದೆಯೂ ನಡೆದೀತು ಎಂಬ ಭರವಸೆ ನರಿಗಳಿಗೆ ಇದ್ದಂತಿಲ್ಲ.

ಶತಶತಮಾನಗಳ ಇಂತಹ ಅನ್ನದ್ರೋಹದ ಪರಂಪರೆಗೆ ಕರುಳ ಕಾಳಜಿ ಇದ್ದದ್ದು ಕಡಿಮೆ. ಹಾಗಾಗಿ ನಮ್ಮ ನೆಲದಲ್ಲಿ ಹಸಿದು ಅಸುನೀಗಿದವರಿಗಿಂತ ತಿಂದು ತೀರಿಕೊಂಡವರೇ ಹೆಚ್ಚು. ಕಸಿದುಕೊಂಡವರ ಮುಂದೆ ದುಡಿಯುವವರ ಸಣ್ಣಪುಟ್ಟ ಸಂಭ್ರಮಗಳು ಮುಗಿಲು ಮುಟ್ಟಿವೆ. ಅನ್ನ ಕಸಿದವರ ವರಸೆಗಳು ಬದಲಾಗುತ್ತಿವೆ. ಬೆವರಿಗೆ ಬಾಗುವುದು ಕಾಣುತ್ತಿದೆ. ಗುಡಿಸಲುಗಳಲ್ಲಿ ಗುಡುಗು, ಬಂಗಲೆಯಲ್ಲಿ ನಡುಕ ಕಂಡುಬರುತ್ತಿದ್ದಂತೆ ಹಣೆಮುಟ್ಟಿ ನಮಿಸುವ ನಡೆನಟನೆ ತಣ್ಣಗೆ ಆವರಿಸಿಕೊಳ್ಳುತ್ತಿದೆ. ಅತಿವಿಧೇಯತೆಯ ನುಡಿಗಳು ಬಗೆಬಗೆಯ ಅರ್ಥವಿನ್ಯಾಸದಲ್ಲಿ ಅನಾವರಣಗೊಳ್ಳುತ್ತಿವೆ.

ದೇಶಕ್ಕಾಗಿ ದುಡಿಮೆ, ಬೆವರಿಗೆ ಭೇದವಿಲ್ಲ. ನಿಸ್ವಾರ್ಥ ದುಡಿಮೆ ಎಲ್ಲರ ಆದರ್ಶ, ನಿರಪೇಕ್ಷ ಕರ್ತವ್ಯ ಮುಖ್ಯ, ತ್ಯಾಗವೇ ನಮ್ಮ ಧರ್ಮ ಎಂಬ ದೊಡ್ಡ ದನಿಗೆ ಹೆಜ್ಜೆ ಹಾಕಲು ಕಾಗೆಸಂತತಿಯು ತುದಿಗಾಲಲ್ಲಿ ನಿಂತಂತಿದೆ. ಮೌಲ್ಯಗಳಿಗೆ ಹೆಗಲು ಕೊಟ್ಟು ರೂಢಿಯಿರುವ ಬೆವರ ಮಂದಿಗೆ ಈ ನೀತಿಗಳ ಆಳದಲ್ಲಿರುವ ಪಕ್ಷಪಾತದ ಅರಿವಿಲ್ಲ. ಉಳ್ಳವರಿಗಿಲ್ಲದ ಆದರ್ಶಗಳ ಹಂಗು ಬರಿಯ ಬಡಪಾಯಿಗಳಿಗೇಕೆ? ಕೆಲವರ ಹೊಟ್ಟೆ ತುಂಬಿಸಲು ಹಲವರು ಜೀವ ತೇಯುವ ನಿರಂತರ ಕಾಯಕದಲ್ಲಿ ನಿರತರಾದ ಇತಿಹಾಸ ನಮಗಿದೆಯಲ್ಲಾ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ‘ಬೇಡ’ ‘ಬೇಡ’ ಎಂದದ್ದನ್ನೆಲ್ಲಾ ಬೇಕು ಅಂತ ಮಾಡುತ್ತ ಬಂದವರ ನಡುವೆ ಕದಿಯದ ಕೊಲ್ಲದ ಸುಳ್ಳಾಡದ ಅಮಾಯಕ ಉತ್ಪಾದಕರಿದ್ದಾರೆ. ಬೆವರಿನ ಬದುಕಿಗೆ ಆದರ್ಶಗಳೇ ಆಸರೆಯಾಗಿವೆ. ಅನುತ್ಪಾದಕರಿಗೆ ಅವೇ ಆದರ್ಶಗಳು ಸುಲಿಗೆಯ ಸಾಧನಗಳಾಗಿವೆ.

ದುಡಿಮೆಯನ್ನೇ ನಂಬಿ ಬದುಕುತ್ತಾ ಅದರಲ್ಲೇ ದೇವರನ್ನೂ ಕಂಡುಕೊಳ್ಳುತ್ತಾ ಬಂದ ಬಡವರು ನಿಜವಾಗಿಯೂ ಅನ್ನದಾತರು. ಆದರೆ ಕುನೀತಿ ಕುತಂತ್ರಗಳ ಮೂಲಕ ಅವರನ್ನು ನಿತ್ಯವೂ ಶಿಲುಬೆಗೇರಿಸುವ ಪೂರ್ವಬುದ್ಧಿಯನ್ನು ಬಿಡಬೇಕು. ದುಡಿಯುವವರ ಅನ್ನ ಕಸಿಯುವ ಸಾಂಸ್ಕೃತಿಕ ವಿದ್ರೋಹದ ಚರಿತ್ರೆಗೆ ಇತಿಶ್ರೀ ಹಾಡಬೇಕು. ಹಾಗೆಯೇ ನಯವಂಚನೆಯ ನಡೆಯನ್ನು ಜಾಣತನವೆನ್ನುವ, ತುತ್ತು ಕಳೆದುಕೊಂಡ ಬಿಡುಗಣ್ಣುಗಳ ಅಸಹಾಯಕ ನೋಟವನ್ನು ಅವಮಾನಿಸುವ ವ್ಯಾಖ್ಯಾನ ಇನ್ನಾದರೂ ನಿಲ್ಲಬೇಕು. ಅನ್ನದ್ರೋಹದಿಂದ ದೇಶಕ್ಕೂ ಧರ್ಮಕ್ಕೂ ಕೇಡು. ಅನ್ನಗೌರವದಿಂದ ಬೆವರಿಗೆ ಬಲ, ಭರವಸೆ. ಅನ್ನವಿದ್ದರೆ ಜೀವ. ಜೀವವಿದ್ದರೆ ದೇಶ. ಇಲ್ಲದಿದ್ದರೆ ಎಲ್ಲ ಬರಿ ಮಣ್ಣು, ಮಸಣ.