ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಸಮಚಿತ್ತವೇ ನೆಮ್ಮದಿಯ ಮಾರ್ಗ

ನುಡಿ ಬೆಳಗು
Published 18 ಫೆಬ್ರುವರಿ 2024, 18:51 IST
Last Updated 18 ಫೆಬ್ರುವರಿ 2024, 18:51 IST
ಅಕ್ಷರ ಗಾತ್ರ

ಆರ್ಥರ್ ಆಶ್, ಆಫ್ರಿಕಾ ಮೂಲದ ಅಮೆರಿಕನ್ ಟೆನಿಸ್ ಪಟು. 1975ರಲ್ಲಿ ಆಶ್, ಅಂದಿನ ವಿಶ್ವ ಟೆನಿಸ್ ಸಾಮ್ರಾಜ್ಯದ ಅನಭಿಷಿಕ್ತ ಸಾಮ್ರಾಟರಾಗಿದ್ದ ಜಿಮ್ಮಿ ಕಾರ್ನರ್ಸ್ ಅವರನ್ನು ಅನಿರೀಕ್ಷಿತವಾಗಿ ಮಣಿಸಿ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡರು.  ಆಗಿನ ಕಾಲದಲ್ಲಿ ಟೆನ್ನಿಸ್ ರಂಗದ ಹೊಸ ಸೆನ್ಸೇಷನ್ ಆಗಿದ್ದ ಆರ್ಥರ್ ಆಶ್ ಹಲವಾರು  ಟೆನಿಸ್ ಪ್ರಶಸ್ತಿಗಳನ್ನೂ ಗೆದ್ದಿದ್ದರು. ಇಂತಹ ವಿಶಿಷ್ಟ ಪ್ರತಿಭೆ 1988ರಲ್ಲಿ ಎರಡೆರಡು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂತು. ದುರದೃಷ್ಟ, ಶಸ್ತ್ರಚಿಕಿತ್ಸೆಗಾಗಿ ಅವರು ಪಡೆದ ರಕ್ತದಿಂದ ಎಚ್ಐವಿ ಸೋಂಕಿತರಾದರು. ಆಗ ಅವರ ಅಸಂಖ್ಯಾತ ಅಭಿಮಾನಿಗಳು, ಅವರನ್ನು ಸಂತೈಸುವ ಸಂದೇಶಗಳನ್ನು ಅವರಿಗೆ ಕಳಿಸುತ್ತಿದ್ದರು. ಇದರಲ್ಲಿ ಬಹುಪಾಲು ಮಂದಿಯ ಪ್ರಶ್ನೆ ‘ಎಲ್ಲವನ್ನೂ ಒಳ್ಳೆಯದೇ ಮಾಡಿರುವ ನಿಮ್ಮನ್ನೇ ಏಕೆ ದೇವರು ಈ ದುರದೃಷ್ಟಕ್ಕೆ ಗುರಿ ಮಾಡಿದ’ ಎಂಬುದಾಗಿತ್ತು.

ಇದಕ್ಕೆ ಆರ್ಥರ್ ಆಶ್ ನೀಡಿದ ಉತ್ತರ ಅತ್ಯಂತ ಧನಾತ್ಮಕವೂ, ಪ್ರೇರಣಾದಾಯಕವೂ ಆಗಿದೆ.

‘ಪ್ರಪಂಚದಲ್ಲಿ ಮಿಲಿಯಗಟ್ಟಲೆ ಜನ ಟೆನ್ನಿಸ್ ಆಟಗಾರರಾಗಬೇಕೆಂದು ಆಶಿಸಿ ಪ್ರಯತ್ನ ಪಡುತ್ತಾರೆ. ಅದರಲ್ಲಿ ಸುಮಾರು ಒಂದು ಲಕ್ಷ ಜನ ವೃತ್ತಿಪರ ಟೆನ್ನಿಸ್ ಆಟಗಾರರಾಗುತ್ತಾರೆ. ಅದರಲ್ಲಿನ ಕೆಲವೇ ಸಾವಿರ ಜನ ವಿಶ್ವದ ನಾನಾ ಟೆನ್ನಿಸ್ ಸರ್ಕಿಟ್‌ಗಳಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಅದರಲ್ಲಿ ಕೇವಲ 100 ಮಂದಿ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಅದರಲ್ಲಿ ಕೇವಲ ಇಬ್ಬರಿಗೆ ಮಾತ್ರ ಫೈನಲ್ ಆಡುವ ಅವಕಾಶ ದೊರೆಯುತ್ತದೆ. ಕೊನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಗ್ರಾಂಡ್ ಸ್ಲಾಮ್ ಚಾಂಪಿಯನ್ನಾಗಿ ಟ್ರೋಫಿಯನ್ನು ಎತ್ತಿ ಹಿಡಿಯುತ್ತಾನೆ. ಅಂತಹ ಅದೃಷ್ಟವಂತ ವ್ಯಕ್ತಿ ನಾನಾಗಿದ್ದೆ. ಆ ಸಂದರ್ಭದಲ್ಲಿ ನಾನು ದೇವರೇ ನನಗೆ ಮಾತ್ರ ಈ ಅವಕಾಶ ಏಕೆ ಕೊಟ್ಟೆ ಎಂದು ಕೇಳಲಿಲ್ಲ. ಹಾಗೆಯೇ ಈ ರೀತಿ ದುರದೃಷ್ಟದಿಂದ ಕಾಯಿಲೆಗೆ ಒಳಗಾದಾಗ ನಾನೇಕೆ ದೇವರನ್ನು ನನಗೇ ಏಕೆ ಇದನ್ನು ನೀಡಿದೆ ಎಂದು ದೂಷಿಸಲಿ’ ಎಂಬ ಅವರ ಹೇಳಿಕೆ ಸುಖ ದುಃಖಗಳನ್ನು, ನೋವು ನಲಿವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿ ಸದಾ ನಮ್ಮದಾಗಿರಬೇಕು ಎಂಬುದಕ್ಕೆ ಬಹುದೊಡ್ಡ ಉದಾಹರಣೆಯಾಗಿದೆ.

ಕಷ್ಟ ಬಂದಾಗ ದುಃಖವಾದಾಗ ಅಯ್ಯೋ ನನಗೇ ಏಕೆ ಇದು ಬಂದೊದಗಿದೆ ಎಂದು ಕೊರಗುವ ನಾವು ಸುಖ ಲಭಿಸಿದಾಗ ಬೇರೆಯವರಿಗೆ ಲಭಿಸದ ಇದು ನನಗೇ ಏಕೆ ಸಿಕ್ಕಿದೆ ಎಂದು ಆಲೋಚಿಸುವುದಿಲ್ಲ. ಹೀಗಾಗಿ ಡಿವಿಜಿಯವರು ಕಗ್ಗದಲ್ಲಿ ಹೇಳಿದಂತೆ ‘ಅರೆಗಣ್ಣು ನಮದೆಂದು ಕೊರ ಕೊರಗಿ ಫಲವೇನು? ಅರೆ ಬೆಳಕು  ಧರೆಯೊಳು ಎಂದೊರಲಿ ಸುಖವೇನು? ಇರುವ ಕಣ್ಣಿಂದ ಆದಿನಿತ ಪರಿಕಿಸಿ ನೋಡಿದರದು ಲಾಭ -ಮಂಕುತಿಮ್ಮ’.  ನಮಗಿರೋದೇ ಅರೆಗಣ್ಣು, ನಮಗೆ ಕಾಣಿಸುವುದೇ ಅರೆಬೆಳಕು ಎಂದು ಕೊರಗುತ್ತಾ ಕೂರುವುದರ ಬದಲು ಇರುವ ಅರ್ಧ ಕಣ್ಣಿನಿಂದ ನೋಡ ಸಿಗುವ ಜಗತ್ತಿನ ಸವಿಯನ್ನು ಸವಿಯುವುದೇ ಲಾಭ. ಅಂತಹ ಮನೋಧರ್ಮವೇ ನೆಮ್ಮದಿಯ ಬದುಕಿನ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT