ಮಂಗಳವಾರ, ಮೇ 11, 2021
27 °C

ಒಳನೋಟ: ಉಷ್ಣ ಸ್ಥಾವರ ಯುಗಾಂತ್ಯಕ್ಕೆ ಪ್ರವರ

ಎಸ್‌. ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಮೂಲದ ವಿದ್ಯುತ್‌ಗೆ ಪರ್ಯಾಯವೆಂದೇ ನಿರೂಪಿಸಿ, ರಾಜ್ಯ ಮಾತ್ರವಲ್ಲದೇ ದೇಶದೆಲ್ಲೆಡೆ ದೊಡ್ಡ ಹಂಗಾಮಿನಂತೆ ಆರಂಭಗೊಂಡಿದ್ದ ಉಷ್ಣ ವಿದ್ಯುತ್‌ ಉತ್ಪಾದನೆಯ ‘ಯುಗಾಂತ್ಯ’ ಆರಂಭವಾಗಿದೆ. ಪರ್ಯಾಯ ಇಂಧನ ಮೂಲಗಳಾದ ಸೌರ ಮತ್ತು ಪವನ ವಿದ್ಯುತ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುವ ಕಾರಣ ದೇಶದ ಎಲ್ಲೆಡೆ ಉಷ್ಣ ವಿದ್ಯುತ್ ಸ್ಥಾವರಗಳ ಬಾಗಿಲು ಕ್ರಮೇಣ ಮುಚ್ಚಲಿವೆ.

ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌) ಆ ಸರದಿಯಲ್ಲಿ ಮೊದಲಾಗುವ ಸಾಧ್ಯತೆ ಹೆಚ್ಚು.

‘ಇನ್ನು ಮುಂದೆ ಯಾವುದೇ ಉಷ್ಣ (ಶಾಖೋತ್ಪನ್ನ) ವಿದ್ಯುತ್‌ ಸ್ಥಾವರಗಳ ಆಧುನೀಕರಣಕ್ಕೆ ಹೂಡಿಕೆ ಮಾಡದಿರಲೂ ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗ ಇರುವ ಸ್ಥಾವರಗಳು ಎಷ್ಟು ದಿನ ನಡೆಯುತ್ತವೆಯೋ ಅಷ್ಟು ದಿನಗಳವರೆಗೆ ನಡೆಯಲಿ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆರ್‌ಟಿಪಿಎಸ್‌ನ ಎಂಟೂ ಘಟಕಗಳು 25ರಿಂದ 32 ವರ್ಷಗಳಷ್ಟು ಹಳೆಯದಾಗಿವೆ. ಇವುಗಳನ್ನು ಮುಚ್ಚುವಂತೆ ರಾಷ್ಟ್ರೀಯ ಹಸಿರು ಪೀಠವೂ (ಎನ್‌ಜಿಟಿ) ಸೂಚನೆ ನೀಡಿದೆ. ರಾಜ್ಯ ಸರ್ಕಾರ ಸ್ಥಾವರಗಳ ಆಧುನೀಕರಣಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರವೇ ಉಷ್ಣ ವಿದ್ಯುತ್‌ ಸ್ಥಾವರಗಳ ಬದಲಿಗೆ ಪರ್ಯಾಯ ಇಂಧನಕ್ಕೆ ಆದ್ಯತೆ ನೀಡಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳನ್ನು ನೇಪಥ್ಯಕ್ಕೆ ಸರಿಸದೇ ಅನ್ಯ ಮಾರ್ಗವಿಲ್ಲ’ ಎನ್ನುತ್ತವೆ ಇಂಧನ ಇಲಾಖೆಯ ಮೂಲಗಳು.

ಕೇಂದ್ರದ ಇಂಗಿತ ಅರಿತುಕೊಂಡಿರುವ ರಾಜ್ಯ ಸರ್ಕಾರ ಈ ದಿಸೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿದೆ. ಮುಖ್ಯವಾಗಿ, ಸ್ವಚ್ಛ ಶಕ್ತಿ ಆಧಾರಿತ ನಿರಂತರ ವಿದ್ಯುತ್‌ ಸರಬರಾಜಿಗಾಗಿ 1,000 ಮೆಗಾವಾಟ್‌ ಸಾಮರ್ಥ್ಯದ ಪಂಪ್ಡ್‌ ಹೈಡ್ರೊ ಸ್ಟೋರೇಜ್‌ ಪ್ಲಾಂಟ್‌ ಯೋಜನೆ. ₹4,000 ಕೋಟಿ ವೆಚ್ಚದಲ್ಲಿ ಖಾಸಗಿ ಹೂಡಿಕೆ ಆಧಾರದ ಮೇಲೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದ್ದು, ಬಜೆಟ್‌ನಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಶರಾವತಿಯನ್ನು ಈಗಾಗಲೇ ಗುರುತಿಸಲಾಗಿದೆ. ಮುಂದೆ ನೇತ್ರಾವತಿ, ವರದಾ ನದಿಗಳಲ್ಲೂ
ಪಂಪ್ಡ್‌ ಹೈಡ್ರೊ ಸ್ಟೋರೇಜ್‌ ಘಟಕಗಳನ್ನು ಆರಂಭಿಸಲು ಉದ್ದೇಶಿಸಿದೆ.

ನಿತ್ಯವೂ ನಿರಂತರ 10 ಗಂಟೆಗಳ ಕಾಲ 1,000 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಿ ಸ್ಟೋರ್‌ ಮಾಡಿಕೊಳ್ಳಲು ಇವುಗಳ ಅಗತ್ಯವಿದೆ. ಮುಂದಿನ ಐದು ವರ್ಷಗಳಲ್ಲಿ ಸೌರ ಮತ್ತು ಪವನ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಾಗುವುದರಿಂದ ವೊಲ್ಟೇಜ್‌ನಲ್ಲಾಗುವ ವ್ಯತ್ಯಾಸವನ್ನು ಸರಿದೂಗಿಸಲು ಮತ್ತು ಏಕಪ್ರಕಾರದ ವಿದ್ಯುತ್‌ ಸರಬರಾಜಿಗೆ, ಪೀಕ್‌ ಲೋಡ್‌ ಮತ್ತು ಕ್ಲಪ್ತ ಸಮಯದಲ್ಲಿ ಉತ್ಪಾದನೆಗೆ ನೆರವಾಗುತ್ತದೆ. ಅಂದರೆ, ಉಷ್ಣ ವಿದ್ಯುತ್ ಸ್ಥಾವರಗಳನ್ನು ಮುಚ್ಚುತ್ತಾ ಹೋದಂತೆ ಪರ್ಯಾಯವಾಗಿ ಗ್ರಿಡ್‌ ವ್ಯವಸ್ಥೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ನಿರಂತರತೆ ಮತ್ತು ವೋಲ್ಟೇಜ್‌ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಇದಾಗಿದೆ ಎನ್ನುತ್ತವೆ ಈ ಮೂಲಗಳು.

‘ಉಷ್ಣ ವಿದ್ಯುತ್ ಸ್ಥಾವರಗಳು ಮಾಲಿನ್ಯ ಉಂಟು ಮಾಡುವುದರಿಂದ ಅವುಗಳನ್ನು ಬಂದ್‌ ಮಾಡಬೇಕು. ಹೊಸ ಸ್ಥಾವರಗಳಿಗೆ ಅನುಮತಿ ನೀಡಬಾರದು. ಜಲ ವಿದ್ಯುತ್ ಘಟಕಗಳಿಂದ ಕಾಡು ನಾಶ, ಅಣು ವಿದ್ಯುತ್‌ ಸ್ಥಾವರಗಳು ವಿಕಿರಣ ಹೊರಸೂಸುವುದರಿಂದ ಇವುಗಳಿಗೂ ಅವಕಾಶ ನೀಡಬಾರದು’ ಎಂಬುದು ಪರಿಸರವಾದಿಗಳ ಪ್ರತಿಪಾದನೆ. ಹಾಗಿದ್ದರೆ, ಭಾರೀ ಉದ್ಯಮಗಳು, ಗೃಹ ಮತ್ತು ಇತರೆ ಬಳಕೆಗೆ ಇಡೀ ದಿನ ನಿರಂತರ, ವೋಲ್ಟೇಜ್‌ ವ್ಯತ್ಯಾಸವಿಲ್ಲದ ವಿದ್ಯುತ್‌ ಎಲ್ಲಿಂದ ಸಿಗುತ್ತದೆ? ಸೌರ, ಪವನ ವಿದ್ಯುತ್‌ ಸೂರ್ಯನ ಬೆಳಕು ಮತ್ತು ಗಾಳಿ ಇದ್ದಾಗ ಮಾತ್ರ ಲಭ್ಯವಾಗುತ್ತದೆ. ಇವುಗಳನ್ನು ಗೃಹ ಬಳಕೆಗೆ ಬಳಸಬಹುದೇ ಹೊರತು ಉದ್ಯಮಗಳ ಉದ್ದೇಶಕ್ಕೆ ಸಾಧ್ಯವಿಲ್ಲ. ಹೀಗಾಗಿ ಪರಿಸರ ಮತ್ತು ಅಭಿವೃದ್ಧಿ ಮಧ್ಯೆ ಸಮತೋಲನ ಸಾಧಿಸಲು ಕಿರು ಜಲವಿದ್ಯುತ್‌ ಘಟಕಗಳು ಅಥವಾ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಅವಕಾಶ ನೀಡಬೇಕಾಗುತ್ತದೆ’ ಎನ್ನುವುದು ವಿದ್ಯುತ್‌ ವಲಯದ ತಜ್ಞರ ಪ್ರತಿಪಾದನೆ.

‘ಪರಿಸರವಾದಿಗಳೂ ಸೇರಿದಂತೆ ಸಮಾಜದಲ್ಲಿ ಎಲ್ಲರಿಗೂ ಇಡೀ ದಿನ ಅಬಾಧಿತ ವಿದ್ಯುತ್‌ ಬೇಕು. ಮನೆಗಳಲ್ಲಿ ಫ್ಯಾನು, ಫ್ರಿಜ್ಜು, ಟಿ.ವಿ, ಕಂಪ್ಯೂಟರ್‌ ಎಲ್ಲವೂ ಕಾರ್ಯನಿರ್ವಹಿಸಬೇಕು. ಲೋಡ್‌ ಶೆಡ್ಡಿಂಗ್‌ ಮಾಡಿದರೆ ಸರ್ಕಾರ ಸರಿ ಇಲ್ಲ ಎನ್ನುತ್ತಾರೆ. ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಹಾರುಬೂದಿ ಸಮಸ್ಯೆ ಆದಷ್ಟು ಕಡಿಮೆ ಮಾಡಲು ತಂತ್ರಜ್ಞಾನಗಳು ಬಂದಿವೆ. ಹಾರು ಬೂದಿಯಿಂದ ಹಲವು ಉಪ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ದೇಶಿ ಕಲ್ಲಿದ್ದಲಿನಲ್ಲಿ ಬೂದಿ(ಶೇ 40) ಸಮಸ್ಯೆ ಇದೆ. ಆದರೆ ಗಂಧಕದ ಅಂಶ ಕಡಿಮೆ. ವಿದೇಶಿ ಕಲ್ಲಿದ್ದಲಿನಲ್ಲಿ ಗಂಧಕದ ಅಂಶ ಹೆಚ್ಚು, ಬೂದಿ ಪ್ರಮಾಣ (ಶೇ 10) ಕಡಿಮೆ. ಗಂಧಕ ಹೆಚ್ಚಿನ ಪ್ರಮಾಣದಿಂದ ಹಳದಿ ಮಳೆಗೆ ಕಾರಣವಾಗುತ್ತದೆ. ಆದರೂ ಜಗತ್ತಿನ ಮುಂದುವರಿದ ದೇಶಗಳು ಇನ್ನೂ ಉಷ್ಣ ವಿದ್ಯುತ್‌ ಸ್ಥಾವರಗಳಿಂದ ವಿದ್ಯುತ್‌ ಪಡೆಯುತ್ತಿವೆ ಎನ್ನುತ್ತಾರೆ ತಜ್ಞರು.

‘ಉಷ್ಣ ವಿದ್ಯುತ್‌ ಸ್ಥಾವರಗಳು ವಿದ್ಯುತ್‌ನ ಬೇಸ್‌ ಲೋಡ್‌ಗೆ ಅಗತ್ಯವಿವೆ. ಬೇಸ್‌ ಲೋಡ್‌ ಎಂದರೆ 24 ಗಂಟೆ ನಿರಂತರ ವಿದ್ಯುತ್‌ ಪೂರೈಕೆ ಮಾಡುವುದು. ಪೀಕ್‌ ಲೋಡ್‌ ಎಂದರೆ ಆಯಾ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಅಧಿಕ ವಿದ್ಯುತ್ ಪೂರೈಕೆ ಮಾಡುವುದು. ಪೀಕ್‌ ಲೋಡ್‌ ದಿನಕ್ಕೆ ಎರಡು–ಮೂರು ಬಾರಿ ಬರಬಹುದು. ಇದಕ್ಕೆ ನವೀಕರಿಸಬಹುದಾದ ಇಂಧನ ಬಳಸಬಹುದು. ಆದರೆ, ಸೌರ ಮತ್ತು ಪವನ ವಿದ್ಯುತ್‌ ಉತ್ಪಾದನೆ ನಮ್ಮ ಕೈಯಲ್ಲಿ ಇಲ್ಲ. ಬೆಳಕು ಮತ್ತು ಗಾಳಿಯ ಲಭ್ಯತೆಯನ್ನು ಆಧರಿಸಿದೆ. ಅಲ್ಲದೆ ಇವುಗಳ ಪಿಎಲ್‌ಎಫ್‌ (ಪ್ಲಾಂಟ್‌ ಲೋಡ್‌ ಫ್ಯಾಕ್ಟರ್) ಕಡಿಮೆ. ಉಷ್ಣ, ಜಲ ಮತ್ತು ಅಣು ವಿದ್ಯುತ್‌ ಉತ್ಪಾದನೆ ನಮ್ಮ ಕೈಯಲ್ಲಿ ಇರುತ್ತದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪಡೆಯಬಹುದು’ ಎನ್ನುವುದು ತಜ್ಞರ ಸಮರ್ಥನೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು