ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕೋವಿಡ್ ಮೂರನೇ ಅಲೆಯ ಆತಂಕ, ಉಸಿರಾಡಲಿ ಆಮ್ಲಜನಕ ಘಟಕ

Last Updated 5 ಸೆಪ್ಟೆಂಬರ್ 2021, 3:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ ಸಂಭಾವ್ಯ ಮೂರನೇ ಅಲೆಯಲ್ಲಿ ರೋಗಿಗಳಿಗೆ ಪ್ರಾಣವಾಯು ಕೊರತೆ ಆಗದಂತೆ, ಸರ್ಕಾರವು ಸಮರೋಪಾದಿಯಲ್ಲಿ ಸ್ಥಾಪಿಸುತ್ತಿರುವ ವೈದ್ಯಕೀಯ ಆಮ್ಲಜನಕ ಘಟಕಗಳು ಕೇವಲ ತೋರಿಕೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಮೂಲಸೌಲಭ್ಯ ಅಭಿವೃದ್ಧಿಪಡಿಸಲಾಗಿದೆಯಾದರೂ ಅಗತ್ಯ ಮಾನವ ಸಂಪನ್ಮೂಲ, ತಂತ್ರಜ್ಞರ ನೇಮಕಾತಿ ಇನ್ನೂ ನಡೆದಿಲ್ಲ.

ಈ ತಿಂಗಳಾಂತ್ಯ ಅಥವಾ ಅಕ್ಟೋಬರ್‌ನಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ರೋಗಿಗಳ ಪ್ರಾಣ ರಕ್ಷಣೆಯಲ್ಲಿ ಪ್ರಮುಖ ಅಸ್ತ್ರವಾಗುವ ಆಮ್ಲಜನಕದ ಮೇಲೆ ಸರ್ಕಾರ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಆದರೆ, ಆಮ್ಲಜನಕ ಉತ್ಪಾದನೆ, ಸಂಗ್ರಹ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಸಿದ್ಧತೆಗಳ ಕುರಿತು ವೈದ್ಯರಲ್ಲಿಯೇ ತೃಪ್ತಿ ಇಲ್ಲ.

ಕೋವಿಡ್‌ ಎರಡನೇ ಅಲೆ ಎದುರಾದಾಗ ವೈದ್ಯಕೀಯ ಆಮ್ಲಜನಕ ‘ಪ್ರಾಣವಾಯು’ ಎಂಬುದು ನಿರೂಪಿತವಾಗಿದೆ. ಜೀವ ಉಳಿಸಿಕೊಳ್ಳಲು ಜನರು ಪರದಾಡಿದ ರೀತಿ ಈಗಲೂ ಕಣ್ಮುಂದೆ ಇದೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಕರಾಳ ನೆನಪು ಕಾಡುತ್ತಿದೆ. ಮೂರನೇ ಅಲೆಯ ಸಂದರ್ಭದಲ್ಲಿ ಇಂತಹ ತೊಂದರೆ ಎದುರಾಗಬಾರದು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ನೂರಾರು ಘಟಕಗಳನ್ನು ಸ್ಥಾಪಿಸಿರುವುದಾಗಿ ಸರ್ಕಾರ ಬೀಗುತ್ತಿದೆ. ವಾಸ್ತವವಾಗಿ, ಅವುಗಳಲ್ಲಿ ಆಮ್ಲಜನಕ ಉತ್ಪಾದನೆಯಾಗಿ ಸಂಕಷ್ಟದ ಸಂದರ್ಭದಲ್ಲಿ ನೆರವಾಗಬಲ್ಲವೇ ಎಂಬುದರ ಬಗ್ಗೆ ಖಚಿತತೆ ಇಲ್ಲ.

ತಂತ್ರಜ್ಞರ ಕೊರತೆ: ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ವಹಣೆ ಹಾಗೂ ಪ್ರಾಣವಾಯು ಪೂರೈಕೆಯಲ್ಲಿ ತಂತ್ರಜ್ಞರ ಕೊರತೆ ಎದ್ದು ಕಾಣುತ್ತಿದೆ. ಬಯೊ ಮೆಡಿಕಲ್‌ ಎಂಜಿನಿಯರ್‌ ಸೇರಿ ಇತರ ತಂತ್ರಜ್ಞರ ನೇಮಕಾತಿ ಇನ್ನೂ ನಡೆಯಬೇಕಿದೆ. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು ನಿರ್ವಹಣೆಗೆ ಬೆರಳೆಣಿಕೆಯ ತಂತ್ರಜ್ಞರಿದ್ದಾರೆ. ಆಮ್ಲಜನಕ ಉತ್ಪಾದನಾ ಘಟಕದ ನಿರ್ವಹಣೆ ಇವರ ಹೆಗಲಿಗೆ ಬಿದ್ದಿದೆ. ಆಮ್ಲಜನಕವನ್ನು ಟ್ಯಾಂಕಿಗೆ ತುಂಬುವ, ಕೊಳವೆ ಮಾರ್ಗದ ಮೂಲಕ ರವಾನೆ ಮಾಡುವ ಜ್ಞಾನವಷ್ಟೇ ಇವರಿಗೆ ಗೊತ್ತಿರುವುದು.

‘ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ವಹಣೆಗೆ 38 ಬಯೊ ಮೆಡಿಕಲ್‌ ಎಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಆಮ್ಲಜನಕ ಉತ್ಪಾದನೆ, ಪೂರೈಕೆಯ ಬಗ್ಗೆ ವೈದ್ಯಕೀಯ ಹಾಗೂವೈದ್ಯಕೀಯೇತರ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ. ನಿರ್ವಹಣೆಯ ಕೌಶಲಗಳನ್ನು ಬೆಳೆಸಲಾಗುತ್ತದೆ’ ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ.ವಿ.ತ್ರಿಲೋಕ ಚಂದ್ರ.

ಆಮ್ಲಜನಕ, ವೆಂಟಿಲೇಟರ್‌ ಲಭ್ಯವಿದ್ದರೂ ರೋಗಿಗಳ ಪ್ರಾಣ ಉಳಿಸಲು ಸಾಧ್ಯವಾಗದ ಅಸಹಾಯಕತೆಯು ಎರಡನೇ ಅಲೆಯಲ್ಲಿ ವೈದ್ಯರನ್ನು ಕಾಡಿದೆ. ಯಂತ್ರ, ಸಲಕರಣೆಗಳನ್ನು ಜೋಡಿಸಿದಾಕ್ಷಣ ರೋಗಿಗೆ ಪ‍್ರಾಣವಾಯು ಸಿಕ್ಕೇಬಿಡುತ್ತದೆ ಎಂಬ ನಂಬಿಕೆ ಸರ್ಕಾರಕ್ಕೆ ಇದ್ದಂತೆ ಕಾಣುತ್ತದೆ. ಪಿಎಂ–ಕೇರ್‌ ನಿಧಿಯಲ್ಲಿ ತಾಲ್ಲೂಕು ಆಸ್ಪತ್ರೆಗಳಿಗೆ ಒದಗಿಸಿದ ವೆಂಟಿಲೇಟರ್‌ಗಳು ಬಹುತೇಕ ಬಳಕೆಯಾಗಿಲ್ಲ. ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಿತಿ ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಆರೋಗ್ಯ ಇಲಾಖೆಯ ಮೇಲಿದೆ.

‘ಆಮ್ಲಜನಕ ಉತ್ಪಾದನೆ, ಘಟಕದ ನಿರ್ವಹಣೆ, ಪೂರೈಕೆಗೆ ಸಂಬಂಧಿಸಿದಂತೆ ತರಬೇತಿ ಪಡೆಯಲಾಗುತ್ತಿದೆ. ರೋಗಿಯ ಸ್ಥಿತಿ ನೋಡಿಕೊಂಡು ಪ್ರಾಣವಾಯು ನೀಡುವ ನಿರ್ಧಾರ ಕೈಗೊಳ್ಳುವ ಜ್ಞಾನ ಸಿಕ್ಕಿದೆ. ತಜ್ಞ ವೈದ್ಯರಂತೆ ಅಥವಾ ಇಡೀ ವ್ಯವಸ್ಥೆಯನ್ನು ನಿರ್ವಹಿಸುವ ತಂತ್ರಜ್ಞರಷ್ಟು ಸಮರ್ಪಕ ಸೇವೆ ಒದಗಿಸಲು ಸಾಧ್ಯವಿಲ್ಲ. ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಬರುತ್ತಿಲ್ಲ’ ಎಂಬುದು ಚಿತ್ರದುರ್ಗದ ವೈದ್ಯರೊಬ್ಬರ ಅನುಭವ.

ಕೇಂದ್ರ ಸರ್ಕಾರಕ್ಕೆ ಮೊರೆ: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ನಿತ್ಯ 1,200 ಟನ್‌ ಆಮ್ಲಜನಕದ ಅಗತ್ಯವಿತ್ತು. ಕರ್ನಾಟಕದಲ್ಲಿ ಆ ಸಂದರ್ಭದಲ್ಲಿ 812 ಟನ್‌ ಮಾತ್ರ ಉತ್ಪಾದನೆ ಆಗುತ್ತಿತ್ತು. ಅಲ್ಲದೇ, ಅಷ್ಟನ್ನೂ ಉಪಯೋಗ ಮಾಡಿಕೊಳ್ಳುವ ಸ್ವಾತಂತ್ರ್ಯ ರಾಜ್ಯಕ್ಕೆ ಇರಲಿಲ್ಲ. ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಮ್ಲಜನಕದ ಸಂಪೂರ್ಣ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಸದ್ಯ ಸುಮಾರು 200 ಟನ್‌ ಆಮ್ಲಜನಕಕ್ಕೆ ಬೇಡಿಕೆ ಇದೆ.

‘ಮೂರನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೂ, ಸರ್ಕಾರ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಸರ್ಕಾರಿ ಆರೋಗ್ಯ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ಕೋವಿಡ್‌ ತೋರಿಸಿಕೊಟ್ಟಿದೆ. ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಇದು ಸೂಕ್ತ ಸಮಯ. ಮೂಲಸೌಲಭ್ಯಗಳ ಜೊತೆಗೆ ಅನುಭವಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು’ ಎನ್ನುತ್ತಾರೆ ವೈದ್ಯ ಡಾ.ಎಚ್‌.ವಿ. ವಾಸು.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕ.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕ.

ಘಟಕಕ್ಕೆ ತಿಂಗಳ ಗಡುವು: ಹೊಸದಾಗಿ 247 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. 103 ಘಟಕಗಳು ಕಾರ್ಯಾ ಆರಂಭಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಅಂದರೆ, ನಿತ್ಯ ನೂರು ಟನ್‌ ಆಮ್ಲಜನಕ ಉತ್ಪಾದನೆ ಆಗುತ್ತಿದೆ. ಸೆಪ್ಟೆಂಬರ್‌ ಅಂತ್ಯದ ಹೊತ್ತಿಗೆ ಎಲ್ಲ ಘಟಕಗಳ ಕಾರ್ಯಾರಂಭಕ್ಕೆ ಗಡುವು ವಿಧಿಸಲಾಗಿದೆ. ಎಲ್ಲವೂ ಶುರುವಾದರೆ 240 ಟನ್‌ ವೈದ್ಯಕೀಯ ಆಮ್ಲಜನಕ ಲಭ್ಯವಾಗುತ್ತದೆ.

ಎಂಟು ಸಾವಿರ ಆಮ್ಲಜನಕ ಸಾಂದ್ರಕಗಳನ್ನು ಸರ್ಕಾರ ಈಗಾಗಲೇ ಖರೀದಿಸಿದೆ. ಆಮ್ಲಜನಕ ಸಂಗ್ರಹಣಾ ಸಾಮರ್ಥ್ಯವನ್ನುಹೆಚ್ಚಿಸಲು ಪ್ರತಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚುವರಿಯಾಗಿ 13 ಸಾವಿರ ಲೀಟರ್‌ ಹಾಗೂ ತಾಲ್ಲೂಕು ಆಸ್ಪತ್ರೆಗೆ ಆರು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರತಿ ಜಿಲ್ಲಾ ಆಸ್ಪತ್ರೆ ಯಲ್ಲಿ ಈಗಾಗಲೇ ಆರು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ಗಳಿವೆ. ಸಿಲಿಂಡರ್‌ಗಳಿಗೆ ಆಮ್ಲಜನಕ ಭರ್ತಿ ಮಾಡುವ ರೀಫಿಲ್ಲಿಂಗ್‌ ಘಟಕ ಸ್ಥಾಪನೆ ಕೆಲಸ ರಾಜ್ಯದ ಎಂಟು ಜಿಲ್ಲೆಯಲ್ಲಿ ಇನ್ನೂ ಆರಂಭವಾಗಿಲ್ಲ.

ಆಮ್ಲಜನಕಕ್ಕೆ ಪ್ಲಂಬರ್‌ ಪೈಪ್‌ಲೈನ್‌!: ವೈದ್ಯಕೀಯ ಆಮ್ಲಜನಕವನ್ನು ರೋಗಿಗೆ ಪೂರೈಸುವ ಕೊಳವೆ ಮಾರ್ಗದ ವ್ಯವಸ್ಥೆಯನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಪ್ಲಂಬರ್‌ ನಿರ್ಮಿಸಿ ಎಡವಟ್ಟು ಮಾಡಿದ್ದರು. ಎರಡನೇ ಅಲೆಯ ಸಂದರ್ಭದಲ್ಲಿ ಇದು ಬಹುತೇಕ ರೋಗಿಗಳ ಜೀವಕ್ಕೆ ಕುತ್ತು ತರಬಹುದು ಎಂಬುದು ಗೊತ್ತಾದ ಬಳಿಕ ಸರಿಪಡಿಸಲಾಗಿತ್ತು.

‘ಆಮ್ಲಜನಕ ಪೂರೈಕೆಗೆ ರೂಪಿಸುವ ಕೊಳವೆ ಮಾರ್ಗದ ವ್ಯವಸ್ಥೆ ಅವೈಜ್ಞಾನಿಕವಾಗಿತ್ತು. ನಿರಂತರ ಹಾಗೂ ನಿಗದಿತ ಪ್ರಮಾಣದಲ್ಲಿ ಪ್ರಾಣವಾಯು ಪೂರೈಕೆ ಆಗುತ್ತಿರಲಿಲ್ಲ. ಟ್ಯಾಂಕರ್‌ನಿಂದ ಐಸಿಯುಗೆ ಸಂಪರ್ಕ ಕಲ್ಪಿಸಿದ ಪೈಪ್‌ಲೈನ್‌ ನಿರ್ಮಾಣಕ್ಕೆ ತಂತ್ರಜ್ಞರ ನೆರವು ಸಿಕ್ಕಿರಲಿಲ್ಲ. ಇದು ರೋಗಿಗಳ ಪ್ರಾಣಕ್ಕೆ ಎರವಾಯಿತು’ ಎಂಬುದು ಹಾವೇರಿ ಜಿಲ್ಲೆಯ ವೈದ್ಯರೊಬ್ಬರ ಹೇಳಿಕೆ.

ತಾಲ್ಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗೆ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗಿದೆ. ನೂರು ಹಾಸಿಗೆಗೆ ಆಮ್ಲಜನಕ ಸೌಲಭ್ಯ ವಿಸ್ತರಿಸಲು ರೂಪುರೇಷೆ ಸಿದ್ಧವಾಗಿದೆ. ಇದಕ್ಕೆ ಹೆಚ್ಚುವರಿ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಇದು ವೈಜ್ಞಾನಿಕವಾಗಿದ್ದರಷ್ಟೇ ರೋಗಿಗೆ ಪ್ರಾಣವಾಯು ಸಿಗುತ್ತದೆ; ಜೀವವೂ ಉಳಿಯುತ್ತದೆ.

*
ಆಮ್ಲಜನಕ ಉತ್ಪಾದನಾ ಘಟಕ ಹೆಚ್ಚಿಸಲಾಗಿದೆ. ಹೀಗಾಗಿ, ಪ್ರಾಣ ವಾಯುವಿಗೆ ಕೊರತೆ ಎದುರಾಗುವ ಸಾಧ್ಯತೆ ಕಡಿಮೆ. ನಿರ್ವಹಣೆಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.
–ಡಾ.ಕೆ.ವಿ.ತ್ರಿಲೋಕ ಚಂದ್ರ, ಆರೋಗ್ಯ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT