ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಲಜ್ಜೆ ಅನ್ನುವುದು ಇರಬೇಕು...

Published 25 ಏಪ್ರಿಲ್ 2024, 19:55 IST
Last Updated 25 ಏಪ್ರಿಲ್ 2024, 19:55 IST
ಅಕ್ಷರ ಗಾತ್ರ

ಹುಡುಗಿ ನೋಡಲು ಬಂದಿದ್ದಾನೆ ಹುಡುಗ. ಹುಡುಗನ ಕಣ್ಣು ‌ಒಳಕೋಣೆಯ ಕಡೆಗೇ ನೆಟ್ಟು ನಿಂತಿವೆ. ಅವು ಅಲ್ಲೇ ನಿಂತಿವೆ ಎಂದು ಅಲ್ಲಿರುವವರಿಗೆ ಗೊತ್ತಾಗಬಾರದೆಂದು ಕಳ್ಳಾಟ ಆಡುತ್ತಿವೆ...

ಆ ಕಡೆ ಕೈಬಳೆ ಸಣ್ಣಗೆ ಸದ್ದು ಮಾಡುತ್ತವೆ. ಕಳ್ಳಕಣ್ಣು ದನಿ ಬಂದ ಕಡೆಗೆ ಹೊರಳುತ್ತವೆ. ಆಹ್... ಹಗುಹಗೂರ ಹೆಜ್ಜೆಯಿಡುತ್ತಾ ಬಂದೇ ಬಿಟ್ಟಳು ಹಂಸಗಮನೆ. ಹುಡುಗ ಮೆಲ್ಲಗೆ ಕಣ್ಣೆತ್ತಿ ನೋಡಿದ. ಅದೊಂದು ಅಮೃತ ಗಳಿಗೆ. ಆ ಸಣ್ಣ ಹೊತ್ತನ್ನು ಜೀವಮಾನವಿಡೀ ಎದೆಯಲ್ಲಿ ಎತ್ತಿಟ್ಟುಕೊಳ್ಳಬೇಕು, ಅಂಥಾ ಮಧುರ ಕ್ಷಣ. ಆಗಲೇ ಅವಳೂ ಅವನ ಕಣ್ಣುಗಳನ್ನು ನೋಡಿಬಿಟ್ಟಳು. ಕಣ್ಣುಗಳು ಒಂದರೆಕ್ಷಣ ಭೇಟಿಯಾದವಷ್ಟೇ. ಆಗ ಆ ಹುಡುಗಿಯ ಚಿಗರೆ ಕಂಗಳಲ್ಲಿ ಇಣುಕಿ ಹೋದದ್ದೇನು?

ಅದು ಲಜ್ಜೆ...

ವರ ಬಂದು ಹೋದ ಮೇಲೆ ಮನೆಯ ದೊಡ್ಡವರು ಮಗಳನ್ನು ಕೇಳಿದರು- ‘ಏನಂತೀಯಾ ಮಗಳೇ?’ ಏನು ಮಾತಾಡಿಯಾಳು ಏಳುಮಲ್ಲಿಗೆ ಸುಕುಮಾರಿ? ತಟ್ಟನೆ ಮುಖ ಮುಚ್ಚಿಕೊಂಡು ಅಲ್ಲಿಂದ ಎದ್ದು ಓಡಿದಳು. ಅರ್ಥವಾಯಿತು ಅವರಪ್ಪ ಅಮ್ಮನಿಗೆ. ಅವಳು ಮಾತೇ ಆಡಲಿಲ್ಲ ಏಕೆ?

ಲಜ್ಜೆ...

ಹಳೇ ಕನ್ನಡ ಸಿನಿಮಾದ ಒಂದು ದೃಶ್ಯದಂತಿದೆ ಅಲ್ಲವೇ ಇದು? ಹೌದು, ಇದೆಲ್ಲಾ ಆ ಕಾಲದ್ದೇ. ನಾವೆಲ್ಲಾ ಚಿಕ್ಕವರಾಗಿದ್ದಾಗ ಈ ಲಜ್ಜೆಯ ಬಗೆಬಗೆ ವಿನ್ಯಾಸಗಳನ್ನು ನೋಡುತ್ತಿದ್ದೆವು. ಈಗ ಇಲ್ಲ, ಅಷ್ಟಿಲ್ಲ. ಶೃಂಗಾರ ರಸದ ಅವಾಙ್ಮಯ ಅಭಿವ್ಯಕ್ತಿ ಈ ಲಜ್ಜೆ. ನಾಚಿಕೆ ಅಂತಲೂ ಅನ್ನುತ್ತಾರೆ ಇದಕ್ಕೆ.

ಇದು ಹೆಣ್ಣನ್ನು ಮತ್ತಷ್ಟು ಹೆಣ್ಣಾಗಿಸುವ ಅಭೌತಿಕ ಆಭರಣ ಹಾಗೆ ಹೀಗೆ ಅಂತ ನಮ್ಮ ಕವಿಗಳು ಬೇಕಾದಷ್ಟು ವರ್ಣಿಸಿದ್ದಾರೆ. ನಾಚಿಕೆ ವೈಯಾರಗಳಿಲ್ಲದಿದ್ದರೆ ನಾಟಕ ಸಿನಿಮಾಗಳಲ್ಲಿ ಶೃಂಗಾರವೇ ಇಲ್ಲ. ಕವಿಗಳಿಗೆ ಕೆಲಸವೇ ಇಲ್ಲ.

ಈಗ ಹಾಗಿಲ್ಲ. ಈ ಲಜ್ಜೆ ಎಂಬುದು ಅಪರೂಪಕ್ಕೂ ಕಾಣಸಿಗುವುದಿಲ್ಲ. ಇರಲಿ ಬಿಡಿ. ಅದೊಂದು ಕಾಲಮಾನ. ಈಗ ಅದಿಲ್ಲ ಅಂತ ಪರಿತಪಿಸುವುದು ಬೇಡ.

ಲಜ್ಜೆ ಅಂದರೆ ಅದು ಮಾತ್ರವಲ್ಲ. ಇನ್ನೂ ಒಂದಿದೆ. ಅದೊಂದು ಸಾಮಾಜಿಕ ಶೀಲ. ಅದು ಬರೀ ಸ್ತ್ರೀಯರಿಗೆ ಮಾತ್ರವಲ್ಲ. ಸ್ತ್ರೀ ಪುರುಷರೆಲ್ಲರಿಗೂ ಇರಬೇಕಾದದ್ದು. ಆಡಬಾರದ್ದನ್ನು ಆಡಿ, ಮಾಡಬಾರದ್ದನ್ನು ಮಾಡಿ ಮತ್ತೆ ಮುಖ ತೋರಿಸಿಕೊಂಡು, ಮೀಸೆ ತಿರುಗಿಸಿಕೊಂಡು ತಿರುಗಾಡಿದರೆ ಅಲ್ಲಿ ಲಜ್ಜೆ ಇಲ್ಲ. ತಪ್ಪು ಮಾಡಿದವನು, ತಪ್ಪಿಗೆ ತೆರ ಕೊಟ್ಟವನು, ನ್ಯಾಯಸ್ಥರ ಕೈಯಲ್ಲಿ ಛೀಮಾರಿ ಹಾಕಿಸಿಕೊಂಡವನು, ಅತ್ಯಾಚಾರ, ಅನಾಚಾರ, ವ್ಯಭಿಚಾರ ಮಾಡಿದವನು, ಯೋಗ್ಯತೆ ಇಲ್ಲದೆ ಹೊಗಳಿಸಿಕೊಂಡವನು, ತನ್ನ ಮೂರ್ಖತನಕ್ಕೆ ಕೊರಗದವನು, ಶತ್ರುಗಳಿಗೆ ಬೆನ್ನು ತಿರುಗಿಸಿದವನು, ಸಾರ್ವಜನಿಕವಾಗಿ ಮೆರೆದಾಡುತ್ತಾನೆಂದರೆ ಅಲ್ಲಿ ಲಜ್ಜೆಯಿಲ್ಲ. ಇಂಥವರನ್ನು ನಿರ್ಲಜ್ಜರು, ಅಥವಾ ಲಜ್ಜಾಹೀನರು ಅನ್ನುತ್ತಾರೆ. ಇವರು ಹೆಚ್ಚಾಗಿರುವ ಕುಟುಂಬ, ಸಮಾಜ, ದೇಶಕ್ಕೆ ಗೌರವ ಬರುವುದಿಲ್ಲ.

ವ್ಯಕ್ತಿಗೆ ಶೀಲ ಅನ್ನುವುದು ಇರುವಂತೆಯೇ, ಸಮಾಜಕ್ಕೂ, ದೇಶಕ್ಕೂ, ಭಾಷೆಗೂ, ಬದುಕಿಗೂ ಶೀಲ ಅಂತ ಒಂದಿರುತ್ತದೆ. ಈ ಲಜ್ಜೆಯೂ ಕೂಡಾ ಒಂದು ಸಾಮಾಜಿಕ ಶೀಲ. ಶೀಲವೇ ಇಲ್ಲದ ಸಿರಿವಂತಿಕೆ, ಭೋಗ, ಅಧಿಕಾರ ಇವೆಲ್ಲಾ ಗೌರವಾರ್ಹವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT