ಸೋಮವಾರ, ಮಾರ್ಚ್ 1, 2021
29 °C
ವಾರಕ್ಕೆ ಎರಡ್ಮೂರು ಬಾರಿ ಚಿಕಿತ್ಸೆ ಬೇಕಾದವರಿಗೆ ಒಂದೇ ಸಲ ಅವಕಾಶ

ಕಿಡ್ನಿ ರೋಗಿಗಳ ಸಂಕಟ: ಡಯಾಲಿಸಿಸ್‌ಗೂ ಕೋವಿಡ್‌ ಪೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್ ಕಾರ್ಮೋಡ ದಡಿ ಡಯಾಲಿಸಿಸ್‌ಗೆ ಒಳಗಾಗಬೇಕಾದ ರೋಗಿಗಳು ರಾಜ್ಯದ ವಿವಿಧೆಡೆ ನಲುಗುತ್ತಿದ್ದಾರೆ. ಚಿತ್ರದುರ್ಗದಲ್ಲಿ ಕೆಲವು ತಿಂಗಳು ಸರ್ಕಾರಿ ವ್ಯವಸ್ಥೆಯಡಿ ಉಚಿತ ಡಯಾಲಿಸಿಸ್ ಪಡೆಯುವ ಸೌಕರ್ಯದಿಂದಲೇ ರೋಗಿಗಳು ವಂಚಿತರಾಗಿದ್ದರು. ಅದೇ ಕಾಲಘಟ್ಟದಲ್ಲಿ ರೇಡಿಯೊದಲ್ಲಿ ಅಂತಹ ಸೌಕರ್ಯದ ಅನುಕೂಲ ಪಡೆಯುವಂತೆ ಸರ್ಕಾರಿ ಜಾಹೀರಾತು ಪ್ರಸಾರವಾಗುತ್ತಿದ್ದುದು ವ್ಯಂಗ್ಯ.

ಈಗ ಡಯಾಲಿಸಿಸ್ ಸಮಸ್ಯೆಯ ಸ್ವರೂಪ ಒಂದೊಂದು ಕಡೆ ಒಂದೊಂದು ಬಗೆಯಲ್ಲಿದೆ. ವಿಜಯ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸಂಪೂರ್ಣ ಸ್ಥಗಿತಗೊಂಡಿದ್ದರೆ, ಕಲಬುರ್ಗಿಯಲ್ಲಿ ಸರದಿಯಲ್ಲಿ ಕಾಯುವವರ ಸಂಖ್ಯೆ ಹೆಚ್ಚಾಗಿದೆ. ಮೈಸೂರಿನಲ್ಲಿ ಕೆ.ಆರ್. ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗಿದ್ದರೆ, ತುಮಕೂರು ಮಾತ್ರ ಸಮಸ್ಯೆಗಳಿಲ್ಲದೆ ನಿರಾಳವಾಗಿದೆ.

ರಮೇಶ್‌ ಕುಮಾರ್‌ ಆರೋಗ್ಯ ಸಚಿವರಾಗಿದ್ದ ಸಮಯದಲ್ಲಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಯೂನಿಟ್ ಮತ್ತು ಐಸಿಯು ಯೂನಿಟ್‌ ಇರಬೇಕು ಎಂದು ಆದೇಶ ಮಾಡಿದ್ದರು. ಅದರಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳಿಗೆ ಡಯಾಲಿಸಿಸ್‌ ಯೂನಿಟ್‌ ಮಂಜೂರಾಗಿತ್ತು. ಆದರೆ ತಂತ್ರಜ್ಞರ ಕೊರತೆಯಿಂದಾಗಿ ಅವು ಆರಂಭಗೊಂಡಿರಲಿಲ್ಲ. ತಂತ್ರಜ್ಞರು ನೇಮಕಗೊಂಡು ಡಯಾಲಿಸಿಸ್‌ ಆರಂಭಗೊಂಡಾಗ ಕೊರೊನಾ ಬಂತು. ಆಗ ಮತ್ತೆ ಸ್ವಲ್ಪ ಸಮಯ ಈ ಕೇಂದ್ರಗಳು ಕಾರ್ಯನಿರ್ವಹಿಸಲಿಲ್ಲ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿದ ಬಳಿಕ ಈಗ ಮತ್ತೆ ತಾಲ್ಲೂಕು ಕೇಂದ್ರಗಳ ಯೂನಿಟ್‌ಗಳು ಕೆಲಸ ಮಾಡುತ್ತಿವೆ.

ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಐದು ಯೂನಿಟ್‌ಗಳಿವೆ. ಆ ಪೈಕಿ ಎರಡು ಕೆಲಸ ಮಾಡುತ್ತಿಲ್ಲ. ಮತ್ತೆರಡನ್ನು ಕೊರೊನಾ ಸೋಂಕಿತರಿಗೆ ಮೀಸಲಿಡಲಾಗಿದೆ. ಜಗಳೂರು, ಚನ್ನಗಿರಿ, ಹರಿಹರತಾಲ್ಲೂಕುಗಳಲ್ಲಿ ತಲಾ ಒಂದು ಯೂನಿಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ಶಿವಮೊಗ್ಗ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಎಲ್ಲ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳು ಇವೆ. ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ22 ಯಂತ್ರಗಳು ಇದ್ದು, ಎರಡು ಪಾಳಿಗಳಲ್ಲಿ ಮೂತ್ರಪಿಂಡ ರೋಗಿಗಳಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಪ್ರತಿ ರೋಗಿಗೆ 5 ಗಂಟೆಯಂತೆ ದಿನಕ್ಕೆ ಒಟ್ಟು 40 ರೋಗಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಬಿಪಿಎಲ್‌ ಕಾರ್ಡ್‌ ಇರುವ ಬಡವರಿಗೆ ಉಚಿತ ಚಿಕಿತ್ಸೆ ದೊರೆಯುತ್ತಿದೆ. ಇತರೆ ರೋಗಿಗಳಿಗೆ ₹ 350 ಶುಲ್ಕ ವಿಧಿಸಲಾಗುತ್ತಿದೆ. 100ಕ್ಕೂ ಹೆಚ್ಚು ರೋಗಿಗಳು ಸರದಿ ಮೇಲೆ ಕಾಯುತ್ತಾರೆ. 

ಧಾರವಾಡದಲ್ಲಿ ಮೂರು ಯಂತ್ರ

ಹೊಸಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಮೂರು ಯಂತ್ರಗಳಿದ್ದು, ಎಚ್‌ಐವಿ ಪಾಸಿಟಿವ್ ಇದ್ದವರು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ. ಬಳ್ಳಾರಿಯಲ್ಲಿ ಎಂಟು ಯಂತ್ರಗಳಿದ್ದು, ಕೊರೊನಾ ಸೋಂಕಿತರಿಗೆ ಎರಡು ಯಂತ್ರಗಳನ್ನು ಮೀಸಲಿಡಲಾಗಿದೆ. ಹಾವೇರಿ, ಗದಗ
ಜಿಲ್ಲಾ ಆಸ್ಪತ್ರೆಗಳೂ ಸೇರಿ ಎಲ್ಲ ಕಡೆ ಉಚಿತವಾಗಿ ಸೇವೆ ನೀಡಲಾಗುತ್ತಿದೆ.ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 22 ಯಂತ್ರಗಳಿದ್ದು, ನಿತ್ಯ ಕನಿಷ್ಠ 40 ರೋಗಿಗಳಿಗೆ ಡಯಾಲಿಸಿಸ್‌ ಮಾಡಲಾಗುತ್ತದೆ. ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಯಂತ್ರಗಳಿವೆಯಷ್ಟೆ.

ಗೋವಾ, ಉಡುಪಿ ಅಥವಾ ಮಂಗಳೂರಿನ ಮೇಲೆ ಅವಲಂಬಿತರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ರೋಗಿಗಳಿಗೆ ಈಗ ಸ್ಥಳೀಯವಾಗಿಯೇ ಈ ಸೌಲಭ್ಯ ಲಭಿಸುತ್ತಿದೆ. ಕಾರವಾರದಲ್ಲಿ ದಿನಕ್ಕೆ 15 ಜನರಿಗೆ ಡಯಾಲಿಸಿಸ್ ಮಾಡಬಹುದಾಗಿದೆ.

ಯಂತ್ರಗಳ ಸಮಸ್ಯೆಯ ದೂರು

ಜಿಲ್ಲಾ ಆಸ್ಪತ್ರೆಗಳೇ ಕೋವಿಡ್ ಕೇಂದ್ರಗಳಾದ ಕಾರಣ ಡಯಾಲಿಸಿಸ್‌ ಮಾಡಿಸಿಕೊಳ್ಳಲು ರೋಗಿಗಳು ಪಡಿಪಾಟಿಲು ಪಟ್ಟಿದ್ದರು. ವಾರಕ್ಕೆ 2–3 ಬಾರಿ ಚಿಕಿತ್ಸೆ ಬೇಕಾದವರು ಒಂದು ಸಲವಷ್ಟೇ ಪಡೆದಿದ್ದರು. ಕೆಲವೆಡೆ ಈಗಲೂ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರುಗಳಿವೆ.

ಬೆಳಗಾವಿ ಜಿಲ್ಲಾ ಆಸ್ಪತ್ರೆ ಹಾಗೂ 9 ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜಿಲ್ಲಾ ಆಸ್ಪತ್ರೆಯ ಎಂಟು ಯಂತ್ರಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಮಾಹಿತಿ ಹೆಚ್ಚಿನ ಮಂದಿಗೆ ಗೊತ್ತಿಲ್ಲ. ಬಹುತೇಕರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಆದ್ದರಿಂದ ಪೂರೈಕೆದಾರರನ್ನು ಬದಲಿಸಲು ಸರ್ಕಾರ
ಕ್ರಮ ಕೈಗೊಂಡಿದೆ ಎಂದು ಬೆಳಗಾವಿ ಡಿಎಚ್ಒ ಡಾ‌.ಎಸ್.ವಿ. ಮುನ್ಯಾಳ ತಿಳಿಸಿದರು.

ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯಕ್ಕೆ ಮೂರು ಯಂತ್ರಗಳಿದ್ದು, ಬೇಡಿಕೆ ಹೆಚ್ಚಾಗಿದೆ. ಇನ್ನು ಎರಡು ಯಂತ್ರಗಳು ಬೇಕಿವೆ. ಶಿರಸಿ ತಾಲ್ಲೂಕಿನ ಹನುಮಂತಿಯ ರೋಗಿಯೊಬ್ಬರು ಮುಂಡಗೋಡಕ್ಕೆ ತೆರಳಿ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಪಡುವ ಅನಿವಾರ್ಯ ಎದುರಾಗಿತ್ತು. ಕೆಲ ತಿಂಗಳ ಹಿಂದೆ ಅಲ್ಲಿಗೆ ಕರೆದೊಯ್ಯಲು ಸಮಸ್ಯೆ ಎದುರಾಗಿ ಅವರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು.

ಮನೆಯಲ್ಲಿ ಡಯಾಲಿಸಿಸ್‌ಗೂ ಅಡ್ಡಿ

ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಮನೆಯಲ್ಲಿಯೇ ಡಯಾಲಿಸಿಸ್ ಚಿಕಿತ್ಸೆ ಒದಗಿಸುವ ರಾಜ್ಯದ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಕೋವಿಡ್ ಕಾರಣ ನೀಡಿ ತಿರಸ್ಕರಿಸಿದೆ. ಇದರಿಂದಾಗಿ ಬಡ ರೋಗಿಗಳು ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ನಿರಂತರ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಮುಂದುವರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು