ಮನುಷ್ಯನ ಬದುಕನ್ನು ಹೇಗೆ ದೊಡ್ಡದಾಗಿ ಕಟ್ಟಿಕೊಳ್ಳಬೇಕು? ದೇವರು ಒಂದು ಜೀವನವನ್ನು ಕೊಟ್ಟಿದ್ದಾನೆ. ಇದನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳುವ ಬಗೆ ಹೇಗೆ? ಹೇಗೆ ಬದುಕಿದರೆ ಈ ಜೀವನ ದಿವ್ಯವಾಗುತ್ತದೆ, ಹೇಗೆ ಜೀವನ ಭವ್ಯವಾಗುತ್ತದೆ? ವಿವೇಕಾನಂದ, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಐನ್ ಸ್ಟೈನ್, ಎಮರಸನ್, ಕನಕ, ಪುರಂಧರ, ಅಬ್ದುಲ್ ಕಲಾಂ ಮುಂತಾದ ಶ್ರೇಷ್ಠರ ಬಗ್ಗೆ ಹೇಳುತ್ತೇವೆ. ಅವರು ಯಾರೂ ತಾಯಿಯ ಗರ್ಭದಿಂದ ಬರುವಾಗಲೇ ಲೇಬಲ್ ಹಚ್ಚಿಕೊಂಡು ಬಂದಿಲ್ಲ. ಹುಟ್ಟಿನಿಂದಲೇ ದೊಡ್ಡವರಾದವರಲ್ಲ. ಇವರು ವಿವೇಕಾನಂದ ಆಗಿಯೇ ಹುಟ್ಟಿದ್ದಾರೆ, ಇವರು ಎಮರ್ ಸನ್ ಆಗೇ ಹುಟ್ಟಿದ್ದಾರೆ. ಕಲಾಂ ಆಗೇ ಹುಟ್ಟಿದ್ದಾರೆ ಅಂತ ಇಲ್ಲ. ಮನುಷ್ಯ ಅಪರಿಚಿತ ನಾಗಿಯೇ ಭೂಮಿಗೆ ಬರುತ್ತಾನೆ. ತಾಯಿಯ ಗರ್ಭದಿಂದ ಭೂಮಿಗೆ ಬಂದಾಗ ಅವನ ನಿಜವಾದ ಮುಖ ಅವನಿಗೂ ಕಂಡಿಲ್ಲ. ಏನು ಅಂತಲೂ ಗೊತ್ತಿಲ್ಲ. ಹಣೆಯ ಮೇಲೆ ಬರೆದುಕೊಂಡೂ ಬಂದಿಲ್ಲ. ಯಾರಿಗೂ ಅವರ ಪರಿಚಯ ಇರಲಿಲ್ಲ. ನಿಸರ್ಗ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದೆ. ಅವರೆಲ್ಲರೂ ತಮ್ಮ ಕಾಯಕದಿಂದ ಶ್ರೇಷ್ಠರಾಗಿದ್ದಾರೆ. ನಾವೂ ಹಾಗೆ.
ಜಾನ್ ಲಾಕ್ ಎಂಬ ತತ್ವಜ್ಞಾನಿ ಹೇಳುತ್ತಾನೆ ‘ಮನುಷ್ಯ ಎಂದರೆ ತಬುಲರಸ’ ಎಂದು. ‘ತಬುಲರಸ’ ಎಂದರೆ ಒಂದು ಸ್ವಚ್ಛ ಹಾಳೆ. ಈ ಭೂಮಿಗೆ ಬಂದಾಗ ಎಲ್ಲ ಮನುಷ್ಯರೂ ಒಂದು ಸ್ವಚ್ಛ ಹಾಳೆ, ಸ್ವಚ್ಛ ಪಾಟಿ ಅಷ್ಟೆ. ಏನೇನು ಬರೆದಿಲ್ಲ. ಅದಕ್ಕೆ ಧರ್ಮ ಇರಲಿಲ್ಲ, ಜಾತಿ ಇರಲಿಲ್ಲ, ಏನೂ ಇರಲಿಲ್ಲ. ಹಾಗಾದರೆ ಈ ಜೀವನ ಶ್ರೇಷ್ಠ ಆಗುವುದು ಯಾವಾಗ. ದಿವ್ಯ ಆಗುವುದು ಯಾವಾಗ? ಯಾವುದರಿಂದ? ಎಲ್ಲರಿಗೂ ತಾವು ಗ್ರೇಟ್ ಆಗಬೇಕು ಎಂಬ ಆಸೆ ಇರುತ್ತದೆ. ಮನೆಯಲ್ಲಿಯಾದರೂ, ಓಣಿಯಲ್ಲಾದರೂ, ಊರಲ್ಲಾದರೂ, ದೇಶದಲ್ಲಿಯಾದರೂ ತಾವು ಗ್ರೇಟ್ ಅಂತ ಅನ್ನಿಸಿಕೊಳ್ಳಬೇಕು ಅಂತ ಆಸೆ ಇರುತ್ತದೆ. ಮನುಷ್ಯ ಗ್ರೇಟ್ ಆಗಲು ಏನು ಮಾಡಬೇಕು? ನಮ್ಮೊಳಗೆ ಏನು ಇದ್ದರೆ ನಾವು ಗ್ರೇಟ್ ಆಗುತ್ತೇವೆ?
ಒಂದು ಪ್ಲಾಸ್ಟಿಕ್ ಬಾಟಲ್ ತಗೊಳ್ಳಿ. ಅದು ರಸ್ತೆಯಲ್ಲಿ ಖಾಲಿ ಬಿದ್ದಿದ್ದರೆ ಅದೊಂದು ಕಸ. ಕಸದವನು ಬಂದು ತೆಗೆದುಕೊಂಡು ಹೋಗುತ್ತಾನೆ. ಕಸದ ಬುಟ್ಟಿಗೆ ಹಾಕುತ್ತಾನೆ. ಅದೇ ಬಾಟಲಿಯಲ್ಲಿ ಬಿಸ್ಲೇರಿ ನೀರು ತುಂಬಿದರೆ ಅದು 20–30 ರೂಪಾಯಿ ಬೆಲೆಗೆ ಮಾರಾಟವಾಗುತ್ತದೆ. ಅದರಲ್ಲಿ ಆಕಳ ಹಾಲು ತುಂಬಿರಿ. ಆಗ 40–50 ರೂಪಾಯಿಗೆ ಜನ ತಗೋತಾರೆ. ಅದೇ ಬಾಟಲ್ ನಲ್ಲಿ ಆಕಳ ತುಪ್ಪ ತುಂಬಿರಿ. 700–800 ರೂಪಾಯಿಗೆ ಮಾರಾಟ ಆಗುತ್ತದೆ. ಅಂದರೆ ಬಾಟಲಿಗೆ ಕಿಮ್ಮತ್ತಿಲ್ಲ. ಬಾಟಲಿಯ ಒಳಗೆ ಏನು ತುಂಬುತ್ತೀರಿ ಅನ್ನುವುದರ ಮೇಲೆ ಕಿಮ್ಮತ್ತು ನಿರ್ಣಯವಾಗುತ್ತದೆ. ಹಾಗೆಯೇ ಮನುಷ್ಯನ ದೇಹಕ್ಕೆ ಕಿಮ್ಮತ್ತಿಲ್ಲ. ಅವನೊಳಗೆ ಯಾವ ಗುಣ ಇದೆ ಎನ್ನುವುದರ ಮೇಲೆ ಅವನ ಕಿಮ್ಮತ್ತು ನಿರ್ಣಯವಾಗುತ್ತದೆ. ಮನುಷ್ಯ ಎಂದರೆ ಖಾಲಿ ಬಾಟಲಿ ಅಷ್ಟೆ. ಅದರೊಳಗೆ ಸದ್ಗುಣ, ಸದ್ವಿಚಾರ, ಜ್ಞಾನ ತುಂಬಿದರೆ ಆಕಳ ತುಪ್ಪ ತುಂಬಿದ ಬಾಟಲಿ ತರಹ 700–800 ರೂಪಾಯಿಗೆ ಮಾರಾಟ ಆಗುತ್ತೆ. ಶ್ರೇಷ್ಠವಾಗತ್ತೆ. ಇಲ್ಲವಾದರೆ ಕಸದ ಡಬ್ಬಿಗೆ ಹೋಗುತ್ತದೆ. ಜನ್ಮದಿಂದ ಯಾರೂ ದೊಡ್ಡವರಾಗಿಲ್ಲ. ಅವರು ಮಾಡಿದ ಕರ್ಮದಿಂದ ದೊಡ್ಡವರಾಗಿದ್ದಾರೆ. ಅದು ನಮಗೆ ಆದರ್ಶವಾಗಬೇಕು.⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.