ಈ ದೇಶಕ್ಕೆ ಸ್ವಾತಂತ್ರ್ಯ ಒಬ್ಬರಿಂದ ಬರಲಿಲ್ಲ. ಗಾಂಧಿ ಎನ್ನುವ ಮಾಂತ್ರಿಕ ತನ್ನ ವಿಚಾರದಿಂದ ಇಡೀ ದೇಶವನ್ನೇ ಸೆಳೆದುಕೊಂಡು ಸಂಗ್ರಾಮವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದರು. ಹಲವರ ಬಲಿದಾನದಿಂದ ಬಂದ ಇತಿಹಾಸವನ್ನು ಯಾರೂ ಸಮಗ್ರವಾಗಿ ಬರೆದಿಟ್ಟಿಲ್ಲ. ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ ತೆರೆಮರೆಯಲ್ಲೇ ಉಳಿದ ಎಲ್ಲ ಮಹನೀಯರನ್ನೂ ನಾವು ನೆನೆಯಬೇಕಿದೆ. ಕರ್ನಾಟಕದಲ್ಲೂ ಇಂಥ ಪ್ರಾತಃಸ್ಮರಣೀಯರು ಹಲವರಿದ್ದಾರೆ. ಸಂಗ್ರಾಮದ ಬಹುಮುಖ್ಯ ಭಾಗವಾಗಿ ಬ್ರಿಟಿಷ್ ಸರ್ಕಾರಿ ಕಚೇರಿಯ ಮೇಲೆ ತಿರಂಗದ ಬಾವುಟ ಹಾರಿಸುವ ಕರೆ ದೇಶದಾದ್ಯಂತ ಹಬ್ಬುತ್ತದೆ. ಬೆಳಗಾವಿ ಜಿಲ್ಲೆ ಗೋಕಾಕದ ಪಾರವ್ವ ಎನ್ನುವ ದೇವದಾಸಿ ಮಹಿಳೆಯ ಮನೋಜ್ಞ ಕಥೆ ನನ್ನನ್ನು ಅವತ್ತಿನಿಂದಲೂ ಕಾಡುತ್ತಲೇ ಇದೆ. ಅದನ್ನು ನನಗೆ ಹೇಳಿದವರು ಸ್ವತಃ ಸ್ವಾತಂತ್ರ್ಯ ಸಂಗ್ರಾಮ, ಗಾಂಧೀಜಿಯವರನ್ನು ಕಂಡ ಬೆಳಗೆರೆ ಕೃಷ್ಣಶಾಸ್ತ್ರಿಗಳು.

ಹೀಗೊಬ್ಬ ಸ್ವಾತಂತ್ರ್ಯ ಹೋರಾಟಗಾರ್ತಿ ಸವದತ್ತಿಯಲ್ಲಿದ್ದಾರೆಂದು ತಿಳಿದು ಪರ್ಯಟನಾಪ್ರಿಯರಾದ ಶಾಸ್ತ್ರಿಗಳು ಅಲ್ಲಿಗೆ ಹೋಗುತ್ತಾರೆ. ಅವರು ಭೇಟಿಯಾಗುವ ಹೊತ್ತಿಗೆ ಪಾರವ್ವ ಹಣ್ಣು ಹಣ್ಣು ಮುದುಕಿ. ಆಕೆಯನ್ನು ಮಾತಾಡಿಸಿ ಸಂಗ್ರಾಮದಲ್ಲಿ ಅವರ ಹೋರಾಟದ ಕಥೆಯನ್ನು ಹೇಳುವಂತೆ ಒತ್ತಾಯಿಸುವವರೆಗೂ ಆಕೆ ಅದನ್ನು ಹೇಳಲೂ ಇಲ್ಲ. ‘ನೀವು ಜೈಲಿಗೆ ಹೋಗಿದ್ದಿರಲ್ಲಾ’ ಎಂದು ಲೋಕಾಭಿರಾಮವಾಗಿ ಮಾತಾಡಲು ಆರಂಭಿಸಿದಾಗ ಆಕೆ ತನ್ನ ಬಗ್ಗೆ ಹೇಳಿಕೊಳ್ಳಲು ಆರಂಭಿಸುತ್ತಾರೆ. ‘ಹೌದಾ! ಜೈಲಿಗೆ ಹೋಗಿದ್ದಾಕಿ ನಾ. ಆಗ ಗಾಂಧೀ ಮಂದಿ ನಮ್ಮ ಗೋಕಾಕಕ್ಕ ಬಂದು ಈ ದೇಶ ನಮ್ಮ ಸ್ವತ್ತು, ಇಲ್ಲಿ ಬ್ರಿಟಿಷರ ಬಾವುಟ ಅಲ್ಲ; ನಮ್ಮ ತಿರಂಗ ಹಾರಿಸಬೇಕು ಅಂತ ಯೋಚನೆ ಮಾಡ್ಲಿಕ್ಕ ಹತ್ತಿದ್ರು. ಆ ಸಮಯಕ್ಕ ಯಾಂವ ಮೀಸೆ ಹೊತ್ತ ಗಂಡಸೂ ಮುಂದ ಬರಲಿಲ್ಲ. ನಾ ಮುಂದ ಹೋಗಿ ಗಾಂಧೀ ಮಂದಿ ಕೈಲ್ಲಿದ್ದ ಬಾವುಟ ತಗೊಂಡು ಕಚೇರಿ ಹತ್ತಿ ಹಾರಿಸಿಯೇಬಿಟ್ಟೆ... ನಾನೇನೋ ಬಾವುಟ ಹಾರಿಸಿಬಿಟ್ಟೆ, ಕೆಳಗಿಳಿದು ಬಂದ್ರೆ ಪೊಲೀಸರು ಕಾದಿದ್ರು. ‘ನೀ ಅರೆಸ್ಟಾಗಿದ್ದೀಯ ನಡೀ ಜೈಲಿಗೆ’ ಅಂದ್ರು. ನಾ ಅಂಜುವಾಕೀನಾ ಹೊಂಟೇಬಿಟ್ಟೆ. ಜೈಲು ಶಿಕ್ಷೆ ಕಾಯಂ ಆಯ್ತು’ ಎಂದು ನೆನಪುಗಳನ್ನು ಕೆದಕಿ ಕುಳಿತರಂತೆ. ಮುಪ್ಪಿನ ವಯಸ್ಸು ದೇವದಾಸಿಯಾದ್ದರಿಂದ ನೋಡಲಿಕ್ಕೆ ಮಕ್ಕಳು ಮರಿ ಇರಲಿಲ್ಲ. ಜೀವನ ನಡೆಸುವುದೂ ಹರಸಾಹಸವಾಗಿದ್ದರೂ ಆಕೆ ಸರ್ಕಾರದಿಂದ ಪಿಂಚಣಿ ತೆಗೆದುಕೊಳ್ಳಲು ನಿರಾಕರಿಸಿದ್ದರೆಂದು ಕೇಳಿದ್ದ ಶಾಸ್ತ್ರಿಗಳು ಅದು ಯಾಕೆನ್ನುವ ಕುತೂಹಲದೊಂದಿಗೆ, ‘ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ಕೊಡ್ತಾರೆ, ನೀವ್ಯಾಕೆ ಅರ್ಜಿ ಹಾಕಲಿಲ್ಲ. ಆ ಸೌಲಭ್ಯ ಪಡೆದಿದ್ದರೆ ನಿಮಗೆ ಜೀವನಕ್ಕೆ ಅನುಕೂಲವಾಗುತ್ತಿಲ್ಲವೇ’ ಎನ್ನುತ್ತಾರೆ. ಬೇಸರ, ತಿರಸ್ಕಾರ, ಸಿಟ್ಟು ಬೆರೆತ ಧ್ವನಿಯಲ್ಲಿ ಪಾರವ್ವ, ‘ಸರ್ಕಾರದಿಂದ ಹಣ ಕೇಳಲಿಕ್ಕೆ ಆ ದಿನ ನಾನು ಕೂಲಿಗೆ ಹೋಗಿದ್ನೇನು? ಜೀವನ ಹೇಗೂ ನಡೆಯುತ್ತೆ. ನೋಡಿಕೊಳ್ಳಲು ಯಾರೂ ಇಲ್ಲ ನಿಜ, ಹಾಗಂತ ಪೆನ್ಶನ್ ಯಾಕೆ ತಗೊಳ್ಳಲಿ? ಪೆನ್ಶನ್ ಬರೋದು ಸರ್ಕಾರಿ ಸೇವೆ ಮಾಡಿದವರಿಗೆ. ನಾನು ಮಾಡಿದ್ದು ದೇಶಸೇವೆ’ ಎನ್ನುತ್ತಾರೆ. ಆಕೆಯ ದಿಟ್ಟತನ, ಧೀಮಂತ ನಿಲುವು, ಸ್ವಾಭಿಮಾನ ಎಲ್ಲವೂ ಬೆಳಗೆರೆ ಕೃಷ್ಣಶಾಸ್ತ್ರಿಗಳಲ್ಲಿ ಬೆರಗು ಮೂಡಿಸುತ್ತದೆ. ತಾನು ಮಾಡಿದ್ದು ದೇಶಸೇವೆ ಅದಕ್ಕೆ ಹಣ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಭಾವಿಸಿದ ಪಾರವ್ವನಂಥವರ ಎದುರು ಸುಮ್ಮನೆ ಮೂರು ತಲೆಮಾರಿಗಾಗುವಷ್ಟು ಇದ್ದರೂ ಸುಳ್ಳು ಹೇಳಿ ಸ್ವಾತಂತ್ರ್ಯ ಹೋರಾಟದಲ್ಲಿದ್ದೆವು ಎಂದು ಮಾಶಾಸನ ತೆಗೆದುಕೊಳ್ಳುವ ದೊಡ್ಡ ದೊಡ್ಡವರನ್ನು ನೆನೆಸಿಕೊಳ್ಳುತ್ತಾ, ಪಾರಜ್ಜಿ ಎಂಥಾ ದೊಡ್ಡವ್ಯಕ್ತಿಯಾಗಿ ಕಂಡರೆಂದು ಅವರು ಭಾವಪೂರ್ಣವಾಗಿ ಹೇಳಿದ್ದರು.

ದೇಶ ಪ್ರೇಮ ಎನ್ನುವುದು ಖಂಡಿತಾ ತೋರುಗಾಣಿಕೆಯ ಸಂಗತಿಯಲ್ಲ. ತಾವೊಂದು ದೊಡ್ಡ ಕೆಲಸದಲ್ಲಿ ಭಾಗಿಗಳು ಎಂದು ಭಾವಿಸಿದ ಇಂಥಾ ಪಾರವ್ವಗಳು ನಮ್ಮ ಮಧ್ಯೆ ಬಹಳಷ್ಟು ಜನರಿದ್ದಾರೆ. ಇವರೆಲ್ಲರ ಶ್ರಮದಿಂದ ಬಂದ ಸ್ವಾತಂತ್ರ್ಯದ ಫಲಾನುಭವಿಗಳಾದ ನಾವು ಸ್ವಾರ್ಥಿಗಳಾಗಿ ಸೇವೆಯ ಹೆಸರಲ್ಲಿ ಹಣ ಆಸ್ತಿಯ ಲಾಲಸೆಯಲ್ಲಿ ಮುಳುಗಿದ್ದೇವೆ ಎನ್ನುವುದೇ ವಿಪರ್ಯಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.