1979ರ ಹೊತ್ತು. ಭಾರತ ಉಪಗ್ರಹ ಉಡಾವಣೆಯಲ್ಲಿ ಅಂಬೆಗಾಲಿಡುತ್ತಿದ್ದ ಕಾಲ. ಡಾ. ಅಬ್ದುಲ್ ಕಲಾಂ ಎಸ್ಎಲ್ವಿ3 ಎಂಬ ಉಪಗ್ರಹ ಉಡಾವಣಾ ವಾಹನ ಯೋಜನೆಯ ನಿರ್ದೇಶಕರಾಗಿದ್ದರು. ಡಾ. ಸತೀಶ್ ಧವನ್ ಇಸ್ರೊ ಅಧ್ಯಕ್ಷರಾಗಿದ್ದರು. ರೋಹಿಣಿ ಎಂಬ ಉಪಗ್ರಹವನ್ನು ಈ ಉಡಾವಣಾ ವಾಹನದ ಪರೀಕ್ಷಾರ್ಥವಾಗಿ ಉಡಾವಣೆ ಮಾಡಬೇಕಿತ್ತು. ಸಂಪನ್ಮೂಲ ಕಡಿಮೆಯಿತ್ತು. ಈ ಯೋಜನೆಯನ್ನು ಯಶಸ್ವಿಯಾಗಿಸಬೇಕೆಂದು ನಮ್ಮ ವಿಜ್ಞಾನಿಗಳು ಹಗಲೂ ರಾತ್ರಿ ದುಡಿಯುತ್ತಿದ್ದರು. ಉಡಾವಣೆಯ ದಿನ ಹತ್ತಿರ ಬಂತು. ದೇಶದ ಜನರೆಲ್ಲರ ನಿರೀಕ್ಷೆಗಳು ನಮ್ಮ ವಿಜ್ಞಾನಿಗಳ ಮೇಲಿದ್ದವು. ಆದರೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸಣ್ಣ ತಾಂತ್ರಿಕ ದೋಷದಿಂದ ವರ್ಷ ವರ್ಷಗಳ ಶ್ರಮ ಮಣ್ಣುಪಾಲಾಯಿತು.

ಈ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದ ವಿಜ್ಞಾನಿಗಳು ಮೌನವಾದರು. ವಾತಾವರಣ ಬಿಗುವಾಯಿತು. ಕಿರಿಯ ವಿಜ್ಞಾನಿಗಳು ಟೀಕೆಗೆ ಹೆದರಿದರು. ಸಾರ್ವಜನಿಕವಾಗಿ ಅವಮಾನವಾಗುತ್ತದಲ್ಲ ಎಂದು ನೊಂದರು. ಹೊರಗೆ ಮಾಧ್ಯಮದವರು ಕಾಯುತ್ತಿದ್ದರು. ಯೋಜನಾ ನಿರ್ದೇಶಕರಾಗಿದ್ದ ಕಲಾಂ ಮಾಧ್ಯಮದೊಂದಿಗೆ ಮಾತಾಡಬೇಕಿತ್ತು. ಆದರೆ ಡಾ. ಧವನ್ ಮುಂದೆ ಹೋಗಿ ತಾವೇ ಮಾಧ್ಯಮದವರೊಂದಿಗೆ ಹೇಳಿದರು, ‘ಈ ಯೋಜನೆ ವಿಫಲವಾಗಿದೆ. ಆದರೆ ನಾನು ನನ್ನ ವಿಜ್ಞಾನಿಗಳನ್ನು, ಸಿಬ್ಬಂದಿಗಳನ್ನು ಬೆಂಬಲಿಸುತ್ತೇನೆ. ಮುಂದಿನ ವರ್ಷ ಅವರು ಖಂಡಿತ ಯಶಸ್ವಿಯಾಗುತ್ತಾರೆ.’

ಅವರು ಯಾರ ಹೆಸರನ್ನೂ ಹೇಳಲಿಲ್ಲ, ತಮ್ಮನ್ನು ತಾವು ಸಮರ್ಥಿಸಿಕೊಳ್ಳಲೂ ಇಲ್ಲ. ಆದರೆ ಅವರ ತಂಡದ ಮೇಲಿನ ಭಾರ ಅದೆಷ್ಟೋ ಕಡಿಮೆಯಾಗಿತ್ತು. ಮತ್ತೆ ಉತ್ಸಾಹದಿಂದ ತಂಡ ಕೆಲಸ ಮುಂದುವರಿಸಿತು. 1980ರ ಜುಲೈ 18, ಒಂದು ವರ್ಷದ ನಂತರ ಅದೇ ತಂಡ ಎಸ್ಎಲ್ವಿ3ಯಲ್ಲಿ ರೋಹಿಣಿ ಉಪಗ್ರಹವನ್ನಿಟ್ಟು ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ಕಳಿಸಿತು. ಸ್ವಂತ ರಾಕೆಟ್ ಉಪಯೋಗಿಸಿಕೊಂಡು ಉಪಗ್ರಹ ಉಡಾವಣೆ ಮಾಡಿದ ಆರನೇ ದೇಶವಾಗಿ ಭಾರತ ಇತಿಹಾಸ ಬರೆಯಿತು. ಮಾಧ್ಯಮದವರು ಬಂದರು. ಆದರೆ ಈ ಸಲ ಡಾ.ಧವನ್ ಮಾಡಿದ್ದು ಒಬ್ಬ ನಿಜವಾದ ನಾಯಕ ಮಾಡುವಂತಹ ಕೆಲಸವಾಗಿತ್ತು. ತಮ್ಮನ್ನು ಸುತ್ತುವರಿದ ಮಾಧ್ಯಮದವರಿಂದ ಎರಡು ಹೆಜ್ಜೆ ಹಿಂದೆ ಸರಿದ ಡಾ.ಧವನ್, ಡಾ.ಕಲಾಂ ಅವರ ಹತ್ತಿರ ಈ ಪತ್ರಿಕಾಗೋಷ್ಠಿ ನಡೆಸಿ ಸಂಭ್ರಮದ ಸುದ್ದಿಯನ್ನು ದೇಶದೊಂದಿಗೆ ಹಂಚಿಕೊಳ್ಳಲು ಹೇಳಿದರು.

ಸೋಲಿನ ಹೊಣೆಯನ್ನು ಏಕಾಂಗಿಯಾಗಿ ಹೊತ್ತ ಡಾ.ಸತೀಶ್ ಧವನ್ ಗೆಲುವಿನ ಶ್ರೇಯಸ್ಸನ್ನು ಎಲ್ಲರೊಂದಿಗೂ ಹಂಚಿಕೊಂಡರು. ನಾಯಕತ್ವ ಅಂದರೆ ಅಧಿಕಾರ ಚಲಾಯಿಸುವುದಲ್ಲ, ಅದೊಂದು ಜವಾಬ್ದಾರಿ. ನಾಯಕತ್ವ ಎಂದರೆ ಯಾವಾಗಲೂ ಹೊಗಳಿಕೆಯನ್ನೇ ನಿರೀಕ್ಷಿಸುವುದಲ್ಲ. ಬದಲಾಗಿ ಟೀಕೆಗಳನ್ನೂ ತೆರೆದ ಮನಸ್ಸಿನಿಂದ ಸ್ವೀಕರಿಸುವುದು. ಮಹಾನ್ ನಾಯಕರು ಬೇರೆಯವರನ್ನು ತುಳಿಯುವುದರಿಂದಲ್ಲ, ಎತ್ತಿ ಹಿಡಿಯುವುದರಿಂದ ರೂಪುಗೊಳ್ಳುತ್ತಾರೆ ಎಂಬುದನ್ನು ತೋರಿಸಿದರು ಧವನ್. ಡಾ.ಕಲಾಂ ಈ ಘಟನೆಯನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರು.

ಸೋಲನ್ನು ಘನತೆಯಿಂದ ಸ್ವೀಕರಿಸಿ ತಂಡದ ಸ್ಥೈರ್ಯ ಕುಸಿಯದಂತೆ ಮಾಡಿ ಗೆಲುವು ಬಂದಾಗ ತಂಡಕ್ಕೆ ಸಮಪಾಲು ಕೊಟ್ಟು ಅವರನ್ನು ಮತ್ತಷ್ಟು ಸಾಧಿಸಲು ಉತ್ತೇಜಿಸುವ ಇಂತಹ ನಾಯಕತ್ವದ ಗುಣಗಳು ಸಮಾಜದ ಎಲ್ಲ ಕಡೆಗೂ ಬೇಕಾಗಿದೆ. ಸೋತರೆ ಬೇರೆಯವರ ಮೇಲೆ ಗೂಬೆ ಕೂರಿಸುವ ಮತ್ತು ಗೆದ್ದಾಗ ತಮ್ಮಿಂದಲೇ ಎಂದು ಅಹಂಕಾರ ಪಡುವ ನಾಯಕರಿಂದ ಎರಡನೇ ಹಂತದ ನಾಯಕತ್ವ ಬೆಳೆಯುವುದಿಲ್ಲ. ಸಹಾನುಭೂತಿಯ ವಿಶಿಷ್ಟ ಗುಣದಿಂದ ನಾಯಕರು ಸಾಧಾರಣ ತಂಡವನ್ನೂ ಮತ್ತಷ್ಟು ಕೆಲಸ ಮಾಡಲು ಪ್ರೇರೇಪಿಸಿ ಇತಿಹಾಸ ನಿರ್ಮಿಸುವಂತೆ ಮಾಡಬಲ್ಲರು. ಅದ್ಭುತಗಳನ್ನು ಸಾಧಿಸಬಲ್ಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.