ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಬಲ್ಲವರಿಂದ ಕಲಿಯುವ ವಿನಯದ ಗುಣ

Published 5 ಜೂನ್ 2024, 0:21 IST
Last Updated 5 ಜೂನ್ 2024, 0:21 IST
ಅಕ್ಷರ ಗಾತ್ರ

ನೀಲಗಾರ ಮೇಳದವರು ಹೇಳಿದ ನೀತಿ ಕಥೆಯಿದು. ಕಲ್ಯಾಣ ಪಟ್ಟಣದಲ್ಲಿ ಬಸವಣ್ಣನವರು ಒಕ್ಕಳ ಅಕ್ಕಿ, ಒಂದು ಬದನೆಕಾಯಿ, ಒಂದು ಮಾನ ತೊಗರಿಬೇಳೆಯಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಶರಣರಿಗೆ ದಾಸೋಹ ನಡೆಸುತ್ತಿರುತ್ತಾರೆ. ಈ ಕಾರಣಕ್ಕೆ ಜನ ಬಸವೇಶ್ವರರನ್ನು ಹೆಚ್ಚಿನ ಗುರು ಎಂದು ಹೊಗಳುತ್ತಿದ್ದರು. ಆದರೆ ಬಸವಣ್ಣನವರ ಅಂತರಂಗದಲ್ಲಿ ಬೇರೆಯದೆ ಚಿಂತೆಯಿತ್ತು. ತಮ್ಮ ಮಡದಿ ಬಳಿ ನಮಗಿಂತ ಹೆಚ್ಚಿನ ಗುರು ಇಲ್ಲವಲ್ಲೇ ನೀಲಲೋಚನೆ ಎಂದು ತಮ್ಮ ನೋವನ್ನು ಆಗಾಗ ತೋಡಿಕೊಳ್ಳುತ್ತಿದ್ದರು. ಒಮ್ಮೆ ನೀಲಮ್ಮನವರು ‘ನಿಮಗಿಂತ ಹೆಚ್ಚಿನ ಗುರು ಇದ್ದಾರೆ. ಅವರು ಸಿಗಬೇಕಾದರೆ ಆನೆ ಗಾತ್ರದ ಪಂಚಲೋಹದ ಗಂಟೆ ಮಾಡಿಸಿ, ಅದಕ್ಕೆ ನಾಲಿಗೆ ಇಡಿಸದೆ ಊರ ಕಡೆಬಾಗಿಲಲ್ಲಿ ನೇತು ಹಾಕಿ. ಅಂತಹ ಗುರು ಒಬ್ಬರು ಬಂದಾಗ ನಾಲಿಗೆಯಿಲ್ಲದ ಗಂಟೆ ಸಪ್ತನಾದ ಮಾಡುತ್ತದೆ’ ಎಂದರಂತೆ. ಅದರಂತೆ ಬಸವಣ್ಣ ಪಟ್ಟಣದ ಹೆಬ್ಬಾಗಿಲಿಗೆ ಗಂಟೆ ತೂಗು ಹಾಕಿಸಿ ಇತ್ತ ತಪಸ್ಸಿಗೆ ಕೂತರು. ಇವರ ಭಕ್ತಿ ಪರೀಕ್ಷಿಸಲು ಪ್ರಭುದೇವರು ಸೋತ ಕೈಗಳ ಹೊತ್ತು, ಕುಂಟು ಕಾಲಲ್ಲಿ, ಕಣ್ಣು ಕುರುಡಾಗಿಸಿಕೊಂಡು, ಸತ್ತ ಬಸವನ ಚರ್ಮ ಹೊದ್ದು, ಸತ್ತ ಎಮ್ಮೆಯ ಕರು ಹೆಗಲ ಮೇಲೆ ಹೊತ್ತು ಹೆಬ್ಬಾಗಿಲ ಸಮೀಪ ಬಂದರಂತೆ. ಅಲ್ಲೇ ಇದ್ದ ಹರಳಯ್ಯನವರ ಬೂದಿಗುಡ್ಡೆಯ ಮೇಲೆ ಕೂತು ಭಂಗಿಫಲಾಹಾರ ಸೇವಿಸುತ್ತಾ ಕೂತಾಗ ಸತ್ತಿದ್ದ ಎಮ್ಮೆಯ ಕರು ಎದ್ದು ಹುಲ್ಲು ಮೇಯತೊಡಗಿತ್ತು. ಆಗ ನಾಲಿಗೆ ಇಲ್ಲದ ತೂಗು ಗಂಟೆ ಸಪ್ತನಾದ ಮಾಡಿತು. ಶಿವಗಣಗಳಿಗೆ ದಾಸೋಹ ಮಾಡಿಸುತ್ತಿದ್ದ ಬಸವಣ್ಣನವರಿಗೆ ಈ ಗಂಟೆಯ ನಿನಾದ ಆಗ ಕೇಳಿಸಲಿಲ್ಲವಂತೆ.

ಆಗ ಅಯ್ಯ ಹಸಿವಾಗಿದೆ ಪಟ್ಟಣದೊಳಗೆ ಬಿಡಿ ಎಂದು ಪ್ರಭುದೇವರು ಕಾವಲಿನವನಿಗೆ ಕೋರಿಕೊಂಡರಂತೆ. ಕಾವಲಿಗ ಪಟ್ಟಣದೊಳಗೆ ಪ್ರವೇಶಿಸಲು ಬಿಡದೆ, ಮೂರು ಗುದ್ದು ಹಾಕಿ ಹಿಂದಕ್ಕೆ ತಳ್ಳಿದನಂತೆ. ಆಗ ಗಂಟೆ ಮತ್ತೆ ನಾದ ಮಾಡತೊಡಗಿತು. ದನಿ ಕೇಳಿ ಓಡಿ ಬಂದ ಬಸವಣ್ಣ ಗುರುಕಾಲಿಗೆ ಎರಗಿ ತಮ್ಮ ಗುರು ಮಠಕ್ಕೆ ಬರುವಂತೆ ಪ್ರಾರ್ಥಿಸಿದರು. ನಾ ಬಂದರೆ ನಿಮ್ಮ ಗುರುಮಠ ಲಯವಾಗಿ, ಕಲ್ಯಾಣ ಪಟ್ಟಣ ಹಾಳಾಗಿ ಹೋಗುತ್ತದೆ ಎಂದರೂ ಬಸವಣ್ಣ ಗುರುವನ್ನು ಬಿಡಲಿಲ್ಲ. ನೀವು ದಯಮಾಡಿಸಲೇಬೇಕು ಎಂದು ಪಾದ ಹಿಡಿದರು. ಆಗ ಪಾದಗಳೇ ಕಿತ್ತು ಬಂದವು. ರಟ್ಟೆ ಹಿಡಿದಾಗ ರಟ್ಟೆಗಳು ಮುರಿದವು. ರುಂಡ ಮುಟ್ಟಿದಾಗ ಅದೂ ಕಿತ್ತು ಬಂತು. ಕೊನೆಗೆ ಗುರುವಿನ ದೇಹವನ್ನು ಕಾವಿ ಬಟ್ಟೆಯಲ್ಲಿ ಗಂಟು ಕಟ್ಟಿ ತಲೆ ಮೇಲೆ ಹೊತ್ತು ತಂದು ನಂದಿ ಮಂಚದ ಮೇಲಿಟ್ಟರು.

ನಂತರ ನಿಮ್ಮ ನಿಜರೂಪ ತೋರಬೇಕು ಧರ್ಮಗುರುವೇ ಎಂದು ಬಸವಣ್ಣ ಕೋರಿದರು. ಇವರ ಭಕ್ತಿಗೆ ಮೆಚ್ಚಿದ ಪ್ರಭುದೇವರು ಬಸವಣ್ಣನವರಿಗೆ ಪರಂಜ್ಯೋತಿ ಎಂದು ಹರಸಿ ‘ನಿಮ್ಮ ಬಳಿ ಇರುವ ಕಾಲಜ್ಞಾನ ಪುಸ್ತಕವನ್ನು ನನಗೆ ಕೊಡಿ’ ಎಂದು ಕೇಳಿ ಪಡೆಯುತ್ತಾರೆ. ‘ಕಲ್ಯಾಣ ಪಟ್ಟಣವನ್ನು ನೀವೇ ಆಳಿ. ನಾವು ಅಲೆಮಾರಿಯಾಗಿ ಹೋಗಲು ಅನುಮತಿ ಕೊಡಿ’ ಎಂದು ಹೊರಟು ಹೋಗುತ್ತಾರೆ. ತನಗಿಂತ ಕಿರಿಯರಿಲ್ಲ ಎಂಬ ವಿನಮ್ರತೆ ಹೊಂದಿದ್ದ ಬಸವಣ್ಣ ಅರಿವು ಕೊಡಬಲ್ಲ ದೊಡ್ಡ ಗುರುವಿನ ಆಗಮನಕ್ಕೆ ಕಾಯುವುದೇ ವಿಶೇಷ. ಹಾಗೆಯೇ ತಾನೇ ಶ್ರೇಷ್ಠನೆಂಬ ಅಹಮ್ಮಿಕೆ ಇಲ್ಲದ ಪ್ರಭುದೇವರು ಬಸವಣ್ಣನಿಂದ ಕೇಳಿ ಪಡೆದಿದ್ದೂ ಕೂಡ ಜ್ಞಾನದ ಪುಸ್ತಕ. ತಮ್ಮೊಳಗಿನ ಅಹಂಕಾರ ತೊರೆದು ಬಲ್ಲವರಿಂದ ಕಲಿಯಬೇಕೆಂಬ ಹಂಬಲದ ಈ ಕಥೆ ಅಚ್ಚರಿ ಹುಟ್ಟಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT