ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಮನುಷ್ಯ ಹಾರುವುದಾ? ಇಂಪಾಸಿಬಲ್

Published 9 ಮೇ 2024, 21:39 IST
Last Updated 9 ಮೇ 2024, 21:39 IST
ಅಕ್ಷರ ಗಾತ್ರ

ಅವರೊಬ್ಬರು ಅಮೆರಿಕದ ಪ್ರಾಟೆಸ್ಟೆಂಟ್ ಕ್ರೈಸ್ತ ಬಿಷಪ್. ಒಂದು ಬಾರಿ ತಮ್ಮದೇ ಚರ್ಚ್ ನಡೆಸುತ್ತಿದ್ದ ಶಾಲೆಯೊಂದಕ್ಕೆ ಹೋಗಿದ್ದರು. ಅವರು ಆ ಶಾಲೆಗೆ ಹೋಗಿ ಬಹಳ ದಿನಗಳಾಗಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಉಳಿದುಕೊಂಡರು. ರಾತ್ರಿ ಊಟವಾದ ಮೇಲೆ ಆ ಶಾಲೆಯ ಪ್ರಾಂಶುಪಾಲರ ಜೊತೆ ಲೋಕಾಭಿರಾಮವಾಗಿ ಮಾತಾಡುತ್ತಾ ‘ನೋಡಿ, ಮನುಷ್ಯ ಏನೇನೆಲ್ಲಾ ಕಂಡುಹಿಡಿದುಬಿಟ್ಟಿದ್ದಾನೆ... ಪ್ರಕೃತಿಯ ಎಲ್ಲಾ ರಹಸ್ಯವನ್ನೂ ಬಯಲು ಮಾಡಿಬಿಟ್ಟಿದ್ದಾನೆ. ಇನ್ನು ಕಂಡುಹಿಡಿಯುವುದಕ್ಕೆ ಮನುಷ್ಯನಿಗೆ ಏನೂ ಇಲ್ಲ. ಈ ಜಗತ್ತು ಕೊನೆಯಾಗುವ ಕಾಲ ಬಹುಶಃ ಹತ್ತಿರದಲ್ಲೇ ಇದೆ’ ಅಂದರು.

ಪ್ರಾಂಶುಪಾಲರಿಗೆ ಬಿಷಪ್ ಅವರ ಅಭಿಪ್ರಾಯ ಸಮ್ಮತವೆನಿಸಲಿಲ್ಲ. ಅವರು ಹೇಳಿದರು: ‘ನನಗೆ ಹಾಗನ್ನಿಸುವುದಿಲ್ಲ ಮೈ ಲಾರ್ಡ್. ಮನುಷ್ಯ ಕಂಡುಹಿಡಿಯಬಹುದಾದದ್ದು ಇನ್ನೂ ಬೇಕಾದಷ್ಟಿದೆ. ನಮ್ಮ ಜೀವಿತ ಕಾಲದಲ್ಲೇ ನಾವು ಬೆರಗಾಗುವಂಥ ಆವಿಷ್ಕಾರಗಳನ್ನು ಕಾಣುತ್ತೇವೆ’.

ಬಿಷಪ್ ಕೇಳಿದರು: ‘ಮನುಷ್ಯ ಇನ್ನೇನು ಕಂಡುಹಿಡಿಯಬಹುದು?’

ಪ್ರಾಂಶುಪಾಲರು: ‘ಬಹುಶಃ ಆಕಾಶದಲ್ಲಿ ಹಾರುವುದನ್ನು’.

ಬಿಷಪ್: ‘ಮನುಷ್ಯ ಹಾರುವುದಾ? ಇಂಪಾಸಿಬಲ್... ಮನುಷ್ಯ ಹಾರಬೇಕೆಂಬುದು ಬಹುಶಃ ದೇವರ ಇಚ್ಛೆಯಲ್ಲ. ಹಾಗಿದ್ದರೆ ಅವನು ಮನುಷ್ಯನನ್ನು ಸೃಷ್ಟಿಸುವಾಗಲೇ ರೆಕ್ಕೆಗಳನ್ನಿಟ್ಟಿರುತ್ತಿದ್ದ. ಹಕ್ಕಿಗಳಿಗೆ, ಚಿಟ್ಟೆಗಳಿಗೆ ರೆಕ್ಕೆಯನ್ನಿಟ್ಟು ಕಳುಹಿಸಿದವನಿಗೆ ಮನುಷ್ಯನಿಗೆ ರೆಕ್ಕೆಗಳನ್ನಿಡಲು ಆಗುತ್ತಿರಲಿಲ್ಲವೆ?’

ಪ್ರಾಂಶುಪಾಲರು, ದೊಡ್ಡವರ ಹತ್ತಿರ ಮಾತು ಬೆಳೆಸುವುದು ಬೇಡವೆಂದು ಸುಮ್ಮನಾದರು.

ಆ ಬಿಷಪ್ಪರ ಹೆಸರು ಮಿಲ್ಟನ್ ರೈಟ್. 

ಸ್ವಾರಸ್ಯವೇನು ಗೊತ್ತೆ? ವಿಮಾನವನ್ನು ಕಂಡುಹಿಡಿದವರು ರೈಟ್ ಬ್ರದರ್ಸ್ ಎಂದು ನಾವು ಶಾಲೆಯ ಪುಸ್ತಕಗಳಲ್ಲಿ ಓದಿದ್ದೇವಲ್ಲವೆ? ಆ ರೈಟ್ ಬ್ರದರ್ಸ್– ಆರ್ವಿಲ್ಲೆ ರೈಟ್ ಮತ್ತು ವಿಲ್ಬುರ್ ರೈಟ್- ಇದೇ ಬಿಷಪ್ ಮಿಲ್ಟನ್ ರೈಟ್ ಅವರ ಮಕ್ಕಳು. ಹೈಸ್ಕೂಲ್‌ ವರೆಗೆ ಮಾತ್ರ ಓದಿದ್ದ ಹುಡುಗರು ಅವರು.

ಡಿಸೆಂಬರ್ 17, 1903ರಂದು ಅವರು ತಾವೇ ನಿರ್ಮಿಸಿದ ವಿಮಾನವನ್ನು ಅಮೆರಿಕದ ನಾರ್ತ್ ಕೆರೊಲಿನಾ ರಾಜ್ಯದ ಕಿಟ್ಟಿಹಾಕ್‌ನಿಂದ ಆರು ಕಿಲೋ ಮೀಟರ್‌ನಷ್ಟು ದೂರ ಇರುವ ಕಿಲ್ ಡೆವಿಲ್ ಹಿಲ್ ಎಂಬಲ್ಲಿ ಯಶಸ್ವಿಯಾಗಿ ಆಕಾಶದಲ್ಲಿ ಹಾರಾಡಿಸಿದರು. ಮುಂದೆ ಒಂದೇ ವರ್ಷದಲ್ಲಿ ಸುಧಾರಿಸಿದ ವಿಮಾನವನ್ನೂ ಹಾರಿಸಿದರು.

ಮನುಷ್ಯನ ಮತಿಯ ಅನಂತ ಸಾಧ್ಯತೆಗಳಿಗೆ ಕೊನೆಯೆಲ್ಲಿ? ಪ್ರಕೃತಿಯ ರಹಸ್ಯಗಳನ್ನು ಭೇದಿಸುತ್ತಾ, ಹೊಸ ಹೊಸ ಅಚ್ಚರಿಗಳನ್ನು ಉಂಟುಮಾಡುವುದರಿಂದಲೇ ಮನುಕುಲದ ಇತಿಹಾಸ ರೋಚಕವೂ ರಮ್ಯವೂ ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT