ಸಾಕ್ರೆಟೀಸನಿಗೆ ವಿಷ ಕುಡಿಸಲಾಯಿತು. ಏಸುಕ್ರಿಸ್ತನನ್ನು ಶಿಲುಬೆಗೇರಿಸಿದರು. ಜಾನ್ ಎಫ್. ಕೆನಡಿ ಮತ್ತು ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದರು. ಮನುಷ್ಯರಾದ ನಮಗೆ ಸದ್ಯಕ್ಕೆ ಇರುವ ಒಂದೇ ಒಂದು ಭೂಮಿಯಲ್ಲಿ ಎಷ್ಟೊಂದು ರಕ್ತ ಹರಿದಿದೆ. ಯಾಕೆ ಹೀಗೆ? ಮನುಷ್ಯ ನಿರ್ಮಿತ ಯುದ್ಧಗಳಲ್ಲಿ ಹರಿದ ರಕ್ತ ಯಾವ ಮಹಾತ್ಮರನ್ನೂ ರೂಪಿಸಿದಂತಿಲ್ಲ. ಆದರೆ ಆ ರಕ್ತದ ಕೆಂಪು ಸೃಷ್ಟಿಸಿದ ವಿಷಾದವೇ ಹಿಂಸೆಯನ್ನು ವಿರೋಧಿಸುವ ಸಾರ್ವಕಾಲಿಕ ತತ್ವವಾಗಿ ರೂಪಗೊಂಡದ್ದು ಮಾತ್ರ ಸುಳ್ಳಲ್ಲ. ಬಹುಶಃ ಇಂಥ ತಾತ್ವಿಕತೆಯೇ ಸಾಮಾನ್ಯ ಜನಜೀವನದ ಭರವಸೆಗೂ ಮಹಾತ್ಮರ ಅಕಾಲಿಕ ನಿಧನಕ್ಕೂ ಕಾರಣವಾಗಿದೆ. ವಿಚಿತ್ರವೆಂದರೆ ಮಹಾದಾರ್ಶನಿಕರ ಮರಣಾನಂತರದ ನಿರ್ವಾತವನ್ನು ತುಂಬಿಕೊಳ್ಳುವ ಕೆಲಸ ಮತ್ತು ಅದನ್ನು ಹತ್ತಿಕ್ಕುವ ಪ್ರಯತ್ನಗಳು ಜೊತೆಜೊತೆಗೆ ನಡೆಯುತ್ತಿವೆ. ಇಷ್ಟಾದರೂ ಅಹಿಂಸೆಯನ್ನು ಮನುಷ್ಯ ತನ್ನ ಮೌಲ್ಯಪ್ರಜ್ಞೆಯ ಮಹತ್ವದ ಭಾಗವಾಗಿ ಒಳಗೊಂಡಂತಿಲ್ಲ. ಈ ಮಾತನ್ನು ಸಮರ್ಥಿಸುವಂತೆ ವರ್ಷಗಳಿಂದ ನಡೆಯುತ್ತಿರುವ ಯುದ್ಧಗಳ ಪರಿಣಾಮ ನಮ್ಮೆಲ್ಲರ ಕಣ್ಮುಂದಿದೆ.

ಸತ್ಯವೇ ನಮ್ಮ ತಾಯಿ ತಂದೆ... ಸತ್ಯವೇ ಬಂಧು ಬಳಗ... ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು... ಎಂದು ನುಡಿದು ಹಾಗೆಯೇ ನಡೆದುಕೊಂಡ ಪುಣ್ಯಕೋಟಿಯ ಕಥೆಯನ್ನು ಹಸುವಿನ ಸಹಜ ಗುಣಶೀಲದ ವ್ಯಾಖ್ಯಾನ ಮಾಡಿ ಮುಗಿಸಿಬಿಡುವ ರೂಢಿ ನಮ್ಮದು. ಸತ್ಯವನ್ನು ಆತ್ಯಂತಿಕ ಮೌಲ್ಯವೆಂದು ನಂಬಿದ್ದ ಗಾಂಧಿ ಕೂಡ ಮೊದಮೊದಲು ‘ದೇವರು ಸತ್ಯ’ ಎಂದುಕೊಂಡೇ ಬದುಕಿದವರು. ಅವರಲ್ಲಿ ‘ಸತ್ಯವೇ ದೇವರು’ ಎಂದಾದ ಮೌಲ್ಯಪಲ್ಲಟವು ಅಹಿಂಸೆಯನ್ನು ಸತ್ಯದ ತೆಕ್ಕೆಗೇ ತಂದು ನಿಲ್ಲಿಸಿತು. ಅಹಿಂಸೆಯು ಸತ್ಯದ ಹೊಳಪನ್ನೂ ಬಲವನ್ನೂ ಹೆಚ್ಚಿಸುತ್ತದೆ. ಅಹಿಂಸೆಯಿಲ್ಲದ ಸತ್ಯಕ್ಕೆ ಅಸ್ತಿತ್ವವೇ ಇಲ್ಲ.

ಕರುವಿಗೆ ಹಾಲುಣಿಸಿ ಬರುವುದಾಗಿ ಹೇಳಿದ ಪುಣ್ಯಕೋಟಿಯ ಮಾತನ್ನು ನಂಬಿ ಕಳಿಸಿಕೊಡುವ ಹುಲಿ ಹಸಿವನ್ನು ಮಾತ್ರವಲ್ಲ, ಹಿಂಸೆಯನ್ನೂ ಮುಂದೂಡುತ್ತದೆ. ಹಸು ಹಿಂತಿರುಗಿ ಬಂದಾಗ ಅದರ ಸತ್ಯಸಂಧತೆಗೆ ಬೆರಗಾಗುತ್ತದೆ. ಪಾಪಪ್ರಜ್ಞೆ ಪಶ್ಚಾತ್ತಾಪವಾಗಿ ಮಾರ್ಪಟ್ಟು ಸಾಯುವ ಹುಲಿಯು ಕೊಂದು ತಿನ್ನುವ ತನ್ನ ದೇಹ ಧರ್ಮವನ್ನು ಮೀರಿ ಅಹಿಂಸೆಯ ಲೋಕಧರ್ಮದ ಅಗತ್ಯವನ್ನು ದೃಢಪಡಿಸುತ್ತದೆ. ಅಹಿಂಸೆಗಾಗಿ ಜೀವ ಬಿಟ್ಟ ವ್ಯಾಘ್ರ ಸತ್ಯಧರ್ಮದಿಂದ ನಡೆದುಕೊಂಡ ಹಸುವಿಗಿಂತ ಗುಲಗಂಜಿ ತೂಕದಷ್ಟಾದರೂ ಹೆಚ್ಚು ತೂಗುತ್ತದೆ. ಜೀವವೊಂದರ ಅಸ್ತಿತ್ವಕ್ಕಾಗಿ, ಅದರ ಬದುಕುವ ಹಕ್ಕಿಗಾಗಿ ತನ್ನ ಜೀವನಧರ್ಮವನ್ನು ಮೀರುವ ಹುಲಿಯ ಮನೋಧರ್ಮ ನಮ್ಮ ಬದುಕಿನ ತಾತ್ವಿಕ ಆಕರ್ಷಣೆಯಾಗಬೇಕಿತ್ತು. ಹಿಂಸಾಮೋಹಿಗಳ ಯುದ್ಧದಾಹದ ಮನಃಸ್ಥಿತಿಯಲ್ಲಿ ವಾಟ್ಸ್ಆ್ಯಪ್ ವೀರರು ಮಾತ್ರ ಹುಟ್ಟುತ್ತಾರೆ.

ಭೂಮಿಗೆ ಬಿದ್ದ ಮಾನವ ರಕ್ತ ಕಾಲಕಾಲಕ್ಕೂ ಮನುಷ್ಯನ ವಿರುದ್ಧದ ಪ್ರತೀಕಾರವನ್ನೇ ಸಾಧಿಸಿದೆ. ಚರಿತ್ರೆಯ ವಿಕಾರಗಳಿಂದ ಪಾಠ ಕಲಿಯದ ಮನುಷ್ಯ ಮತ್ತೆ ಹಿಂಸೆಯ ಕುಲುಮೆಕಾವಿನಲ್ಲಿ ಬೆಚ್ಚಗಿರಬಹುದು ಎಂದು ಭಾವಿಸಿದರೆ ಅದು ಎಂದೂ ಸರಿಪಡಿಸಲಾಗದ ಅನಾಹುತಕ್ಕೆ ದಾರಿಯಾದೀತು.

ಮನುಷ್ಯ ಚರಿತ್ರೆಯ ಒಟ್ಟು ಹಿಂಸೆಗೆ ಸಮಾನವಾದ ನೋವನ್ನು ಅನುಭವಿಸಿದ ಏಸುಕ್ರಿಸ್ತನ ಕ್ಷಮೆ ನಮಗೆ ಜೀವನವನ್ನು ಕರುಣಿಸಬಲ್ಲುದು. ಕ್ಷಮೆಯೇ ವಿವೇಕ. ಹಿಂಸೆಯೇ ವಿಕಾರ. ಜಗತ್ತಿನ ಎಲ್ಲ ಹಿಂಸೆಯ ಪ್ರತೀಕವಾದ ರಕ್ತಸಿಕ್ತ ಶಿಲುಬೆ ಹೊತ್ತು ನಡೆದು ಮೂರು ಸಲ ಬಿದ್ದಾಗಲೂ ಅವನ ಅಂತರ್ಗತ ಕ್ಷಮೆಯ ಒರತೆ ಬತ್ತಲಿಲ್ಲ. ಅವನ ದೇಹದಿಂದ ಜಿನುಗುತ್ತಿದ್ದ ಪ್ರತಿ ಹನಿ ರಕ್ತವನ್ನು ಒರೆಸಿ ಆರೈಕೆ ಮಾಡುವ ಸಾಂತ್ವನದ ಕೈಗಳು ಸೋಲಲಿಲ್ಲ. ಮಾನವೀಯತೆಯ ಬೇರಿಗೆ ಕ್ಷಮೆ ಸಾಂತ್ವನಗಳೇ ಪ್ರಾಣವಾಯು. ಕ್ಷಮೆಯ ವಿವೇಕಗುಣದಿಂದ ಹಿಂಸೆಯ ವಿಕಾರವನ್ನು ಕರಗಿಸಿಕೊಳ್ಳಬೇಕಾದದ್ದು ಎಲ್ಲರ ಜವಾಬ್ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.