ಜಗತ್ತು ಒಳಿತು-ಕೆಡುಕುಗಳ ಸಂಗಮ. ಆದರೆ ಕೆಡುಕಿನದ್ದೇ ವಿಜೃಂಭಣೆ. ಜೊತೆಗೆ ಹಣವೊ ಸೇರಿಬಿಟ್ಟರೆ ಎಲ್ಲವೂ ಸರಿಯೇ. ಸಮಾಜವೂ ಹೇಗೆ ಇಷ್ಟು ಆಸ್ತಿಯನ್ನು ಗಳಿಸಿದೆ ಎಂದು ಕೇಳದು. ಬದಲಿಗೆ ಅವನನ್ನು ಹೀರೋ ಎನ್ನುವ ಹಾಗೆ ನೋಡುತ್ತದೆ. ಅವನು ತಪ್ಪೇ ಮಾಡಿದರೂ ಅವನನ್ನು ಹಾಡಿಹೊಗಳುತ್ತದೆ. ಹೀಗೆ ಅಲ್ಲಿಂದ ಅವನ ಭಂಡತನ, ಸಮಾಜದ್ರೋಹದ ಕೆಲಸಗಳು ಶುರುವಾಗುತ್ತವೆ. ಮನಸ್ಸು ವಿಕೃತವಾಗುತ್ತದೆ. ನನಗೆ ತಿಳಿದ ಹುಡುಗನೊಬ್ಬ, ‘ಇಂಥಾ ಸುದ್ದಿಗಳನ್ನು ಓದಿ, ನೋಡಿ, ನನ್ನ ಮನಸ್ಸು ಈಚೆಗೆ ಎಷ್ಟು ವಿಕ್ಷಿಪ್ತವಾಗಿದೆ ಎಂದರೆ, ಅಪರಾಧದ ಬಗ್ಗೆ ಸುದ್ದಿ ಬಾರದೆ ಹೋದರೆ ಯಾಕೆ ಬರಲಿಲ್ಲ ಎನ್ನುವ ಜಿಜ್ಞಾಸೆಗೆ ಬೀಳುತ್ತೇನೆ. ಪತ್ರಿಕೆಗಳಲ್ಲಿ ಕ್ರೈಂ ನ್ಯೂಸ್ಗಳನ್ನು ಹುಡುಕುತ್ತೇನೆ, ಕಂಡಾಗ ಸಮಾಧಾನವಾಗುತ್ತದೆ. ಕಾಣದೆ ಹೋದರೆ ತಳಮಳ ಶುರುವಾಗುತ್ತದೆ. ನಮ್ಮಂಥ ಯುವಕರಿಗೆ ಇಂಥ ಅಭಿರುಚಿ ಯಾಕೆ ಬಂತು’ ಎಂದು ಪ್ರಶ್ನಿಸಿದ. ನಾನು ಉತ್ತರ ಹೇಳಲಾಗದೆ ಕನಲಿಹೋದೆ.

ಹೌದು. ಕೆಡುಕು ಎನ್ನುವುದು ಅಮಲಿದ್ದ ಹಾಗೆ. ಮನಸ್ಸು ಜಗಳವನ್ನು ನೋಡಬೇಕೆಂದು ಬಯಸುತ್ತದೆ. ಇನ್ನೊಬ್ಬರ ಗುದ್ದಾಟ ನಮಗೆ ರಂಜನೆಯ ವಿಷಯ. ಯಾರೋ ಯಾರನ್ನೋ ಹೊಡೆದರೆ ಅದಕ್ಕೆ ನಮ್ಮ ವಿಶ್ಲೇಷಣೆ ಶುರುವಾಗುತ್ತದೆ. ಮೋಸಮಾಡಿ ಅಭಿವೃದ್ಧಿ ಹೊಂದುತ್ತಿರುವುದನ್ನು ಕಂಡು ತಪ್ಪು ಎಂದು ಕಾಳಜಿಯಿಂದ ಮಾತನಾಡಿದರೂ ‘ನಿನಗೆ ಸಾಧ್ಯವಾಗದ್ದು ಅವನಿಗೆ ಸಾಧ್ಯವಾಯಿತು. ಅದಕ್ಕೆ ಹೊಟ್ಟೆಕಿಚ್ಚಾ’ ಎಂದು ಜಗತ್ತು ಪ್ರತಿಕ್ರಿಯಿಸುತ್ತದೆ. ಅಂಥಾ ಅವರಿಗೆ ಜನ ಏನೆಂದರೂ ನಾಚಿಕೆಯಾಗದು, ಅವರಿಗೆ ಧರ್ಮ ಅಧರ್ಮದ ಗೊಡವೆಯಿಲ್ಲ. ಅಸಹಾಯಕರನ್ನು ಶೋಷಣೆಗೆ ಒಳಗು ಮಾಡುತ್ತಲೇ ಇರುತ್ತಾರೆ. ಕೆಡಕು ಮಾಡುವವನು ದಿನೇ ದಿನೇ ಬೆಳೆಯುತ್ತಲೇ ಹೋಗುತ್ತಾನೆ- ಶ್ರೀಮಂತಿಕೆ ಹುಡುಕಿ ಬರುತ್ತದೆ. ನಾವಾದರೂ ಅಂಥವರ ಕಥೆಯನ್ನು ಎಲೆ ಅಡಿಕೆಯ ಹಾಗೆ ಜಗಿದು ಸವಿದು ಚಪ್ಪರಿಸುತ್ತಾ ಕೊನೆಯಲ್ಲಿ ‘ಒಳ್ಳೆಯವರಿಗಿದು ಕಾಲವಲ್ಲ’ ಎಂಬ ಘೋಷವಾಕ್ಯದಿಂದ ನಿಟ್ಟುಸಿರು ಬಿಡುತ್ತೇವೆ. ‘ಒಳ್ಳೆಯವರಾಗಿ ನಿಮಗೇನು ಸಿಕ್ಕಿತು’ ಎಂದು ಮನೆಯವರಿಂದ ಹಂಗಿಸಿಕೊಳ್ಳುತ್ತೇವೆ. ಆದರೆ ಅದನ್ನು ಮೀರುವುದಕ್ಕೆ, ಈ ಜಗತ್ತಿಗೆ ಒಳಿತಿನ ಮಹತ್ವ ಹೇಳುವುದಕ್ಕೆ ಮಾತ್ರ ಹೊರಡುವುದಿಲ್ಲ.

ಆದರ್ಶ ಶಿಕ್ಷಕರಾಗಿದ್ದ ಗಾಂಧಿವಾದಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ನನ್ನ ಹತ್ತಿರದ ಸಂಬಂಧಿ, ಚಿಕ್ಕಂದಿನಿಂದ ಅವರಿಂದ ಪ್ರಸಂಗಗಳನ್ನು ಕೇಳುತ್ತಾ ಬೆಳೆದವರಲ್ಲಿ ನಾನೂ ಒಬ್ಬಳು. ‘ಅಭಿನವ’ಕ್ಕಾಗಿ ಅವರ ‘ಮರೆಯಲಾದೀತೆ’ ಅನುಭವ ಕಥನವನ್ನು ಪುಸ್ತಕವಾಗಿಸುವಾಗ ನಾನು ಅವರು ಹೇಳಿದ್ದನ್ನೆಲ್ಲಾ ರೆಕಾರ್ಡ್ ಮಾಡಿ ಬರೆದುಕೊಳ್ಳುತ್ತಿದ್ದೆ. ಹೀಗೆ ಮಾತನಾಡುತ್ತಾ, ‘ತಾತ ನೀವು ಬರಿಯ ಒಳ್ಳೆಯವರ ಬಗ್ಗೆ ಮಾತ್ರ ಹೇಳುತ್ತೀರಲ್ಲ? ನಿಮಗೆ ಯಾರೂ ಕೆಡುಕನ್ನು ಮಾಡೇ ಇಲ್ಲವೇ? ಅದರ ಬಗ್ಗೆ ಯಾಕೆ ಮಾತಾಡುವುದಿಲ್ಲ’ ಎಂದು ಕೇಳಿದ್ದೆ. ಅದಕ್ಕವರು, ‘ಯಾಕಿಲ್ಲ? ಕೆಡುಕು ಮಾಡುವವರು, ಬಯಸುವವರು ಸಂಖ್ಯೆಯಲ್ಲಿ ತುಂಬಾ ಇದ್ದಾರೆ. ಅದನ್ನು ಹೇಳುವುದರಿಂದ ಏನು ಪ್ರಯೋಜನ? ನನಗೆ ಅನ್ಯಾಯ ಆಯ್ತು ಎನ್ನುವ ಸ್ವಮರುಕವನ್ನು ಬಿಟ್ಟು. ಅದೇ ಒಳ್ಳೆಯವರ ಬಗ್ಗೆ, ಅವರ ಸಾಧನೆಯ ಬಗ್ಗೆ, ಅವರಿಂದ ಸಮಾಜಕ್ಕೆ ಒಳಿತಾದದ್ದರ ಬಗ್ಗೆ ಮಾತಾಡಿದರೆ, ಕೇಳಿದ ನೂರರಲ್ಲಿ ಒಬ್ಬರಿಗೆ ನಾನೂ ಹಾಗಾಗಬೇಕು ಅನ್ನಿಸಲಿ- ಅಷ್ಟು ಸಾಕು. ಕೆಡುಕಿನ ಬಗ್ಗೆ ಮಾತಾಡಲಿಕ್ಕೆ ತುಂಬಾ ಜನ ಇದ್ದಾರೆ. ಅದಕ್ಕೆ ನಾನೇ ಆಗಬೇಕಾ’ ಎಂದರು.

ನಿಜ ಅಲ್ಲವೇ? ಲೋಭದಿಂದ ಕೋಪದಿಂದ ಕೂಡಿದ ಮನಸ್ಸು ಏನು ಬೇಕಾದರೂ ಮಾಡುತ್ತದೆ. ಕೊಲೆ ಮಾಡಿ ಸಿಕ್ಕಿ ಜೈಲು ಸೇರಿದ ಮೇಲೆ ಕಾಡುವ ಪಾಪಪ್ರಜ್ಞೆ ವಿವೇಕದಂತೆ ಮೊದಲೇ ಯಾಕೆ ಜಾಗೃತವಾಗಿರಲ್ಲ? ವಿವೇಕವಿಲ್ಲದ ಮನಸ್ಸು ಕ್ಷೋಭೆಗೊಳಗಾಗುತ್ತದೆ. ಕೆಡುಕನ್ನು ಆಶ್ರಯಿಸುತ್ತದೆ. ದುಡಿದು ಮಾತ್ರ ತಿನ್ನುವೆ ಎನ್ನುವ ತೀರ್ಮಾನಕ್ಕೆ ಬಂದುಬಿಟ್ಟರೆ ಹೊಡೆದು ತಿನ್ನುವುದರ ಬಗ್ಗೆ ಯೋಚಿಸುವುದೇ ಇಲ್ಲ. ಅಂಥಾ ಒಳಿತಿಗಾಗಿ ಸಂಕಲ್ಪವನ್ನು ಪ್ರಯತ್ನಪೂರ್ವಕವಾಗಿಯಾದರೂ ಸಿದ್ಧಿಸಿಕೊಳ್ಳುವುದು ಇವತ್ತಿನ ಎಲ್ಲ ಸಮಸ್ಯೆಗಳ ಶಾಶ್ವತ ಪರಿಹಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.