ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಬದುಕು ಪರಿಪೂರ್ಣ ಆಗೋದು ಯಾವುದರಿಂದ?

Published 4 ಸೆಪ್ಟೆಂಬರ್ 2024, 18:42 IST
Last Updated 4 ಸೆಪ್ಟೆಂಬರ್ 2024, 18:42 IST
ಅಕ್ಷರ ಗಾತ್ರ

ಯಾವುದರಿಂದ ಬದುಕು ಪರಿಪೂರ್ಣವಾಗ್ತದ? ಏನು ಇದ್ದರ ಮನುಷ್ಯನ ಬೆಲೆ ಹೆಚ್ಚಾಗ್ತದ? ನೀವು 50 ಲಕ್ಷ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಸ್ತೀರಿ. ಅದರೊಳಗೆ ಇನ್ನೂ 50 ಲಕ್ಷ ರೂಪಾಯಿ ಖರ್ಚು ಮಾಡಿ ಸಾಮಾನು ತಂದು ಹಾಕುತ್ತೀರಿ. ಅಮೆರಿಕನ್ ಡೈನಿಂಗ್ ಟೇಬಲ್, ಜಪಾನ್ ಕುರ್ಚಿ, ಚೈನಾ ವಾಲ್, ಟೈಲ್, ಸೋಫಾ ತಂದು ಹಾಕುತ್ತೀರಿ. ಆದರೂ ಮನೆ ಖಾಲಿ ಖಾಲಿ ಅನಸ್ತದ. ಇವೆಲ್ಲಾ ಇಟ್ಟು ಒಂದು ರೂಪಾಯಿ ಕೊಟ್ಟು ತಂದ ಹಣತೆ ಹಚ್ಚಿ. ಅದರ ಬೆಳಕು ಮನೆ ತುಂಬಾ ತುಂಬುತ್ತದೆ. ಬೆಳಕು ಮನೆ ತುಂಬುತ್ತದೆಯೇ ವಿನಾ ವಸ್ತುಗಳಲ್ಲ. ವ್ಯಕ್ತಿಯ ಜೀವನ ತುಂಬುವುದು ಸಂಪತ್ತಿನಿಂದ ಅಲ್ಲ. ಸಂತೋಷದಿಂದ ಜೀವನ ತುಂಬುತ್ತದೆ. ನಾವೆಲ್ಲರೂ ಸಂತೋಷವಾಗಿರಬೇಕು.

ಎಲ್ಲರಿಗೂ ಗೆಲುವಿನ ಬಯಕೆ ಇದ್ದೇ ಇರುತ್ತದೆ. ನಾವು ಗುಡಿಗುಂಡಾರಗಳಿಗೆ ಹೋಗ್ತೀವಿ. ದೇವರ ಹತ್ತಿರ ಹೋಗಿ ನಮಗೆ ಸೋಲಾಗಲಿ, ದುಃಖ ಬರಲಿ ಅಂತ ತೆಂಗಿನ ಕಾಯಿ ಒಡೀತೇವೇನು? ಇಲ್ಲ. ‘ಭಗವಂತನೇ ನನ್ನಜೀವನದಲ್ಲಿ ಗೆಲುವಾಗಲಿ’ ಅಂತ ಬೇಡಿಕೊಳ್ಳುತ್ತೀವಿ. ಹ್ಯಾಗೆ ಗೆಲುವನ್ನು ಸಾಧಿಸಬೇಕು ಅಂತ ಸೆಮಿನಾರ್ ಕೂಡಾ ಕಂಡಕ್ಟ್ ಮಾಡ್ತೀರಿ. ಜ್ಯೋತಿಷಿಗಳ ಹತ್ತಿರ ಹೋಗ್ತೀರಿ ಯಾಕೆ? ಏನು ಮಾಡಿದರೆ ಜೀವನದಲ್ಲಿ ಗೆಲುವನ್ನು ಸಾಧಿಸಬಹುದು ಎಂದು ತಿಳಕೊಳ್ಳೋಕೆ ಹೋಗ್ತೀರಿ. ಎಷ್ಟೇ ಕಷ್ಟಗಳು ಬರಲಿ, ನೋವುಗಳಿರಲಿ, ನಿರಾಸೆಗಳಿರಲಿ ಅವುಗಳ ಮಧ್ಯದಲ್ಲಿ ಬದುಕಬೇಕಲ್ಲ. ಅದು ಅನಿವಾರ್ಯ. ಅದನ್ನ ತಿಳಕೊಳ್ಳಾಕ ಹೋಗ್ತೀರಿ.

ಒಂದು ಗುಬ್ಬಿ ಇರ್ತದ. ಆಹಾರಕ್ಕಾಗಿ ಅದು ಈ ಕಡೆ ಹೊಲಕ್ಕೆ ಹೋದರೆ ಇವ ಓಡಿಸ್ತಾನ, ಆ ಕಡೆ ಹೊಲಕ್ಕೆ ಹೋದರೆ ಅವ ಓಡಿಸ್ತಾನ. ಅದಕ್ಕೇನು ರೇಷನ್ ಕಾರ್ಡ್ ಐತೇನು? ಉಚಿತ ಅಕ್ಕಿ ಸಿಗತೈತೇನು? ಆದರೂ ಬದುಕುತ್ತದೆ. ಯಾಕೆಂದರೆ ಅದು ರೆಕ್ಕೆಗಳ ಮೇಲೆ ಭರವಸೆ ಇಟ್ಟುಕೊಂಡಿದೆ. ಅದು ಶಾಲೆಗೆ ಹೋಗಿಲ್ಲ. ಸೆಮಿನಾರ್ ಅಟೆಂಡ್ ಮಾಡಿಲ್ಲ. ಆದರೂ ಬದುಕುತ್ತದೆ. ಅದು ಭರವಸೆಯ ಬದುಕು. ನಮ್ಮ ಮೇಲೆ ಭರವಸೆ ಇದ್ದರೆ ನಮ್ಮ ಬದುಕೂ ಸಂತೋಷಮಯವಾಗಿರುತ್ತದೆ. ಪರಿಪೂರ್ಣವಾಗಿರುತ್ತದೆ.

ಎಷ್ಟೋ ಜನ ಕಣ್ಣಿಲ್ಲ ಅಂತ ಭಿಕ್ಷುಕರಾಗಿದ್ದಾರೆ. ಆದರೆ ನಮ್ಮ ನಡುವೆ ಒಬ್ಬರಿದ್ದರು. ತನಗೆ ಕಣ್ಣಿಲ್ಲ ಅಂದರೂ ಕಣ್ಣಿಲ್ಲದವರಿಗೆ ಕಣ್ಣಾಗುತ್ತೀನಿ ಅಂತ ದುಡುದ್ರು, ಪಂಚಾಕ್ಷರಿ ಗವಾಯಿಗಳಾದರು. ಅದಕ್ಕೆ ಬಸವಣ್ಣ ‘ಜಂಬೂದ್ವೀಪದ ನವಖಂಡ ಪೃಥ್ವಿಯೊಳಗೆ, ಕೇಳಿರಯ್ಯ ಎರಡಾಳಿನ ಭಾಷೆಯ, ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು, ಸತ್ಯವೆಂಬ ಕೊರಲನಗೆ ತಳೆದುಕೊಂಡು, ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ’ ಅಂತಾರೆ.

ನಾವು ಸಾವಿರಾರು ಭಾಷೆಗಳಿವೆ ಅಂತೀವಿ. ಅದೆಲ್ಲ ಸುಳ್ಳು. ನಿಜವಾಗಿ ಇರೋದು ಎರಡೇ ಭಾಷೆ. ಒಂದು ದೇವರ ಭಾಷೆ. ಇನ್ನೊಂದು ಭಕ್ತನ ಭಾಷೆ. ‘ನಿನಗೆ ಭೂಮಿ ಮೇಲೆ ಜನ್ಮ ಕೊಟ್ಟೇನಿ, ಅದರ ಜೊತೆಗೆ ಸಾವಿರಾರು ಕಟ್ಟಗಳನ್ನೂ ಇಟ್ಟೇನಿ’ ಅನ್ನೋದು ದೇವರ ಭಾಷೆ. ‘ನೀನು ಸಾವಿರ ಕಷ್ಟಗಳನ್ನು ಕೊಡು. ಕಷ್ಟ ಕೊಡಬೇಡ ಅಂತ ನಾನು ಹೇಳಲ್ಲ. ಆದರೆ ನೀನು ಕೊಡುವ ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಕೊಡು’ ಎಂದು ಕೇಳಿಕೊಳ್ಳುತ್ತೇವೆ.

ಇದು ಗೆಲುವಿನ ಭಾಷೆ. ಇದು ಭಕ್ತನ ಭಾಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT