ಪ್ರತಿಯೊಬ್ಬ ಮನುಷ್ಯನೂ ಪದೇ ಪದೇ ಬಯಸುವ ಒಂದು ವಿಷಯ ಇರುತ್ತದೆ, ಪರಿಸರ ಇರುತ್ತದೆ; ಜಗತ್ತಿನ ಜೊತೆಗಿನ ಸಂಘರ್ಷದಿಂದಲೇ ಅದು ರೂಪಿತವಾಗಿರುತ್ತದೆ. ಹೀಗೆ ಮನುಷ್ಯ ತನ್ನ ಜಗತ್ತನ್ನು ತಾನೇ ಕಟ್ಟಿಕೊಳ್ಳಲಿಕ್ಕೆ, ತನ್ನ ಒಳಗೆ ಮತ್ತು ಹೊರಗೆ ತುಂಬಾ ಅಪರೂಪದ ಸಂಗತಿಗಳ ಜೊತೆ ಮಾತಾಡಬೇಕಾಗುತ್ತದೆ. ತಾನು ಬದುಕುವ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಮಥಿಸುವಾಗ ದುಃಖದ ದೊಡ್ಡ ಸಾಗರದ ಅಲ್ಲೋಲಕಲ್ಲೋಲವನ್ನು ತಾಳಿಕೊಳ್ಳಬೇಕಾಗುತ್ತದೆ. ಹೀಗೆಲ್ಲಾ ಆದರೆ ನಮಗೆ ನಾವೇ ಒಂದು ಜಗತ್ತನ್ನು ಸೃಷ್ಟಿ ಮಾಡಿಕೊಳ್ಳಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ. ಆದರೆ, ಹಾದಿ ಇದೆಯೆನ್ನುವುದು ಮಾತ್ರ ಸರ್ವವಿದಿತ. ನಿಜ; ನಾವು ಹಿಂದೆಲ್ಲಾ ಅನುಭವಿಸಿದ, ಅದರ ಮೂಲಕ ಕಲ್ಪಿಸಿಕೊಳ್ಳುತ್ತಿರುವ, ಅದಕ್ಕೆ ಹತ್ತಿರವಾಗುವ ಜಗತ್ತು ಇವತ್ತು ಸಿಗುತ್ತಿಲ್ಲ. ಸಿಗದ್ದನ್ನು ಸಾಧ್ಯ ಮಾಡಿಕೊಳ್ಳುವುದೇ ದೊಡ್ಡ ಸವಾಲು. ಮನುಷ್ಯ ನಿರ್ಮಿತವಾದ ಎಲ್ಲ ಗೆರೆಗಳು ಅಳಿಯದೆ ಸಹಜತೆ ದೊರಕುವುದಾದರೂ ಹೇಗೆ? ಸಹಜತೆಯಿಂದ ದೂರವಾದಾಗ ಮನುಷ್ಯನ ಮನಸ್ಸು ಮತ್ತೆ ಕೆರಳುತ್ತದೆ, ಯುದ್ಧಭೂಮಿಕೆಯೊಂದು ಸಿದ್ಧವಾಗುತ್ತದೆ. ಧರ್ಮ ಧರ್ಮದ ಮಧ್ಯೆ, ದೇಶ ದೇಶಗಳ ಮಧ್ಯೆ, ಜಾತಿ ಜಾತಿಯ ಮಧ್ಯ ಕೊನೆಗೆ ಮನುಷ್ಯ ಮನುಷ್ಯರ ಮಧ್ಯೆ ಯುದ್ಧ ಸಿದ್ಧವಾಗುತ್ತದೆ. ಪ್ರತಿಕ್ಷಣವೂ ವಿನಾಶವನ್ನು ಬಗಲಲ್ಲೆ ಸಿಕ್ಕಿಸಿಕೊಂಡು ಓಡಾಡುತ್ತೇವೆ.

ಈ ಎಲ್ಲಾ ಅಂತರಗಳು ಅಳಿಯುವುದು ಹೇಗೆ? ಒಂದು ಸುಂದರ ಪ್ರಸಂಗ ನೆನಪಾಗುತ್ತದೆ. ಗೆಳೆಯ ಬೇಲೂರು ರಘುನಂದನ ತನ್ನ ಮಗನೊಂದಿಗೆ ದೇಶದ ಗಡಿ ಸಿಕ್ಕಿಂನ ನತುಲಾ ಪಾಸ್ಗೆ ಹೋಗಿರುತ್ತಾರೆ. ಅಲ್ಲಿಂದಾಚಿಗಿನದ್ದು ಚೀನಾ. ಉದ್ದಕ್ಕೂ ದೇಶಗಳನ್ನು ಬೇರ್ಪಡಿಸುವ- ರಕ್ಷಣೆಯ ಕಾರಣಕ್ಕಾಗಿ ಹಾಕಿರುವ -ಬೇಲಿಯ ಆಚೆಗೆ ಆ ದೇಶದ ಸೈನಿಕರು, ಈಚೆ ಬದಿ ನಮ್ಮವರು. ಇದ್ಯಾವುದನ್ನೂ ಅರ್ಥಮಾಡಿಕೊಳ್ಳಲಾಗದ ಆರು ವರ್ಷಗಳ ಪುಟ್ಟ ಹುಡುಗ ಗೋಕುಲಸಹೃದಯ ಬೇಲಿಯ ಆಚೆಗಿನ ಸೈನಿಕನಿಗೆ ಮೊದಲು ಹಸ್ತಲಾಘವ ಕೊಟ್ಟನಂತೆ. ಆ ಕಡೆಯ ಸೈನಿಕ ಕೂಡಾ ಖುಷಿಯಾಗಿ ಪ್ರತಿಕ್ರಿಯಿಸಿದ್ದಾನೆ. ಉತ್ತೇಜಿತನಾದ ಪುಟ್ಟ ಹುಡುಗ ಸೈನಿಕನಿಗೆ ಬೇಲಿಯನ್ನು ದಾಟಿ ಬರುವಂತೆ ಮನವಿ ಮಾಡಿಕೊಳ್ಳತೊಡಗಿದನಂತೆ. ತಂದೆ ಮಗನಿಗೆ ‘ಅವರು ಈ ಕಡೆಗೆ ಬರಬಾರದು’ ಎಂದು ತಿಳಿಹೇಳಿದರೂ ಕೆಡುಕಿನ ಕಲ್ಪನೆಯೇ ಇಲ್ಲದ ಅವನಿಗೆ ಅರ್ಥವಾಗಲಿಲ್ಲ. ‘ನೋಡು ನೋಡು, ಆ ಕಡೆಯಿಂದ ಗಾಳಿ ಬೀಸ್ತಾ ಇದೆಯಲ್ಲಾ? ಹಕ್ಕಿಗಳು ಹಾರಾಡ್ತಾ ಇವೆಯಲ್ಲಾ? ಇವರು ಮಾತ್ರ ಯಾಕೆ ಬರಬಾರದು’ ಎಂದನಂತೆ. ಭಾಷೆ ಅರ್ಥವಾಗದ ಆ ಸೈನಿಕ ‘ಹುಡುಗ ಏನು ಹೇಳ್ತಾ ಇದ್ದಾನೆ’ ಎಂದು ಕೇಳಿ ತಿಳಿದುಕೊಂಡಂತೆ. ಅವನ ಕಣ್ಣುಗಳಲ್ಲೂ ನೀರು.

ಮಗುವಿನ ಪ್ರಶ್ನೆಗೆ ಉತ್ತರಿಸುವವರು ಯಾರು? ಆದರೆ, ಆ ಮುಗ್ಧ ಪ್ರಶ್ನೆಯಲ್ಲೇ ಜಗತ್ತಿನ ಎಲ್ಲಾ ಸೌಖ್ಯವಿದೆ. ಪ್ರಕೃತಿಗೆ ಇಲ್ಲದ ಎಲ್ಲೆಗಳನ್ನು ನಾವು ನಿರ್ಮಿಸಿಕೊಂಡಿದ್ದೇವೆ. ದೇಶ, ಭಾಷೆ, ಧರ್ಮ, ಜಾತಿ ಎಲ್ಲದರ ನಡುವಣ ಗೆರೆ ಅಳಿಯಬೇಕು. ಆಗ ಮನುಷ್ಯ ವಿಶ್ವಮಾನವನಾಗುತ್ತಾನೆ. ಆಗ ಯುದ್ಧವಿಲ್ಲದ ಸುಂದರ ಜಗತ್ತು ನಮ್ಮದಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.