ಸೋಮವಾರ, ಜುಲೈ 4, 2022
24 °C

ಒಳನೋಟ | ಅರಣ್ಯ ಸಂರಕ್ಷಣೆಯಲ್ಲಿ ಸಿಇಸಿ ಮೈಲಿಗಲ್ಲು

ಕೆ.ಎನ್.ಫಣೀಂದ್ರ Updated:

ಅಕ್ಷರ ಗಾತ್ರ : | |

ಈ ದೇಶದಲ್ಲಿ ಅರಣ್ಯ ಸಂಪತ್ತು ಇವತ್ತೇನಾದರೂ ಕನಿಷ್ಠ ಈ ಪ್ರಮಾಣದಲ್ಲಾದರೂ ಉಳಿದಿದೆ ಎಂದರೆ ಅದಕ್ಕೆ ಕಾರಣ ಸುಪ್ರೀಂ ಕೋರ್ಟ್‌. 1996ರಲ್ಲಿ ಟಿ.ಎನ್.ಗೋದಾವರ್ಮನ್ ತಿರುಮಲಪಾಡ v/s ಕೇಂದ್ರ ಸರ್ಕಾರದ ನಡುವಿನ ಸಾರ್ವಜನಿಕ‌ ಹಿತಾಸಕ್ತಿ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ರಚಿಸಿದ, ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಅದ್ಭುತ ಮೈಲಿಗಲ್ಲು ಎಂದೇ ಹೇಳಬಹುದು. ಈ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ ಕಾಲಕ್ಕೆ ತಕ್ಕುದಾದ ನಿರ್ದೇಶನ ಹಾಗೂ ಆದೇಶಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ.

ಅರಣ್ಯ ಸಂರಕ್ಷಣೆ ವಿಷಯದಲ್ಲಿ ಆಡಳಿತಾರೂಢ ಸರ್ಕಾರಗಳು ಮತ್ತು ಕಾರ್ಯಾಂಗಗಳ ಕಾಳಜಿ ಅಷ್ಟಕ್ಕಷ್ಟೆ. ಇಂತಹ ನಿರ್ಲಕ್ಷ್ಯಕ್ಕೆ ಸುಪ್ರೀಂ ಕೋರ್ಟ್ ಅನೇಕ ಬಾರಿ ಸರ್ಕಾರಗಳನ್ನು ತಿವಿದು ಜಾಗೃತಗೊಳಿಸಿರುವುದುಂಟು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹತ್ತಾರು ಯೋಜನೆಗಳನ್ನು ರೂಪಿಸುವ ನೆಪದಲ್ಲಿ ಅರಣ್ಯಪ್ರದೇಶದ ಬಳಕೆಗೆ ಅನುಮತಿ ನೀಡಲಾಗಿದೆ. ಪ್ರಮಾಣಪತ್ರ ವಿತರಿಸಿ ಅವುಗಳನ್ನು ಕಾನೂನುಬದ್ಧಗೊಳಿಸಲಾಗಿದೆ. 80-100 ವರ್ಷಗಳ ಕಾಲ ಅರಣ್ಯ ಭೂಮಿಯಾಗಿ ಸಂರಕ್ಷಿಸಿ ಇಡಬೇಕಾಗಿದ್ದ ಕಾಡುಮೇಡುಗಳು ಇವತ್ತು ಲೂಟಿಕೋರರ ಪಾಲಾಗಿ ಒತ್ತುವರಿಯಾಗುತ್ತಿದೆ. ತಗಾದೆ-ತಕರಾರು ತೆಗೆದು ಇವುಗಳನ್ನೆಲ್ಲಾ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ.

ಬುಡಕಟ್ಟು ಜನರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ–2006 ಅನ್ನು ಜಾರಿಗೆ ತರಲಾಯಿತು. ಆದರೆ, ಬಗರ್‌ಹುಕುಂ ಸಾಗುವಳಿದಾರರಿಗೆ ಅನ್ವಯಿಸುವ ಷರತ್ತುಗಳು ಅರಣ್ಯ ಹಕ್ಕು ಕಾಯ್ದೆಯಡಿ ಬರುವ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ. ಅರಣ್ಯದೊಳಗೆ ವಾಸ ಮಾಡುತ್ತಿರುವವರು ಮತ್ತು ಸದಾ ಅರಣ್ಯದ ಉತ್ಪನ್ನಗಳನ್ನೇ ತಮ್ಮ ಜೀವನಾಧಾರವನ್ನಾಗಿ ಮಾಡಿಕೊಂಡವರು ಈ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ದುರದೃಷ್ಟವಶಾತ್‌ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ವೇಳೆ ಈ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಲ್ಲಿ ಅರಣ್ಯ ಭೂಮಿಯನ್ನು ವಿಚಾರಹೀನವಾಗಿ ಅತಿಕ್ರಮಿಸುವ, ಅತಾರ್ಕಿಕವಾಗಿ ವಿತರಿಸುವ, ಬೇಸಾಯದ ಹೆಸರಿನಲ್ಲಿ ಸಾಗುವಳಿಗೆ ಅವಕಾಶ ನೀಡುವ ಮತ್ತು ಅರಣ್ಯ ವ್ಯಾಪ್ತಿಯೊಳಗೆ ಕಾನೂನುಬಾಹಿರ ಚಟುವಟಿಕೆಗಳಿಗೆ ಎಗ್ಗಿಲ್ಲದೆ ಅನುಮತಿ ಪತ್ರ ನೀಡುವ ಸರ್ಕಾರಗಳ ಧೋರಣೆಗೆ ಕಡಿವಾಣ ಹಾಕಬಹುದು. 

ಲೇಖಕರು ಹಿರಿಯ ವಕೀಲರು, ಕರ್ನಾಟಕ ಹೈಕೋರ್ಟ್‌

ನಿರೂಪಣೆ ಬಿ.ಎಸ್‌.ಷಣ್ಮುಖಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು