ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಮಧುರಾನುಭೂತಿ..

ನುಡಿ ಬೆಳಗು
Published 15 ಏಪ್ರಿಲ್ 2024, 18:31 IST
Last Updated 15 ಏಪ್ರಿಲ್ 2024, 18:31 IST
ಅಕ್ಷರ ಗಾತ್ರ

ಕೃಷ್ಣ ಗೋಕುಲವನ್ನು ಬಿಟ್ಟು ದ್ವಾರಕೆಗೆ ಹೊರಟ. ಅವನಿಗೋ ರಾಜಕಾರ್ಯ. ಅವನ ಕೊಳಲ ಧ್ವನಿಗೆ ಮೈಮರೆತಿದ್ದ ಗೋಕುಲದ ಪ್ರತಿ ಮನೆಯಲ್ಲೂ ಶೋಕಾಚರಣೆ. ಯಶೋದೆಯಂತೂ ಕೃಷ್ಣನಿಲ್ಲದ ಗೋಕುಲವನ್ನು ಇನ್ನೂ ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಳು. ಗೋಪಿಕೆಯರು ಎಲ್ಲಿಂದಲೋ ಕಲ್ಲು ಬಂದು ಬಿದ್ದರೂ ಕೃಷ್ಣಾ ಎಂದು ಹುಡುಕಿ ಹೊರಟು, ಅವನನ್ನು ಕಾಣದೆ, ಕಲ್ಲು ತೂರಿದ ತುಂಟ ಮಕ್ಕಳನ್ನು ಹೊಡೆಯುತ್ತಿದ್ದರು.

ಆಗ ಯಶೋದೆಗೆ ಒಬ್ಬ ಗೋಪಿಕೆ ಇಡೀ ಗೋಕುಲ ದುಃಖದಲ್ಲಿ ಮುಳುಗಿದೆ, ಆದರೆ ರಾಧೆಯೊಬ್ಬಳು ಸಂತೋಷದಿಂದ ಇದ್ದಾಳೆ ಎನ್ನುವ ಸುದ್ದಿಯನ್ನು ಮುಟ್ಟಿಸುತ್ತಾಳೆ. ಅದನ್ನು ಕೇಳಿ ಯಶೋದೆ, ‘ಇದು ಸಾಧ್ಯವೇ ಇಲ್ಲ. ಎಲ್ಲರಿಗಿಂತ ಹೆಚ್ಚು ಕೃಷ್ಣನನ್ನು ಹಚ್ಚಿಕೊಂಡಿದ್ದು ರಾಧೆಯೇ. ಹಾಗಿದ್ದೂ ಅವಳು ಸಂತೋಷದಿಂದ ಇರಲು ಹೇಗೆ ಸಾಧ್ಯ?’ ಎನ್ನುತ್ತಾ ರಾಧೆಯನ್ನು ನೋಡಲು ಬರುತ್ತಾಳೆ. ನಿಜ ರಾಧೆ ಅತ್ಯಂತ ಸಂತೋಷಭರಿತಳಾಗಿದ್ದಾಳೆ. ಯಶೋದೆ ರಾಧೆಯನ್ನು ಪ್ರಶ್ನಿಸುತ್ತಾಳೆ, ‘ಕೃಷ್ಣನಿಲ್ಲದ  ಗೋಕುಲದಲ್ಲಿ ನೀನು ಸಂತಸದಿಂದ ಇರಲು ಹೇಗೆ ಸಾಧ್ಯ?’ ಎಂದು. ಕ್ಷಣಕಾಲ ಗಂಭೀರಳಾದ ರಾಧೆ ಕೇಳುತ್ತಾಳೆ, ‘ಯಾರು ಹೇಳಿದ್ದು ಕೃಷ್ಣ ಗೋಕುಲದಲ್ಲಿ ಇಲ್ಲವೆಂದು?’ ಯಶೋದೆ, ‘ನಾವೆಲ್ಲಾ ಅವನು ಊರು ಬಿಟ್ಟಿದ್ದನ್ನು ನೋಡಿದ್ದೇವೆ. ಅಲ್ಲಲ್ಲ ನಾವೇ ಅವನನ್ನು ಕಳಿಸಿದ್ದೇವೆ. ಹಾಗಿದ್ದು ಇದೆಂಥಾ ಪ್ರಶ್ನೆ ರಾಧೆ?’ ಎನ್ನುತ್ತಾಳೆ.

ಯಮುನೆಯ ದಡದಲ್ಲಿ ಕೃಷ್ಣನ ಪಾದವನ್ನು ತಾಕಿದ ಮರಳಲ್ಲಿ ಅವನ ಕಾಲಿನ ಬಿಸುಪಿದೆ, ಅವನ ಪಾದ ತೊಳೆದ ಯಮುನೆ ಧನ್ಯತೆಯನ್ನುಳಿಸಿಕೊಂಡಿದ್ದಾಳೆ, ಈ ತಮಾಲ ವೃಕ್ಷವಿದೆಯಲ್ಲಾ ಇದಕ್ಕೆ ಹಾಕಿರುವ ಉಯ್ಯಾಲೆ ಅವನ ಕೈಗಳ ಸ್ಪರ್ಶಕ್ಕೆ ಪುಳಕಿತವಾಗಿದೆ... ನನಗೆ ಕಣ್ಣು ಹಾಯಿಸಿದ ಕಡೆಯೆಲ್ಲಾ ಕೃಷ್ಣನೇ ಕಾಣುತ್ತಿದ್ದಾನೆ’ ಎನ್ನುತ್ತಾಳೆ. ಅವಳ ಮಾತಿಗೆ ಯಶೋದೆ, ‘ಅಯ್ಯೋ ಹುಚ್ಚಮ್ಮಾ ಭ್ರಮೆಯಲ್ಲಿ ಬದುಕುತ್ತಿದ್ದೀಯಲ್ಲಾ? ಕೃಷ್ಣ ನಮ್ಮನ್ನು ಬಿಟ್ಟುಹೋಗಿದ್ದಾನೆ’ ಎನ್ನುತ್ತಾಳೆ.

‘ಅಮ್ಮಾ ಯಶೋದೆ, ಕೃಷ್ಣ ನನಗೆ ಉಸಿರಿನ ಕಣಕಣದಲ್ಲೂ ಗೋಚರಿಸುತ್ತಿದ್ದಾನೆ. ಅವನೆಲ್ಲೋ ಇದ್ದಾನೆ ಎಂದುಕೊಂಡು ನಾನೇಕೆ ದುಃಖಿಸಲಿ? ಅವನ ಲಕ್ಷ್ಯವನ್ನು ತಲುಪಲು ಅಡ್ಡಿಮಾಡಲು ನನಗೇನು ಅಧಿಕಾರ? ನನ್ನದೇನಿದ್ದರೂ ಪ್ರೀತಿ ಮಾತ್ರ. ನನ್ನ ಒಳಜಗತ್ತಿನಲ್ಲಿ ಅವನನ್ನು ಇರಿಸಿಕೊಂಡುಬಿಟ್ಟರೆ ದುಃಖ ಇರುವುದಿಲ್ಲ’ ಎನ್ನುತ್ತಾಳೆ. 

ಯಶೋದೆಗೆ ಈ ಮಾತು ನಿಜ ಅನ್ನಿಸುತ್ತದೆ. ಆದರೆ ತನಗೇಕೆ ರಾಧೆಯಷ್ಟು ನಿರಾಳವಾಗಿ ಇರಲು ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆ ಕಾಡಿ ಕೇಳುತ್ತಾಳೆ, ‘ನಿಜ ಹೇಳು ರಾಧೆ ನಿನ್ನ ಹಾಗಿರಲು ನಾನೇನು ಮಾಡಲಿ?’ ನಕ್ಕ ರಾಧೆ, ‘ಕಳೆದುಕೊಂಡದ್ದರ ಬಗ್ಗೆ ದುಃಖ ಬೇಡ, ಪಡೆದುಕೊಂಡ ಒಳ್ಳೆಯದನ್ನು ಮಾತ್ರ ಧ್ಯಾನಿಸು. ಕೃಷ್ಣ ನಿನ್ನ ಮಗ. ಈ ಪ್ರೀತಿ ಸಾಧನೆಗೆ ಅಡ್ಡಿಯಾಗಬಾರದು’ ಎಂದಳು. ಮಿಂಚಿನಂತೆ ಆ ವಾಕ್ಯ ಯಶೋದೆಯ ಕಣ್ಣನ್ನು ತೆರೆಸಿತು, ‘ಕೃಷ್ಣ ನನ್ನ ಪಾಲಿಗೆ ಎಂಥಾ ಮಧುರಾನುಭೂತಿ, ಅದಕ್ಕಾಗೆ ನನ್ನ ಬಳಿ ಅವನು ಬಂದಿದ್ದ ಎನ್ನುವುದನ್ನು ನಾನೇಕೆ ಮರೆತೆ?’ ಎಂದು, ರಾಧೆಯನ್ನು ಬಿಗಿದಪ್ಪಿ, ‘ಮಗೂ ನಿನ್ನ ಸಂತಸ ಈಗ ನನ್ನದೂ ಆಯಿತು’ ಎಂದಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT